ಶುಕ್ರವಾರ, ನವೆಂಬರ್ 22, 2019
23 °C
ಎರಡು ಸಂಸ್ಥೆಗಳು ಮಾತ್ರ ಭಾಗಿ: ಇದು ಮಹಾನಗರಪಾಲಿಕೆ ಪವಾಡ!

ಟೆಂಡರ್‌ ಪ್ರಕ್ರಿಯೆ ಮುನ್ನವೇ ಕಾಮಗಾರಿ

Published:
Updated:

ಬೆಂಗಳೂರು: ಕಾಮಗಾರಿ ಅನುಷ್ಠಾನಕ್ಕಾಗಿ ಟೆಂಡರ್‌ ಮೂಲಕ ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಿ, ಕಾರ್ಯಾದೇಶ ನೀಡುವುದು ವಾಡಿಕೆ. ಆದರೆ, ಪಾಲಿಕೆಯಲ್ಲಿ ಕೆಲವು ಪವಾಡಗಳು ನಡೆಯುತ್ತವೆ. ಇಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಮುನ್ನವೇ ಕಾರ್ಯಾದೇಶ ನೀಡಲಾಗುತ್ತದೆ. ಕಾರ್ಯಾದೇಶ ನೀಡುವುದಕ್ಕೆ ಮುನ್ನವೇ ಕಾಮಗಾರಿಯೂ ಪೂರ್ಣಗೊಳ್ಳುತ್ತದೆ!

ಬಿಬಿಎಂಪಿಯಲ್ಲಿ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ನಡೆದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅಕ್ರಮದ ಕುರಿತು ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಇಂತಹ ಹಲವಾರು ಪ್ರಕರಣಗಳನ್ನು ಬಯಲಿಗೆಳೆದಿದೆ.

ಮಲ್ಲೇಶ್ವರ ವಿಭಾಗದ ಪೀಣ್ಯ ಲಗ್ಗೆರೆ ಮುಖ್ಯ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ದ್ವಿತೀಯ ಹಂತದ ರಾಜಕಾಲುವೆಯ ನಿರ್ಮಿಸುವುದಕ್ಕೆ ಸಂಬಂಧಿಸಿದ ಕಡತದಲ್ಲಿ (ಎಂ– 698) 2009ರ ಆಗಸ್ಟ್‌ 30ರಂದು ಕಾಮಗಾರಿ ಪರಿಶೀಲನೆ ನಡೆಸಿರುವ ಉಲ್ಲೇಖವಿದೆ. ಆದರೆ, ಆ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದು 2009ರ ನವೆಂಬರ್‌ 16ರಂದು.

ಈ ವಿಭಾಗದಲ್ಲಿ ಕಡತ ಸಂಖ್ಯೆ ಎಂ– 695, ಎಂ– 1106, ಎಂ–815, ಎಂ–1111, ಎಂ–1154ಕ್ಕೆ ಸಂಬಂಧಿಸಿದ ಕಾಮಗಾರಿಗಳಲ್ಲೂ ಹಾಗೂ ಗಾಂಧಿನಗರ ವಿಭಾಗದ ಕಡತ ಸಂಖ್ಯೆ ಜಿ475, ಜಿ– 262, ಜಿ– 289 ಮತ್ತು ಜಿ– 1856 ಕುರಿತ ಕಾಮಗಾರಿಗಳಲ್ಲೂ ಇದೇ ರೀತಿಯ ಅಕ್ರಮಗಳು ನಡೆದಿರುವುದನ್ನು ಸಮಿತಿ ಪತ್ತೆ ಹಚ್ಚಿದೆ.

ಗಾಂಧಿನಗರ ವಿಭಾಗದ ಕಡತ ಸಂಖ್ಯೆ ಜಿ 475, ಜಿ 1093, ಜಿ– 1132ಗಳಿಗೆ ಸಂಬಂಧಿಸಿದಂತೆ ಕಾರ್ಯಾದೇಶವನ್ನು ಯಾವತ್ತು ನೀಡಲಾಗಿದೆ ಎಂಬ ಬಗ್ಗೆ ಉಲ್ಲೇಖವೇ ಇಲ್ಲ. ಬಹುತೇಕ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಗಳು ಮಾತ್ರ ಭಾಗವಹಿಸಿರುವ ಕುರಿತು ಸಮಿತಿ ಅನುಮಾನ ವ್ಯಕ್ತಪಡಿಸಿದೆ. ಟೆಂಡರ್‌ ಆಹ್ವಾನಿಸಿದ ವೇಳೆ ಅರ್ಜಿ ಸಲ್ಲಿಸುವುದಕ್ಕೆ ಸಾಕಷ್ಟು ಕಾಲಾವಕಾಶ ನೀಡದಿರುವುದು ಇದಕ್ಕೆ ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಒಪ್ಪಂದಕ್ಕೆ ಮುನ್ನವೇ ಕಾರ್ಯಾದೇಶ: ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮುನ್ನವೇ ಕಾರ್ಯಾದೇಶ ನೀಡಿದ ಪ್ರಕರಣಗಳೂ ಸಮಿತಿಯ ತನಿಖೆಯಿಂದ ಬೆಳಕಿಗೆ ಬಂದಿವೆ. ಮಲ್ಲೇಶ್ವರ ವಿಭಾಗದಲ್ಲಿ ಕಡತ ಸಂಖ್ಯೆ ಎಂ– 633, ಎಂ– 1102 ಹಾಗೂ ಎಂ–1216ಕ್ಕೆ ಸಂಬಂಧಿಸಿದ ಕಾಮಗಾರಿಗಳು ಹಾಗೂ ಗಾಂಧಿನಗರ ವಿಭಾಗದ ಜಿ–485, ಜಿ–289, ಜಿ–377 ಕಡತಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳುವ ಮುನ್ನವೇ ಕಾರ್ಯಾದೇಶ ನೀಡಲಾಗಿತ್ತು.

ಟೆಂಡರ್‌ ಹಂತದ ಅಕ್ರಮಗಳು

l ಟೆಂಡರ್ ಜಾಹೀರಾತು ನೀಡಿಲ್ಲ

l ಸಾಕಷ್ಟು ಸಮಯಾವಕಾಶ ನೀಡಿಲ್ಲ

l ಅಲ್ಪಾವಧಿ ಟೆಂಡರ್‌ ಕರೆದಿದ್ದಕ್ಕೆ ಸೂಕ್ತ ಕಾರಣ ನೀಡಿಲ್ಲ

l ಮೇಲಧಿಕಾರಿಯಿಂದ ಮಂಜೂರಾತಿ ಪಡೆಯದೆಯೇ ಅಲ್ಪಾವಧಿ ಟೆಂಡರ್‌ ಕರೆಯಲಾಗಿದೆ

l ಸಂಬಂಧಪಟ್ಟ ಪ್ರಾಧಿಕಾರವು ಕರಡು ಟೆಂಡರ್‌ ಶೆಡ್ಯೂಲ್‌ಗೆ (ಡಿಟಿಎಸ್‌) ಮಂಜೂರಾತಿ ನೀಡಿಲ್ಲ

l ಒಪ್ಪಂದಕ್ಕಿಂತ ಹೆಚ್ಚು ಬಿಲ್‌ ಪಾವತಿ 

l ಒಪ್ಪಂದಕ್ಕೆ ಮುದ್ರಾಂಕ ಕಾಗದ ಬಳಕೆ

l ಒಪ್ಪಂದ ನಡೆದ ದಿನಾಂಕದ ಬಳಿಕ ಮುದ್ರಾಂಕ ಕಾಗದ ಖರೀದಿಸಲಾಗಿದೆ

ಪಾವತಿ ಹಂತದ ಅಕ್ರಮಗಳು

l ಪಾವತಿ ವೇಳೆ ಕಡ್ಡಾಯವಾಗಿ ಕಡಿತ ಮಾಡಬೇಕಾದ ಮೊತ್ತವನ್ನೂ ಕಡಿತಗೊಳಿಸಿಲ್ಲ

l ಕಾರ್ಮಿಕರ ಸೆಸ್‌ ಕಡಿತ ಮಾಡಿಲ್ಲ

l ರಾಜಸ್ವ ಪಾವತಿ ಮಾಡಿಲ್ಲ

l ಶೇ 2ರಷ್ಟು ತೆರಿಗೆ ಪಾವತಿಸಿಲ್ಲ

l ಶೇ 4ರಷ್ಟು ಕೆಎಸ್‌ಟಿ ಪಾವತಿಸಿಲ್ಲ

 

ಪ್ರತಿಕ್ರಿಯಿಸಿ (+)