ಡೆಂಗಿ, ಚಿಕುನ್‌ಗುನ್ಯಾ ಹಾವಳಿ; ಇರಲಿ ಎಚ್ಚರ

ಮಂಗಳವಾರ, ಜೂನ್ 18, 2019
26 °C

ಡೆಂಗಿ, ಚಿಕುನ್‌ಗುನ್ಯಾ ಹಾವಳಿ; ಇರಲಿ ಎಚ್ಚರ

Published:
Updated:
Prajavani

ಹುಬ್ಬಳ್ಳಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿಯೂ ಡೆಂಗಿ ಹಾಗೂ ಚಿಕುನ್‌ಗುನ್ಯಾ ಹಾವಳಿಯೂ ಹೆಚ್ಚಾಗತೊಡಗಿದೆ. 2019ರ ಇಲ್ಲಿಯವರೆಗೆ ಎಂಟು ಜನರಿಗೆ ಡೆಂಗಿ, 14 ಜನರಿಗೆ ಚಿಕುನ್‌ ಗುನ್ಯಾ ಇರುವುದು ಪತ್ತೆಯಾಗಿದೆ.

ದಶಕದ ಹಿಂದೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಎರಡೂ ರೋಗಗಳ ಹಾವಳಿ ಕಡಿಮೆಯಾಗಿರುವುದು ಅಂಕಿ–ಅಂಶಗಳಿಂದ ಗೊತ್ತಾಗುತ್ತದೆ. ಆದರೂ, ಕಡೆಗಣಿಸುವಂತಿಲ್ಲ. ಮುಂಜಾಗ್ರತೆ ತೆಗೆದುಕೊಂಡರೆ ಬರಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

2017ರಲ್ಲಿ 172 ಜನರಿಗೆ ಡೆಂಗಿಯಾಗಿತ್ತು. ಅದರಲ್ಲಿ ಮೂವರು ಸಾವನ್ನಪ್ಪಿದ್ದರು. 2018ರಲ್ಲಿ 112 ಜನರಿಗೆ ಡೆಂಗಿ ಪೀಡಿತರಾಗಿದ್ದರು. ಈ ವರ್ಷ ಈಗಾಗಲೇ 8 ಜನರಿಗೆ ಡೆಂಗಿ ಇರುವುದು ಪತ್ತೆಯಾಗಿದೆ. ಮಳೆ ಹೆಚ್ಚಾಗಿ ಡ್ರಮ್, ಟೈರ್‌, ತೆಂಗಿನ ಚಿಪ್ಪು ಮುಂತಾದವುಗಳಲ್ಲಿ ಸಂಗ್ರಹವಾಗುವ ನೀರಿನಿಂದಾಗಿ ರೋಗಗಳು ಹರಡುತ್ತವೆ.

2016 ರಲ್ಲಿ 6, 2017ರಲ್ಲಿ 11, 2018ರಲ್ಲಿ 85 ಚಿಕುನ್‌ಗುನ್ಯಾ ಇರುವುದು ಪತ್ತೆಯಾಗಿತ್ತು. 2019ರಲ್ಲಿ 14 ಮಂದಿಗೆ ಚಿಕುನ್‌ಗುನ್ಯಾ ಇರುವುದು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಇವುಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಆರೋಗ್ಯ ಇಲಾಖೆಯೂ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.

ಮನೆ ಮುಂದಿನ ಗಟಾರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದರೆ ಅದನ್ನು ಮುಚ್ಚಿಸಲು ಸಂಬಂಧಿಸಿದ ಸ್ಥಳೀಯ ಆಡಳಿತ ಸಂಸ್ಥೆಗೆ ತಿಳಿಸಬೇಕು. ಚಿಕುನ್‌ಗುನ್ಯಾ, ಡೆಂಗಿ ಜ್ವರ ಹರಡುವ ಸೊಳ್ಳೆ ಹಗಲಿನಲ್ಲಿ ಕಚ್ಚುವುದರಿಂದ ಮುಂಜಾಗ್ರತಾ ಕ್ರಮವಹಿಸಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ.

ಹುಬ್ಬಳ್ಳಿ ನಗರದಲ್ಲಿಯೇ ಹೆಚ್ಚು: ಹತ್ತು ವರ್ಷಗಳ ಅಂಕಿ–ಅಂಶಗಳನ್ನು ನೋಡಿದಾಗ ಹುಬ್ಬಳ್ಳಿ ನಗರದಲ್ಲಿಯೇ ಹೆಚ್ಚು ಜನರು ಡೆಂಗಿ ಹಾಗೂ ಚಿಕುನ್‌ಗುನ್ಯಾಕ್ಕೆ ತುತ್ತಾಗಿರುವುದು ಕಂಡು ಬಂದಿದೆ.

ನಗರದಲ್ಲಿ ವಾರದಿಂದ ಹತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದರಿಂದ ಜನರು ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಬೇಕಾದ ಅನಿವಾರ್ಯತೆ ಜನರಿಗೆ ಎದುರಾಗಿದೆ. ಮನೆಯಲ್ಲಿಯೂ ತೆರೆದ ತೊಟ್ಟಿಗಳನ್ನು ನೀರನ್ನು ಸಂಗ್ರಹಿಸುತ್ತಾರೆ.

ನಗರದ ಬಹುತೇಕ ಪ್ರದೇಶಗಳಲ್ಲಿ ಗಟಾರ ನಿರ್ವಹಣೆ ಸರಿಯಾಗಿಲ್ಲದಿರುವುದರಿಂದ ನೀರು ಮುಂದಕ್ಕೆ ಹರಿಯದೇ ಸಂಗ್ರಹವಾಗುತ್ತದೆ. ಇದೂ ರೋಗ ಹರಡಲು ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಸತತ ಜ್ವರ, ಮೈ–ಕೈ ನೋವು, ತಲೆನೋವು ಕಾಣಸಿಕೊಂಡರೆ ಕೂಡಲೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯಬೇಕು. ಜ್ವರ ಬಂದ ಮೇಲೆ ಚಿಕಿತ್ಸೆ ಪಡೆಯುವುದು ಒಂದೆಡೆಯಾದರೆ, ಜ್ವರ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ಉತ್ತಮ ಎನ್ನುತ್ತಾರೆ ಡಾ.ದೊಡ್ಡಮನಿ.

**
ನೀರು ನಿಲ್ಲದಂತೆ ಕ್ರಮವಹಿಸಬೇಕು. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸುವ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಬೇಕು
–ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !