ದೇಗುಲಮಠದ ಸ್ವಾಮೀಜಿ ಚರಪಟ್ಟಾಧಿಕಾರ 17ಕ್ಕೆ

7

ದೇಗುಲಮಠದ ಸ್ವಾಮೀಜಿ ಚರಪಟ್ಟಾಧಿಕಾರ 17ಕ್ಕೆ

Published:
Updated:
Deccan Herald

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರದ ದೇಗುಲ ಮಠದಲ್ಲಿ ನ.17 ಮತ್ತು 18ರಂದು ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಜರುಗಲಿದೆ. ಪೀಠಾಧ್ಯಕ್ಷ ಸ್ಥಾನವನ್ನು ಕೀರ್ತಿಪ್ರಭು ಸ್ವಾಮೀಜಿ ಅಲಂಕರಿಸಲಿದ್ದಾರೆ.

ಈಗಿನ ಪೀಠಾಧ್ಯಕ್ಷ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದರು. ಇವರು ವಯೋಸಹಜ ಕಾರಣಕ್ಕಾಗಿ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. 

ಕೀರ್ತಿಪ್ರಭು ಸ್ವಾಮೀಜಿ ಪೂರ್ವಾಶ್ರಮದ ಹೆಸರು ಕೀರ್ತಿಕುಮಾರ್‌. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕುಟ್ಟವಾಡಿ ಇವರ ಊರು. ಜೆ.ಎಸ್‌.ಎಸ್‌. ಗುರುಕುಲದಲ್ಲಿ ಅಧ್ಯಾತ್ಮ ಹಾಗೂ ಅದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪದವಿವರೆಗೆ ಶಿಕ್ಷಣ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಆರು ಚಿನ್ನದ ಪದಕಗಳೊಂದಿಗೆ ಪೂರೈಸಿದ್ದಾರೆ. ವಾರಾಣಸಿಯ ಹಿಂದೂ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಯೋಗ ಕುರಿತ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿದ್ದಾರೆ. 

ಕುಟ್ಟವಾಡಿಯ ಉಕ್ಕಿನಕಂತೆ ಶಾಖಾಮಠಕ್ಕೆ ಪೀಠಾಧಿಪತಿಯಾಗಿ ಇವರು 2003ರಿಂದ ಸೇವಾಕೈಂಕರ್ಯ ಮಾಡುತ್ತಿದ್ದರು. 

‘ಮಠದಲ್ಲಿ ನ.17ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ನ.18ರ ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಾಧಿಕಾರವು ಶಾಸ್ತ್ರೋಕ್ತವಾಗಿ ನೆರವೇರಲಿದೆ. ನೂತನ ಪೀಠಾಧ್ಯಕ್ಷರ ಪಲ್ಲಕ್ಕಿ ಉತ್ಸವ ಕನಕಪುರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಬೆಳಿಗ್ಗೆ 10.30ಕ್ಕೆ ಹತ್ತಾರು ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು.

ಮಹೋತ್ಸವದಲ್ಲಿ ಭಾಗವಹಿಸುವ ಅಂದಾಜು 30 ಸಾವಿರ ಭಕ್ತಾದಿಗಳಿಗಾಗಿ ಆಸನ ವ್ಯವಸ್ಥೆ, ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ.  

ಈ ಮಠವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ 6,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 2,000 ವಿದ್ಯಾರ್ಥಿಗಳಿಗೆ ಮಠದಲ್ಲೇ  ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !