ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮೋದಿ ಕನವರಿಕೆ; ವಿನಯ್‌ ಚಡಪಡಿಕೆ

ಜಾತಿ ಕಾರ್ಡ್‌ ಪ್ಲೇ ಮಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ
Last Updated 24 ಏಪ್ರಿಲ್ 2019, 12:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ನಾಲ್ಕನೇ ಬಾರಿಯೂ ಗೆಲುವಿನ ನಗೆ ಬೀರಲು ಸೆಣಸುತ್ತಿರುವ ಬಿಜೆಪಿಯ ಪ್ರಹ್ಲಾದ ಜೋಶಿ ಹಾಗೂ ಕಳೆದ ಬಾರಿ 1.14 ಲಕ್ಷ ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮತ್ತೆ ಮುಖಾಮುಖಿಯಾಗಿದ್ದಾರೆ.

2014ರಲ್ಲಿ ಶಾಸಕರಾಗಿ ಇದ್ದು ಕೊಂಡು ಜೋಶಿ ಅವರನ್ನು ಎದುರಿಸಿದ್ದ ಕುಲಕರ್ಣಿ ಈ ಬಾರಿ ಮಾಜಿ ಸಚಿವರು! ವಿಧಾನಸಭಾ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದ ಅವರನ್ನು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಇಬ್ಬರ ನಡುವೆ ನೇರ ಹಣಾಹಣಿ ಇದೆ.

ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಒಂದು– ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಆರು ಕಡೆ ಬಿಜೆಪಿ ಶಾಸಕರೇ ಇದ್ದಾರೆ. ಇನ್ನೆರಡರ ಪೈಕಿ ಕುಂದಗೋಳದಲ್ಲಿದ್ದ ಕಾಂಗ್ರೆಸ್‌ನ ಸಿ.ಎಸ್‌.ಶಿವಳ್ಳಿ ನಿಧನರಾದರು. ಅವರನ್ನು ಬಿಟ್ಟರೆ ಮತ್ತೊಬ್ಬರು ಮಾತ್ರ ಕಾಂಗ್ರೆಸ್‌ ಶಾಸಕರಿದ್ದು, ಇದು ಕುಲಕರ್ಣಿ ಅವರಿಗೆ ಮೈನಸ್‌ ಪಾಯಿಂಟ್‌.

ಕಳೆದ ಬಾರಿಯ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯ ಸೋಲಿನ ಅನುಕಂಪವನ್ನು ನೆಚ್ಚಿಕೊಂಡು, ಜಾತಿ ಕಾರ್ಡ್‌ ಪ್ಲೇ ಮಾಡುತ್ತಿರುವ ವಿನಯ ಕುಲಕರ್ಣಿ (ಲಿಂಗಾಯತ– ಪಂಚಮಸಾಲಿ), ಈ ವಿಷಯದಲ್ಲಿ ಎಷ್ಟು ಯಶಸ್ವಿಯಾಗುತ್ತಾರೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.

ಲಿಂಗಾಯತರು ಗಣನೀಯ ಪ್ರಮಾಣದಲ್ಲಿ ಇದ್ದರೂ ಜಾತಿ ಮೇಲೆ ಚುನಾವಣೆ ನಡೆದ ಉದಾಹರಣೆಗಳು ಇಲ್ಲಿ ಕಡಿಮೆ. ಹಾಗೊಂದು ವೇಳೆ ಜಾತಿ ಕೆಲಸ ಮಾಡಿದ್ದೇ ಆಗಿದ್ದರೆ, ವಿಜಯ ಸಂಕೇಶ್ವರ ಬಿಜೆಪಿ ಬಿಟ್ಟು ಹೋದ ನಂತರ ಕಾಂಗ್ರೆಸ್‌ನ ಲಿಂಗಾಯತ ಅಭ್ಯರ್ಥಿಗಳೇ ಇಲ್ಲಿ ಗೆಲ್ಲಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಗೆದ್ದಿದ್ದು ಬ್ರಾಹ್ಮಣರಾದ ಪ್ರಹ್ಲಾದ ಜೋಶಿ. ಸತತ ಮೂರು ಬಾರಿ ಅವರೇ ಗೆದ್ದಿದ್ದಾರೆ. ಪ್ರತಿ ಬಾರಿಯೂ ಒಂದೊಂದು ಅಲೆಯಲ್ಲಿ ತೇಲಿ ಬಂದಿರುವ ಜೋಶಿ, ಈ ಸಲವೂ ಮೋದಿ ಅಲೆಯನ್ನೇ ನೆಚ್ಚಿಕೊಂಡಿದ್ದಾರೆ. ಇದಕ್ಕೆ ಹೇಗಾದರೂ ಮಾಡಿ ಬ್ರೇಕ್‌ ಹಾಕಬೇಕು ಎಂದು ಕುಲಕರ್ಣಿ ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕುಲಕರ್ಣಿ, ಕಳೆದ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ಪಾಠ ಕಲಿತಂತಿದೆ. ಲಿಂಗಾಯತ ಧರ್ಮದ ವಿಚಾರ ಈಗ ಅಪ್ರಸ್ತುತ ಎನ್ನುತ್ತಿದ್ದಾರೆ. ಬದಲಿಗೆ, ಯಾವ ವೀರಶೈವ ಮಠಾಧೀಶರ ವಿರುದ್ಧ ರಣಕಹಳೆ ಮೊಳಗಿಸಿದ್ದರೋ ಅವರ ಬಳಿಯೇ ಹೋಗಿ ಆಶೀರ್ವಾದ ಪಡೆಯುತ್ತಿದ್ದಾರೆ. ವೀರಶೈವ– ಲಿಂಗಾಯತರನ್ನು ಒಟ್ಟಿಗೇ ಸೇರಿಸಿ ಸಭೆಗಳನ್ನು ಮಾಡುತ್ತಿದ್ದಾರೆ. ‘ಎಲ್ಲೇ ಹೋದರೂ ಮೊದಲು ನಿಮ್ಮ ಸಮುದಾಯದ ಮತಗಳನ್ನು ಗಟ್ಟಿ ಮಾಡಿಕೊಂಡು ಬನ್ನಿ ಎಂದು ಬೇರೆ ಜಾತಿಯವರು ಹೇಳುತ್ತಿದ್ದಾರೆ. ಹೀಗಾಗಿ ನೀವು (ಲಿಂಗಾಯತ–ವೀರಶೈವ) ನನ್ನ ಕೈಬಿಡಬೇಡಿ’ ಎಂದು ಸ್ವಜಾತಿಯವರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಬದಲಾಗಿರುವ ಕುಲಕರ್ಣಿ, ಜೋಶಿ ಮತ್ತಷ್ಟು ಬೆವರು ಸುರಿಸುವಂತೆ ಮಾಡಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸಮುದಾಯದ ಮುಖಂಡರು ಸ್ವಜಾತಿಯವರ ಮನೆಗಳಿಗೆ ಖುದ್ದು ಹೋಗಿ ‘ಭಾವನಾತ್ಮಕ’ ಮತಬೇಟೆ ಆರಂಭಿಸಿದ್ದಾರೆ.

ಆದರೆ, ಈ ಎಲ್ಲ ತಂತ್ರಗಾರಿಕೆಗಳನ್ನೂ ಮೀರಿ ಕೆಲಸ ಮಾಡುವ ಶಕ್ತಿ ಬಿಜೆಪಿಗೆ ಇಲ್ಲಿದೆ. ಕೆಳಹಂತದ ಕಾರ್ಯಕರ್ತರು ಐದು ತಿಂಗಳಿಂದಲೇ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಜೋಶಿ ಕೂಡ 2–3 ಬಾರಿ ಪ್ರವಾಸ ಮಾಡಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್‌ ಕೊಟ್ಟ ಕಾರಣ ಕುಲಕರ್ಣಿಗೆ ಎಲ್ಲ ಊರುಗಳಿಗೆ ಭೇಟಿ ನೀಡಲು ಆಗಿಲ್ಲ. ಇದರ ನಡುವೆ ಟಿಕೆಟ್‌ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅಲ್ಪಸಂಖ್ಯಾತರು ಮುನಿಸಿಕೊಂಡಿದ್ದು, ಅವರನ್ನು ಜತೆ ಕರೆದೊಯ್ಯುವ ಪ್ರಯತ್ನ ನಡೆಸಿದ್ದಾರೆ. ಐ.ಜಿ.ಸನದಿ ಪ್ರಚಾರದಲ್ಲಿ ಕಾಣಿಸಿಕೊಂಡರೂ ಅವರ ಮಗ ಶಾಕೀರ್‌ ಸನದಿ, ರಾಹುಲ್‌ ಗಾಂಧಿ ಪರ ಪ್ರಚಾರಕ್ಕೆ ಕೇರಳದ ವಯನಾಡ್‌ಗೆ ಹೋಗಿದ್ದಾರೆ. ‘ಕಾಂಗ್ರೆಸ್‌ ಕೂಡ ನಮ್ಮ ಕೈಹಿಡಿಯಲಿಲ್ಲ’ ಎನ್ನುವ ಅಸಮಾಧಾನ ಮುಸ್ಲಿಮರಲ್ಲಿ ಇದೆ. ಇದರ ಲಾಭ ಪಡೆಯುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ.

ಐಐಟಿ, ಐಐಐಟಿ, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು, ಸ್ಮಾರ್ಟ್‌ ಸಿಟಿ... ಹೀಗೆ ಹತ್ತಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ಹೇಳಿಕೊಂಡು ಜೋಶಿ ಮತಯಾಚಿಸುತ್ತಿದ್ದಾರೆ. ಮೋದಿಗೆ ವೋಟ್‌ ಹಾಕಿ ಎನ್ನುತ್ತಿದ್ದಾರೆ. ಇದನ್ನು ಕಾಂಗ್ರೆಸ್‌ ಅಭ್ಯರ್ಥಿ ಲೇವಡಿ ಮಾಡುತ್ತಿದ್ದಾರೆ. ‘ಬಿಜೆಪಿಯವರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಮಗನಿಗೆ ಕನ್ಯಾ ಹುಡುಕಲು ಹೊರಟಿದ್ದಾರೆ. ಆದರೆ, ಮಗನ ಸುದ್ದಿಲ್ಲ. ಹೀಗಾಗಿ ಅಪ್ಪನ (ಮೋದಿ) ನೋಡಿ ಕನ್ಯಾ ಕೊಡಿ ಎಂಬಂತಾಗಿದೆ’ ಎಂದು ಛೇಡಿಸುತ್ತಿದ್ದಾರೆ. ತಮ್ಮ ರಿಪೋರ್ಟ್‌ ಕಾರ್ಡ್‌ ಜನರ ಮುಂದಿಟ್ಟು ವೋಟ್‌ ಕೇಳದ ಜೋಶಿ, ಮೋದಿ ಹೆಸರು ಕೇಳಿಕೊಂಡು ದಡ ಸೇರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ವಿನಯ್‌ ಎಲ್ಲೆಡೆ ಹೇಳುತ್ತಿದ್ದಾರೆ.

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ, ಬೆದರಿಕೆ ಆರೋಪದ ಮೇಲೆ ಕುಲಕರ್ಣಿ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಹಾಗೂ ಅವರ ಮಾವನ ಬಹುಮಹಡಿ ಕಟ್ಟಡ ಇತ್ತೀಚೆಗೆ ಕುಸಿದಿದ್ದು ಒಂದಷ್ಟು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಷ್ಟೇನೂ ಪ್ರಬಲ ಇಲ್ಲದ ಜೆಡಿಎಸ್‌ ಬೆಂಬಲವೂ ಕುಲಕರ್ಣಿಗೆ ಇದೆ. ಮಹದಾಯಿ, ಕುಡಿಯುವ ನೀರಿನ ಸಮಸ್ಯೆ, ಕೈಗಾರಿಕಾಭಿವೃದ್ಧಿ, ನೀರಾವರಿ– ಈ ಯಾವ ಪ್ರಮುಖ ವಿಷಯಗಳೂ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ. ಕೇವಲ ಮೋದಿಯದ್ದೇ ಕನವರಿಕೆ!

* ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕ ನರೇಂದ್ರ ಮೋದಿ. ಹೀಗಾಗಿ ಅವರಿಗೇ ವೋಟ್‌ ಕೇಳುತ್ತಿದ್ದೇನೆ

- ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ

* ನಾನೊಬ್ಬ ರೈತನ ಮಗ. ರೈತ ಪರ ಕಾಳಜಿವುಳ್ಳವನು. ನಗರದ ಅಭಿವೃದ್ಧಿಯ ಕುರಿತೂ ಕನಸಿದೆ. ಒಮ್ಮೆ ಅವಕಾಶ ಕೊಟ್ಟು ನೋಡಿ

- ವಿನಯ ಕುಲಕರ್ಣಿ, ಕಾಂಗ್ರೆಸ್‌ ಅಭ್ಯರ್ಥಿ

* ಕೇಂದ್ರದಿಂದ ಹೆಚ್ಚು ಅನುದಾನ ತರುವ ಹಾಗೂ ಅದನ್ನು ಸದ್ಬಳಕೆ ಮಾಡುವವರಿಗೆ ನಮ್ಮ ಬೆಂಬಲ. ಅನುದಾನ ಬಳಕೆಯ ಆಡಿಟಿಂಗ್‌ ಮಾಡಿಸುವವರಿಗೂ ನಮ್ಮ ವೋಟ್‌

- ಚೇತನ್‌ ಪೈ, ಉದ್ಯಮಿ, ಹೆಬಸೂರು

* ಬಡವರು ಮತ್ತು ರೈತರ ಪರ ಕಾಳಜಿ ಹೊಂದಿರಬೇಕು. ಸಮಾಜ ಮತ್ತು ಮಹಿಳೆಯರ ಹಿತ ಕಾಯುವವರಾಗಿರಬೇಕು

- ಸಕ್ಕೂಬಾಯಿ ದೊಡ್ಡಮನಿ, ಉದ್ಯೋಗಿ, ಧಾರವಾಡ

ಧಾರವಾಡ ಲೋಕಸಭಾ ಕ್ಷೇತ್ರದ ಇನ್ನಷ್ಟು ಚುನಾವಣಾ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT