ಸಹಕಾರ ಸಂಘ: ಅನರ್ಹರಿಗೆ ಮತದಾನ–ಆದೇಶಕ್ಕೆ ತಡೆ

7

ಸಹಕಾರ ಸಂಘ: ಅನರ್ಹರಿಗೆ ಮತದಾನ–ಆದೇಶಕ್ಕೆ ತಡೆ

Published:
Updated:

ಬೆಂಗಳೂರು: ಸಹಕಾರ ಸಂಘಗಳ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ 3ರಲ್ಲಿ ಭಾಗವಹಿಸದೇ ಇರುವ ಅನರ್ಹರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಲಕ್ಷ್ಮಿದೇವಕೋಟೆ ಸಲ್ಲಿಸಿರುವ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಏಕಸದಸ್ಯಪೀಠ 2019ರ ಜನವರಿ 18ರಂದು ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿತಲ್ಲದೆ, ಸಹಕಾರ ಇಲಾಖೆ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿತು.

‘ಏಕಸದಸ್ಯ ನ್ಯಾಯಪೀಠದ ಆದೇಶದಿಂದ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ ತಿದ್ದುಪಡಿಯ ಮೂಲ ಆಶಯಕ್ಕೆ ಧಕ್ಕೆ ಆಗಿದೆ. ಅನರ್ಹರಿಗೂ ಮತದಾನದ ಹಕ್ಕು ದೊರೆತಿದೆ’ ಆದ್ದರಿಂದ ಆದೇಶಕ್ಕೆ ತಡೆ ನೀಡಬೇಕು ಎಂಬುದು ಮೇಲ್ಮನವಿದಾರರ ಕೋರಿಕೆ.

ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಯ ಕಲಂ 20 ನಿಯಮ 4ಎ ಮತ್ತು 5ಎ ಅನ್ವಯ, ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸದಸ್ಯರು ಐದು ವಾರ್ಷಿಕ ಮಹಾಸಭೆಗಳ ಪೈಕಿ 3 ರಲ್ಲಿ ಭಾಗವಹಿಸಿದ್ದರೆ ಮಾತ್ರ ಮತದಾನದ ಅವಕಾಶ ನೀಡಲಾಗುತ್ತದೆ.

‘ಈ ನಿಯಮ ಜಾರಿಗೊಳಿಸಿದರೆ ಸಾಕಷ್ಟು ಜನರು ಮತದಾನದ ಅವಕಾಶ ಕಳೆದುಕೊಳ್ಳಲಿದ್ದಾರೆ’ ಎಂಬ ಅಭಿಪ್ರಾಯದೊಂದಿಗೆ ಏಕಸದಸ್ಯ ನ್ಯಾಯಪೀಠ, ನಿಯಮದ ಪ್ರಕಾರ ಅನರ್ಹರಾಗಿದ್ದವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ’ ಎಂದು ಆದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !