ಕೇಸರಿ ಪೇಟ ಧರಿಸಿ ಕಾಂಗ್ರೆಸ್‌ ಕಾರ್ಯಕರ್ತರ ಮೆರವಣಿಗೆ

ಗುರುವಾರ , ಏಪ್ರಿಲ್ 25, 2019
33 °C
ಬೆಂಗಳೂರು ಕೇಂದ್ರ: ರಿಜ್ವಾನ್‌ ಅರ್ಷದ್‌ ನಾಮಪ‌ತ್ರ

ಕೇಸರಿ ಪೇಟ ಧರಿಸಿ ಕಾಂಗ್ರೆಸ್‌ ಕಾರ್ಯಕರ್ತರ ಮೆರವಣಿಗೆ

Published:
Updated:
Prajavani

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ಸೋಮವಾರ ನಾಮಪತ್ರ ಸಲ್ಲಿಸಿದರು.

ಪ್ರಸನ್ನ ಗಣಪತಿ ದೇವಸ್ಥಾನದ ಬಳಿಯಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಹೊರಟರು. ನೂರಾರು ಕಾರ್ಯಕರ್ತರು ಕೇಸರಿ ಪೇಟ ತೊಟ್ಟು ಹಣೆಗೂ ಕೇಸರಿ ಬಣ್ಣದ ಉದ್ದ ನಾಮ ಬಳಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮೆರವಣಿಗೆ ಆರಂಭದಲ್ಲಿ ರಿಜ್ವಾನ್ ಕೂಡ ಕೇಸರಿ ಪೇಟ ಧರಿಸಿದ್ದರು. 

‘ರಿಜ್ವಾನ್ ಅವರು ಮುಸ್ಲಿಮರ ಪರವಾಗಿ ಮಾತ್ರ ಇಲ್ಲ. ಹಿಂದೂಗಳ ಪರವೂ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟ ತೊಟ್ಟು, ಕೇಸರಿ ನಾಮ ಬಳಿದುಕೊಂಡಿದ್ದೇವೆ. ಕೇಸರಿ ಕೇವಲ ಬಿಜೆಪಿಯ ಸ್ವತ್ತಲ್ಲ’ ಎಂದು ಕಾರ್ಯಕರ್ತರು ಹೇಳಿದರು.

ಬಿಬಿಎಂಪಿ ಕಚೇರಿ ತನಕ ಮೆರವಣಿಗೆ ಸಾಗಿತು. ಬಳಿಕ ಅಲ್ಲಿನ ಚುನಾವಣಾಧಿಕಾರಿ ಕಚೇರಿಗೆ ತೆರಳಿ ರಿಜ್ವಾನ್‌ ನಾಮಪತ್ರ ಸಲ್ಲಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್‌, ಶಾಸಕ ಎನ್.ಎ. ಹ್ಯಾರಿಸ್, ಮಾಜಿ ಮೇಯರ್ ಸಂಪತ್‌ರಾಜ್, ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಜತೆಯಲ್ಲಿದ್ದರು.

‌ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಿಜ್ವಾನ್‌, ‘ಕಾಂಗ್ರೆಸ್– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಬೆಳೆಯುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಹಾಲಿ ಸಂಸದ ಪಿ.ಸಿ. ಮೋಹನ್ ಕೊಡುಗೆ ಏನೂ ಇಲ್ಲ. ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ’ ಎಂದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್‌ ಕಾಂಗ್ರೆಸ್‌ಗೆ ಅಡ್ಡಗಾಲು ಆಗುವರೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯೇ ನಮಗೆ ನೇರ ಪ್ರತಿಸ್ಪರ್ಧಿ, ಜೆಡಿಎಸ್‌ ಕೂಡ ನಮ್ಮ ಬೆಂಬಲಕ್ಕೆ ಇದೆ. ಗೆಲುವು ನಮ್ಮದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕ ರೋಷನ್ ಬೇಗ್‌ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕ್ಷೇತ್ರದಲ್ಲಿ ಯುವಕರಿಗೆ ಟಿಕೆಟ್ ನೀಡಬೇಕೆಂಬುದು ಪಕ್ಷದ ತೀರ್ಮಾನ. ಆರೋಗ್ಯ ಸರಿಯಿಲ್ಲದ ಕಾರಣ ಅವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದರು.

ರಿಜ್ವಾನ್‌ ಬಳಿ ₹15.07 ಕೋಟಿ ಆಸ್ತಿ

ರಿಜ್ವಾನ್ ಅರ್ಷದ್ ₹13.91 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 1.16 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು ₹4.45 ಕೋಟಿ ಸಾಲ ಇದೆ.

ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ವಿವರ ಸಲ್ಲಿಸಿದ್ದಾರೆ. ಮಾರುತಿ ಸುಜುಕಿ ಬ್ರೀಝಾ ಮತ್ತು ಮಾರುತಿ ಸುಜುಕಿ ಬಲೆನೊ ಕಾರ್‌ಗಳಿವೆ. ₹6.25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನದ ಆಭರಣಗಳಿವೆ.

ಪತ್ನಿ ನಜಿಹಾ ಬಾನು ಹೆಸರಿನಲ್ಲಿ ₹38.03 ಲಕ್ಷ ಮೌಲ್ಯದ ಚರಾಸ್ತಿ ಇದೆ. 18.76 ಲಕ್ಷ ಮೌಲ್ಯದ 625 ಗ್ರಾಂ ಚಿನ್ನದ ಆಭರಣ ಇದೆ. ಅವರಿಗೆ ₹5 ಲಕ್ಷ ಸಾಲವೂ ಇದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !