ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆಯ ಬೆನ್ನಲ್ಲೇ ಸೆರೆಗೆ ತಂತ್ರ

ಎರಡು ತಾಸಿನಲ್ಲಿ ಬಿಡುವಿಲ್ಲದಷ್ಟು ಕರೆಗಳು: ಕಾರ್ಯಕ್ರಮದಲ್ಲಿ ದೂರುಗಳ ಮಹಾಪೂರ
Last Updated 17 ಅಕ್ಟೋಬರ್ 2018, 7:29 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯರ ನೋವು, ಮಹಿಳೆಯರ ಆತಂಕ ಹಾಗೂ ವಂಚನೆಗೊಳಗಾದವರ ದುಗುಡಗಳ ಮೊರೆ ಆಲಿಸುತ್ತಿದ್ದಂತೆ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಹಾಗೂ ಅಪರಾಧ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಕುಳಿತಲ್ಲೇ ‘ಪ್ರಜಾ’ ಕರೆಗೆ ನ್ಯಾಯ ಒದಗಿಸುವ ಕಾರ್ಯತಂತ್ರ ಹೆಣೆದರು.

ಹೀಗೊಂದು ವೇದಿಕೆ ಒದಗಿಸಿದ್ದು ‘ಪ್ರಜಾವಾಣಿ’ ಮಂಗಳವಾರ ಆಯೋಜಿಸಿದ್ದ ‘ಫೋನ್‌–ಇನ್‌’ ಕಾರ್ಯಕ್ರಮ.

ಎರಡು ತಾಸಿನ ಕಾರ್ಯಕ್ರಮದಲ್ಲಿ ದೂರುಗಳ ಮಹಾಪೂರವೇ ಹರಿದುಬಂತು. ಕಮಿಷನರ್ ಹಾಗೂ ಡಿಸಿಪಿ ಬಿಡುವಿಲ್ಲದೆ ಸಾರ್ವಜನಿಕರ ಅಹವಾಲು ಆಲಿಸಿದರು. ಮೀಟರ್ ಬಡ್ಡಿ ದಂಧೆಕೋರರು, ರೌಡಿಗಳು, ಭೂಗಳ್ಳರ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸಲು ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದರು.

ದಾಳಿಗೆ ಸೂಚನೆ: ‘ರಾಜಾಜಿನಗರದ ಕುವೆಂಪು ರಸ್ತೆ ಮೆಟ್ರೊ ನಿಲ್ದಾಣದ ‍ಸಮೀಪದ ಕಂಪನಿಯೊಂದು ಉದ್ಯೋಗ ಕೊಡಿಸುವ ನೆಪದಲ್ಲಿ ಹಲವು ಪದವೀಧರರಿಗೆ ವಂಚಿಸುತ್ತಿದೆ. ನಕಲಿ ಸಂದರ್ಶನಗಳನ್ನು ಏರ್ಪಡಿಸಿ ಅಭ್ಯರ್ಥಿಗಳನ್ನು ನಂಬಿಸುವ ಕಂಪನಿ, ನಂತರ ಹಣ ವಸೂಲಿ ಮಾಡುತ್ತಿದೆ. ಅಭ್ಯರ್ಥಿಗಳಿಗೆ ಹಣವೂ ಇಲ್ಲ, ಕೆಲಸವೂ ಇಲ್ಲ’ ಎಂದು ರಾಮನಗರದ ಯುವಕನೊಬ್ಬ ದೂರಿದ್ದೇ ತಡ, ಡಿಸಿಪಿ ಗಿರೀಶ್ ಅವರು ಆ ಕಂಪನಿ ಮೇಲೆ ದಾಳಿ ನಡೆಸುವಂತೆ ಸಿಸಿಬಿ ಸಿಬ್ಬಂದಿಗೆ ಸೂಚಿಸಿದರು.

ಹಿರಿಜೀವಕ್ಕೆ ಆಸರೆಯ ಭರವಸೆ: ‘ಸಾರ್... ನನಗೀಗ 87 ವರ್ಷ. ನನಗಿರೋದು ಒಬ್ಬನೇ ಮಗ. ನನ್ನ ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಬರೆಸಿಕೊಂಡು ಮನೆಯಿಂದ ಹೊರ ಹಾಕಿದ್ದಾನೆ. ಪತ್ನಿಯನ್ನೂ ಕಳೆದುಕೊಂಡಿದ್ದೇನೆ. ನನ್ನ ಆರೋಗ್ಯವೂ ಸರಿ ಇಲ್ಲ. ಡಾಲರ್ಸ್‌ ಕಾಲೊನಿಯಲ್ಲಿ ನೆಲೆಸಿರುವ ಮಗ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಮುಂದೇನು ಎಂದು ದಿಕ್ಕೇ ತೋಚುತ್ತಿಲ್ಲ....’ ಮತ್ತಿಕೆರೆ ಸಮೀಪದ ಗೋಕುಲ ಬಳಿಯ ನಿವಾಸಿ ರಾಮಯ್ಯ ಹೀಗೆ ತಮ್ಮ ಸಂಕಷ್ಟ ಹೇಳಿಕೊಳ್ಳುವಾಗ ಅವರ ಧ್ವನಿ ಗದ್ಗದಿತವಾಗಿತ್ತು.

ಅವರ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್, ‘ಅಳಬೇಡಿ... ಮಗ ನಿಮ್ಮನ್ನು ಬಿಟ್ಟರೂ ನಾವು ಕೈಬಿಡುವುದಿಲ್ಲ’ ಎಂದು ಸಾಂತ್ವನ ಹೇಳಿದರು. ‘ಮಗನ ಮೊಬೈಲ್ ನಂಬರ್ ಕೊಡಿ. ನಾನೇ ಅವರಿಗೆ ಕರೆ ಮಾಡಿ ಬುದ್ಧಿ ಹೇಳುತ್ತೇನೆ’ ಎಂದು ಮೊಬೈಲ್ ಸಂಖ್ಯೆಯನ್ನೂ ಪಡೆದುಕೊಂಡರು. ಯಶವಂತಪುರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡುವುದಾಗಿಯೂ ತಿಳಿಸಿದರು.

ಒಮ್ಮೆಯೂ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತದ ಅನೇಕ ಮಹಿಳೆಯರು ಕರೆ ಮಾಡಿ ಅಳಲು ತೋಡಿಕೊಂಡರು. ‘ಸರ್‌ ಹೇಗೆ ದೂರು ಕೊಡಬೇಕು, ಯಾರಿಗೆ ದೂರು ಕೊಡಬೇಕು ಎಂದೇ ನಮಗೆ ಗೊತ್ತಿಲ್ಲ. ಪೊಲೀಸ್‌ ಠಾಣೆಗೆ ಹೋಗುವುದಕ್ಕೂ ಭಯವಾಗುತ್ತದೆ’ ಎಂದು ಕೆಲವು ಮಹಿಳೆಯರು ಸಂಕಷ್ಟ ಹೇಳಿಕೊಂಡರು.

ರೌಡಿಗಳ ಉಪಟಳದ ಬಗ್ಗೆ ಕರೆ ಮಾಡಿದ್ದ ಕೆಲವರು, ‘ಸರ್‌ ನನ್ನ ಹೆಸರು ಎಲ್ಲೂ ಹೊರಗೆ ಬರುವುದಿಲ್ಲ ತಾನೆ. ಅವರಿಗೆ ಗೊತ್ತಾದರೆ ನಮಗೆ ಮತ್ತಷ್ಟು ಕಿರುಕುಳ ನೀಡುತ್ತಾರೆ’ ಎಂದೂ ಕೆಲವರು ಆತಂಕ ತೋಡಿಕೊಂಡರು.

ಭೂಮಾಫಿಯಾ ಹಾಗೂ ಮೀಟರ್ ಬಡ್ಡಿಗೆ ಸಂಬಂಧಿಸಿದ ಕರೆಗಳೇ ಹೆಚ್ಚಿದ್ದವು. ಎಲ್ಲ ದೂರುಗಳನ್ನು ಪಟ್ಟಿ ಮಾಡಿಕೊಂಡು ತಕ್ಷಣವೇ ಇನ್‌ಸ್ಪೆಕ್ಟರ್‌ಗಳಿಗೆ ಕರೆ ಮಾಡಿದ ಡಿಸಿಪಿ ಗಿರೀಶ್, ‘ಈ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಿ. ಎರಡು ದಿನಗಳ ಒಳಗಾಗಿ ಎಲ್ಲ ದಂಧೆಕೋರರ ಮನೆಗಳನ್ನು ಪರಿಶೀಲಿಸೋಣ’ ಎಂದು ಸೂಚನೆ ಕೊಟ್ಟರು.

ಬೆಂಗಳೂರು ಮಾತ್ರವಲ್ಲದೆ ರಾಮನಗರ, ತುಮಕೂರು, ಹಾಸನ, ಚಿತ್ರದುರ್ಗ ಜಿಲ್ಲೆಗಳಿಂದಲೂ ಕರೆಗಳು ಬಂದವು. ಆ ದೂರುಗಳನ್ನು ಸಂಬಂಧಪಟ್ಟ ಎಸ್ಪಿಗಳಿಗೆ ತಲುಪಿಸುವುದಾಗಿ ಕಮಿಷನರ್ ತಿಳಿಸಿದರು.

ನಿಮ್ಮ ಜತೆ ನಾವಿದ್ದೇವೆ
ಎದುರಾಳಿಗಳು ಏನು ಮಾಡಿಬಿಡುತ್ತಾರೋ ಎಂಬ ಭಯದಲ್ಲಿ ಜನ ದೂರು ಕೊಡಲು ಮುಂದೆ ಬರುತ್ತಿಲ್ಲ. ಅಂಥವರಿಗೆ ಈ ಕಾರ್ಯಕ್ರಮ ಧ್ವನಿಯಾಯಿತು. ಜನ ಎದುರಿಸುತ್ತಿರುವ ಸಣ್ಣ ಸಣ್ಣ ಕಷ್ಟಗಳನ್ನೂ ತಿಳಿಯಲು ನಮಗೆ ಸಾಧ್ಯವಾಯಿತು. ಅದಕ್ಕಾಗಿ ಪತ್ರಿಕೆಗೆ ಧನ್ಯವಾದ ಹೇಳುತ್ತೇನೆ. ಎಲ್ಲ ದೂರುಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇನೆ. ಕೊನೆಯದಾಗಿ ಬೆಂಗಳೂರಿಗರೇ ನನ್ನದೊಂದು ಮಾತು.. ನಿಮ್ಮ ಜತೆ ಸದಾ ನಾವಿರುತ್ತೇವೆ....
– ಟಿ.ಸುನೀಲ್‌ ಕುಮಾರ್‌,ನಗರ ಪೊಲೀಸ್‌ ಕಮಿಷನರ್

***

ಹೇಳಿ.. ಪೊಲೀಸ್ ಕಮಿಷನರ್ ಮಾತಾಡ್ತಿದೀನಿ..
ಬೆಂಗಳೂರು: ‘ನನ್ನ ಆಸ್ತಿಯನ್ನು ರೌಡಿಗಳು ಲಪಟಾಯಿಸಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರು ಜೀವ ಹಿಂಡುತ್ತಿದ್ದಾರೆ. ಮೆಜೆಸ್ಟಿಕ್ ಬಳಿ ಸುಲಿಗೆಕೋರರ ಹಾವಳಿ ವಿಪರೀತವಾಗಿದೆ. ಬಾರ್, ವೈನ್ಸ್‌ಗಳು ತಡರಾತ್ರಿವರೆಗೂ ವಹಿವಾಟು ನಡೆಸುತ್ತಿರುವುದರಿಂದ ಕುಡುಕರ ಕಾಟ ಹೆಚ್ಚಾಗಿದೆ. ಸಂಚಾರ ಸಮಸ್ಯೆಯನ್ನು ಕೇಳುವವರೇ ಇಲ್ಲ. ಠಾಣೆಗಳಿಗೆ ದೂರು ಹೊತ್ತೊಯ್ದರೆ, ಪೊಲೀಸರು ರೇಗುತ್ತಾರೆ...’

ಹೀಗೆ, ನಾನಾ ಸಮಸ್ಯೆಗಳ ಕರಾಳ ರೂಪವನ್ನು ‘ಫೋನ್–ಇನ್’ ಕಾರ್ಯಕ್ರಮ ಪೊಲೀಸ್‌ ಕಮಿಷನರ್‌ ಮುಂದೆ ತೆರೆದಿಟ್ಟಿತು. ನೋವು ತೋಡಿಕೊಂಡ ನಾಗರಿಕರಿಗೆ ಅಧಿಕಾರಿಗಳು ಸಾಂತ್ವನ ಹೇಳುತ್ತಲೇ, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ಭರವಸೆಯನ್ನೂ ಕೊಟ್ಟರು.

**

ಬಾಡಿಗೆದಾರನ ಕಾರು; ಮನೆ ಮಾಲೀಕರಿಗೆ ‘ಫಜೀತಿ’

ಸಂಚಾರ ನಿಯಮ ಉಲ್ಲಂಘನೆ, ವಾಹನ ದಟ್ಟಣೆ ಹಾಗೂ ಪಾರ್ಕಿಂಗ್‌ ಸಮಸ್ಯೆ ಬಗ್ಗೆ ‘ಫೋನ್‌–ಇನ್’ ಕಾರ್ಯಕ್ರಮದಲ್ಲಿ ಹಲವರು ಅಳಲು ತೋಡಿಕೊಂಡರು.

‘ನಮಸ್ತೆ... ಪ್ರಜಾವಾಣಿಯವರಾ? ಸ್ವಲ್ಪ ಕಮಿಷನರ್‌ಗೆ ಫೋನ್ ಕೊಡಿ’ ಎನ್ನುತ್ತಲೇ ಮಾತು ಆರಂಭಿಸಿದ ಬಸವನಗುಡಿಯ ತರುಣ್‌ಕುಮಾರ್, ‘ನಮ್ಮ ಕಟ್ಟಡದಲ್ಲಿರುವಐದು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದೇವೆ. ಬಾಡಿಗೆದಾರನೊಬ್ಬ ಮನೆ ಮುಂದೆಯೇ ಕಾರು ನಿಲ್ಲಿಸುತ್ತಾನೆ.ಮನೆ ಖಾಲಿ ಮಾಡು ಎಂದರೂ ಆತ ಕ್ಯಾರೆ ಎನ್ನುತ್ತಿಲ್ಲ. ಆತನಿಂದಾಗಿ ನಮಗೆ ಮಾತ್ರವಲ್ಲ, ಇತರೆ ಬಾಡಿಗೆದಾರರಿಗೆ ತೊಂದರೆ ಆಗಿದೆ. ಠಾಣೆಗೆ ದೂರು ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ’ ಅಳಲು ತೋಡಿಕೊಂಡರು.

ನಗುತ್ತಲೇ ಉತ್ತರಿಸಿದ ಸುನೀಲ್‌ಕುಮಾರ್, ‘ನಿಮ್ಮ ಮನೆ. ನೀವೇ ಬಾಡಿಗೆ ಕೊಟ್ಟಿದ್ದೀರಾ. ಈಗ ನೀವೇ ಪರಿಹಾರ ಹೇಳಬೇಕು’ ಎಂದರು.

‘ನಿಮ್ಮ ಬಾಡಿಗೆದಾರರು, ಎಲ್ಲಿ ವಾಹನ ನಿಲ್ಲಿಸಬೇಕು’ ಎಂದು ಪ್ರಶ್ನಿಸಿದರು. ನಂತರ, ‘ಆಯ್ತು, ಸಮಸ್ಯೆ ಇತ್ಯರ್ಥಪಡಿಸಲು ಠಾಣೆಯ ಇನ್‌ಸ್ಪೆಕ್ಟರ್‌ಗೆ ಹೇಳುತ್ತೇನೆ’ ಎಂದು ಭರವಸೆ ನೀಡಿದರು.

ರಸ್ತೆಯಲ್ಲೇ ವಾಹನ ನಿಲುಗಡೆ:‘ಎಂ.ಎಸ್.ಪಾಳ್ಯದ ಸಂಭ್ರಮ ಕಾಲೇಜಿನ ವಿದ್ಯಾರ್ಥಿಗಳು, ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕಾಲೇಜಿನ ಆರಣದೊಳಗೆ ನಿಲ್ಲಿಸಿದರೆ ಹಣ ನೀಡಬೇಕು. ಹಣ ಉಳಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ದೂರಿದರು.

ಕಮಿಷನರ್, ‘ಅಲ್ಲೆಲ್ಲ ನೋ ಪಾರ್ಕಿಂಗ್ ಬೋರ್ಡ್ ಹಾಕಲು ಠಾಣೆಯ ಇನ್‌ಸ್ಪೆಕ್ಟರ್‌ಗೆ ಹೇಳುತ್ತೇನೆ’ ಎಂದರು.

ದೊಣ್ಣೆ ಹಿಡಿದು ಓಡಾಡುತ್ತಾರೆ: ಸಿ.ವಿ.ರಾಮನ್ ನಗರದ ರಾಜೇಶ್, ‘ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ದಟ್ಟಣೆ ನಿಯಂತ್ರಿಸುವುದನ್ನೇ ನೆಪ ಮಾಡಿಕೊಂಡು ಕೆಲವು ಕಿಡಿಗೇಡಿಗಳು, ದೊಣ್ಣೆ ಹಿಡಿದುಕೊಂಡು ಅಡ್ಡಾಡುತ್ತಾರೆ. ಜನರನ್ನು ಭಯಪಡಿಸುತ್ತಾರೆ. ಸ್ಥಳದಲ್ಲಿ ಸಂಚಾರ ಪೊಲೀಸರಿದ್ದರೂ, ಅವರು ಅಸಹಾಯಕರು’ ಎಂದರು.

ಡಿಸಿಪಿ ಗಿರೀಶ್‌, ‘ಅವರು ಯಾರು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಸ್ಥಳೀಯ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ಗೆ ಹೇಳುತ್ತೇನೆ’ ಎಂದರು.

**

ಬಡ್ಡಿ ಕೃಷ್ಣಪ್ಪ ವಿರುದ್ಧವೇ ನಾಲ್ಕು ದೂರು

ವಿದ್ಯಾರಣ್ಯಪುರದ ನರಸಿಂಹಪುರ ಲೇಔಟ್‌ ನಿವಾಸಿ ಡಿ.ಕೃಷ್ಣಪ್ಪ ಅಲಿಯಾಸ್ ಬಡ್ಡಿ ಕೃಷ್ಣಪ್ಪ ವಿರುದ್ಧವೇ ನಾಲ್ವರು ದೂರು ಹೇಳಿಕೊಂಡರು.

‘ಕೃಷ್ಣಪ್ಪ ನಮ್ಮಿಂದ ವಿಪರೀತ ಬಡ್ಡಿ ಕೀಳುತ್ತಿದ್ದಾನೆ. ಹಣ ಕೊಡುವುದು ಸ್ವಲ್ಪ ತಡವಾದರೂ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಾನೆ. ಚೆಕ್‌ಬೌನ್ಸ್ ಸೇರಿದಂತೆ ಆತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರುದಾರರೊಬ್ಬರು ಆರೋಪಿಸಿದರು.

ಕೂಡಲೇ ಸಿಸಿಬಿ ಸಿಬ್ಬಂದಿಗೆ ಕರೆ ಮಾಡಿದ ಡಿಸಿಪಿ ಗಿರೀಶ್‌, ಕೃಷ್ಣಪ್ಪನ ಮನೆ ಪರಿಶೀಲಿಸುವಂತೆ ಸೂಚಿಸಿದರು. ‘ಕೃಷ್ಣಪ್ಪ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವುದು ನಿಜವೇ ಆದರೆ, ಆತನ ವಿರುದ್ಧ ಪ್ರತ್ಯೇಕ ಎಫ್‌ಐಆರ್ ಮಾಡಿಸಿ ತನಿಖೆ ನಡೆಸುತ್ತೇವೆ. ಪೊಲೀಸರೂ ಶಾಮೀಲಾಗಿದ್ದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ದೂರುದಾರರಿಗೆ ಭರವಸೆ ನೀಡಿದರು.

**

3 ದಿನಕ್ಕೆ ಸಾವಿರ ಬಡ್ಡಿ!

ಹಾಸನದ ಪ್ರಭು: ವ್ಯಾಪಾರಕ್ಕಾಗಿ ₹ 4 ಲಕ್ಷ ಸಾಲ ಮಾಡಿದ್ದೆ. ಮೂರು ದಿನಕ್ಕೆ ₹ 1 ಸಾವಿರದಂತೆ ಬಡ್ಡಿ ಕಟ್ಟುತ್ತಿದ್ದೇನೆ. ಈಗಾಗಲೇ ₹ 10 ಲಕ್ಷದವರೆಗೆ ಬಡ್ಡಿ ಪಾವತಿಸಿದ್ದರೂ ಸಾಲ ಮಾತ್ರ ಅಷ್ಟೇ ಇದೆ. ಸಾಲ ಕೊಟ್ಟಾತ ಮನೆ ಖಾಲಿ ಮಾಡಿಸಿ, ಬೈಕನ್ನೂ ಕಿತ್ತುಕೊಂಡಿದ್ದಾನೆ. ನಾನು ಅವರಿಗೆ ಹೆದರಿ ಊರು ಬಿಟ್ಟು ಬಂದಿದ್ದೇನೆ. ಅಪ್ಪ–ಅಮ್ಮನ ಮುಖ ನೋಡೋಕೂ ಆಗ್ತಿಲ್ಲ. ಈ ಸಂಬಂಧ ಆಲೂರು ಠಾಣೆಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ.

ಡಿಸಿಪಿ ಗಿರೀಶ್: ಹಾಸನ ಎಸ್ಪಿಗೆ ವಿಷಯ ತಿಳಿಸುತ್ತೇನೆ. ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಸಾಲ ಕೊಟ್ಟವರಿಗೆ ಹೆದರಿಕೊಂಡು ಯಾವುದೇ ಕಾಗದ ಪತ್ರಕ್ಕೆ ಸಹಿ ಮಾಡಬೇಡಿ. ಭಯಪಡಬೇಡಿ. ಎಲ್ಲವೂ ಸರಿಯಾಗುತ್ತದೆ.

**

ಫುಟ್‌ಪಾತ್‌ನಲ್ಲಿ ಟೈರ್ !

ಅನಂತ್: ಸರ್, ಕಲಾಸಿಪಾಳ್ಯದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಒಡೆಯರ್ ಆರ್ಚ್‌ವರೆಗೂ ಫುಟ್‌ಪಾತ್ ಒತ್ತುವರಿಯಾಗಿದೆ. ಪಾದಚಾರಿ ಮಾರ್ಗದಲ್ಲೇ ಟೈರ್‌ಗಳನ್ನು ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮೇಯರ್ ಗಮನಕ್ಕೆ ತಂದರೂ ಕ್ಯಾರೇ ಎನ್ನಲಿಲ್ಲ. ನೀವಾದರೂ ಕ್ರಮ ತೆಗೆದುಕೊಳ್ಳಿ.

ಡಿಸಿಪಿ: ಈ ವಿಚಾರವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಫುಟ್‌ಪಾತ್ ಒತ್ತುವರಿ ವಿರುದ್ಧ ಸಂಚಾರ ಪೊಲೀಸರೂ ಕ್ರಮ ಜರುಗಿಸಲಿದ್ದಾರೆ.

**

ಕೆರೆ ಬಳಿ ಪುಂಡರ ಹಾವಳಿ

ಕೆಂಗೇರಿ ನಿವಾಸಿ: ರಾಮನಗರದಿಂದ ನೂರಾರು ಮಹಿಳೆಯರು ಮೈಲಸಂದ್ರದ ಸಿದ್ಧ ಉಡುಪು ಕಾರ್ಖಾನೆಗೆ ಕೆಲಸಕ್ಕೆ ಬರುತ್ತಾರೆ. ಅವರೆಲ್ಲ ರೈಲು ನಿಲ್ದಾಣದಿಂದ ಗಾರ್ಮೆಂಟ್ಸ್‌ ಕಾರ್ಖಾನೆಗೆ ಬರಲು ಕೆರೆ ಪಕ್ಕದ ಕಾಲುದಾರಿ ಬಳಸುತ್ತಾರೆ.

ಸಂಜೆ 6ರಿಂದ 9 ಗಂಟೆವರೆಗೆ ಆ ಕಾಲುದಾರಿಯ ಪೊದೆಯಲ್ಲಿ ಪುಂಡರು ಬಿಡಿ, ಸಿಗರೇಟ್ ಹಾಗೂ ಗಾಂಜಾ ಸೇದಿಕೊಂಡು ಕೂರುತ್ತಾರೆ. ಕೆಲಸ ಮುಗಿಸಿಕೊಂಡು ರೈಲು ನಿಲ್ದಾಣಕ್ಕೆ ತೆರಳುವ ಮಹಿಳೆಯರನ್ನು ಚುಡಾಯಿಸುತ್ತಾರೆ.

ಡಿಸಿಪಿ: ಆ ದಾರಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸುತ್ತೇವೆ. ಬೀದಿ ದೀಪಗಳನ್ನು ಹಾಕುವಂತೆ ಬಿಬಿಎಂಪಿಗೂ ತಿಳಿಸುತ್ತೇವೆ.

**

ಮೆಜೆಸ್ಟಿಕ್‌ನಲ್ಲಿ ಭಯದ ವಾತಾವರಣ

ವ್ಯಾಪಾರಿ: ಮೆಜೆಸ್ಟಿಕ್ ಸುತ್ತಮುತ್ತ ಸುಲಿಗೆಕೋರರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ಊರುಗಳಿಂದ ಬರುವ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ಕೀಳುತ್ತಿದ್ದಾರೆ. ಮಂಗಳಮುಖಿಯರ ಕಾಟವೂ ವಿಪರೀತವಾಗಿದೆ. ಅಂಡರ್‌ಪಾಸ್‌ಗಳಲ್ಲಿ ಒಬ್ಬೊಬ್ಬರೇ ಓಡಾಡುವುದಕ್ಕೆ ಹೆದರಿಕೆ ಆಗುತ್ತದೆ.

ಡಿಸಿಪಿ: ಮೆಜೆಸ್ಟಿಕ್‌ ಸುತ್ತಮುತ್ತ ತುಂಬ ವರ್ಷಗಳಿಂದ ಇದೇ ಸಮಸ್ಯೆ ಇದೆ. ಇದನ್ನು ತಡೆಯಲು ವಿಶೇಷ ಕಾರ್ಯಾಚರಣೆ ನಡೆಸುವ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಜತೆ ಚರ್ಚಿಸುತ್ತೇನೆ.

**

‘ಅಶ್ಲೀಲ ಸಂದೇಶ ಕಳಿಸ್ತಾನೆ’

ನ್ಯೂತಿಪ್ಪಸಂದ್ರದ ಕೇಶವಮೂರ್ತಿ: ಮಗಳಿಗೆ ಮದುವೆ ಆಗಿ ಒಂದು ಮಗು ಇದೆ. ಇತ್ತೀಚೆಗೆ ಆಕೆಯ ಮೊಬೈಲ್‌ಗೆ ಯಾರೋ ಒಬ್ಬ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಆತನ ಕಿರುಕುಳ ತಾಳಲು ಆಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.


ಡಿಸಿಪಿ: ನೀವು ಜೀವನ್‌ಬಿಮಾನಗರ ಠಾಣೆಗೆ ಹೋಗಿ ಒಂದು ದೂರು ಕೊಡಿ. ಅಲ್ಲಿ ಭಜಂತ್ರಿ ಅಂತ ಇನ್‌ಸ್ಪೆಕ್ಟರ್ ಇರ್ತಾರೆ. ಅವರಿಗೆ ನಾನೂ ಹೇಳ್ತೀನಿ.

**

‘ಕಿಂಡಿ ವ್ಯವಹಾರ ಕೇಳೋರಿಲ್ಲ’

ಪಾದರಾಯನಪುರದ ವ್ಯಾಪಾರಿ: ಜಗಜೀವನ್‌ರಾಮನಗರ 11ನೇ ಇ ಅಡ್ಡರಸ್ತೆಯಲ್ಲಿ ಒಂದು ಅಂಗಡಿ ಇದೆ. ಅಲ್ಲಿ ನಸುಕಿನವರೆಗೂ ಬೀಡಿ, ಸಿಗರೇಟ್ ಜತೆಗೆ ಗಾಂಜಾ ಮಾರಾಟವೂ ನಡೆಯುತ್ತದೆ. ಅಂಗಡಿಯ ಶಟರ್ ಎಳೆದಿರುತ್ತಾರೆ. ಆದರೆ, ಕಿಂಡಿಯಲ್ಲಿ ವ್ಯವಹಾರ ನಡೆಯುತ್ತದೆ. ಅಲ್ಲಿಗೆ ಬರುವ ಗ್ಯಾಂಗ್‌ವೊಂದು, ‘ನೀನು ವ್ಯಾಪಾರ ಮಾಡಿಕೋ. ಅದ್ಯಾರು ಅಡ್ಡ ಬರುತ್ತಾರೆ ನೋಡೋಣ’ ಎಂದು ಆ ವ್ಯಾಪಾರಿಯ ಬೆನ್ನಿಗೆ ನಿಂತಿದ್ದಾರೆ.

**

ಶಾಲೆ, ದೇವಸ್ಥಾನ ಸನಿಹದಲ್ಲೇ ಬಾರ್!

ಸತ್ಯನಾರಾಯಣ್: ಮಲ್ಲೇಶ್ವರ 8ನೇ ಮುಖ್ಯರಸ್ತೆಯ 18 ಹಾಗೂ 19ನೇ ಅಡ್ಡರಸ್ತೆ ನಡುವೆ ಒಂದು ಬಾರ್ ಇದೆ. ಅದಕ್ಕೆ ಸ್ವಲ್ಪ ದೂರದಲ್ಲೇ ಶಾಲೆ ಹಾಗೂ ದೇವಸ್ಥಾನ ಇದೆ. ಮಕ್ಕಳು, ಮಹಿಳೆಯರು ಹೆಚ್ಚಾಗಿ ಓಡಾಡುವ ಆ ರಸ್ತೆಯಲ್ಲಿ ಕುಡುಕರ ಗಲಾಟೆಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

ಕಮಿಷನರ್: ಆ ಬಾರ್‌ ಶಾಲೆಯಿಂದ 100 ಮೀಟರ್ ಅಂತರದಲ್ಲಿದ್ದರೆ ಲೈಸೆನ್ಸ್ ರದ್ದುಪಡಿಸುವಂತೆ ಅಬಕಾರಿ ಇಲಾಖೆಗೆ ಶಿಫಾರಸು ಮಾಡುತ್ತೇನೆ. ತಡರಾತ್ರಿವರೆಗೂ ವಹಿವಾಟು ನಡೆಸುತ್ತಿದ್ದರೆ ನಮ್ಮ ಸಿಬ್ಬಂದಿ ಕ್ರಮ ತೆಗೆದುಕೊಳ್ಳುತ್ತಾರೆ. ಈ ರಾತ್ರಿಯೇ ಸಿಬ್ಬಂದಿ ಮಫ್ತಿಯಲ್ಲಿ ಹೋಗಿ ಪರಿಶೀಲಿಸುತ್ತಾರೆ.

**

ಚಿಟ್ ಫಂಡ್‌ನಿಂದ ಮೋಸ’

ರಾಜಾಜಿನಗರ ಸೀತಾರಾಮಶೆಟ್ಟಿ: ಮಲ್ಲೇಶ್ವರದ ‘ಪ್ರಸಿದ್ಧಿ ಚಿಟ್ ಫಂಡ್‌’ನಿಂದ ನನಗೆ ವಂಚನೆಯಾಗಿದೆ. ಮಗನಿಗೆ ಉನ್ನತ ವ್ಯಾಸಂಗ ಕೊಡಿಸಲೆಂದು ಚಿಟ್‌ ಫಂಡ್‌ನಲ್ಲಿ ಹಣ ಹೂಡಿದ್ದೆ. ಆದರೀಗ, ಹಣ ಮರಳಿಸದೆ ಸತಾಯಿಸುತ್ತಿದ್ದಾರೆ. ನನ್ನಂತೆಯೇ ನೂರಾರು ಮಂದಿಗೆ ಅವರು ಮೋಸ ಮಾಡಿದ್ದಾರೆ.

ಕಮಿಷನರ್: ಪ್ರಸಿದ್ಧಿ ಚಿಟ್ ಫಂಡ್ ಅಕ್ರಮದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ತನಿಖೆ ನಡೆಯುತ್ತಿದೆ. ಆರೋಪಿಗಳು ಮನೆ ಖಾಲಿ ಮಾಡಿದ್ದಾರೆ. ಅವರ ವಿಳಾಸ ಪತ್ತೆ ಮಾಡುವಂತೆ ಮಲ್ಲೇಶ್ವರ ಠಾಣೆಯ ಇನ್‌ಸ್ಪೆಕ್ಟರ್‌ಗೂ ಸೂಚಿಸುತ್ತೇನೆ.

**

ಪ್ಲೀಸ್... ಮನೆ ವಾಪಸ್‌ ಕೊಡಿಸಿ

ಪದ್ಮನಾಭಗರದ ಸುಮಿತ್ರಾ: ಇಸ್ರೊ ಲೇಔಟ್‌ನಲ್ಲಿ ನಮ್ಮದೊಂದು ಮನೆ ಇದೆ. ಅದನ್ನು ಕೆಲವರು ಬಲವಂತವಾಗಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಮನೆ ಹತ್ತಿರ ಬಂದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲಿ ನೆಲೆಸಿರುವವರನ್ನು ಹೊರಹಾಕಿ, ನಮ್ಮ ಮನೆಯನ್ನು ವಾಪಸ್ ಕೊಡಿಸಿ.

ಡಿಸಿಪಿ: ನಿಮ್ಮ ನಿವೇಶನದ ದಾಖಲೆಗಳನ್ನು ತೆಗೆದುಕೊಂಡು ಚಾಮರಾಜಪೇಟೆಯಲ್ಲಿರುವ ನಮ್ಮ ಸಿಸಿಬಿ ಕಚೇರಿಗೆ ಬನ್ನಿ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

**

ರೌಡಿ ’ಖಾಕಿ’ ಕಾಟ; ಅಳಲು

ಇಂದಿರಾನಗರದ ಮಹಿಳೆ: ಹೊಸ ವರ್ಷಾಚರಣೆ ವೇಳೆ ಇಂದಿರಾನಗರದಲ್ಲಿ ಸ್ಕೂಟರ್‌ ಮೇಲೆ ಹೊರಟಿದ್ದ ಯುವಕ–ಯುವತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದ ರೌಡಿ ‘ಖಾಕಿ’ಯ ಕಾಟ ಇಂದಿಗೂ ಮುಂದುವರಿದಿದೆ. ಸ್ಥಳೀಯ ವ್ಯಾಪಾರಿಗಳನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ. ಆತ ಕೃತ್ಯಗಳ ಬಗ್ಗೆ ಮಾಹಿತಿ ನೀಡಿದ ಮಹಿಳೆ, ‘ನನ್ನ ಪತಿ, ಸಾರಿಗೆ ವ್ಯವಹಾರ ಮಾಡುತ್ತಾರೆ. ಅವರಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದಾನೆ. ಪ್ರಶ್ನಿಸಿದರೆ ಜೀವ ಬೆದರಿಕೆ ಹಾಕುತ್ತಾನೆ’ ಎಂದರು.

ಕಮಿಷನರ್: ರೌಡಿಗಳನ್ನು ಮಟ್ಟ ಹಾಕುತ್ತಿದ್ದೇವೆ. ನೀವು ಈ ವಿಷಯವನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ನಾನು, ಆ ರೌಡಿ ಬಗ್ಗೆ ಗಮನ ಹರಿಸುತ್ತೇನೆ.

**

‘ನಾನು ಭಯಂಕರವಾಗೇನೂ ಇಲ್ಲ’

ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದ ಯಶವಂತಪುರದ ಗಂಗೋಜಿ ಎಂಬುವರು, ‘ಸರ್.. ಕಮಿಷನರ್ ಸಾಹೇಬ್ರ ಹತ್ರ ಮಾತಾಡ್ಬೇಕಿತ್ತು’ ಎಂದರು. ಅದಕ್ಕೆ ಸುನೀಲ್ ಕುಮಾರ್, ‘ಹ್ಞೂಂ.. ನಾನೇ ಮಾತನಾಡ್ತಿದ್ದೇನೆ. ಹೇಳಿ ಗಂಗೋಜಿ’ ಎಂದರು. ಆಗ ಅವರು, ‘ಕಮಿಷನರ್ ಸರ್, ನಿಮ್ಮತ್ರ ಮಾತಾಡೋಕೆ ನನಗೆ ತುಂಬ ನರ್ವಸ್ (ಭಯ) ಆಗ್ತಿದೆ’ ಎಂದರು.

ಅದಕ್ಕೆ, ‘ಯಪ್ಪಾ.. ನೀವು ಹೆದರುವಷ್ಟು ಭಯಂಕರವಾಗೇನೂ ನಾನಿಲ್ಲ. ಅಷ್ಟಕ್ಕೂ ನಾನು ನಿಮ್ಮ ಮುಂದೆ ಇಲ್ಲವಲ್ಲಾ. ಭಯಪಡಬೇಡಿ. ಧೈರ್ಯವಾಗಿ ಮಾತಾಡಿ’ ಎಂದು ಜೋರಾಗಿ ನಕ್ಕರು.

**

‘ನ್ಯಾಯ ಕೊಡಿಸುತ್ತೇವೆ’

‘ಪೊಲೀಸ್ ಸಹಾಯವಾಣಿಗೆ ಬರುವುದಕ್ಕಿಂತ ಮೌಲ್ಯಯುತವಾದ ಕರೆಗಳು/ದೂರುಗಳು ಇಲ್ಲಿ ಬಂದಿವೆ. ಥ್ಯಾಂಕ್ಸ್‌ ಟು ಪ್ರಜಾವಾಣಿ. ಮೀಟರ್ ಬಡ್ಡಿ, ರೌಡಿ ಚಟುವಟಿಕೆ, ಭೂಮಾಫಿಯಾ ವಿರುದ್ಧ ಸಿಸಿಬಿ ಈಗಾಗಲೇ ಕಾರ್ಯಾಚರಣೆ ಚುರುಕುಗೊಳಿಸಿದೆ. ಈಗ ಸಿಕ್ಕಿರುವ ಕೆಲ ಮಾಹಿತಿಗಳನ್ನು ಸಂಬಂಧಪಟ್ಟ ಠಾಣೆಗಳಿಗೆ ವರ್ಗಾಯಿಸಿ, ಶೋಷಿತರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತೇವೆ’ ಎಂದು ಗಿರೀಶ್ ಹೇಳಿದರು.

**

ಸಮಸ್ಯೆ ಎದುರಾದರೆ ಈ ಸಂಖ್ಯೆಗಳಿಗೆ ಕರೆ ಮಾಡಿ

ಪೊಲೀಸ್ ನಿಯಂತ್ರಣ ಕೊಠಡಿ – 100

ಮಹಿಳಾ ಸಹಾಯವಾಣಿ – 1091

ಮಕ್ಕಳ ಸಹಾಯವಾಣಿ – 1098

ಹಿರಿಯ ನಾಗರಿಕರ ಸಹಾಯವಾಣಿ – 1090

ಡ್ರಗ್ಸ್ ದಂಧೆ ವಿರುದ್ಧ ಮಾಹಿತಿ ನೀಡಲು – 1908

ಭೂಮಾಫಿಯಾ ವಿರುದ್ಧ ದೂರು ಕೊಡಲು – 94808 01555

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT