ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟರ್ ಸೊಸೆ ಆತ್ಮಹತ್ಯೆ

ಗೆಳತಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದ ಮೋನಿಕಾ
Last Updated 19 ಜನವರಿ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಯಲಚೇನಹಳ್ಳಿ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್ ಬಾಲಕೃಷ್ಣ ಅವರ ಸೊಸೆ ಮೋನಿಕಾ (30) ಶುಕ್ರವಾರ ತವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹಕಾರನಗರ 20ನೇ ಮುಖ್ಯರಸ್ತೆ ನಿವಾಸಿ ಪ್ರಕಾಶ್ ಅವರ ಮಗಳಾದ ಮೋನಿಕಾ, 2009ರಲ್ಲಿ ಬಾಲಕೃಷ್ಣ ಅವರ ಪುತ್ರ ಕಾರ್ತಿಕ್ ಅವರನ್ನು ಮದುವೆಯಾಗಿದ್ದರು. ಶುಕ್ರವಾರ ಬೆಳಿಗ್ಗೆ ಪೋಷಕರು ಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದರು. ಮಧ್ಯಾಹ್ನ ಗೆಳತಿ ಜಾಯಲ್ ವರ್ಮಾಗೆ ಕರೆ ಮಾಡಿ ದಾಂಪತ್ಯ ಜೀವನದ ಬಗ್ಗೆ ಬೇಸರದಿಂದ ಮಾತನಾಡಿದ್ದ ಮೋನಿಕಾ, ನಂತರ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು. ಗೆಳತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ಮೃತರ ಪೋಷಕರು ಯಾರ ಮೇಲೂ ಸಂಶಯ ವ್ಯಕ್ತಪಡಿಸಿಲ್ಲ. ಹೀಗಾಗಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಕೊಡಿಗೇಹಳ್ಳಿ ಪೊಲೀಸರು ಹೇಳಿದ್ದಾರೆ.

‘ಮದುವೆಯಾದ ಆರಂಭದಲ್ಲಿ ಮಗಳು–ಅಳಿಯ ಅನ್ಯೋನ್ಯವಾಗಿಯೇ ಇದ್ದರು. ಆ ನಂತರ ಸಣ್ಣಪುಟ್ಟ ವಿಚಾರಕ್ಕೆ ಅವರ ನಡುವೆ ಮನಸ್ತಾಪಗಳು ಶುರುವಾದವು. ಒಮ್ಮೆ ಎರಡೂ ಕುಟುಂಬಗಳ ಹಿರಿಯರೂ ಕುಳಿತು ಸಂಧಾನದ ಮೂಲಕ ವಿವಾದ ಬಗೆಹರಿಸಿದ್ದೆವು. ಆ ನಂತರವೂ ದಾಂಪತ್ಯ ಸರಿ ಹೋಗಿರಲಿಲ್ಲ. ಕೊನೆಗೆ ಮಕ್ಕಳನ್ನು ಅಲ್ಲೇ ಬಿಟ್ಟು ಮೋನಿಕಾ 9 ತಿಂಗಳ ಹಿಂದೆ ತವರು ಮನೆಗೆ ಬಂದುಬಿಟ್ಟಳು. ಅದೇ ಬೇಸರದಲ್ಲಿ ಖಿನ್ನತೆಗೆ ಒಳಗಾಗಿದ್ದಳು’ ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.

ದಿಗಿಲುಗೊಂಡ ಗೆಳತಿ: ‘ನನಗೆ ಜೀವನವೇ ಬೇಡ. ಬದುಕಿದ್ದು ಏನು ಸಾಧಿಸುವುದಿದೆ’ ಎಂದು ಗೆಳತಿ ಹೇಳಿದಾಗ ಜಾಯಲ್ ಸಂತೈಸಲು ಯತ್ನಿಸಿದ್ದರು. ಅವರ ಮಾತಿಗೆ ಸಮಾಧಾನಗೊಳ್ಳದ ಮೋನಿಕಾ, ಸಂಭಾಷಣೆ ನಡುವೆಯೇ ಕರೆ ಸ್ಥಗಿತಗೊಳಿಸಿದ್ದರು. ವಾಪಸ್ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದಿದ್ದಾಗ ದಿಗಿಲುಗೊಂಡ ಜಾಯಲ್, ತಕ್ಷಣ ಮೋನಿಕಾ ಮನೆಗೆ ಹೊರಟು ಬಂದಿದ್ದರು. ಎಷ್ಟೇ ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಸಿಗದಿದ್ದಾಗ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೊನೆಗೆ, ಬೀಗ ರಿಪೇರಿ ಮಾಡುವವನನ್ನು ಕರೆಸಿ ನಕಲಿ ಕೀ ಮೂಲಕ ಮನೆ ಪ್ರವೇಶಿಸಿದ್ದರು. ಅಷ್ಟರಲ್ಲಾಗಲೇ ಮೋನಿಕಾ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು. ಸ್ಥಳೀಯರ ನೆರವಿನಿಂದ ತಕ್ಷಣ ಗೆಳತಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರದೊಯ್ದರಾದರೂ, ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT