ಭಾನುವಾರ, ಸೆಪ್ಟೆಂಬರ್ 22, 2019
22 °C
ಅನಗತ್ಯ ಕಿರುಕುಳ ಆರೋಪ– ಮಾಧ್ಯಮಗಳ ಮೇಲೂ ಕಿಡಿ

ಕಸ್ಟಮ್ಸ್‌ ಅಧಿಕಾರಿಗಳ ಪ್ರತಿಭಟನೆ

Published:
Updated:

ಬೆಂಗಳೂರು: ‘ಕರ್ತವ್ಯನಿರತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಸೆಂಟ್ರಲ್‌ ಎಕ್ಸೈಸ್‌ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಊಟದ ವಿರಾಮದ ವೇಳೆ ಗೇಟ್‌ ಮೀಟಿಂಗ್‌ ನಡೆಸಿದರು.

ಇಲಾಖೆಯ 21 ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ಸಿಬಿಐ ಎಫ್‌ಐಆರ್‌ ದಾಖಲಿಸಿರುವುದರ ವಿರುದ್ಧ ಸಭೆಯಲ್ಲಿದ್ದವರು ಅತೃ‍ಪ್ತಿ  ವ್ಯಕ್ತಪಡಿಸಿದರು. ನಿಯಮದಡಿ ಕೆಲಸ ಮಾಡುತ್ತಿರುವವರಿಗೆ ಕಿರುಕುಳ ನೀಡುತ್ತಿರುವುದರಿಂದ ಇಲಾಖೆ ದುರ್ಬಲವಾಗುತ್ತಿದೆ ಎಂದು  ದೂರಿದರು.

‘ಸಿಬಿಐ ಪ್ರಕರಣ ದಾಖಲಿಸಿರುವ 21 ಅಧಿಕಾರಿಗಳಿಗೆ ನೈತಿಕ ಬೆಂಬಲ ಸೂಚಿಸಲು ಗೇಟ್‌ ಮೀಟಿಂಗ್‌ ಮಾಡಲಾಗಿದೆ. ನಮ್ಮ ರಕ್ಷಣೆಗೆ ಯಾರೂ ಇಲ್ಲ ಎಂಬ ಭಾವನೆ ಈ ಅಧಿಕಾರಿಗಳಿಗೆ ಬರಕೂಡದು ಎಂಬ ಉದ್ದೇಶದಿಂದ ನಾವು ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ’ ಎಂದು ‘ಅಖಿಲ ಭಾರತ ಸೆಂಟ್ರಲ್‌ ಎಕ್ಸೈಸ್‌ ಗೆಜೆಟೆಡ್‌ ಆಫೀಸರ್ಸ್‌ ಅಸೋಸಿಯೇಷನ್‌’ ತಿಳಿಸಿದೆ.

‘ನಿಯಮ ‍‍‍‍ಪಾಲಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪ್ರಕರಣ ಹಿಂದೆಂದೂ ನಡೆದಿರಲಿಲ್ಲ. ಕೆಲವು ವ್ಯಕ್ತಿಗಳು ವೈಯಕ್ತಿಕ ದ್ವೇಷದಿಂದ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲು ಮುಂದಾಗಿದ್ದಾರೆ. ನಮಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಸಂಘದ ಉಪಾಧ್ಯಕ್ಷ ಎಂ.ಎ ಜಿತೇಂದ್ರ ಹೇಳಿದರು. 

‘ಕಳೆದ ಮೂರು ವರ್ಷಗಳಿಂದ ನಮ್ಮ ಅಧಿಕಾರಿಗಳು ಅನುಭವಿಸುತ್ತಿರುವ ಕಿರುಕುಳ ಅಷ್ಟಿಷ್ಟಲ್ಲ. ಸಂವಿಧಾನ ಹಾಗೂ ಕಸ್ಟಮ್ಸ್‌ ಕಾಯ್ದೆಯಡಿ ನಮಗೆ ರಕ್ಷಣೆ ಇದ್ದರೂ ಒಂದು ರೀತಿಯ ಅಸುರಕ್ಷತೆ ಕಾಡುತ್ತಿದೆ. ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದ್ದು, ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಿರುವ ಅಧಿಕಾರಿಗಳು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸವಿದೆ’ ಎಂದು ಅಭಿಪ್ರಾಯಪಟ್ಟರು.

ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟರಾಮನ್‌ ಹೆಗಡೆ ಅವರು ಹಾಜರಿದ್ದರು.  

Post Comments (+)