ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನ ನಿಯಮಬಾಹಿರ ಮಾರಾಟ: 3 ದಿನಗಳಲ್ಲಿ ₹ 24 ಸಾವಿರ ದಂಡ ವಸೂಲಿ

ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 14 ಡಿಸೆಂಬರ್ 2018, 10:45 IST
ಅಕ್ಷರ ಗಾತ್ರ

ದಾವಣಗೆರೆ: ಶಾಲಾ–ಕಾಲೇಜು ಆವರಣದ ಬಳಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವವರ ಮೇಲೆ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ–2003 (ಕೋಪ್ಟಾ)ದಡಿ ಕ್ರಮ ಕೈಗೊಳ್ಳಲು ನಗರದ ಜೊತೆಗೆ ತಾಲ್ಲೂಕುಗಳಲ್ಲೂ ಪ್ರತಿ ವಾರ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬಡಾವಣೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ವಿಶೇಷ ತಂಬಾಕು ತನಿಖಾ ಕಾರ್ಯಾಚರಣೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ನಗರದಲ್ಲಿ ಒಂದು ವಾರದ ಕಾಲ ಕಾರ್ಯಾಚರಣೆ ನಡೆಸಲು ಸಮಯ ನಿಗದಿಗೊಳಿಸಲಾಗಿದೆ. ಅದೇ ರೀತಿ ತಾಲ್ಲೂಕುಗಳಲ್ಲೂ ಕಾರ್ಯಾಚರಣೆ ನಡೆಸಲು ವೇಳಾಪಟ್ಟಿ ನಿಗದಿಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಒಂದೆರಡು ಬಾರಿ ದಂಡ ವಿಧಿಸಿ ಎಚ್ಚರಿಕೆ ನೀಡುತ್ತೇವೆ. ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರೆ ಪ್ರಕರಣ ದಾಖಲಿಸಿಕೊಂಡು ಅಂಗಡಿ ಜಪ್ತಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಯದೇವ ವೃತ್ತದ ಬಳಿಯ ಪೆಟ್ಟಿಗೆ ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿದಾಗ ಸಿಗರೇಟ್‌, ಗುಟ್ಕಾ ಪ್ಯಾಕೇಟ್‌ ಪತ್ತೆಯಾಯಿತು. ನಿಯಮ ಉಲ್ಲಂಘಿಸಿದ ಅಂಗಡಿಗಳ ಮಾಲೀಕರಿಗೆ ₹ 100ರಿಂದ ಗರಿಷ್ಠ 200 ದಂಡಗಳನ್ನು ವಿಧಿಸಲಾಯಿತು.

ಅಂಗಡಿ ಮಾಲೀಕ ಬಸವರಾಜ್‌, ‘ಸಣ್ಣ–ಪುಟ್ಟ ಅಂಗಡಿಗಳ ಮೇಲೆ ಮಾತ್ರ ದಾಳಿ ಮಾಡಿ ದಂಡ ವಿಧಿಸಲಾಗುತ್ತಿದೆ. ಹೋಲ್‌ ಸೇಲ್‌ ಅಂಗಡಿಗಳ ಮೇಲೂ ದಾಳಿ ನಡೆಸಲಿ. ಅವರು ಮಾರಾಟ ಮಾಡುವುದನ್ನು ನಿಲ್ಲಿಸಿದರೆ ನಾವೂ ಈ ದಂಧೆಯನ್ನು ಬಿಡಲು ಸಿದ್ಧರಿದ್ದೇವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪದ್ಮ ಬಸವಂತಪ್ಪ, ‘ಡಿಸೆಂಬರ್‌ 1ರಂದು ಕೋಪ್ಟಾ ಕಾಯ್ದೆ ಅನುಷ್ಠಾನದ ಬಗ್ಗೆ ಸಗಟು ವ್ಯಾಪಾರಿಗಳು ಹಾಗೂ ಡೀಲರ್‌ಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ಯಾವ ನಿಯಮಗಳನ್ನು ಅವರು ಪಾಲಿಸಬೇಕು ಎಂದು ತಿಳಿಹೇಳಲಾಗಿದೆ. ಹೋಲ್‌ಸೇಲ್‌ ಅಂಗಡಿಯವರೂ ನಿಯಮ ಉಲ್ಲಂಘಿಸಿದರೆ ಕಾನೂಕು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಬಿ.ಯು. ಮಹಾಂತೇಶ್‌, ‘ನಗರದಲ್ಲಿ ಡಿಸೆಂಬರ್‌ 10ರಿಂದ ಏಳು ದಿನಗಳ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಗುರುವಾರದವರೆಗೆ ಒಟ್ಟು 242 ಪ್ರಕರಣಗಳು ಪತ್ತೆಯಾಗಿದ್ದು, ₹ 24,550 ದಂಡ ವಿಧಿಸಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜೊತೆಗೆ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ’ ಎಂದು ತಿಳಿಸಿದರು.

‘ಕಾಯ್ದೆಯ ಸೆಕ್ಷನ್‌ 4ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ₹ 200 ದಂಡ ವಿಧಿಸಲಾಗುತ್ತದೆ. ಅಷ್ಟೇ ಪ್ರಮಾಣದ ದಂಡವನ್ನು ಮಾಲೀಕರೂ ಭರಿಸಬೇಕಾಗುತ್ತದೆ. ಸೆಕ್ಷನ್‌ ‘6 ಎ’ ಪ್ರಕಾರ 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ಮಾರಾಟ ನಿಷೇಧಿಸಲಾಗಿದೆ. ಶಾಲಾ–ಕಾಲೇಜು ಆವರಣದಿಂದ 91.44 ಮೀಟರ್‌ ಒಳಗೆ ತಂಬಾಕು ಉತ್ಪನ್ನ ಮಾರುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ, ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೆ.ಎಚ್‌. ಗಂಗಾಧರ, ಆಹಾರ ಸಂರಕ್ಷಣಾಧಿಕಾರಿ ಎಚ್‌. ಕೊಟ್ರೇಶ್‌, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್‌, ಸಿಪಿಐ ಇ. ಆನಂದ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT