ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣವಾಯು ರಕ್ಷಣೆಗೆ ಬರಲಿದೆ ‘ಫೈನ್‌ ಡಸ್ಟ್‌ ಈಟರ್‌’ ಯಂತ್ರ

ಕಬ್ಬನ್‌ ಪಾರ್ಕ್‌ನಲ್ಲಿ ನಡೆಯಲಿದೆ ಪ್ರಾಯೋಗಿಕ ಪರೀಕ್ಷೆ
Last Updated 30 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧವಿರುವ ವಾರಾಂತ್ಯದಲ್ಲೂ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲಿ ಮಾಲಿನ್ಯವನ್ನು ನಿಯಂತ್ರಣ ಮಾಡಲು ‘ಫೈನ್‌ ಡಸ್ಟ್‌ ಈಟರ್‌’ ಎಂಬ ಯಂತ್ರವನ್ನು ಅಳವಡಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

‘ಕಳೆದ ತಿಂಗಳು ಜರ್ಮನಿಯ ಕಂಪನಿಯೊಂದು ಬೆಂಗಳೂರಿಗೆ ಭೇಟಿ ನೀಡಿತ್ತು. ಮಾಲಿನ್ಯ ನಿಯಂತ್ರಣ ಯಂತ್ರವೊಂದನ್ನು ಅದು ಪರಿಚಯಿಸಿತ್ತು. ಇಂತಹ ಯಂತ್ರದ ಅಗತ್ಯವಿದೆ ಎಂಬುದುನ್ನು ಮನಗಂಡು, ಕಬ್ಬನ್‌ ಉದ್ಯಾನದಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಿದ್ದೇವೆ. ಕಂಪನಿಯೇ ಉಚಿತವಾಗಿ ಸೇವೆ ನೀಡಲಿದೆ’ಎಂದು ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನದ ಸಲಹಾ ಸಮಿತಿ ಅಧ್ಯಕ್ಷ ಯಲ್ಲಪ್ಪ ರೆಡ್ಡಿ ತಿಳಿಸಿದರು.

ಎರಡು ಮಾದರಿಯಲ್ಲಿ ಈ ಯಂತ್ರ ಲಭ್ಯವಿದೆ. ನಿರ್ದಿಷ್ಟ ಜಾಗದಲ್ಲಿ ಇಡಬಹುದಾದರೆ (ಚೌಕಾಕೃತಿಯ ಯಂತ್ರ– ಸುಮಾರು ₹ 7 ರಿಂದ ₹ 8 ಲಕ್ಷ ವೆಚ್ಚ) ಮತ್ತೊಂದು ವಾಹನಗಳಲ್ಲಿ ಅಳವಡಿಸಬಹುದಾದ (ಮೊಬೈಲ್‌ ಸಿಸ್ಟಮ್‌ ಮಾದರಿ– ₹10 ರಿಂದ ₹15 ಲಕ್ಷ ವೆಚ್ಚ) ಯಂತ್ರವಾಗಿದೆ.

‘ಹೆಚ್ಚು ಜನರ ಓಡಾಟ ಹಾಗೂ ಬಹುತೇಕರು ವಾಹನಗಳಲ್ಲಿ ಉದ್ಯಾನಕ್ಕೆ ಬರುವುದರಿಂದ ವಾರಾಂತ್ಯದಲ್ಲಿ ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ (ಪಿಎಂ10) ಹೆಚ್ಚಾಗಿದೆ’ ಎಂಬುದುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2017ರ ವರದಿಯಲ್ಲಿ ಬಹಿರಂಗವಾಗಿತ್ತು.

ಗ್ರಂಥಾ­ಲಯದ ಸುತ್ತ, ಪ್ರೆಸ್‌ಕ್ಲಬ್‌ನಿಂದ ಕಬ್ಬನ್‌ ಉದ್ಯಾನದ ಪೊಲೀಸ್ ಠಾಣೆವರೆಗೆ, ಬಾಲ­ಭವನ, ವಿಶ್ವೇಶ್ವ­ರಯ್ಯ ವಸ್ತು ಸಂಗ್ರಹಾಲ­ಯದ ಹಿಂಭಾಗ, ಸೆಂಚುರಿ ಕ್ಲಬ್ ಬಲಭಾಗ, ಟೆನಿಸ್ ಕ್ಲಬ್ ಒಳಗೆ, ಹೈಕೋರ್ಟ್ ಮುಂಭಾಗ... ಹೀಗೆ ಉದ್ಯಾನದ ಸುತ್ತಮುತ್ತ ವಾಹನ ನಿಲುಗಡೆಗೆ ಅವಕಾಶವಿದೆ. ವಾರಾಂತ್ಯದಲ್ಲಿ ಹೆಚ್ಚು ವಾಹನಗಳು ಉದ್ಯಾನಕ್ಕೆ ಬರುತ್ತವೆ. ಇದರಿಂದ ಉದ್ಯಾನಕ್ಕೆ ಭೇಟಿ ನೀಡುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

‘ನ.1 ರಂದು ಪ್ರಾಯೋಗಿಕ ಚಾಲನೆ ನೀಡಲಿದ್ದೇವೆ. ಎರಡು ತಿಂಗಳ ಬಳಿಕ ಯಂತ್ರದ ಕಾರ್ಯ ಸಾಮರ್ಥ್ಯದ ವರದಿಯನ್ನು ಆಧರಿಸಿ, ಮುಂದೆ ಇದನ್ನು ಖರೀದಿಸುವ ಬಗ್ಗೆ ಮತ್ತು ಎಲ್ಲೆಲ್ಲಿ ಅಳವಡಿಸಬಹುದು ಎಂಬುದರ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ, ನಿರ್ಧರಿಸಲಿದ್ದೇವೆ’ ಎಂದುತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಮಹಾಂತೇಶ ಮುರಗೋಡ ತಿಳಿಸಿದರು.

‘ಯಂತ್ರವು ಫಿಲ್ಟರೇಷನ್‌ ತಂತ್ರಜ್ಞಾನದ ಮೂಲಕ PM10 (ಮೈಕ್ರೋ ಗ್ರಾಂ ಪರ್‌ ಮೀಟರ್‌ ಕ್ಯೂಬ್‌) ಸಾಮರ್ಥ್ಯದಲ್ಲಿ ಗಾಳಿಯಲ್ಲಿನ ಸೂಕ್ಷ್ಮ ದೂಳಿನ ಕಣಗಳನ್ನು ಸಂಗ್ರಹಿಸಲಿದೆ. ಆಯಾ ವಾಹನಗಳಿಗೆ ಸೂಕ್ತವಾಗುವ ಮಾದರಿಯಲ್ಲಿ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.ನಿರ್ದಿಷ್ಟ ಸ್ಥಳದಲ್ಲಿ ಇಡಬಲ್ಲ (ಕ್ಯೂಬ್‌ ಮಾದರಿ) ಯಂತ್ರ 35ರಿಂದ 71 ಮೀಟರ್‌ ವ್ಯಾ‍ಪ್ತಿಯ ದೂಳಿನ ಕಣಗಳನ್ನು ಸಂಗ್ರಹಿಸಬಲ್ಲದು’ ಎಂದು ಫೈನ್‌ ಡಸ್ಟ್‌ ಈಟರ್‌ ಯಂತ್ರದ ಯೋಜನೆಯನ್ನು ಅಭಿವೃದ್ಧಿಪಡಿಸಿದ ತಜ್ಞ ಹರ್ಷ ಪ್ರಕಾಶ್‌ ಗೌಡ ತಿಳಿಸಿದರು.

ಏನು ವಿಶೇಷ?

l ವಿದ್ಯುತ್‌ಚಾಲಿತವಾಗಿ ಕಾರ್ಯನಿರ್ವಹಣೆ

l ನಿರ್ದಿಷ್ಟ ಸ್ಥಳದಲ್ಲಿ (ಚೌಕಾಕಾರ ಮಾದರಿಯ ಯಂತ್ರ) ಅಥವಾ ದ್ವಿಚಕ್ರ ಹೊರತುಪಡಿಸಿ ಎಲ್ಲ ವಾಹನಗಳಲ್ಲೂ ಅಳವಡಿಸಬಹುದು

l ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಳಸಬಹುದು

l ಮನೆ, ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿರುವಶಾಲಾ– ಕಾಲೇಜು, ಆಸ್ಪತ್ರೆ, ಉದ್ದಿಮೆಗಳಲ್ಲಿ
ಅಳವಡಿಸಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT