ಢಾಕಾ ಮೇಯರ್‌ಗೆ ಕಸ ಕುತೂಹಲ

7
ರಾತ್ರಿ 12ರ ಬಳಿಕ ತ್ಯಾಜ್ಯ ವಿಲೇವಾರಿ ಮಾಡುವ ಬಾಂಗ್ಲಾ ರಾಜಧಾನಿ

ಢಾಕಾ ಮೇಯರ್‌ಗೆ ಕಸ ಕುತೂಹಲ

Published:
Updated:
Prajavani

ಬೆಂಗಳೂರು: ಹಸಿ ಕಸ, ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸುವುದು ನಿಜಕ್ಕೂ ಸಾಧ್ಯವೇ? ಇದಕ್ಕೆ ಜನ ಸಹಕರಿಸುತ್ತಾರಾ? ಹಸಿ ಕಸದಿಂದ ತಯಾರಿಸುವ ಕಾಂಪೋಸ್ಟ್‌ ಏನು ಮಾಡುತ್ತೀರಿ?

ಬಾಂಗ್ಲಾದೇಶದ ಢಾಕಾ (ದಕ್ಷಿಣ) ನಗರದ ಮೇಯರ್‌ ಮೊಹಮ್ಮದ್‌ ಸಯೀದ್‌ ಖೊಕೊನ್‌ ಅವರು ಬಿಬಿಎಂಪಿಯ ಕಸ ವಿಲೇವಾರಿ ವ್ಯವಸ್ಥೆ ಬಗ್ಗೆ ಮೇಯರ್‌ ಗಂಗಾಂಬಿಕೆ ಅವರನ್ನು ಕುತೂಹಲದಿಂದ ಪ್ರಶ್ನಿಸಿದ್ದು ಹೀಗೆ. 

ಸುಸ್ಥಿರ ಅಭಿವೃದ್ಧಿ ಕುರಿತ ಮಾಹಿತಿ ವಿನಿಮಯಕ್ಕಾಗಿ ರಚಿಸಲಾದ ಸಿ–40 ನಗರಗಳ ಒಕ್ಕೂಟದ ಸದಸ್ಯತ್ವ ಹೊಂದಿರುವ ಢಾಕಾ ನಗರ ಪಾಲಿಕೆಯ ನಿಯೋಗವು ನಗರಕ್ಕೆ ಭೇಟಿ ನೀಡಿದೆ. ಖೊಕೊನ್‌ ನೇತೃತ್ವದ ನಿಯೋಗವು ಇಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಸೋಮವಾರ ಮಾಹಿತಿ ವಿನಿಮಯ ನಡೆಸಿತು. 

ಕಸ ವಿಲೇವಾರಿ ಸವಾಲು ಎದುರಿಸಲು ಪಾಲಿಕೆ ಹೇಗೆ ಸನ್ನದ್ಧವಾಗಿದೆ, ಮೂಲದಲ್ಲೇ ಕಸ ವಿಂಗಡಣೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ  ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ಹಾಗೂ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಅವರು ನಿಯೋಗಕ್ಕೆ ವಿವರಿಸಿದರು.

ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕ ವಾಗಿ ಸಂಗ್ರಹಿಸುವುದು, ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಮರುಬಳಕೆ ಹಾಗೂ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ತಯಾರಿ, ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವವರಿಗೆ ದಂಡ ವಿಧಿಸುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಬೆಳಿಗ್ಗೆ 6.30ರ ನಂತರವೇ ಕಸ ವಿಲೇವಾರಿ ಮಾಡುವ ಬಗ್ಗೆ ನಿಯೋಗದಲ್ಲಿದ್ದ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು.

‘ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಢಾಕಾದಲ್ಲಿ ಬೆಳಿಗ್ಗೆ ಕಸ ಎತ್ತುವುದು ಕಷ್ಟದ ಕೆಲಸ. ರಾತ್ರಿ 12ರಿಂದ ಬೆಳಿಗ್ಗೆ 7 ಗಂಟೆ ನಡುವೆ ನಗರದ ಅಷ್ಟೂ ಕಸವನ್ನು ತೆರವುಗೊಳಿಸುತ್ತೇವೆ. ಸೂರ್ಯೋದಯಕ್ಕೆ ಮುನ್ನವೇ ನಗರ ಸ್ವಚ್ಛವಾಗಿರುತ್ತದೆ’ ಎಂದು ಢಾಕಾದ ಮುಖ್ಯಕಸ ನಿರ್ವಹಣಾಧಿಕಾರಿ ಮೊಹಮ್ಮದ್‌ ಝಾಹಿದ್‌ ಹುಸೇನ್‌ ತಿಳಿಸಿದರು.

‘ಕಸವನ್ನು ವಿಂಗಡಿಸುವ ಪದ್ಧತಿ ಇನ್ನೂ ನಮ್ಮಲ್ಲಿ ಜಾರಿಗೊಳಿಸಿಲ್ಲ. ನಗರದ ಹೊರವಲಯದಲ್ಲಿ 100 ಎಕರೆ ಜಾಗವನ್ನು ಭೂಭರ್ತಿಗಾಗಿ ಮೀಸಲಿಟ್ಟಿದ್ದೇವೆ. ಅಷ್ಟೂ ಕಸವನ್ನು ಅಲ್ಲಿ ಸುರಿಯುತ್ತೇವೆ’ ಎಂದರು.

ಪೌರಕಾರ್ಮಿಕರ ವೇತನ ಹಾಗೂ ಸವಲತ್ತುಗಳ ಬಗ್ಗೆಯೂ ನಿಯೋಗವು ಮಾಹಿತಿ ಪಡೆಯಿತು.

ಬಿಬಿಎಂಪಿ ಕೈಗೊಂಡಿರುವ ಸುಧಾರಣಾ ಕ್ರಮಗಳಿಗೆ ಮೆಚ್ಚುಗೆ ಸೂಚಿಸಿದ ಮೇಯರ್‌ ಖೊಕೊನ್‌, ಕಾಂಪೋಸ್ಟ್‌ ತಯಾರಿ ಹಾಗೂ ಒಣ ಕಸ ವಿಂಗಡಣಾ ಘಟಕಗಳಿಗೆ ಭೇಟಿ ನೀಡಲು ಆಸಕ್ತಿ ತೋರಿದರು.

ಟೆಂಡರ್‌ಶ್ಯೂರ್‌ ಯೋಜನೆ ಅಭಿವೃದ್ಧಿಪಡಿಸಿದ ರಸ್ತೆಗಳ ಬಗ್ಗೆ ವಿಶೇಷ ಆಯುಕ್ತ (ಯೋಜನೆ) ಮನೋಜ್‌ ಕುಮಾರ್‌ ಮೀನಾ ಹಾಗೂ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ವಿವರಿಸಿದರು. ವಾಹನಗಳಿಗೆ ನೀಡುವಷ್ಟೇ ಆದ್ಯತೆಯನ್ನು ಪಾದಚಾರಿಗಳಿಗೆ ನೀಡುವ ಬಗ್ಗೆ ನಿಯೋಗದಲ್ಲಿದ್ದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಖೊಕೊನ್‌, ‘ಕಸದ ವಿಲೇವಾರಿ ವಿಧಾನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ’ ಎಂದರು. ಢಾಕಾಕ್ಕೆ ಭೇಟಿ ನೀಡುವಂತೆ ಮೇಯರ್‌ಗೆ ಆಹ್ವಾನ ನೀಡಿದರು.

ಹೊತ್ತು ಮೂಡುವ ಮುನ್ನವೇ ಭಿತ್ತಿಪತ್ರ ತೆರವು

‘ಢಾಕಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್‌ ಅಂಟಿಸಿದರೆ ಅದನ್ನು ರಾತ್ರಿ ಬೆಳಗಾಗುವುದರೊಳಗೆ ತೆರವುಗೊಳಿಸುತ್ತೇವೆ. ಇದಕ್ಕೆಂದೇ ತುರ್ತು ಸ್ಪಂದನಾ ತಂಡವೊಂದನ್ನು ಹೊಂದಿದ್ದೇವೆ’ ಎಂದು ಢಾಕಾ ದಕ್ಷಿಣ ನಗರ ಪಾಲಿಕೆಯ ಮುಖ್ಯ ತ್ಯಾಜ್ಯ ನಿರ್ವಹಣಾಧಿಕಾರಿ ಝಾಹಿದ್‌ ಹುಸ್ಸೇನ್‌ ತಿಳಿಸಿದರು.

‘ಪೌರಕಾರ್ಮಿಕರು ಮುಷ್ಕರ ನಡೆಸಿದರೆ ಅಥವಾ ಕಸವನ್ನು ತುರ್ತಾಗಿ ತೆರವುಗೊಳಿಸಬೇಕಾದ ಸಂದರ್ಭ ಎದುರಾದರೆ ಈ ತಂಡ ನೆರವಿಗೆ ಬರುತ್ತದೆ’ ಎಂದರು.

‘ನಗರದಲ್ಲಿ ಹಸಿರು ಎಷ್ಟಿದೆ’

‘ಬೆಂಗಳೂರು ನಗರದಲ್ಲಿ ಎಷ್ಟರಮಟ್ಟಿಗೆ ಹಸಿರು ಉಳಿದುಕೊಂಡಿದೆ’ ಎಂದು ಮೇಯರ್‌ ಖೊಕೊನ್‌ ಪ್ರಶ್ನಿಸಿದಾಗ ಪಾಲಿಕೆಯ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.

‘ಉದ್ಯಾನ ಹಾಗೂ ಆಟದ ಮೈದಾನಗಳಿಗೆ ಎಷ್ಟು ಜಾಗ ಮೀಸಲಿಟ್ಟಿದ್ದೀರಿ’ ಎಂದು ವಿಚಾರಿಸಿದಾಗ ಅಧಿಕಾರಿಗಳು ಉತ್ಸಾಹದಿಂದ ಪ್ರತಿಕ್ರಿಯಿಸಿದರು.

‘ನಮ್ಮಲ್ಲಿ 1 ಸಾವಿರಕ್ಕೂ ಅಧಿಕ ಉದ್ಯಾನಗಳಿವೆ. 200ಕ್ಕೂ ಹೆಚ್ಚು ಆಟದ ಮೈದಾನಗಳಿವೆ. ಈ ನಗರವನ್ನು ಉದ್ಯಾನಗಳ ನಗರ ಎಂದೇ ಕರೆಯಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕೆರೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಯೋಗಕ್ಕೆ ಉತ್ಸಾಹದಿಂದ ಮಾಹಿತಿ ನೀಡಿದ ಪಾಲಿಕೆ ಅಧಿಕಾರಿಗಳು ಬೆಳ್ಳಂದೂರು, ವರ್ತೂರು
ಕೆರೆಗಳ ದುಸ್ಥಿತಿ ಬಗ್ಗೆ ಮಾತ್ರ ತುಟಿ ಬಿಚ್ಚಲಿಲ್ಲ.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !