ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್ ಪೇಟೆ: ದೊಣೆಯಲ್ಲಿ ಮುಳುಗಿ ಐವರ ಸಾವು

Last Updated 27 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ದೊಣೆಯಲ್ಲಿ (ಕಲ್ಯಾಣಿ) ಉರುಳಿಬಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ನೆಲಮಂಗಲ ತಾಲ್ಲೂಕಿನ ಸಿದ್ದರ ಬೆಟ್ಟದಲ್ಲಿ (ನಿಜಗಲ್ ಬೆಟ್ಟ) ಶನಿವಾರ ನಡೆದಿದೆ.

ದರ್ಗಾದ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಥಣಿಸಂದ್ರದ ಹೆಗ್ಗಡೆ ನಗರ ನಿವಾಸಿಗಳಾದ ರೇಷ್ಮಾ (22), ಯೂರಬ್ ಖಾನ್ (21), ಮುನೀರ್‌ ಖಾನ್ (49), ಮುಬೀನ ತಾಜ್ (21) ಮತ್ತು ಉಸ್ಮಾನ್ (14) ಮೃತರು.

ಘಟನೆ ವಿವರ: ಬೆಟ್ಟದ ಮೇಲಿರುವ ದರ್ಗಾದಲ್ಲಿ ಪೂಜೆ ಸಲ್ಲಿಸಲೆಂದು ಬೆಳಿಗ್ಗೆ 9 ಮಂದಿ ಆಟೋರಿಕ್ಷಾದಲ್ಲಿ ಬಂದಿದ್ದರು. ಬೆಟ್ಟದ ಮೇಲಿನ ಅಕ್ಕತಂಗಿಯರ ದೊಣೆಯ ಬಳಿ ಇರುವ ಮಸೀದಿ ಪಕ್ಕ ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದರು. ಅವರ ಜೊತೆ ಬಂದಿದ್ದ ಬಾಲಕನೊಬ್ಬ ನೀರು ತರಲು ದೊಣೆಯತ್ತ ಹೋಗಿದ್ದ. ಕಾಲು ಜಾರಿ ದೊಣೆಗೆ ಬಿದ್ದ ಬಾಲಕನನ್ನು ರೇಷ್ಮಾ, ಮುಬೀನ ತಾಜ್ ಮತ್ತು ಉಸ್ಮಾನ್ ರಕ್ಷಿಸಿ ದಡದಲ್ಲಿ ಕೂರಿಸಿದ್ದರು.

ಅದೇ ವೇಳೆಗೆ ಉಸ್ಮಾನ್ ಕಾಲು ಜಾರಿ ದೊಣೆಗೆ ಬಿದ್ದರು. ಅವನನ್ನು ರಕ್ಷಿಸಲು ಕೈ ಚಾಚಿದ್ದ ಅಕ್ಕಂದಿರಾದ ರೇಷ್ಮಾ, ಮುಬೀನ ತಾಜ್ ಕೂಡಾ ನೀರಿಗೆ ಬಿದ್ದರು. ಅವರ ಕೂಗಾಟ ಕೇಳಿದ ಯೂರಬ್ ಖಾನ್ ಓಡಿ ಬಂದು ನೀರಿಗೆ ಜಿಗಿದಿದ್ದರು. ಮುನೀರ್‌ ಖಾನ್ ಕೂಡಾ ನೀರಿಗಿಳಿದು ಸಹಾಯಹಸ್ತ ಚಾಚಿದ್ದರು. ಗಾಬರಿಗೊಂಡ ನಾಲ್ವರೂ ಮುನೀರ್‌ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ನೀರಿನಿಂದ ಮೇಲಕ್ಕೆ ಬರಲಾಗದೇ ಐದು ಮಂದಿಯೂ ಮೃತಪಟ್ಟರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದರು.

‘ಐವರು ನೀರಿನಲ್ಲಿ ಮುಳುಗುವುದನ್ನು ಕಂಡ ಇನ್ನಿಬ್ಬರು ಅವರನ್ನು ರಕ್ಷಿಸಲು ನೀರಿಗಿಳಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಸ್ಥಳೀಯರು ಅವರನ್ನು ರಕ್ಷಿಸಿ ಮೇಲೆ ಕರೆತಂದರು. ಇಲ್ಲದಿದ್ದರೆ ಅವರಿಬ್ಬರೂ ಕೊನೆಯುಸಿರೆಳೆಯುತ್ತಿದ್ದರು’ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿ ಕಾಂತರಾಜು. ಸ್ಥಳೀಯರ ಸಹಕಾರದಲ್ಲಿ ಶವಗಳನ್ನು ಹೊರ ತೆಗೆಯಲಾಯಿತು.

ಎಂಟು ವರ್ಷಗಳ ಹಿಂದೆ ಇದೇ ದೊಣೆಯಲ್ಲಿ ಏಳು ಮಂದಿ ಮೃತಪಟ್ಟಿದ್ದರು. ತದನಂತರವೂ ಇಲ್ಲಿ ಸಾವಿನ ಘಟನೆ ಮರುಕಳಿಸುತ್ತಲೇ ಇದೆ ಎನ್ನುತ್ತಾರೆ ಸ್ಥಳೀಯರು.

ಒಡಹುಟ್ಟಿದ ನಾಲ್ವರ ಸಾವು

ಮೃತರಲ್ಲಿ ಉಸ್ಮಾನ್, ಯೂರಬ್ ಖಾನ್, ಮುಬೀನ ತಾಜ್ ಮತ್ತು ರೇಷ್ಮಾ ಅವರು ಶಕೀಲಾ ಎಂಬುವರ ಮಕ್ಕಳು. ಪಕ್ಕದ ಮನೆಯವರೊಂದಿಗೆ ಸಿದ್ದರಬೆಟ್ಟಕ್ಕೆ ಬಂದಿದ್ದರು. ತಾಯಿ ಮಕ್ಕಳು ನೀರು ಪಾಲಾಗುವುದನ್ನು ಕಣ್ಣಾರೆ ಕಂಡ ತಾಯಿಯ ಗೋಳಾಟ ಮುಗಿಲುಮುಟ್ಟಿತ್ತು.

ಮೃತಪಟ್ಟ ಮುನೀರ್ ಖಾನ್ ಅವರು ಶಕೀಲಾ ಅವರ ಪಕ್ಕದ ಮನೆಯವರು.

ಹಿಂದೂ–ಮುಸ್ಲಿಂ ಭಾವೈಕ್ಯದ ತಾಣ

ಸಿದ್ದರ ಬೆಟ್ಟ ಐತಿಹಾಸಿಕ ಸ್ಥಳವಾಗಿದ್ದು, ಹಿಂದೂ ಮುಸ್ಲಿಂ ಭಾವೈಕ್ಯದ ತಾಣ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಹಿಂದೂ ಮತ್ತು ಮುಸ್ಲಿಮರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಅಕ್ಕಪಕ್ಕದಲ್ಲಿ ಎರಡು ದೊಣೆಗಳಿದ್ದು, ಅವುಗಳನ್ನು ಅಕ್ಕ ತಂಗಿಯರ ದೊಣೆಗಳು ಎಂದು ಕರೆಯುತ್ತಾರೆ. ಕಲ್ಯಾಣಿಯಲ್ಲಿ ಸದಾ ಕಾಲ ನೀರಿರುತ್ತದೆ. ಇಲ್ಲಿಗೆ ಬರುವ ಭಕ್ತರು ಒಂದು ದೊಣೆಯ ನೀರನ್ನು ಅಡುಗೆಗೆ, ಮತ್ತೊಂದರ ನೀರನ್ನು ಸ್ನಾನಕ್ಕೆ ಬಳಸುತ್ತಾರೆ.

‘ಸದಾ ನೀರು ನಿಂತಿರುವುದರಿಂದ ಇಲ್ಲಿ ಪಾಚಿ ಕಟ್ಟಿರುತ್ತದೆ. ಎಚ್ಚರಿಕೆಯಿಂದ ಇರಬೇಕು. ಸುಳಿಗಳು ಇದರಲ್ಲಿದ್ದು, ಈಜು ಬಾರದವರು ನೀರುಪಾಲಾಗುವುದು ಸಾಮಾನ್ಯ’ ಎನ್ನುತ್ತಾರೆ ಸ್ಥಳೀಯರು.

‘ಇಂತಹ ಅವಘಡಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಸಂಬಂಧಿಸಿದ ಇಲಾಖೆಯವರು ಈ ದೊಣೆಗಳಿಗೆ ಬೇಲಿ ನಿರ್ಮಿಸಬೇಕು. ಮುನ್ನೆಚ್ಚರಿಕೆಯ ಫಲಕ ಅಳವಡಿಸಬೇಕು’ ಎಂದೂ ಒತ್ತಾಯಿಸುತ್ತಾರೆ.

‘ಸಿದ್ದಪ್ಪ ದೇವರಿಗೆ ಪೂಜೆ ಸಲ್ಲಿಸಲು ಬೆಟ್ಟದ ತುದಿಗೆ ಹೋಗಬೇಕು. ಅಲ್ಲಿಗೆ ಹೋಗುವಾಗ ದಾರಿ ಕಡಿದಾಗಿದೆ, ವೃದ್ಧರು, ಮಕ್ಕಳು ಹತ್ತುವುದು ಕಷ್ಟ. ಸ್ವಲ್ಪ ಆಯ ತಪ್ಪಿದರೂ ಕೆಳಗೆ ಬಿದ್ದು, ಕೈ ಕಾಲು ಮುರಿಯುವ ಅಪಾಯವಿದೆ. ಕೋತಿಗಳ ಕಾಟ ಬೇರೆ. ಸ್ಥಳೀಯ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಕಂಬಿಗಳನ್ನು ಅಳವಡಿಸಿ ಅನಾಹುತ ತಪ್ಪಿಸಬೇಕು’ ಎನ್ನುತ್ತಾರೆ ರಾಯರ ಪಾಳ್ಯದ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT