ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಟಲಿಗಳೇ ಬಿಂದುಗೆ ಕ್ಯಾನ್ವಾಸ್‌!

Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಚಿತ್ರಕಲಾವಿದೆಯಾಗಿದ್ದ ಬಿಂದು ಬಿ.ಆರ್‌ ಅವರು ಮದುವೆಯಾದ ಬಳಿಕ ಮನೆಯಲ್ಲಿ ಸಮಯ ಸದುಪಯೋಗ ಮಾಡಿಕೊಳ್ಳುವ ಸಲುವಾಗಿ ತಮ್ಮ ಚಿತ್ರ ಬಿಡಿಸುವ ಹವ್ಯಾಸವನ್ನೇ ಮುಂದುವರಿಸಿ, ಬಾಟಲಿಗಳಲ್ಲಿ ಚಿತ್ರ ಬಿಡಿಸಲು ತೊಡಗಿದರು. ಅವರ ಕೈಯಲ್ಲಿ ಖಾಲಿ ಗಾಜಿನ ಬಾಟಲಿಗಳೇ ಸುಂದರ ಕಲಾಕೃತಿಗಳಾಗಿ ಬದಲಾದವು.

ಮನೆಯಲ್ಲಿಯೇ ಸುಲಭವಾಗಿ ಸಿಗುವ ಬಾಟಲಿಗಳಿಗೆ ಬಣ್ಣಗಳಿಂದ, ವಸ್ತುಗಳಿಂದ ಸುಂದರವಾಗಿ ಅಲಂಕಾರ ಮಾಡಿ, ವಿನ್ಯಾಸ ಮಾಡುತ್ತಾರೆ.  ಪ್ರತಿ ಬಾಟಲಿಯನ್ನು ವಿಭಿನ್ನವಾಗಿ, ಒಂದಕ್ಕಿಂತ ಒಂದು ಸುಂದರವಾಗಿ ವಿನ್ಯಾಸಗೊಳಿಸಿದ್ದರಲ್ಲಿ  ಬಿಂದು ಕೈಚಳಕವನ್ನು ಕಾಣಬಹುದು. ಬಿಂದು ಅವರು ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಡಿಗ್ರಿ ಮಾಡಿದ್ದಾರೆ. ಅದಾದ ಬಳಿಕ ಫಿಕ್ಸೆಲ್‌ ಪಿಕ್ಚರ್‌, ರಾಜ್‌ ಮ್ಯೂಸಿಕ್‌ಗಳಲ್ಲಿ ಕೆಲಸ ಮಾಡಿದರು.

ಬಿಂದು ಅವರ ಕಲಾಕೃತಿಗಳು ನೋಡಿದ ಕೂಡಲೇ ಕಣ್ಮನ ಸೆಳೆಯುವಂತಿವೆ. ಕಾರಣ ಪೇಟಿಂಗ್‌. ವೃತ್ತಾಕಾರದ ಬಾಟಲಿಯೊಂದರಲ್ಲಿ ಧ್ಯಾನಸ್ಥ ಬುದ್ಧನ ರೂಪವನ್ನು ನೀಲಿ ಬಣ್ಣದಲ್ಲಿ ರಚಿಸಿರುವುದು, ಕೇರಳದ ಕಥಕ್ಕಳಿ, ಮೈಸೂರು ಅರಸರ ದರ್ಬಾರಿನ ವಿವಿಧ ದೃಶ್ಯಗಳು, ಗರಿ ಬಿಚ್ಚಿರುವ ನವಿಲು, ಕಾಮನ ಬಿಲ್ಲು... ಹೀಗೆ ಅಕ್ರಿಲಿಕ್‌, ಅಬ್‌ಸ್ಟ್ರಾಕ್ಟ್‌, ಮಂಡಲ, ಬುಡಕಟ್ಟು ಪೇಟಿಂಗ್‌, ಮಧುಬನಿ, ವಾಟರ್‌ ಕಲರ್‌ಗಳಿಂದ ಮಾಡಿರುವ ಬಾಟಲಿ ಕಲಾಕೃತಿಗಳು ಮನಸ್ಸು, ಕಣ್ಣುಗಳನ್ನು ಅರಳಿಸುತ್ತವೆ. ಇವರು ಖಾಲಿ ಬಾಟಲಿಗಳಿಂದ ಹೂ ಕುಂಡಗಳು, ತೂಗು ಹಾಕುವ ದೀಪಗಳು, ಗೃಹ ಅಲಂಕಾರಕ್ಕಾಗಿ ಷೋಕೇಸ್‌ ಪೀಸ್‌ಗಳನ್ನು ಮಾಡಿ ಅವಕ್ಕೆ ಬಣ್ಣ ತುಂಬುತ್ತಾರೆ.

ಬಾಟಲಿಯಿಂದ ಬಾಟಲಿಗೆ ವಿಭಿನ್ನವಾಗಿ ಪೇಟಿಂಗ್‌ ಮಾಡಿರುವುದು ಬಿಂದು ವೈಶಿಷ್ಟ್ಯ. ಒಂದರಲ್ಲಿ ರಾಜ ರಾಣಿ ರೂಪವಿದ್ದರೆ, ಮತ್ತೊಂದರಲ್ಲಿ ಪ್ರಕೃತಿ ಸೊಬಗಿನ ಅಬ್‌ಸ್ಟ್ರಾಕ್ಟ್‌ ಪೇಟಿಂಗ್‌ ಅನ್ನು ನೋಡಬಹುದು. ವಿನ್ಯಾಸಕ್ಕೂ ಮುನ್ನ ಬಿಂದು ಅವರು ಬಾಟಲಿಗಳ ಮೇಲೆ ಒಂದು ಲೇಯರ್‌ ಆಯಿಲ್‌ ಪೇಂಟ್‌ ಬಳಿಯುತ್ತಾರೆ. ಬಳಿಕ ಅದರ ಮೇಲೆ ಮನಸ್ಸಿಗೊಪ್ಪುವ ಅಂದದ ವಿನ್ಯಾಸ ಮಾಡುತ್ತಾರೆ. ಎಲ್ಲೋ ಮೂಲೆ ಸೇರಬೇಕಿದ್ದ ಬಾಟಲಿಗಳು ಅಂದದ ಕಲಾಕೃತಿಗಳಾಗಿ ಬದಲಾಗುವುದೇ ವಿಸ್ಮಯ.

ಇವರ ಕೈಯಲ್ಲಿ ಜ್ಯೂಸ್‌ ಬಾಟಲಿಗಳು, ವೈನ್‌, ಬಿಯರ್‌, ಜಾಮ್‌, ಉಪ್ಪಿನ ಕಾಯಿ ಜಾರ್‌ಗಳು ಸುಂದರ ಕಲಾಕೃತಿಗಳಾಗುತ್ತವೆ. ‘ಚಿತ್ರ ಕಲಾವಿದೆಯಾದ ನಾನು ಫ್ಯಾಷನ್‌ ಡಿಸೈನಿಂಗ್‌ ಸೇರಿದ ಬಳಿಕ ಪೇಟಿಂಗ್‌ ಬಗ್ಗೆ ಹೆಚ್ಚು ಕಲಿತುಕೊಂಡೆ. ಅದಾದ ಬಳಿಕ ಡಿಸೈನಿಂಗ್‌ ಬಾಟಲಿಗಳ ಬಗ್ಗೆ ಯೂಟ್ಯೂಬ್‌ ನೋಡಿ ಕಲಿತು ಪ್ರಯೋಗ ಮಾಡಲಾರಂಭಿಸಿದೆ. ಅದನ್ನೇ ಹವ್ಯಾಸವನ್ನಾಗಿ ರೂಢಿಸಿಕೊಂಡೆ’  ಎಂದು ಆರಂಭದ ಬಗ್ಗೆ ಹೇಳುತ್ತಾರೆ.

‘ಮನೆಯಲ್ಲಿ ಬಾಟಲಿಗಳನ್ನು ಬಿಸಾಕುತ್ತಿದ್ದರು. ಪ್ಲಾಸ್ಟಿಕ್‌ ಬಾಟಲಿಗಳು ಪರಿಸರಕ್ಕೂ ಹಾನಿ. ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ ಯಾವ ಹವ್ಯಾಸ ಆರಂಭಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾಗ ಖಾಲಿ ಬಾಟಲಿಗಳು ಕಾಣಿಸಿತು. ಮಂಡಲ, ಡಾಟೆಡ್‌ ಆರ್ಟ್‌, ಅಬ್‌ಸ್ಟ್ರಕ್ಟ್‌, ಟ್ರೈಬಲ್‌, ಆಕ್ರಿಲಿಕ್‌, ರೆಡ್‌ ಆರ್ಟ್‌ ಚಿತ್ರಕಲೆ ಪ್ರಕಾರಕ್ಕೆ ಬಾಟಲಿಗಳನ್ನೇ ಕ್ಯಾನ್ವಾಸ್‌ ಮಾಡಿಕೊಂಡೆ. ನನ್ನ ವಿನ್ಯಾಸಗಳನ್ನು ಜನರೂ ಮೆಚ್ಚಿದರು. ಇದು ನನಗೆ ಮತ್ತಷ್ಟು ಪ್ರೋತ್ಸಾಹ ನೀಡಿತು’ ಎನ್ನುತ್ತಾರೆ ಅವರು.

ಬಾಟಲಿಗಳ ಗಾತ್ರಕ್ಕೆ ತಕ್ಕಂತೆ ವಿನ್ಯಾಸ ಮಾಡುತ್ತೇನೆ. ಕೆಲವೊಂದು ಬಾರಿ ಚಂದದ ಬಾಟಲಿ ಸಿಕ್ಕಾಗ ಅದರ ಮೇಲೆ ಲೇಯರ್‌ ವಿನ್ಯಾಸ ಮಾಡಬೇಕು ಎಂದಾಗ ಎರಡು ದಿನಗಳು ಬೇಕಾಗುತ್ತವೆ. ಬಾಟಲಿಗಳ ಗಾತ್ರ ಮತ್ತು ಆಕಾರ ಇಲ್ಲಿ ಮುಖ್ಯವಾಗುತ್ತದೆ. ಈ ಬಾಟಲಿಗಳನ್ನು ಯಾವ ರೂಪಕ್ಕೆ ಮಾರ್ಪಾಡು ಮಾಡಬಹುದು ಎಂದು ಆಲೋಚನೆ ಮಾಡಿ, ಅದರಂತೆ ವಿನ್ಯಾಸ ಮಾಡುತ್ತೇನೆ. ಬಾಟಲಿಗಳ ವಿನ್ಯಾಸ ಮಾಡುವುದು ಕ್ಯಾನ್ವಾಸ್‌ನಲ್ಲಿ ಮಾಡಿದಷ್ಟೂ ಸುಲಭವಲ್ಲ, ಆಸಕ್ತಿ, ಗಮನ ಹೆಚ್ಚು ಬೇಕು. ಬಣ್ಣಗಳ ಬಗ್ಗೆ ಜಾಗರೂಕರಾಗಿರಬೇಕು’ ಎಂಬ ಮಾತು ಬಿಂದು ಅವರದು.

ಕಸದಿಂದ ರಸ ಎಂಬ ಮಾತು ಬಿಂದು ಹವ್ಯಾಸಕ್ಕೆ ಸರಿಯಾಗಿ ಒಪ್ಪುತ್ತದೆ. ಇವರ ಮನೆಯಲ್ಲಿ ಬಳಸಿ ಬಿಸಾಕುವಂತಹ ಎಲ್ಲಾ ಗಾಜಿನ ಬಾಟಲಿಗಳು ಇವರ ಕೈಯಲ್ಲಿ ಸುಂದರ ಕಲಾಕೃತಿಗಳಾಗಿ ಮನೆ ಅಂದವನ್ನು ಹೆಚ್ಚಿಸಿವೆ. ಪರಿಸರ ಹಾನಿ ಮಾಡದೇ ಮರು ಬಳಕೆ ಮಾಡಿದ ಖುಷಿಯೂ ಇವರದು. ಸದ್ಯ ಫೇಸ್‌ಬುಕ್‌ ಅನ್ನೇ ತಮ್ಮ ವ್ಯಾಪಾರ ಮಾರ್ಗ ಮಾಡಿಕೊಂಡಿರುವ ಅವರು, ವಿನ್ಯಾಸ ಇಷ್ಟವಾಗಿ ಕೊಂಡುಕೊಳ್ಳಬಯಸುವವರಿಗೆ ಮಾರಾಟ ಮಾಡುತ್ತಾರೆ. ಸ್ನೇಹಿತರು ಹಾಗೂ ಬಂಧುಗಳಿಗೆ ಕಲಾಕೃತಿಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಾರೆ. ಭವಿಷ್ಯದಲ್ಲಿ ಆಸಕ್ತರಿಗೆ ಬಾಟಲ್‌ ಡಿಸೈನ್‌ ಬಗ್ಗೆ ತರಗತಿ ನಡೆಸುವ ಯೋಚನೆಯೂ ಬಿಂದು ಅವರಿಗಿದೆ.

ಫೇಸ್‌ಬುಕ್‌ ಕೊಂಡಿ– https://bit.ly/2KGXhra. ಸಂಪರ್ಕಕ್ಕೆ– 7892625885 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT