ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಸಂಸ್ಥೆ ನಿಷೇಧಿಸುವ ಷಡ್ಯಂತ್ರ ಆರೋಪ: ಪ್ರತಿಭಟನೆ

Last Updated 30 ಆಗಸ್ಟ್ 2018, 11:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯನ್ನು ನಿಷೇಧ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಮಾತನಾಡಿ, ‘ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರಿಗೆ ಹಿಂಸೆ ನೀಡಿರುವ ಎಸ್‌ಐಟಿ ಪೊಲೀಸರು ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಬರೆಯಿಸಿಕೊಂಡಿದ್ದಾರೆ. ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ’ ಎಂದು ದೂರಿದರು.

ಬಂಧಿತ 14 ಮಂದಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಆದರೆ ಅವರಲ್ಲಿ ಒಬ್ಬರೂ ಸನಾತನ ಅಥವಾ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರಲ್ಲ. ಆದರೂ ಈ ಸಂಘಟನೆಗಳ ಹೆಸರು ಎಳೆದು ತರಲಾಗುತ್ತಿದ್ದು, ಇದರ ಹಿಂದೆ ನಿಷೇಧ ಮಾಡುವ ಷಡ್ಯಂತ್ರ ಇದೆ. ಹಿಂದೂಗಳೆಲ್ಲರೂ ಇದರ ವಿರುದ್ಧ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿದರೆ ಪ್ರಜಾಪ್ರಭುತ್ವದ ವಿಜಯ ಎಂದು ವ್ಯಾಖ್ಯಾನಿಸುವ ವಿಚಾರವಾದಿಗಳು, ಎಡಪಂಥೀಯರನ್ನು ಬಂಧಿಸಿದಾಗ ಪ್ರಜಾಪ್ರಭುತ್ವದ ವೈಫಲ್ಯ ಎನ್ನುತ್ತಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೇರೇಪಿಸುವವರ ವಿರುದ್ಧ ಮಾತನಾಡಿದರೆ ಅದನ್ನು ಕೋಮುವಾದ ಎನ್ನುತ್ತಾರೆ ಎಂದರು.

ನಗರದ ದಾಜಿಬಾನ್ ಪೇಟೆಯಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಅವರು ಘೋಷಣೆಗಳನ್ನು ಕೂಗಿದರು. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT