ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೇಬರ್‌ ಕಾರ್ಡ್‌ ಇರೋದೇ ನಮ್ಗ ಗೊತ್ತಿಲ್ರಿ...’

ಖಜಾನೆಯಲ್ಲಿ ಕೊಳೆಯುತ್ತಿದೆ ಕಲ್ಯಾಣ ನಿಧಿ, ಬದಲಾಗುತ್ತಿಲ್ಲ ಕಟ್ಟಡ ಕಾರ್ಮಿಕರ ವಿಧಿ
Last Updated 31 ಜನವರಿ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಿದ್ದರೆ, ಇನ್ನೊಂದೆಡೆ, ನಗರದಲ್ಲಿನ ಬಹುತೇಕ ಶ್ರಮಜೀವಿಗಳು ಸೌಲಭ್ಯಗಳಿಲ್ಲದೆ ನರಳುತ್ತಿದ್ದಾರೆ.

ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ಶೆಡ್‌ಗಳನ್ನು ಹಾಕಿಕೊಂಡು, ತಾಡಪತ್ರಿಗಳಿಂದ ಆಸರೆ ಮಾಡಿಕೊಂಡು ಪುಟ್ಟ ಸೂರುಗಳಲ್ಲಿ ಕಾರ್ಮಿಕರು ವಾಸ್ತವ್ಯ ಹೂಡಿದ್ದಾರೆ. ಇನ್ನು ಕೆಲವರು ಕೊಳೆಗೇರಿಗಳಲ್ಲಿ ಇರುಳನ್ನು ಕಳೆಯುತ್ತಿದ್ದಾರೆ. ಗಾಳಿ, ಬೆಳಕು, ನೀರು ಮತ್ತು ಶೌಚಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ.

ಮೂರಿಟ್ಟಿಗೆಗಳ ಒಲೆಗೆ, ಸರ್ವೆ ಕಟ್ಟಿಗೆಯ ತುಂಡುಗಳ ತೂರಿ ಬೆಂಕಿ ಹೊತ್ತಿಸಿ, ಊರಿಂದ ತಂದ ದವಸ–ಧಾನ್ಯ ಬೇಯಿಸಿಕೊಂಡು ಹೊಟ್ಟೆ ತುಂಬಿಸಿಕೊ‌ಳ್ಳುತ್ತಾರೆ. ಆ ಒಲೆಯ ಹೊಗೆಗೆ ಅವರ ಸೂರುಗಳು ಕಪ್ಪುಬಣ್ಣಕ್ಕೆ ತಿರುಗಿವೆ. ಆದರೆ, ಇಂತಹವರಿಗೆ ಸಿಲಿಂಡರಿನ ‘ಅನಿಲ ಭಾಗ್ಯ’ ಕಲ್ಪಿಸಲು ₹ 66 ಕೋಟಿ ಕೊಟ್ಟಿದ್ದೇವೆಂದು ಕಾರ್ಮಿಕ ಇಲಾಖೆ ಬಿಳಿ ಹಾಳೆಯಲ್ಲಿ ಲೆಕ್ಕ ಬರೆದಿಟ್ಟಿದೆ. ಆದರೆ ಫಲಾನುಭವಿಗಳ ಸಂಖ್ಯೆಯೇ ಇಲಾಖೆಯಲ್ಲಿ ಇಲ್ಲ.

ಊರುಬಿಟ್ಟು ದುಡಿಯಲು ಬಂದ ಈ ಜನ, ತಮ್ಮ ಹಸಿವನ್ನು ನೀಗಿಸುವ ಜರೂರತ್ತಿನಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನೇ ಮರೆತಿದ್ದಾರೆ. ಬಹುತೇಕ ಕಾಮಗಾರಿ ಸ್ಥಳಗಳಲ್ಲಿ ಪೋಷಕರು ದುಡಿಯುತ್ತಿದ್ದರೆ, ಅವರ ಮಕ್ಕಳು ನಿರ್ಮಾಣಕ್ಕೆ ತಂದ ಮರಳ ರಾಶಿಯಲ್ಲಿ ಆಟವಾಡುವ, ಇಲ್ಲವೇ ಪಾಲಕರೊಂದಿಗೆ ದುಡಿಯುವ ಸಾಮಾನ್ಯ ನೋಟಗಳು ಅಲ್ಲಲ್ಲಿ ಕಣ್ಣಿಗೆ ಬೀಳುತ್ತಲೇ ಇವೆ.

ನೋಂದಣಿಗೆ ಕಂಪನಿಯೇ ಮಧ್ಯವರ್ತಿ: ಇಂತಹ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಪ್ರತಿ ಕಟ್ಟಡ ಅಥವಾ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ, ಅದರ ಮಾಲೀಕನಿಂದ ಸರ್ಕಾರ ಸೆಸ್‌ ಸಂಗ್ರಹಿಸುತ್ತಿದೆ. ಅದರಿಂದ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ, ಅವರಿಗೊಂದು ಗುರುತಿನ ಚೀಟಿ ನೀಡಿ, ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ನೀಡಬೇಕೆಂದು ಕಾರ್ಮಿಕ ಕಲ್ಯಾಣ ಕಾಯ್ದೆಯಲ್ಲಿದೆ. ಕ್ಷೇತ್ರ ಕಾರ್ಯ ಮಾಡಿ ಕಟ್ಟಡ ಕಾರ್ಮಿಕರನ್ನು ಗುರುತಿಸುವ ಕೆಲಸವನ್ನು ಇಲಾಖೆಯು ಕಿಯೊಸ್ಕ್‌ ಕಂಪನಿಗೆ ವಹಿಸಿದೆ. ಸರ್ಕಾರಿ ಸೌಲಭ್ಯ ಪಡೆಯಲು ಕಾರ್ಮಿಕರು ಖಾಸಗಿ ಸಂಸ್ಥೆಯಿಂದ ದೃಢೀಕರಣ ಪಡೆಯಬೇಕಿದೆ.

ಈ ಕಾರ್ಮಿಕರಲ್ಲಿ ಬಹುತೇಕರು ಅನಕ್ಷರಸ್ಥರೇ ಇದ್ದಾರೆ. ಸೌಲಭ್ಯಗಳಿಗಾಗಿ ನೋಂದಣಿಯಾಗುವ (ಲೇಬರ್‌ ಕಾರ್ಡ್‌ ಪಡೆಯುವ ಬಗೆ) ಪ್ರಕ್ರಿಯೆ ಅವರಿಗೆ ತಿಳಿದಿಲ್ಲ. ಈ ಕುರಿತು ಮಾಹಿತಿ ನೀಡಲು ಇಲಾಖೆಯಲ್ಲಿಯೂ ವಿಭಾಗವಿಲ್ಲ.

ಬಾಣಸವಾಡಿಯ ನಿರ್ಮಾಣ ಕಾಮಗಾರಿವೊಂದರಲ್ಲಿ ದುಡಿಯುತ್ತಿರುವ ರಾಯಚೂರಿನ ಮಾನ್ವಿಯ ಹನುಮಂತ ಅವರನ್ನು ಈ ಬಗ್ಗೆ ಕೇಳಿದಾಗ,‘ಲೇಬರ್‌ ಕಾರ್ಡ್‌ ಇರೋದೇ ನಮ್ಗ ಗೊತ್ತಿಲ್ರಿ. ದಿನಕ್ಕೆ ₹ 70 ಕೂಲಿ ಇದ್ದಾಗಿನಿಂದ ಹೆಲ್ಪರ್‌ ಕೆಲ್ಸ ಮಾಡಾಕತ್ತೀನಿ. ಬೇಕಾದ್ರ, ನನ್ನ ವೋಟರ್‌ ಐಡಿ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಕೊಡ್ತೀನಿ. ನನಗೊಂದು ಕಾರ್ಡ್‌ ಮಾಡಿಸಿಕೊಡ್ರಿ’ ಎಂದು ಅಂಗಲಾಚಿದರು.

‘ಇಂಥ ಸಿಟ್ಯಾಗ, ಆಫೀಸ್‌ ಹುಡುಕೊಂಡು ಹೋಗಿ, ಕಾರ್ಡ್‌ ಮಾಡಿಸಿಕೊಂಡು, ಗೌರ್ಮೆಂಟ್‌ ರೊಕ್ಕ ತಗೊಳೋದು ನಮ್ಮಂಥ ಅನ್‌ಪಡ್‌ ಮಂದಿಗೆ ಏನ್‌ ಗೊತ್ತಾಗ್ತೈತಿ? ಸರ್ಕಾರದವರೇ ನಮ್ಮಂತೋರು ದುಡಿಯೋ ಜಾಗಕ್ಕೆ ಬಂದು, ಕಾರ್ಡ್‌ ಮಾಡಿಸಿಕೊಟ್ಟರೆ, ನಮಗೂ ಅನುಕೂಲ ಆಗ್ತೈತಿ, ಅವರಿಗೂ ಪುಣ್ಯ ಬರ್ತೈತಿ ನೋಡ್ರಿ’ ಎಂದರು ಹೊರಮಾವು ಭಾಗದಲ್ಲಿ ನಿರ್ಮಾಣ ಕಾಮಗಾರಿಯೊಂದರ ಬದಿ ಶೆಡ್‌ ಕಟ್ಟಿಕೊಂಡು, ಪತಿಯೊಂದಿಗೆ ದುಡಿಯುತ್ತಾ, ಇಬ್ಬರು ಮಕ್ಕಳನ್ನು ಸಾಕುತ್ತಿರುವ ಕಲಬುರ್ಗಿ ಜಿಲ್ಲೆಯ ಚಿತ್ತಾಪುರದ ಪಾರ್ವತಿ.

**

ಏನಿದು ಕಟ್ಟಡ ನಿರ್ಮಾಣ ಸೆಸ್‌?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಒಟ್ಟು ವೆಚ್ಚದ ಶೇ 1ರಷ್ಟು ಮೊತ್ತವನ್ನು ಕಾರ್ಮಿಕರ ಕಲ್ಯಾಣ ನಿಧಿಗೆ (ಸೆಸ್‌) ಮಾಲೀಕರು ಪಾವತಿಸಬೇಕು.ಈ ಮೊತ್ತದಲ್ಲಿ ಅಸಂಘಟಿತ ವಲಯದ ಕಟ್ಟಡ ನಿರ್ಮಾಣ ಕಾರ್ಮಿಕರು, ಸೆಂಟ್ರಿಂಗ್, ಟೈಲ್ಸ್ ಫಿಟಿಂಗ್, ಕಲರಿಂಗ್, ಎಲೆಕ್ಟ್ರಿಕ್ ಮತ್ತಿತರ ಕೆಲಸ ಮಾಡುವವರು, ಬಡಗಿಗಳು, ಫ್ಯಾಬ್ರಿಕೇಟರ್ಸ್, ವೆಲ್ಡರ್ಸ್ ಮತ್ತಿತರ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು.

ವೈದ್ಯಕೀಯ ವೆಚ್ಚ, ಅಪಘಾತ ಪರಿಹಾರ, ಹೆರಿಗೆ ಧನಸಹಾಯ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ,ಮದುವೆ ಧನಸಹಾಯ, ಉಪಕರಣ ಖರೀದಿ ಸಾಲ, ಅಂತ್ಯ ಸಂಸ್ಕಾರ ವೆಚ್ಚ, ಪಿಂಚಣಿ ಸೌಲಭ್ಯ, ತರಬೇತಿ, ಬಸ್‌ಪಾಸ್‌ ವಿತರಣೆಯಂತಹ ಸೌಲಭ್ಯಗಳನ್ನು ಸೆಸ್‌ ಹಣದಲ್ಲಿ ನೀಡಬೇಕು.

**

‘₹ 5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡುತ್ತೇವೆ’

‘ಕಟ್ಟಡ ಕಾರ್ಮಿಕರಿಗಾಗಿ ಬಾಗಲಗುಂಟೆ, ಬನ್ನೇರುಘಟ್ಟ, ಬಿಡದಿ ಹಾಗೂ ಮೈಸೂರು, ಹುಬ್ಬಳ್ಳಿಯಲ್ಲಿ ತಲಾ ₹ 5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಡಲು ಯೋಜಿಸಿದ್ದೇವೆ. ಅದಕ್ಕಾಗಿ ಸೆಸ್‌ನಲ್ಲಿನ ₹ 40 ಕೋಟಿ ವಿನಿಯೋಗಿಸುತ್ತೇವೆ’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

**

ಅಂಕಿ ಅಂಶ

₹7,239 ಕೋಟಿ:2006ರಿಂದ ಈವರೆಗೂ ಸಂಗ್ರಹವಾದ ಸೆಸ್‌

₹504 ಕೋಟಿ:ಈವರೆಗೂ ವೆಚ್ಚ ಮಾಡಿರುವ ಸೆಸ್‌(ಶೇ 6.96)

₹19.97 ಲಕ್ಷ:ನೋಂದಣಿ ಮಾಡಿಸಿಕೊಂಡಿರುವ ಕಟ್ಟಡ ಕಾರ್ಮಿಕರು

₹7.23 ಲಕ್ಷ:ಸೌಲಭ್ಯ ಪಡೆದ ಫಲಾನುಭವಿಗಳು

**

ಕಾರ್ಮಿಕರು ನೋಂದಣಿ ಮಾಡಿಸಿಕೊಂಡ ಮೂರು ವರ್ಷಗಳ ಬಳಿಕ ಸೌಲಭ್ಯಗಳನ್ನು ಕೊಡುವ ವ್ಯವಸ್ಥೆ ಸದ್ಯ ಇದೆ. ಅದನ್ನು ಒಂದು ವರ್ಷಕ್ಕೆ ಇಳಿಸುತ್ತಿದ್ದೇವೆ.

–ವೆಂಕಟರಮಣಪ್ಪ, ಕಾರ್ಮಿಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT