ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಿ ಹತ್ಯೆಗೆ ಕಾರ್ಪೊರೇಟರ್ ಪುತ್ರನಿಂದ ಸುಪಾರಿ!

₹ 15 ಲಕ್ಷಕ್ಕೆ ಮಾತುಕತೆ l ಹಣ ಪ‍ಡೆದು ಹತ್ಯೆಗೈದಿದ್ದ ಗ್ಯಾಂಗ್ l 12 ಆರೋಪಿಗಳ ಬಂಧನ
Last Updated 18 ಡಿಸೆಂಬರ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ರೌಡಿ ವಿಜಯ್ ಅಲಿಯಾಸ್ ಲಕ್ಕಸಂದ್ರ ವಿಜಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಹೊಂಬೇಗೌಡ ನಗರ ವಾರ್ಡ್ ಕಾರ್ಪೊರೇಟರ್ ಚಂದ್ರಪ್ಪ ಅವರ ದ್ವಿತೀಯ ಪುತ್ರ ಸೂರಜ್‌ನನ್ನು (24) ಪೊಲೀಸರು ಬಂಧಿಸಿದ್ದಾರೆ.

ಡಿ.4ರಂದು ಲಕ್ಕಸಂದ್ರ 16ನೇ ಅಡ್ಡರಸ್ತೆಯ ವಿಜಯ್ ಕಚೇರಿಗೆ ನುಗ್ಗಿದ್ದ ಮುಸುಕುಧಾರಿಗಳು, ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿದ್ದರು. ಆಡುಗೋಡಿ ಹಾಗೂ ಕೋರಮಂಗಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, 11 ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಸೂರಜ್‌ನ ಹೆಸರು ಹೊರಬಿದ್ದಿದೆ.

ಅಪ್ಪ ಆಪ್ತ, ಮಗ ವೈರಿ: ಚಂದ್ರಪ್ಪ ಕುಟುಂಬ ಲಕ್ಕಸಂದ್ರದಲ್ಲಿ ನೆಲೆಸಿದ್ದು, ಅವರ ಮನೆಯಿಂದ ನೂರು ಮೀಟರ್ ದೂರದಲ್ಲೇ ವಿಜಯ್‌ನ ಕಚೇರಿ ಇದೆ. ಚಂದ್ರಪ್ಪ–ವಿಜಯ್ ಆಪ್ತರಾಗಿದ್ದು, 2007ರಲ್ಲಿ ವಿಲ್ಸನ್ ಗಾರ್ಡನ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರವಿ ಅಲಿಯಾಸ್ ಕೊತ್ತ ಎಂಬಾತನ ಕೊಲೆ ಪ್ರಕರಣದಲ್ಲಿ ಇಬ್ಬರೂ ಭಾಗಿಯಾಗಿದ್ದರು. ಆ ಪ್ರಕರಣದಲ್ಲಿ ಚಂದ್ರಪ್ಪ ಒಂದನೇ ಆರೋಪಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆ ನಂತರ ಅಪರಾಧ ಚಟುವಟಿಕೆಗಳಿಂದ ದೂರ ಉಳಿದ ಚಂದ್ರಪ್ಪ, ವಿಜಯ್ ಜತೆಗಿನ ಗೆಳೆತನವನ್ನು ಹಾಗೇ ಮುಂದುವರಿಸಿದ್ದರು. ಬಿಬಿಎಂಪಿ ಚುನಾವಣೆಯಲ್ಲೂ ಆತ ಚಂದ್ರಪ್ಪ ಪರವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ. ಅವರು ಕಾರ್ಪೊರೇಟರ್ ಆದ ಬಳಿಕ, ಮಗ ಸೂರಜ್‌ಗೆ ಕ್ಲಾಸ್‌–3 ಕಂಟ್ರ್ಯಾಕ್ಟರ್ ಲೈಸೆನ್ಸ್ ಕೊಡಿಸಿದ್ದರು. ಆ ನಂತರ ಸೂರಜ್ ಹಾಗೂ ವಿಜಯ್ ನಡುವೆ ವೈರತ್ವ ಬೆಳೆಯಿತು ಎಂದು ಮಾಹಿತಿ ನೀಡಿದ್ದಾರೆ.

ಕಲಹಕ್ಕೆ ಅಂತ್ಯವಾಡಿದ: ವರ್ಷದ ಹಿಂದೆ ವಿಜಯ್‌ನ ಕಾರು ಚಾಲಕ ಆಕಸ್ಮಿಕವಾಗಿ ಸೂರಜ್‌ನ ಕಾರಿಗೆ ಡಿಕ್ಕಿ ಮಾಡಿದ್ದ. ಈ ವಿಚಾರಕ್ಕೆ ಅವರಿಬ್ಬರ ನಡುವೆ ಮೊದಲ ಬಾರಿಗೆ ಕಲಹ ಶುರುವಾಯಿತು. ಆಗ ವಿಜಯ್, ‘ನಮ್ಮ ಹುಡುಗರ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ’ ಎಂದು ಧಮಕಿ ಹಾಕಿದ್ದ. ‘ನನ್ನ ಅಪ್ಪನ ಜತೆ ಓಡಾಡಿಕೊಂಡಿದ್ದವನು, ನನಗೇ ಅಂತಾನಲ್ಲ’ ಎಂದು ಕುಪಿತಗೊಂಡ ಸೂರಜ್, ಆತನನ್ನು ದೂರ ಇಡುವಂತೆ ತಂದೆಗೆ ಸೂಚಿಸಿದ್ದ.

ಫೈನಾನ್ಸ್ ವ್ಯವಹಾರವನ್ನೂ ಮಾಡುತ್ತಿದ್ದ ಸೂರಜ್, ತನ್ನ ಹುಡುಗರು ಹಾಗೂ ಸಂಬಂಧಿಕರಿಂದಲೂ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾನೆ ಎಂದು ವಿಜಯ್ ಸಿಟ್ಟಾಗಿದ್ದ. ಈ ವಿಚಾರವಾಗಿ ಎರಡನೇ ಸಲ ಜಗಳವಾಗಿತ್ತು.

ಗುತ್ತಿಗೆದಾರನಾದ ನಂತರ ಪುನಃ ಆತನನ್ನು ಭೇಟಿಯಾಗಿದ್ದ ವಿಜಯ್, ‘ನಿಮ್ಮ ತಂದೆಯನ್ನು ಗೆಲ್ಲಿಸಲು ನಮ್ಮ ಹುಡುಗರು ತುಂಬ ಕಷ್ಟ ಪಟ್ಟಿದ್ದಾರೆ. ಹೀಗಾಗಿ, ಬದುಕು ಕಟ್ಟಿಕೊಳ್ಳಲು ನೀವಿಬ್ಬರೂ ಅವರಿಗೆ ಸಹಾಯ ಮಾಡಬೇಕು. ವಾರ್ಡ್‌ನಲ್ಲಿ ಕಸ ಎತ್ತುವ ಕೆಲಸವನ್ನು ನಮ್ಮ ಹುಡುಗರಿಗೇ ಕೊಡಬೇಕು’ ಎಂಬ ಬೇಡಿಕೆ ಇಟ್ಟಿದ್ದ. ಅದಕ್ಕೂ ಸೂರಜ್ ಒಪ್ಪಿರಲಿಲ್ಲ. ಇದು ಪರಸ್ಪರರ ನಡುವಿನ ವೈರತ್ವ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.

ಇದರ ಬೆನ್ನಲ್ಲೇ ವಿಜಯ್‌ನ ಸಹಚರನೊಬ್ಬ, ಸೂರಜ್‌ ಗ್ಯಾಂಗ್ ಜತೆ ಗಲಾಟೆ ಮಾಡಿಕೊಂಡಿದ್ದ. ಆತನಿಗೆ ತಮ್ಮ ಮೇಲೆ ಸದಾ ಭಯ ಇರುವಂತೆ ಮಾಡಬೇಕೇಂದು ಸೂರಜ್, ಲಾಂಗು ಹಿಡಿದುಕೊಂಡು ಆತನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿದ್ದ. ಈ ವಿಚಾರ ವಿಜಯ್‌ಗೆ ಗೊತ್ತಾಗಿ ದೊಡ್ಡ ಗಲಾಟೆಯಾಗಿತ್ತು. ಆಗ, ಚಂದ್ರಪ್ಪ ಅವರೇ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು.

ಎಲ್ಲ ಕೆಲಸಗಳಲ್ಲೂ ವಿಜಯ್ ತನಗೆ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಸೂರಜ್, ಆತನನ್ನು ಕೊಲ್ಲಲು ನಿರ್ಧರಿಸಿದ್ದ. ವಿಜಯ್ ಜತೆ ದ್ವೇಷ ಕಟ್ಟಿಕೊಂಡಿರುವ ಹುಡುಗರನ್ನು ಹುಡುಕಲಾರಂಭಿಸಿದ. ಆಗ ಆತನಿಗೆ ಜಗಜೀವನ್‌ರಾಮನಗರದ ಶಫೀವುಲ್ಲಾ, ಸಾಯಿ ಹಾಗೂ ವಿವೇಕ್ ಸಿಕ್ಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕೇಬಲ್ ದಂಧೆ: ರೌಡಿ ಸೈಲೆಂಟ್ ಸುನೀಲನ ಸಹಚರನಾದ ವಿಜಯ್, ಕೇಬಲ್ ದಂಧೆ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ 2013ರಲ್ಲಿ ರೌಡಿ ಮಹೇಶ್ ಹಾಗೂ ಆತನ ಸ್ನೇಹಿತ ಏಸು ಎಂಬಾತನನ್ನು ಕೊಲೆ ಮಾಡಿದ್ದ. ಆ ಎರಡು ಹತ್ಯೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು, ಮಹೇಶ್ ಸಂಬಂಧಿ ಸಾಯಿ ಹಾಗೂ ಆತನ ಸಹಚರರು ಪ್ರಭಾವಿಯ ‘ಸಾಥ್‌’ಗಾಗಿ ಕಾಯುತ್ತಿದ್ದರು. ಕಾರ್ಪೊರೇಟರ್ ಮಗನೇ ಬಂದು ಸುಪಾರಿ ಕೊಟ್ಟಾಗ, ಹಿಂದೆ ಮುಂದೆ ಯೋಚಿಸದೆ ಒಪ್ಪಿಕೊಂಡಿದ್ದರು.

ಹುಡುಗರನ್ನು ಹೊಂದಿಸಿಕೊಳ್ಳಲು ಹಾಗೂ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲು ಆರಂಭದಲ್ಲಿ ಅವರಿಗೆ ₹ 3 ಲಕ್ಷ ಕೊಟ್ಟಿದ್ದ ಸೂರಜ್, ಕೆಲಸ ಮುಗಿಸುವವರೆಗೂ ತನ್ನ ಜತೆ ಸಂಪರ್ಕದಲ್ಲಿ ಇರದಂತೆ ಸೂಚಿಸಿದ್ದ. ಆ ನಂತರ ಇನ್ನೂ 8 ಸಹಚರರನ್ನು ಹೊಂದಿಸಿಕೊಂಡ ಶಫೀವುಲ್ಲಾ, ಡಿ.4ರ ರಾತ್ರಿ ಸಂಚನ್ನು ಕಾರ್ಯರೂಪಕ್ಕಿಳಿಸಿದ್ದ.

ಕಾರಿನಲ್ಲಿ ಹಿಂಬಾಲಿಸಿದರು: ಡಿ.4ರಂದು ವಿಜಯ್ ಕೆಲಸದ ನಿಮಿತ್ತ ಮೈಸೂರು ರಸ್ತೆಗೆ ಹೋಗಿದ್ದರು. ಈ ವಿಚಾರ ತಿಳಿದ ಹಂತಕರು ತಕ್ಷಣ ಆತನನ್ನು ನಾಲ್ಕು ಬೈಕ್‌ಗಳಲ್ಲಿ ಹಿಂಬಾಲಿಸಿದ್ದರು. ರಾತ್ರಿ 8 ಗಂಟೆಗೆ ಲಕ್ಕಸಂದ್ರಕ್ಕೆ ಬಂದ ವಿಜಯ್, ಇಬ್ಬರು ಸ್ನೇಹಿತರೊಂದಿಗೆ ಕಚೇರಿಯಲ್ಲಿ ಮಾತನಾಡುತ್ತ ಕುಳಿತಿದ್ದ.

ಶಫೀವುಲ್ಲಾ, ಸಾಯಿ, ರಾಜೇಶ್ ಅಲಿಯಾಸ್ ಅಪ್ಪಿ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಒಳ ನುಗ್ಗಿದ್ದರು. ಅವರು ವಿಜಯ್‌ ಮುಖಕ್ಕೆ ಖಾರದ ‍ಪುಡಿ ಎರಚುತ್ತಿದ್ದಂತೆಯೇ ಉಳಿದವರು ಸಹ ಒಳನುಗ್ಗಿದ್ದರು. ಸ್ನೇಹಿತರು ಭಯದಿಂದ ಆಚೆ ಓಡಿದಾಗ ಹಂತಕರು ವಿಜಯ್‌ನನ್ನು ಮನಸೋಇಚ್ಛೆ ಕೊಚ್ಚಿ ಪರಾರಿಯಾಗಿದ್ದರು.

ವಿಜಯ್ ನನ್ನ ತಮ್ಮನಂತಿದ್ದ’

‘ವಿಜಯ್‌ ನನಗೆ ತುಂಬ ವರ್ಷಗಳಿಂದ ಗೊತ್ತು. ನಾವಿಬ್ಬರೂ ಅಣ್ಣ–ತಮ್ಮನ ರೀತಿಯಲ್ಲಿದ್ದೆವು. ಈ ನಡುವೆ ಒಡನಾಟ ಸ್ವಲ್ಪ ಕಡಿಮೆ ಆಗಿತ್ತಾದರೂ, ಸಿಕ್ಕಾಗ ಚೆನ್ನಾಗಿಯೇ ಮಾತನಾಡಿಸುತ್ತಿದ್ದ. ನಾನು ಅದೇ ಪ್ರೀತಿಯನ್ನು ತೋರುತ್ತಿದ್ದೆ. ಮಗ ಸೂರಜ್‌ ಸುಪಾರಿ ಕೊಟ್ಟು ಕೊಲ್ಲಿಸುವಷ್ಟು ದೊಡ್ಡವನಲ್ಲ’ ಎಂದು ಕಾರ್ಪೊರೇಟರ್ ಚಂದ್ರಪ್ಪ ಹೇಳಿದರು.

‘ಸೋಮವಾರ ಬೆಳಿಗ್ಗೆ ಕೋರಮಂಗಲ ಠಾಣೆಯ ನಾಲ್ವರು ಪೊಲೀಸರು ಮನೆಗೆ ಬಂದು ಮಗನನ್ನು ಕರೆದುಕೊಂಡು ಹೋದರು. ಸಂಜೆ ಕರೆ ಮಾಡಿ, ‘ಸೂರಜ್‌ನನ್ನು ಬಂಧಿಸುತ್ತಿದ್ದೇವೆ. ವಿಜಯ್ ಕೊಲೆ ಪ್ರಕರಣದ ಆರೋಪಿಗಳಿಗೆ ಫೈನಾನ್ಸ್ ಮಾಡಿದ್ದಾನೆ’ ಎಂದು ಹೇಳಿದರು. ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬಾತ ಬಿಎಂಡಬ್ಲ್ಯು ಕಾರು ಖರೀದಿಸಲು ಮಗನ ಬಳಿ ಸಾಲ ಪಡೆದಿದ್ದನಂತೆ. ಅಷ್ಟಕ್ಕೇ ಸುಪಾರಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ’ ಎಂದರು.

ಮತ್ತೆ ₹ 12 ಲಕ್ಷ ಪಡೆದರು

ಕೃತ್ಯಕ್ಕೆ ಬಳಸಿದ್ದ ಬೈಕ್‌ಗಳನ್ನು ಜೆ.ಜೆ.ನಗರದಲ್ಲೇ ಬಿಟ್ಟ ಹಂತಕರು, ಬಸ್‌ನಲ್ಲಿ ಸೇಲಂಗೆ ಹೋಗಿ ತಲೆಮರೆಸಿಕೊಂಡಿದ್ದರು. ಸೂರಜ್, ನಾಲ್ಕೈದು ದಿನಗಳ ಬಳಿಕ ಶಫೀವುಲ್ಲಾನಿಗೆ ಇನ್ನೂ ₹ 12 ಲಕ್ಷವನ್ನು ತಲುಪಿಸಿದ್ದ. ಮಹೇಶ್‌ನ ಸಂಬಂಧಿ ಸಾಯಿ ಮೇಲೆ ಸಂಶಯಗೊಂಡು, ಮೊಬೈಲ್ ಸಂಖ್ಯೆ ವಿವರ (ಸಿಡಿಆರ್) ಪರಿಶೀಲಿಸಿದಾಗ ಆತ ತಮಿಳುನಾಡು ಸೇರಿರುವುದು ಗೊತ್ತಾಯಿತು. ತಕ್ಷಣ ಅಲ್ಲಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದೆವು. ವಿಚಾರಣೆ ನಡೆಸಿದಾಗ ಸೂರಜ್‌ನ ಪಾತ್ರವೂ ಹೊರಬಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT