ವಿಜಯಪುರ: ಗಣಪ ವಿಸರ್ಜನೆಗೆ ಶಾಶ್ವತ ಪರಿಹಾರ ಕಲ್ಪಿಸಿ–ಗಣೇಶ ಭಕ್ತರ ಆಗ್ರಹ

7
ಬೆಳಗಾವಿ, ಹುಬ್ಬಳ್ಳಿ ಮಾದರಿಯಲ್ಲಿ ಬೃಹತ್ ಬಾವಿ ಸ್ಥಾಪಿಸಿ

ವಿಜಯಪುರ: ಗಣಪ ವಿಸರ್ಜನೆಗೆ ಶಾಶ್ವತ ಪರಿಹಾರ ಕಲ್ಪಿಸಿ–ಗಣೇಶ ಭಕ್ತರ ಆಗ್ರಹ

Published:
Updated:

ವಿಜಯಪುರ: ಗಣೇಶ ವಿಸರ್ಜನೆಗೆ ತಾತ್ಕಾಲಿಕ ಹೊಂಡ ನಿರ್ಮಿಸುವ ಬದಲು ಬೆಳಗಾವಿ, ಹುಬ್ಬಳ್ಳಿ ಮಾದರಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಗಣೇಶ ಭಕ್ತರಿಂದ ಕೇಳಿ ಬಂದಿದೆ.

ನಗರದ ವಿವಿಧಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಹಲ ವರ್ಷಗಳಿಂದ ತಾಜ್‌ ಬಾವಡಿ ಸೇರಿದಂತೆ ವಿವಿಧ ಐತಿಹಾಸಿಕ ಬಾವಿಗಳಿಗೆ ವಿಸರ್ಜನೆ ಮಾಡಲಾಗುತ್ತಿತ್ತು. ಹಿಂದಿನ ವರ್ಷ ಈ ಎಲ್ಲಾ ಬಾವಡಿಗಳನ್ನು ಸ್ವಚ್ಛಗೊಳಿಸಿದ ಬಳಿಕ ಗಣೇಶ ವಿಸರ್ಜನೆಗೆ ಅವಕಾಶ ನಿರಾಕರಿಸಿ, ನಿಷೇಧ ಹಾಕಲಾಗಿತ್ತು. ಇದು ಈ ವರ್ಷವೂ ಮುಂದುವರೆದಿದೆ.

ಪರ್ಯಾಯವಾಗಿ ಕೃತಕ ಹೊಂಡ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶವನ್ನು ಮಹಾನಗರ ಪಾಲಿಕೆ ಆಡಳಿತ ಮಾಡಿಕೊಟ್ಟಿತ್ತು. ಆದರೆ ಹೊಂಡಗಳ ತೆರವು ಸಂದರ್ಭ ಗಣಪನ ಮೂರ್ತಿಗಳಿಗೆ ಧಕ್ಕೆಯಾಗಿತ್ತು. ರಾತ್ರೋರಾತ್ರಿ ಹೊರ ಸಾಗಿಸಿದ್ದರಿಂದ ಗಣೇಶ ಭಕ್ತರ ಧಾರ್ಮಿಕ ಭಾವನೆಗೂ ನೋವುಂಟಾಗಿತ್ತು.

ಆಗಿನಿಂದಲೂ ಗಣೇಶ ಭಕ್ತರ ಸಮೂಹ ಶಾಶ್ವತ ಪರಿಹಾರವಾಗಿ ಗಣೇಶ ವಿಸರ್ಜನೆ ಬಾವಿ ನಿರ್ಮಿಸುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕುತ್ತಿದೆ. ಆದರೆ ಈ ನಿಟ್ಟಿನಲ್ಲಿ ಕಿಂಚಿತ್‌ ಕೆಲಸವೂ ನಡೆಯದಿರುವುದು ಸಾಕಷ್ಟು ಅಸಮಾಧಾನ ಸೃಷ್ಟಿಸಿದೆ.

‘ನಗರದಲ್ಲಿ ಕಳೆದ ವರ್ಷ (ಮನೆಗಳನ್ನು ಹೊರತು ಪಡಿಸಿ) 587 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷ ಈ ಸಂಖ್ಯೆ 600ಕ್ಕೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ. ಹಿಂದಿನಿಂದಲೂ ಗಣೇಶ ಮೂರ್ತಿ ವಿಸರ್ಜನೆ ತಾಜ್‌ ಬಾವಡಿಯಲ್ಲಿ ನಡೆಯುತ್ತಿತ್ತು.

ಕಳೆದ ವರ್ಷ ಮೂರ್ತಿಗಳನ್ನು ವಿಸರ್ಜಿಸದಂತೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆದೇಶಿಸಿ, ತಾತ್ಕಾಲಿಕ ಹೊಂಡ ನಿರ್ಮಿಸಿದ್ದರಿಂದ ಅಲ್ಲಿಯೇ ವಿಸರ್ಜನೆ ನಡೆದಿತ್ತು. ಪ್ರತಿ ವರ್ಷ ಹೊಂಡಗಳನ್ನು ನಿರ್ಮಿಸುವ ಬದಲು ಬೆಳಗಾವಿ, ಹುಬ್ಬಳ್ಳಿ ಮಾದರಿಯಂತೆ ಗಣೇಶ ವಿಸರ್ಜನೆಗೆ ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಗಜಾನನ ಮಹಾಮಂಡಳದ ಅಧ್ಯಕ್ಷ ಶರತ್‌ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡ್ಮೂರು ವರ್ಷಗಳ ಹಿಂದೆ ಧಾರವಾಡದ ಗಾಂಧಿ ನಗರದಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ಗಣೇಶ ವಿಸರ್ಜನೆ ಹೊಂಡದಲ್ಲಿ ಮಗು ಬಿದ್ದು ಮೃತಪಟ್ಟ ಕುರಿತು ಪತ್ರಿಕೆಯಲ್ಲಿ ಓದಿದ್ದೆ. ನಗರದಲ್ಲಿ ಅಂತಹ ಅವಘಡ ಸಂಭವಿಸದಂತೆ ಮಹಾನಗರ ಪಾಲಿಕೆ ಸುರಕ್ಷತಾ ಕ್ರಮ ಕೈಗೊಳ್ಳುವುದು ಉತ್ತಮ. ತಾತ್ಕಾಲಿಕ ಹೊಂಡಗಳಿಗಿಂತ ಶಾಶ್ವತ ಪರಿಹಾರ ಕಂಡುಕೊಳ್ಳಲಿ’ ಎನ್ನುತ್ತಾರೆ ನಗರದ ಬಸವರಾಜ ಬಿರಾದಾರ.

‘ನಗರದಲ್ಲಿ ಗಣೇಶ ವಿಸರ್ಜನೆಗೆ 7 ಶಾಶ್ವತ ಮತ್ತು 15 ತಾತ್ಕಾಲಿಕ ಹೊಂಡಗಳು ಸೇರಿ ಒಟ್ಟು 22 ಹೊಂಡಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ 35 ಮೊಬೈಲ್‌ ಟ್ಯಾಂಕರ್‌ಗಳನ್ನು ಸಹಿತ ಬಳಸಿಕೊಳ್ಳಲಾಗುವುದು. ಮೂರ್ತಿಗಳು ಕರಗಿದ ನಂತರ ಹೊಂಡ ತೆರವುಗೊಳಿಸುತ್ತೇವೆ. ಯಾವುದೇ ಅನಾಹುತ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಶೆಟ್ಟಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !