ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಸುತ್ತಿನಲ್ಲೂ ಕುತೂಹಲ

ತುದಿಗಾಲ ಮೇಲೆ ನಿಲ್ಲಿಸಿದ ಫಲಿತಾಂಶ
Last Updated 23 ಮೇ 2019, 13:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಕುಂದಗೋಳ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕಾರಣ ಭಾರಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ಪಕ್ಷಗಳು ಅಬ್ಬರದ ಪ್ರಚಾರ ಮಾಡಿದ್ದವು. ಆದ್ದರಿಂದ ಫಲಿತಾಂಶ ಸಹವಾಗಿಯೇ ಕುತೂಹಲ ಮೂಡಿಸಿತ್ತು.

‘ವಿಜಯಲಕ್ಷ್ಮಿ’ ತೂಗೂಯ್ಯಾಲೆಯಲ್ಲಿದ್ದ ಕಾರಣ ಕೊನೆಯ ಸುತ್ತಿನ ಎಣಿಕೆವರೆಗೂ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರನ್ನು ತುದಿಗಾಲ ಮೇಲೆ ನಿಲ್ಲಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಸಿಕ್ಕರೂ, ಅಂತರ ಬಹಳ ಕಡಿಮೆಯೇ ಇದ್ದ ಕಾರಣ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಕುತೂಹಲ ಹಾಗೆಯೇ ಮುಂದುವರೆಯುತ್ತಿತ್ತು.

ಅಂಚೆ ಮತ ಎಣಿಕೆ ಆರಂಭವಾದಾಗಲೇ ತೀವ್ರ ಸ್ಪರ್ಧೆಯ ಸೂಚನೆ ಸಿಕ್ಕಿತ್ತು. ಕಾಂಗ್ರೆಸ್ ಅಭ್ಯರ್ಥಿ ಕುಸುವಾಮತಿ 53 ಮತ ಪಡೆದರೆ, ಚಿಕ್ಕನಗೌಡ್ರ 63 ಮತ ಗಳಿಸಿದರು. ಮೊದಲ ಸುತ್ತಿನ ಎಣಿಕೆ ಮುಗಿದಾಗ ಕಾಂಗ್ರೆಸ್ ಅಭ್ಯರ್ಥಿ 671 ಮತಗಳ ಮುನ್ನಡೆ ಸಾಧಿಸಿದರು. ಎರಡೂ, ಮೂರನೇ ಸುತ್ತಿನಲ್ಲಿಯೂ ಅದನ್ನು ಅವರು ಕಾಯ್ದುಕೊಂಡರು. ನಾಲ್ಕನೇ ಸುತ್ತಿನಲ್ಲಿ ಚಿಕ್ಕನಗೌಡ್ರ ಹೆಚ್ಚಿನ ಮತ ಪಡೆದರೂ, ಒಟ್ಟಾರೆ (ಟೋಟಲ್ ಲೀಡ್‌) ಮುನ್ನಡೆ ಸಾಧಿಸಲು ಆಗಲಿಲ್ಲ.

ಆ ನಂತರ ಒಂಬತ್ತನೇ ಸುತ್ತಿನ ವರೆಗೂ ಕುಸುಮಾವತಿ ಅವರು ಅಲ್ಪಮತದ ಮುನ್ನಡೆ ಕಾಯ್ದುಕೊಂಡರು. ಆದರೆ 10,11 ಹಾಗೂ 12ನೇ ಸುತ್ತಿನಲ್ಲಿ ಮಾತ್ರ ಚಿಕ್ಕನಗೌಡ್ರ ಒಟ್ಟಾರೆ ಮುನ್ನಡೆ ಸಾಧಿಸಿದಾಗ, ಫಲಿತಾಂಶ ಕುತೂಹಲ ತಿರುವು ಪಡೆಯಬಹುದೆಂಬ ನಿರೀಕ್ಷೆ ಮೂಡಿತು. ಆದರೆ 12ನೇ ಸುತ್ತಿನಿಂದ ಮತ್ತೆ ಲೀಡ್‌ ಪಡೆದ ಕುಸುಮಾವತಿ ಗೆಲುವಿನ ದಡ ಮುಟ್ಟಿದರು.

ಸಂದಿಗ್ಧದಲ್ಲಿ ಕಾರ್ಯಕರ್ತರು: ಮೇಲ್ನೋಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಫಲಿತಾಂಶ ಬರುವ ನಿರೀಕ್ಷೆ ಇದ್ದರೂ, ಅಂತರ ಮಾತ್ರ ಗಣನೀಯವಾಗಿ ಹೆಚ್ಚಾಗದೇ ಇದ್ದದ್ದು ಕಾರ್ಯಕರ್ತರನ್ನು ಸಂದಿಗ್ಧಕ್ಕೆ ದೂಡಿತು. ಸಂಭ್ರಮ ಆಚರಿಸುವಂತೆ ಇಲ್ಲ, ಸುಮ್ಮನಿರುವಂತೆಯೂ ಇಲ್ಲ ಎಂಬ ಪರಿಸ್ಥಿತಿ ಅವರದ್ದಾಗಿತ್ತು. ಆದರೂ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಗೆಲುವಿನ ನಿರೀಕ್ಷೆಯೊಂದಿಗೆ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT