ಠೇವಣಿ ಕಳೆದುಕೊಂಡ 101 ಭೂಪರು!

ಭಾನುವಾರ, ಏಪ್ರಿಲ್ 21, 2019
32 °C
ದಾವಣಗೆರೆಯ 11 ಲೋಕಸಭಾ ಚುನಾವಣೆಗಳಲ್ಲಿ 127 ಅಭ್ಯರ್ಥಿಗಳಿಂದ ಸ್ಪರ್ಧೆ

ಠೇವಣಿ ಕಳೆದುಕೊಂಡ 101 ಭೂಪರು!

Published:
Updated:

ದಾವಣಗೆರೆ: ಇದುವರೆಗೆ 11 ಸಾರ್ವತ್ರಿಕ ಚುನಾವಣೆಗಳಿಗೆ ಸಾಕ್ಷಿಯಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರವು 12ನೇ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಹಿಂದೆ ಸಾಗಿ ಬಂದ ಚುನಾವಣೆಗಳ ಫಲಿತಾಂಶಗಳ ಕಣ್ಣು ಹಾಯಿಸಿದಾಗ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದುವರೆಗೆ ಒಮ್ಮೆಯೂ ತಮ್ಮ ಭದ್ರತಾ ಠೇವಣಿ ಉಳಿಸಿಕೊಂಡ ನಿದರ್ಶನಗಳಿಲ್ಲ!

ಕಳೆದ 11 ಲೋಕಸಭಾ ಚುನಾವಣೆಗಳಲ್ಲಿ ಒಟ್ಟು 127 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರ ಪೈಕಿ 101 (ಶೇ 79.52) ಅಭ್ಯರ್ಥಿಗಳ ಭದ್ರತಾ ಠೇವಣಿ ಜಪ್ತಿಯಾಗಿವೆ. ಐದನೇ ಒಂದು ಭಾಗದಷ್ಟು ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಒಟ್ಟು 20 ಅಭ್ಯರ್ಥಿಗಳ ಹಾಗೂ 81 ಪಕ್ಷೇತರ ಅಭ್ಯರ್ಥಿಗಳ ಭದ್ರತಾ ಠೇವಣಿ ಜಪ್ತಿಯಾಗಿವೆ.

ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು ಸ್ವೀಕೃತ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ (ಶೇ 16.6) ಹೆಚ್ಚು ಮತಗಳನ್ನು ಪಡೆಯುವಲ್ಲಿ ವಿಫಲರಾದ ಅಭ್ಯರ್ಥಿಗಳ ಠೇವಣಿಯನ್ನು ಚುನಾವಣಾ ಆಯೋಗ ಜಪ್ತಿ ಮಾಡುತ್ತದೆ.

ಸೋಲು–ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ತತ್ವ–ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕೆಲ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ. ಮತ್ತೆ ಕೆಲವು ಪಕ್ಷೇತರರು ‘ಒಂದು ಕೈ ನೋಡಿಯೇ ಬಿಡೋಣ’ ಎಂದು ಕಣಕ್ಕೆ ಇಳಿಯುತ್ತಿದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆ ನಡೆದಿದ್ದು, ಆ ಪಕ್ಷಗಳ ನಡುವೆಯೇ ಅಧಿಕಾರ ಹಂಚಿಕೆಯಾಗಿವೆ. ಉಳಿದವರ ಪಾಲಿಗೆ ಚುನಾವಣೆ ‘ಹುಳಿ ದ್ರಾಕ್ಷಿ’ಯಾಗಿ ಪರಿಣಮಿಸಿದೆ.

2004, 1996, 1980ರ ಚುನಾವಣೆಗಳಲ್ಲಿ ಮೂವರು ಅಭ್ಯರ್ಥಿಗಳು ಮಾತ್ರ ಭದ್ರತಾ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಎಂಟು ಚುನಾವಣೆಗಳಲ್ಲಿ ವಿಜೇತ ಹಾಗೂ ಸಮೀಪ ಪ್ರತಿಸ್ಪರ್ಧಿ ಹೊರತುಪಡಿಸಿದರೆ ಕಣದಲ್ಲಿದ್ದ ಉಳಿದ ಎಲ್ಲಾ ಅಭ್ಯರ್ಥಿಗಳ ಠೇವಣಿಯೂ ಜಪ್ತಿಯಾಗಿದ್ದವು.

ಜೆಡಿಎಸ್‌, ಸಿಪಿಐ, ಬಿಎಸ್‌ಪಿ, ಆಮ್‌ ಆದ್ಮಿ ಪಾರ್ಟಿ, ಎ.ಡಿ.ಎಂ.ಕೆ, ವಿ.ಜೆ.ಸಿ.ಪಿ, ಎಸ್‌.ಜೆ.ಪಿ.ಎ, ಸಿಪಿಐ(ಎಂಎಲ್‌ಎಲ್‌) ಪಕ್ಷಗಳ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ಅವರು 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ ಶೇ 4.21 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. 1998ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಎಸ್‌.ಎಚ್‌. ಪಟೇಲ್‌ (ಶೇ 12.20) ಹಾಗೂ 1984ರಲ್ಲಿ ಸಿಪಿಐನ ಎಂ. ಪಂಪಾಪತಿ (ಶೇ 1.38) ಅವರ ಠೇವಣಿಯೂ ಜಪ್ತಿಯಾಗಿತ್ತು. ಸಿಪಿಐನ ಎಚ್‌.ಕೆ. ರಾಮಚಂದ್ರಪ್ಪ, ಇದ್ಲಿ ರಾಮಪ್ಪ, ಜೆಡಿಎಸ್‌ನ ಕೆ.ಬಿ. ಕಲ್ಲೇರುದ್ರೇಶಪ್ಪ ಅವರೂ ಠೇವಣಿ ಜಪ್ತಿಗೊಂಡ ಅಭ್ಯರ್ಥಿಗಳ ಸಾಲಿಗೆ ಸೇರಿದ್ದಾರೆ.

ಕಳೆದ ಎರಡು ಚುನಾವಣೆಗಳಿಂದ ಸ್ಪರ್ಧಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಪಕ್ಷೇತರರ ಸಂಖ್ಯೆಯೇ ಹೆಚ್ಚು ಠೇವಣಿ ಕಳೆದುಕೊಳ್ಳುವವರೂ ಅವರೇ ಹೆಚ್ಚು. ಏಪ್ರಿಲ್‌ 23ಕ್ಕೆ ಈ ಬಾರಿ ಚುನಾವಣೆ ನಡೆಯಲಿದ್ದು, ಎಷ್ಟು ಅಭ್ಯರ್ಥಿಗಳು ಕಣಕ್ಕೆ ಇಳಿದು ತಮ್ಮ ಠೇವಣಿ ಕಳೆದಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

**

ಠೇವಣಿ ಕಳೆದುಕೊಂಡ ಅಭ್ಯರ್ಥಿಗಳ ವಿವರ

ಚುನಾವಣಾ ವರ್ಷ - ಸ್ಪರ್ಧಿಸಿದ ಅಭ್ಯರ್ಥಿಗಳು - ಠೇವಣಿ ಜಪ್ತಿ

2014 - 18 - 16

2009 - 28 - 26

2004 - 6 - 3

1999 - 4 - 2

1998 - 8 - 6

1996 - 24 - 21

1991 - 14 - 11

1989 - 5 - 3

1984 - 11 - 9

1980 - 6 - 3

1977 - 3 - 1

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !