ಶುಕ್ರವಾರ, ಸೆಪ್ಟೆಂಬರ್ 20, 2019
25 °C
ತುರಹಳ್ಳಿ ಮೀಸಲು ಅರಣ್ಯ: ಬೀದಿ ನಾಯಿ ಹಾವಳಿಯಿಂದ ಕಂಗೆಟ್ಟ ವನ್ಯಜೀವಿಗಳು

ಗರ್ಭ ಧರಿಸಿದ್ದ ಜಿಂಕೆ ನಾಯಿಗೆ ಬಲಿ

Published:
Updated:
Prajavani

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯದಲ್ಲಿ ಗರ್ಭ ಧರಿಸಿದ್ದ ಜಿಂಕೆಯೊಂದು ಬೀದಿನಾಯಿಗಳ ದಾಳಿಯಿಂದಾಗಿ ಶನಿವಾರ ಮೃತಪಟ್ಟಿದೆ. ಅದರ ಹೊಟ್ಟೆಯಲ್ಲಿದ್ದ ಮರಿಯೂ ಕೊನೆಯುಸಿರೆಳೆದಿದೆ.

ಈ ವರ್ಷದ ಬೇಸಿಗೆಯಲ್ಲಿ ತುರಹಳ್ಳಿ ಕಾಡಿನಲ್ಲಿ ನಾಯಿಗಳ ದಾಳಿಯಿಂದ ಸತ್ತ ಜಿಂಕೆಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.

‘ಬನಶಂಕರಿ ಆರನೇ ಹಂತದ ಬಿಜಿಎಸ್‌ ಆಸ್ಪತ್ರೆ ಸಮೀಪದ ಲಕ್ಷ್ಮೀದೇವಸ್ಥಾನದ ಬಳಿಗೆ ನಾಯಿಗಳ ಗುಂಪೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿತ್ತು. ಈ ಬಗ್ಗೆ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದರು. ಇಲಾಖೆ ಅಧಿಕಾರಿಗಳು ಸ್ಥಳವನ್ನು ತಲುಪುವಷ್ಟರಲ್ಲಿ ಅದು ಕೊನೆಯುಸಿರೆಳೆದಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಸುಮಾರು 3 ತಿಂಗಳ ಮರಿಯೂ ಇತ್ತು’ ಎಂದು ನಗರ ಜಿಲ್ಲೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಂಕೆಗಳು ಬಲು ಸೂಕ್ಷ್ಮಜೀವಿಗಳು. ಸ್ವಲ್ಪ ಗಾಬರಿಗೊಂಡರೂ ಅವು ಹೃದಯಾಘಾತದಿಂದ ಸಾಯುವ ಪ್ರಮೇಯ ಜಾಸ್ತಿ. ಹಾಗಾಗಿ ನಾಯಿಗಳು ಅಟ್ಟಿಸಿಕೊಂಡು ಬಂದಾಗ ಭಯದಿಂದ ಅದು ಹೃದಯಾಘಾತಕ್ಕೆ ಒಳಗಾಗಿರುವ ಸಾಧ್ಯತೆ ಇದೆ’ ಎಂದರು.

ನಗರದ ಸೆರಗಿನಲ್ಲಿರುವ ತುರಹಳ್ಳಿಯಲ್ಲಿ ಕಿರು ಅರಣ್ಯ ಹಾಗೂ ರಾಜ್ಯ ಮೀಸಲು ಅರಣ್ಯ ಸೇರಿ ಸುಮಾರು 1,100 ಎಕರೆಗಳಷ್ಟು ವಿಸ್ತೀರ್ಣದ ಕಾಡು ಇದೆ. ಇದಲ್ಲಿನ ಮೀಸಲು ಅರಣ್ಯ ಸುಮಾರು 514 ಎಕರೆಗಳಷ್ಟು ವ್ಯಾಪಿಸಿದ್ದು ಇಲ್ಲಿ ಜಿಂಕೆಗಳ ಸಂತತಿ ಹೆಚ್ಚು ಇದೆ. ನಡುನಡುವೆ ರಸ್ತೆಗಳು ಹಾದು ಹೋಗಿರುವುದರಿಂದ ಈ ಕಾಡು ಛಿದ್ರಗೊಂಡಿದೆ. ಪಕ್ಕದಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಇಲ್ಲಿ ಜನವಸತಿ ಹೆಚ್ಚುತ್ತಿರುವುದು ಈ ಕಾಡಿನ ವನ್ಯಜೀವಿಗಳ ಪಾಲಿಗೆ ಆತಂಕ ತಂದೊಡ್ಡಿದೆ.

‘ಇತ್ತೀಚೆಗೆ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ತುಂಬಾ ಜಾಸ್ತಿಯಾಗಿದೆ. ಈ ಅರಣ್ಯದಲ್ಲಿ ಬೇಸಿಗೆಯಲ್ಲಿ ಮೇವಿನ ಹಾಗೂ ನೀರಿನ ಕೊರತೆ ಕಾಡುತ್ತವೆ. ಮೇವು ಅರಸಿಕೊಂಡು ಕಾಡಿನ ಅಂಚಿಗೆ ಬರುವ ಜಿಂಕೆಗಳು ಬೀದಿನಾಯಿಗಳ ಕಣ್ಣಿಗೆ ಬೀಳುತ್ತವೆ. ಅವು ನಾಯಿಗಳಿಗೆ ತುತ್ತಾಗುತ್ತಿವೆ’ ಎಂದು ಸಹಾಯಕ ಅರಣ್ಯ ಅಧಿಕಾರಿ ವಿವರಿಸಿದರು.

‘ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಈ ಕಾಡಿನಲ್ಲಿ ಕೆಲವೆಡೆ ಕಸವನ್ನು ರಾಶಿ ಹಾಕುತ್ತಾರೆ. ಇಲ್ಲಿನ ಆವರಣಗೋಡೆ ಅಷ್ಟೇನೂ ಎತ್ತರ ಇಲ್ಲ. ಕಸ ಹಾಕಲು ಕಾಡಿನೊಳಗೆ ಹೋಗುವವರು ಕೆಲವೆಡೆ ಬೇಲಿಯನ್ನೂ ಕಿತ್ತು ಹಾಕಿದ್ದಾರೆ. ಇಲ್ಲಿನ ಕಸವನ್ನು ಪಾಲಿಕೆಯವರೂ ತೆರವುಗೊಳಿಸುತ್ತಿಲ್ಲ. ಇಲ್ಲಿ ಬಯಲು ಬಹಿರ್ದೆಸೆ ಹಾವಳಿಯೂ ಇದೆ. ಇದು ಕೂಡಾ ಬೀದಿನಾಯಿಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

‘ಜಿಂಕೆಗಳು ನೀರನ್ನು ಅರಸಿಕೊಂಡು ಹೊರಗೆ ಬರುವುದನ್ನು ತಪ್ಪಿಸಲು ನಾವು ಕಾಡಿನೊಳಗೆ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದೇವೆ. ಇನ್ನಷ್ಟು ತೊಟ್ಟಿಗಳನ್ನು ನಿರ್ಮಿಸುವ ಉದ್ದೇಶವಿದೆ. ಕಾಡಿನ ಬೇಲಿಯನ್ನು ದುರಸ್ತಿಗೊಳಿಸುತ್ತೇವೆ. ಬೇಲಿಯ ಎತ್ತರವನ್ನೂ ಹೆಚ್ಚಿಸಿ ಇನ್ನಷ್ಟು ಭದ್ರಪಡಿಸುತ್ತೇವೆ’ ಎಂದು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ತಿಳಿಸಿದರು.

ಬೀದಿನಾಯಿ ಹಾವಳಿ: ನಾಳೆ ಸಭೆ

‘ಬೀದಿನಾಯಿಗಳ ನಿಯಂತ್ರಣ ನಮ್ಮ ವ್ಯಾಪ್ತಿಯಲ್ಲಿಲ್ಲ. ಇದನ್ನು ಬಿಬಿಎಂಪಿಯವರೇ ಮಾಡಬೇಕು. ತುರಹಳ್ಳಿ ಅರಣ್ಯದ ಆಸುಪಾಸಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದಿದ್ದೇವೆ. ಇತ್ತೀಚೆಗೆ ಇಲ್ಲಿನ ಜಿಂಕೆಗಳು ನಾಯಿಗಳಿಗೆ ಬಲಿಯಾಗುತ್ತಿರುವ ಬಗ್ಗೆ ಪಾಲಿಕೆ ಹಿರಿಯ ಅಧಿಕಾರಿಗಳನ್ನು ಸೋಮವಾರ ಭೇಟಿ ಮಾಡಿ ಚರ್ಚಿಸಲಿದ್ದೇವೆ’ ಎಂದು ವೆಂಕಟೇಶ್‌ ತಿಳಿಸಿದರು.

Post Comments (+)