ಸೈಬರ್ ಕ್ರೈಂ: ಇಬ್ಬರು ಚಾಲಕರ ಸೆರೆ

7
ಎಟಿಎಂ ವಿವರ ಕದ್ದು ₹ 47 ಸಾವಿರ ದೋಚಿದ್ದರು

ಸೈಬರ್ ಕ್ರೈಂ: ಇಬ್ಬರು ಚಾಲಕರ ಸೆರೆ

Published:
Updated:
Prajavani

ಬೆಂಗಳೂರು: ಹಿರಿಯ ನಾಗರಿಕರೊಬ್ಬರ ಎಟಿಎಂ ಕಾರ್ಡ್‌ನ ವಿವರಗಳನ್ನು ಕದ್ದು ಪೇಟಿಎಂ ಮೂಲಕ ₹ 47 ಸಾವಿರವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ ಕಾರು ಚಾಲಕರಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕೊಡಿಗೇಹಳ್ಳಿಯ ಸಿ.ನಾಗರಾಜ (30) ಹಾಗೂ ಎಚ್‌.ಎಸ್.ಸಚಿನ್ (23) ಬಂಧಿತರು. ಇವರ ವಿರುದ್ಧ 64 ವರ್ಷದ ಹಿರಿಯ ನಾಗರಿಕರೊಬ್ಬರು ದೂರು ಕೊಟ್ಟಿದ್ದರು. ಆರೋಪಿಗಳಿಂದ ₹ 47 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ತು ವರ್ಷಗಳಿಂದ ದೂರುದಾರರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನಾಗರಾಜ, ಮಾಲೀಕರ ಕುಟುಂಬ ಸದಸ್ಯರ ವಿಶ್ವಾಸ ಗಿಟ್ಟಿಸಿಕೊಂಡಿದ್ದ. ಮಾಲೀಕರು ಹಣದ ಅವಶ್ಯಕತೆ ಇದ್ದಾಗ ಆತನಿಗೇ ಎಟಿಎಂ ಕಾರ್ಡ್‌ ಕೊಟ್ಟು ಡ್ರಾ ಮಾಡಿಕೊಂಡು ಬರಲು ಕಳಹಿಸುತ್ತಿದ್ದರು. ಈ ನಡುವೆ ಆತನಿಗೆ ಸಚಿನ್‌ ಎಂಬಾತನ ಪರಿಚಯವಾಗಿದ್ದು, ಇಬ್ಬರೂ ಸೇರಿ ದೂರುದಾರರ ಖಾತೆಯಿಂದ ಹಣ ಎಗರಿಸಲು ಸಂಚು ರೂಪಿಸಿದ್ದರು.

ನಾಗರಾಜ ಇತ್ತೀಚೆಗೆ ಎಟಿಎಂ ಕಾರ್ಡ್‌ನ ಎರಡೂ ಬದಿಯ ಫೋಟೊಗಳನ್ನು ತೆಗೆದು, ಸಚಿನ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ. ಆ ವಿವರದ ನೆರವಿನಿಂದ ಆತ ಪೇಟಿಎಂ ಮೂಲಕ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ. ಈ ವೇಳೆ ದೂರುದಾರರ ಮೊಬೈಲ್‌ಗೆ ಬಂದಿದ್ದ ಒಟಿಪಿ ಸಂಖ್ಯೆಯನ್ನು ನಾಗರಾಜನೇ ಆತನಿಗೆ ರವಾನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಒಂಬತ್ತು ಸಲ ಹಣ ವರ್ಗಾವಣೆ
‘ಆರೋಪಿಗಳು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ತನಿಖೆಗೆ ಲಕ್ಷ್ಮಿ ವಿಲಾಸ ಬ್ಯಾಂಕ್ ಸಿಬ್ಬಂದಿಯ ನೆರವು ಕೋರಿದ್ದೆವು. ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿಯನ್ನು ಅವರು ಕೊಟ್ಟರು. ನಂತರ ಕೊಡಿಗೇಹಳ್ಳಿಯ ದೇವಿನಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದೆವು’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !