ಡಿಪ್ಲೊಮಾ– ಐಟಿಐಗೆ ಇಂಟರ್ನ್‌ಶಿಪ್ ಕಡ್ಡಾಯ ಚಿಂತನೆ: ಅನಂತಕುಮಾರ್ ಹೆಗಡೆ

7
ಬರಿ ಪ್ರಮಾಣ ಪತ್ರದಿಂದ ಬದುಕಲು ಆಗದು

ಡಿಪ್ಲೊಮಾ– ಐಟಿಐಗೆ ಇಂಟರ್ನ್‌ಶಿಪ್ ಕಡ್ಡಾಯ ಚಿಂತನೆ: ಅನಂತಕುಮಾರ್ ಹೆಗಡೆ

Published:
Updated:
ಕರ್ನಾಟಕ ವಾಣಿಜ್ಯೋದ್ಯಮ ಸಂಘದಲ್ಲಿ ಗುರುವಾರ ನಡೆದ ‘3ಐ ಸಮ್ಮಿಟ್’ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮಾತನಾಡಿದರು. ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ಡಿಪ್ಲೊಮಾ ಹಾಗೂ ಐಟಿಐ ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ ಮಾಡುವ ಯೋಚನೆ ಇದೆ ಎಂದು ಕೇಂದ್ರ ಕೌಶಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಘದಲ್ಲಿ ಗುರುವಾರ ನಡೆದ ‘3ಐ ಸಮ್ಮಿಟ್’ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಎಲ್ಲ ಕೌಶಲ ಕ್ಲಸ್ಟರ್‌ಗಳನ್ನು ಒಳಗೊಂಡ ಒಂದು ಕೇಂದ್ರವನ್ನು ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಆರಂಭಿಸುವ ಚಿಂತನೆ ಇದೆ. ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತರಬೇತಿ ನೀಡುವ ಸಂಸ್ಥೆಗಳು ಶೇ70ರಷ್ಟು ಮಂದಿಗೆ ಉದ್ಯೋಗ ನೀಡಲೇಬೇಕು. ಉದ್ಯೋಗ ಪಡೆದವರ ಮಾಹಿತಿಯ ಮೇಲೆ ಸಹ ನಿಗಾ (ಟ್ರ್ಯಾಕ್) ವಹಿಸಲಾಗುವುದು ಎಂದು ಅವರು ಹೇಳಿದರು.

ಕಾಲೇಜುಗಳಿಂದ ಕೇವಲ ಪ್ರಮಾಣ ಪತ್ರ ಪಡೆದು ಬದುಕಲು ಸಾಧ್ಯವಾಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಉದ್ಯಮಕ್ಕೆ ಬೇಕಾದಂತಹ ಕೌಶಲವನ್ನು ಪಡೆದುಕೊಂಡಾಗ ಮಾತ್ರ ಅವಕಾಶಗಳು ಸಿಗುತ್ತವೆ. ಉದ್ಯಮ ಕೌಶಲ ಹೊಂದಿದ ಮಾನವ ಸಂಪನ್ಮೂಲ ಬಯಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಬೇಕಾಗುತ್ತದೆ. ಈ ಎರಡರ ಮಧ್ಯೆ ಇರುವ ಕಂದಕವನ್ನು ತುಂಬುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈ ಪೀಳಿಗೆಗೆ ಅತ್ಯುತ್ತಮ ತರಬೇತಿ ನೀಡುವುದು ಹಾಗೂ ಮುಂದಿನ ಪೀಳಿಗೆಯ ಅಗತ್ಯ ಏನು ಎಂಬುದರ ಬಗ್ಗೆ ಸಂಶೋಧನೆ ಮಾಡುವ ಕೆಲಸ ಸಹ ಮಾಡಲಾಗುತ್ತಿದೆ. ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್‌ ಕಾರ್ಯಕ್ರಮವನ್ನು ಸಹ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿ ವರ್ಷ ಸುಮಾರು 2 ಕೋಟಿ ವಿದ್ಯಾರ್ಥಿಗಳು ಪದವಿ ಮುಗಿಸಿ ಕೆಲಸ ಹುಡುಕುತ್ತಾರೆ. ಇಷ್ಟೊಂದು ಜನರಿಗೆ ಉದ್ಯೋಗ ನೀಡುವುದು ದೊಡ್ಡ ಸವಾಲು. ಶೇ67ರಷ್ಟು ಉದ್ಯೋಗಿಗಳು ಪದೇ ಪದೇ ಕೆಲಸವನ್ನು ಬದಲಾಯಿಸುತ್ತಿರುತ್ತಾರೆ. ಅಲ್ಲದೆ ಶೇ28ರಿಂದ 30ರಷ್ಟು ಉದ್ಯೋಗದ ಸ್ವರೂಪವೇ ಬದಲಾಗುತ್ತಿರುತ್ತದೆ. ಅಂದರೆ ಕೆಲಸದ ಶೈಲಿ ಬದಲಾವಣೆ ಹಾಗೂ ಪರಿಷ್ಕರಣೆ ಆಗುತ್ತಲೇ ಇರುತ್ತದೆ. ಆದ್ದರಿಂದ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಹೊಂದಲೇಬೇಕಾಗುತ್ತದೆ. ಕೈಗಾರಿಕೆಗಳ ಬೇಡಿಕೆ ಹಾಗೂ ಅಗತ್ಯತೆ ಬದಲಾಗುತ್ತಲೇ ಇರುತ್ತದೆ ಆದರೆ, ತರಬೇತಿ ನೀಡುವ ಸಂಸ್ಥೆಗಳು ಮಾತ್ರ ಬಲದಾಗುವುದಿಲ್ಲ. ವಿಶ್ವವಿದ್ಯಾಲಯದ ಪಠ್ಯಕ್ರಮ ಸಹ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಸಂಸದ ಪ್ರಹ್ಲಾದ್ ಜೋಶಿ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಸ್ಕಿಲ್ ಆನ್ ವ್ಹೀಲ್ಸ್ ಕಾರ್ಯಕ್ರಮದ ಸಲಹೆಗಾರ ಎಸ್‌.ವಿ. ವೆಂಕಟೇಶ್ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !