ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಮಂಟಪ ಶೋಭಾಯಾತ್ರೆಗೆ ಕ್ಷಣಗಣನೆ

ಮಂಜಿನ ನಗರಿಯತ್ತ ಪ್ರವಾಸಿಗರ ದಂಡು, ನಾಳೆ ವಿಜಯದಶಮಿ ವೈಭವ
Last Updated 6 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವೈಭವ ಇಮ್ಮಡಿಯಾಗಿದ್ದು ಪ್ರಸಿದ್ಧ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಪೌರಾಣಿಕ ಕಥೆ, ವಿದ್ಯುತ್ ಬೆಳಕು, ಪ್ರವಾಸಿಗರ ಕಲರವ, ಡಿ.ಜೆ ಸಂಗೀತಕ್ಕೆ ಇನ್ನೇನು ಮಡಿಕೇರಿ ಸಾಕ್ಷಿಯಾಗಲಿದೆ. ಈಗಲೇ ಎಲ್ಲೆಡೆ ಪ್ರವಾಸಿಗರು ಕಂಡು ಬರುತ್ತಿದ್ದು ಮಂಗಳವಾರ ರಾತ್ರಿ ಅಪಾರ ಪ್ರವಾಸಿಗರು ಮಡಿಕೇರಿಗೆ ಬರುವ ನಿರೀಕ್ಷೆಯಿದೆ. 1 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈಗಾಗಲೇ ರಸ್ತೆಗಳಲ್ಲಿ ಮಕ್ಕಳ ಆಟಿಕೆ ಅಂಗಡಿಗಳು ಬಂದಿವೆ. ರಸ್ತೆಯಲ್ಲೂ ಪ್ರವಾಸಿಗರ ದಟ್ಟಣೆ ಕಂಡುಬರುತ್ತಿದೆ.

ಕಥಾ ಸಾರಾಂಶ ಏನು?: ಮಂಗಳವಾರ ರಾತ್ರಿಯಿಡೀ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ. ಮಂಟಪಗಳು ಪೌರಾಣಿಕ ಕಥೆಯ ಸಾರಾಂಶ ಪ್ರಸ್ತುತ ಪಡಿಸಲಿದ್ದು ಅದಕ್ಕೆ ದೇವಸ್ಥಾನ ಸಮಿತಿಗಳು ಅಂತಿಮ ಹಂತದ ಸಿದ್ಧತೆಯಲ್ಲಿವೆ.

ಕೋಟೆ ಗಣಪತಿ ದೇವಸ್ಥಾನ ಸಮಿತಿಯು 43ನೇ ವರ್ಷದ ಆಚರಣೆ ನಡೆಸುತ್ತಿದ್ದು ‘ಶ್ರೀಮಯೂರೇಶ್ವರನಿಂದ ಶಿಖಂಡಿ ಪಕ್ಷಿ ಮಯೂರನಾದ ಕಥೆ’, ಕುಂದೂರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ಸಮಿತಿಯಿಂದ ‘ಸುಬ್ರಹ್ಮಣ್ಯನಿಂದ ತಾರಕಸುರನ ವಧೆ’ ಕಥೆಯ ಸಾರಾಂಶ, ಅತ್ಯಂತ ಹಳೇ ದೇಗುಲವಾದ ಪೇಟೆ ಶ್ರೀರಾಮ ಮಂದಿರ ಸಮಿತಿಯು 150ನೇ ವರ್ಷದ ಆಚರಣೆಯಲ್ಲಿದ್ದು ‘ಅರ್ಧನಾರೀಶ್ವರ’ ಕಥೆ ಪ್ರದರ್ಶನ ನೀಡಲಿದೆ.

ದೇಚೂರು ಶ್ರೀರಾಮ ಮಂದಿರ ದೇವಾಲಯದಿಂದ ‘ಪಂಚಮುಖಿ ಆಂಜನೇಯ ಮಹಿಮೆ’, ದಂಡಿನ ಮಾರಿಯಮ್ಮ ದೇವಾಲಯವು 89ನೇ ವರ್ಷದ ಉತ್ಸವಕ್ಕೆ ಸಜ್ಜಾಗಿದ್ದು ‘ನರಸಿಂಹನಿಂದ ಹಿರಣ್ಯ ಕಶಿಪು ವಧೆ’ ಕಥೆಯ ಸಾರಾಂಶ ಪಡಿಸಲಾಗುತ್ತಿದೆ. ಚೌಡೇಶ್ವರಿ ದೇವಾಲಯದಿಂದ ‘ಮಹಿಷಾಸುರ ಮರ್ದಿನಿ’, ಕೋಟೆ ಮಾರಿಯಮ್ಮ ದೇವಸ್ಥಾನದಿಂದ 44ನೇ ಉತ್ಸವ ಇದಾಗಿದ್ದು ‘ಹಯಗ್ರೀವನಿಂದ ಹಯಗ್ರೀವ ದಾನವನ ಸಂಹಾರ ಕಥೆ’ ಪ್ರಸ್ತುತವಾಗಲಿದೆ.

ಕೋದಂಡ ರಾಮ ದೇವಾಲಯವು 45 ವರ್ಷ ಆಚರಣೆಯ ಸಂಭ್ರಮದಲ್ಲಿದ್ದು ಈ ವರ್ಷ ‘ಶಿವನಿಂದ ತ್ರಿ‍ಪುರಾಸುರನ ಸಂಹಾರ’ ಕಥೆ ಆಯ್ದುಕೊಳ್ಳಲಾಗಿದೆ.ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿಯಿಂದ 24ನೇ ವರ್ಷದ ದಸರಾ ಆಚರಣೆ ನಡೆಸುತ್ತಿದ್ದು ‘ಭ್ರಮರಾಂಬಿಕೆಯಿಂದ ಅರುಣಾಸುರ ವಧೆ’ ಕಥೆ ಆರಿಸಿಕೊಳ್ಳಲಾಗಿದೆ. ಪ್ರಸಿದ್ಧ ಕಂಚಿ ಕಾಮಾಕ್ಷಿಯಮ್ಮ ಸಮಿತಿಯ ಮಂಟಪವು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ‘ಉಗ್ರ ನರಸಿಂಹ’ ಕಥೆಯನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಪ್ರವಾಸಿಗರೂ ಕಾತರರಾಗಿದ್ದಾರೆ. ಪ್ರದರ್ಶನ ನಡೆಯುವ ಸ್ಥಳದಲ್ಲಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.

4 ಡಿವೈ‌ಎಸ್‌ಪಿ, 15 ಮಂದಿ ಇನ್‌ಸ್ಪೆಕ್ಟರ್‌, 24 ಪಿಎಸ್‌ಐ, 700 ಪೊಲೀಸ್‌ ಸಿಬ್ಬಂದಿ, 300 ಗೃಹ ರಕ್ಷಕ ದಳದ ಸಿಬ್ಬಂದಿ, 100 ಮಹಿಳಾ ಪೊಲೀಸರು, 5 ಕೆ‌ಎಸ್‌ಆರ್‌ಪಿ ತುಕಡಿ, 16 ಡಿಎಆರ್‌ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT