ಆರು ತಿಂಗಳಲ್ಲಿ 400 ಸೈಕಲ್ ಹಬ್‌

ಶನಿವಾರ, ಮಾರ್ಚ್ 23, 2019
34 °C

ಆರು ತಿಂಗಳಲ್ಲಿ 400 ಸೈಕಲ್ ಹಬ್‌

Published:
Updated:
Prajavani

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯದ ಆಶ್ರಯದಲ್ಲಿ ‘ಸಾರ್ವಜನಿಕ ಸೈಕಲ್‌ ಹಂಚಿಕೊಳ್ಳುವ ವ್ಯವಸ್ಥೆ’ಗೆ (ಪಿಬಿಎಸ್‌) ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಚಾಲನೆ ನೀಡಿದರು.

ಮುಂದಿನ ಆರು ತಿಂಗಳಲ್ಲಿ 400 ಸೈಕಲ್‌ ಹಬ್‌ಗಳ ಮೂಲಕ ಜನರು ಸಮೀಪದ ತಾಣಗಳಿಗೆ ಹಾಗೂ ತಾವು ತಲುಪಬೇಕಾದ ಜಾಗಗಳತ್ತ (ಲಾಸ್ಟ್‌ ಮೈಲ್‌) ಸಾಗಬಹುದು. ಈ ತಾಣಗಳಲ್ಲಿ 6 ಸಾವಿರ ಸೈಕಲ್‌ಗಳು ಲಭ್ಯ ಇರಲಿವೆ. ‘ಗಮ್ಯ ತಾಣ ತಲುಪಲು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸೈಕಲ್‌ಗಳು ಸುಲಭ ಪರಿಹಾರ’ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

‘ಆರು ತಿಂಗಳಲ್ಲಿ 125 ಕಿ.ಮೀ. ರಸ್ತೆಗಳಲ್ಲಿ ಸೈಕಲ್‌ ಟ್ರ್ಯಾಕ್‌ಗಳು ಇರಲಿವೆ. ಮೊದಲ ಹಂತದಲ್ಲಿ 400 ಸೈಕಲ್‌ ಹಬ್‌ಗಳು ನಿರ್ಮಾಣವಾಗಲಿವೆ. ಪಿಬಿಎಸ್‌ ಸಂಪೂರ್ಣ ಸ್ವಯಂಚಾಲಿತವಾಗಿದೆ. ಈ ವ್ಯವಸ್ಥೆ ಅಡಿ ಸೈಕಲ್‌ಗಳನ್ನು ಡಾಕ್‌ಲೆಸ್‌ ತಂತ್ರಜ್ಞಾನ (ಮೊಬೈಲ್‌ ಆ್ಯಪ್‌ ನೆರವಿನೊಂದಿಗೆ ಕೀಲಿ ತೆರೆಯುವ ತಂತ್ರಜ್ಞಾನ) ಬಳಸಿ ನಿಲ್ಲಿಸಲಾಗುವುದು. ಬಳಕೆದಾರ ಇಲ್ಲಿಂದ ಸೈಕಲ್‌ಗಳನ್ನು ತೆಗೆದುಕೊಂಡು ಹೋಗಿ ತನ್ನ ನಿಗದಿತ ಸ್ಥಾನದ ಹತ್ತಿರವಿರುವ ಪಾರ್ಕಿಂಗ್‌ ತಾಣದಲ್ಲಿ ನಿಲ್ಲಿಸಬಹುದು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

‘ಆರಂಭಿಕ ಹಂತದಲ್ಲಿ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ, ಇಂದಿರಾನಗರ, ಎಚ್‌ಎಸ್‌ಆರ್‌ ಬಡಾವಣೆ, ಕೋರಮಂಗಲದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತಿದೆ. ನಗರ ಭೂಸಾರಿಗೆ ನಿರ್ದೇಶನಾಲಯ ವಿನ್ಯಾಸಗೊಳಿಸಿದ ಈ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಪ್ರದೇಶಗಳು ಸೇರಿದಂತೆ ಇತರ ಪ್ರದೇಶಗಳಿಗೆ ವಿಸ್ತರಣೆಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಮುಂದಿನ ಹಂತದಲ್ಲಿ ಎಲ್ಲ ಮುಖ್ಯ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ 1200 ಕಿ.ಮೀ. ಸೈಕಲ್‌ ಪಥ ನಿರ್ಮಿಸಲಾಗುತ್ತದೆ. ಎಲ್ಲ ಮೆಟ್ರೊ, ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ಸೈಕಲ್‌ ಹಬ್‌ ಆರಂಭಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ವಿ.ಪೊನ್ನುರಾಜ್‌, ‘ಇದು ಆರಂಭಿಕ ಹೆಜ್ಜೆ. ಸೈಕಲ್‌ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದರು.

ಮುಖ್ಯಾಂಶಗಳು

₹80 ಕೋಟಿ

ಈ ಯೋಜನೆಯ ವೆಚ್ಚ

6 ಸಾವಿರ ಸೈಕಲ್‌

ಮೊದಲ ಹಂತದ ಯೋಜನೆಯಲ್ಲಿ ಬಳಕೆ

125 ಕಿ.ಮೀ.

ರಸ್ತೆ ಸೈಕಲ್‌ ಟ್ರ್ಯಾಕ್‌ ಆಗಿ ಪರಿವರ್ತನೆ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !