ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಮತ್ತಷ್ಟು ಏರುವ ಸಾಧ್ಯತೆ: ರೈತರ ಆತಂಕ

ಮಳೆ ಕೊರತೆಯಿಂದ ಹುಲ್ಲಿಗೂ ಬಂತು ಬೆಲೆ

ಮೋಹನ್‌ ಕುಮಾರ್‌ ಸಿ.ಜಿ. Updated:

ಅಕ್ಷರ ಗಾತ್ರ : | |

Prajavani

ದಾಬಸ್‌ಪೇಟೆ: ಮಳೆಯ ಕೊರತೆಯಿಂದಾಗಿ ರಾಸುಗಳಿಗೆ ಮೇವು ಸಿಗುತ್ತಿಲ್ಲ. ಹಾಗಾಗಿ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚಿದೆ.

ರೈತರು ಬೆಳೆದ ರಾಗಿ ಧಾನ್ಯಕ್ಕಿಂತ ಅದರ ಹುಲ್ಲಿನ ಬೆಲೆಯು ಹೆಚ್ಚುತ್ತಿದೆ. ಇನ್ನೂ ಪೂರ್ವ ಮುಂಗಾರಿನ ಸೂಚನೆ ಕಾಣಿಸದ ಹಿನ್ನಲೆಯಲ್ಲಿ ಹುಲ್ಲಿನ ಬೆಲೆ ಮತ್ತಷ್ಟು ಏರುವ ಆತಂಕ ರೈತರನ್ನು ಕಾಡುತ್ತಿದೆ. 

ಸರ್ಕಾರ ಆರಂಭಿಸಿರುವ ರಾಗಿ ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಾಲ್ ರಾಗಿಗೆ ₹ 2,897 ನಿಗದಿಪಡಿಸಲಾಗಿದೆ. ಹೊರಗಿನ ಕೇಂದ್ರಗಳಲ್ಲಿ ₹2,500 ಇದೆ. ಆದರೆ, 3ರಿಂದ 4 ಅಡಿ ಎತ್ತರದ ಒಂದು ಮಾರು(50 ಕಂತೆ ) ಒಣ ಹುಲ್ಲು ₹5,000 ದಿಂದ 6,000ಕ್ಕೆ ಮಾರಾಟವಾಗುತ್ತಿದೆ. 

ಜಾನುವಾರುಗಳನ್ನು ಸಾಕಿರುವವರು ಮೇವಿಗಾಗಿ ದುಬಾರಿ ಬೆಲೆ ತೆತ್ತು ಹುಲ್ಲು ಖರೀದಿಸುತ್ತಿದ್ದಾರೆ. ಹಾಲು ಕೊಡುವ ರಾಸುಗಳಿಗೆ ರಾಗಿ ಹುಲ್ಲು ಪೌಷ್ಟಿಕ ಆಹಾರವಾಗಿರುವುದರಿಂದ ಹುಲ್ಲಿಗೆ ಹೆಚ್ಚಿನ ಬೇಡಿಕೆ.

ಎರಡು ಮೂರು ಎಕರೆಯಲ್ಲಿ ರಾಗಿ ಬೆಳೆಯುವ ಸಣ್ಣ ರೈತರು ತಾವು ಬೆಳೆದ ಹುಲ್ಲನ್ನು ಯಾರಿಗೂ ಮಾರಾಟ ಮಾಡದೆ ತಮ್ಮ ಮನೆಯ ರಾಸುಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಇನ್ನು ದೊಡ್ಡ ರೈತರು ಹಾಗೂ ರಾಸುಗಳು ಇಲ್ಲದವರು ಮಾತ್ರ ಹುಲ್ಲು ಮಾರಾಟ ಮಾಡುತ್ತಿದ್ದಾರೆ.  ಮಳೆಗಾಲ, ಚಳಿಗಾಲದಲ್ಲಿ ಹಸಿರು ಹುಲ್ಲು ಸಿಗುತ್ತದೆ. ಆದರೆ ಬೇಸಿಗೆಯಲ್ಲಿ ರಾಗಿ ಕಣ ಮುಗಿದ ಬಳಿಕ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ನೆಲಮಂಗಲ ತಾಲ್ಲೂಕಿನಲ್ಲಿ ಹಾಲಿನ ಡೈರಿಗಳು ಹೆಚ್ಚಿವೆ. ಮಳೆ ಕೊರತೆಯ ಮಧ್ಯೆ ರೈತರು ಜೀವನೋಪಾಯಕ್ಕಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ. ಕೊಳವೆ ಬಾವಿ ಇರುವವರು ಬೇಸಿಗೆಯಲ್ಲಿ ಹಸಿರು ಮೇವು ಬೆಳೆದುಕೊಳ್ಳುತ್ತಾರೆ. ಒಣ ಬೇಸಾಯಗಾರರಿಗೆ ಒಣ ರಾಗಿ ಹುಲ್ಲೇ ಗಟ್ಟಿ. ‘ಮಳೆ ಬರುವ ಲಕ್ಷಣ ಇಲ್ಲದ್ದರಿಂದ ಒಣ ಹುಲ್ಲಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು’ ಎಂದು ಹಾಲೇನಹಳ್ಳಿ ರೈತ ಶಿವಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.