ಭಾನುವಾರ, ನವೆಂಬರ್ 17, 2019
24 °C
ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಪೊಲೀಸರಿಂದ ಬಿಗಿ ಭದ್ರತೆ

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಭಾರಿ ಪ್ರತಿಭಟನೆ: ಸಂಚಾರ ದಟ್ಟಣೆ

Published:
Updated:
Prajavani

ಬೆಂಗಳೂರು: ಶಾಸಕ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ವಿಶ್ವ ಒಕ್ಕಲಿಗರ ಒಕ್ಕೂಟ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿ ವೇಳೆ ನಗರದ ವಿವಿಧ ಕಡೆ ಸಂಚಾರ ದಟ್ಟಣೆ ಉಂಟಾಯಿತು. ಈ ನಡುವೆಯೂ ಶಾಂತಿಯುತವಾಗಿ ರ‍್ಯಾಲಿ ನಡೆಯಿತು.

ಮೈಸೂರು, ತುಮಕೂರು, ನೆಲಮಂಗಲ, ಚಿತ್ರದುರ್ಗ, ಹಾಸನ, ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿದಂತೆ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ಒಕ್ಕಲಿಗ ಸಮುದಾಯದವರು ಮತ್ತು ಕಾಂಗ್ರೆಸ್, ಜೆಡಿಎಸ್‍ನ ಕಾರ್ಯಕರ್ತರು ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಮಾಯಿಸಿದರು. ಕೆಲವು ಕಾರ್ಯಕರ್ತರು ಮೈಸೂರು ರಸ್ತೆ, ಮೌರ್ಯ ವೃತ್ತದಿಂದ ಬೈಕ್ ರ‍್ಯಾಲಿ ನಡೆಸಿದರು.

ಮಧ್ಯಾಹ್ನ 12.30ಕ್ಕೆ ಹೊರಟ ಮೆರವಣಿಗೆ ಸಜ್ಜನ್‍ರಾವ್ ವೃತ್ತ, ಜೆ.ಸಿ. ರಸ್ತೆ, ಹಡ್ಸನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ ಮೂಲಕ ಅರಮನೆ ರಸ್ತೆ, ಕಾಳಿದಾಸ ರಸ್ತೆ, ಶೇಷಾದ್ರಿ ರಸ್ತೆ ಮೂಲಕ ಮಧ್ಯಾಹ್ನ 2.30ರ ಸುಮಾರಿಗೆ ಫ್ರೀಡಂ ಪಾರ್ಕ್‌ ತಲುಪಿತು. ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆಕಾರರು ಘೋಷಣೆ ಮೊಳಗಿಸಿದರು.

ಒಕ್ಕಲಿಗ ಸಂಘಟನೆಗಳ ಕಾರ್ಯಕರ್ತರಷ್ಟೇ ಅಲ್ಲದೆ, ಕಾಂಗ್ರೆಸ್, ಜೆಡಿಎಸ್‍ ಪಕ್ಷಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ನ್ಯಾಷನಲ್ ಕಾಲೇಜು ಮೈದಾನ, ಗಾಂಧಿನಗರ, ಮೆಜೆಸ್ಟಿಕ್, ಫ್ರೀಡಂ ಪಾರ್ಕ್‌ ಸುತ್ತಮುತ್ತಲಿನ ಸುಮಾರು 4ರಿಂದ 5 ಕಿ.ಮೀ. ಪರಿಧಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಪ್ರತಿಭಟನೆ ಸಾಗಿದ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಬೆಳಿಗ್ಗೆ ಒಂಬತ್ತು ಗಂಟೆಯಿಂದಲೇ ಮೈಸೂರು ರಸ್ತೆ, ತುಮಕೂರು ರಸ್ತೆ ಕಡೆಯಿಂದ ಪ್ರತಿಭಟನೆಕಾರರನ್ನು ಹೊತ್ತ ನೂರಾರು ವಾಹನಗಳು ಏಕಾಏಕಿ ನಗರದ ಒಳಗೆ ಬಂದಿದ್ದರಿಂದ ಈ ಭಾಗಗಳಲ್ಲಿ ನಿರೀಕ್ಷೆಗೂ ಮೀರಿದ ಸಂಚಾರ ದಟ್ಟಣೆ ಉಂಟಾಯಿತು. ಹೀಗಾಗಿ, ಈ ಭಾಗಗಳಲ್ಲಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದರು.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗ‌ಳು, ಖಾಸಗಿ ಕಂಪನಿಗಳ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಚೇರಿಗೆ ತಲುಪಲು ಬದಲಿ ಮಾರ್ಗ ಬಳಸಿದರು. ಆದರೂ, ಕೆಲವೆಡೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದರು. ಕೆಲವೆಡೆ ಬಿಎಂಟಿಸಿ, ಕೆಎಸ್‍ಆರ್‌ಟಿಸಿ ಬಸ್, ಆಟೊ ರಿಕ್ಷಾಗಳು ಕೂಡ ರಸ್ತೆಯಲ್ಲೇ ನಿಲ್ಲಬೇಕಾಯಿತು.

ಭಾರಿ ಸಂಖ್ಯೆಯಲ್ಲಿ ಸಂಘಟನೆಗಳ ಕಾರ್ಯಕರ್ತರು, ಶಿವಕುಮಾರ್‌ ಬೆಂಬಲಿಗರು ಸೇರುವ ನಿರೀಕ್ಷೆ ಇದ್ದುದರಿಂದ ನಿಗದಿತ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಉಮೇಶ್ ಕುಮಾರ್, ಎಸ್. ಮರುಗನ್, ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್ ಪಾಟೀಲ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌  ಬಿ.ಆರ್. ರವಿಕಾಂತೇಗೌಡ ನೇತೃತ್ವದಲ್ಲಿ ನ್ಯಾಷನಲ್ ಕಾಲೇಜು ಮೈದಾನದ ಸುತ್ತ-ಮುತ್ತ ಪೊಲೀಸ್‌ ಪಡೆ ನಿಯೋಜಿಸಲಾಗಿತ್ತು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರೇ ತಾತ್ಕಾಲಿಕವಾಗಿ ಅಂಗಡಿಗಳ ಬಾಗಿಲು ಮುಚ್ಚಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಕಾನೂನು ಸುವ್ಯವಸ್ಥೆ, ಸಂಚಾರ ಪೊಲೀಸರ ಜತೆ ಗೃಹರಕ್ಷಕ ದಳ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಮಫ್ತಿಯಲ್ಲಿ ಮಹಿಳಾ ಸಿಬ್ಬಂದಿಯೂ ಇದ್ದರು. ಕೆಲವು ಕಡೆ ಅಗ್ನಿಶಾಮಕದಳ, ಆಂಬುಲೆನ್ಸ್‌ಗಳನ್ನು ಇರಿಸಲಾಗಿತ್ತು. ಪೊಲೀಸರು ಮೆರವಣಿಗೆಯನ್ನು ಸಂಪೂರ್ಣ ಚಿತ್ರೀಕರಿಸಿಕೊಂಡರು.

ಕೇಂದ್ರ ವಿರುದ್ಧ ಆಕ್ರೋಶ

ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ನಾಡಪ್ರಭು ಕೆಂಪೇಗೌಡರ ಪೋಷಾಕು ಧರಿಸಿದರೆ, ಮತ್ತೊಬ್ಬ ವ್ಯಕ್ತಿ ಅರೆಬೆತ್ತಲೆಯಾಗಿ ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆಗಳನ್ನು ಮೈಮೇಲೆ ಬರೆದುಕೊಂಡು ಘೋಷಣೆ ಕೂಗುತ್ತಿದ್ದುದು ಕಂಡುಬಂತು. ಕೆಲವರು ಶಿವಕುಮಾರ್ ಭಾವಚಿತ್ರಗಳನ್ನು ಹಿಡಿದಿದ್ದರೆ, ಇನ್ನೂ ಕೆಲವರು ಕೇಂದ್ರ ಸರ್ಕಾರ ವಿರುದ್ಧದ ಘೋಷಣೆಗಳನ್ನು ಹೊಂದಿದ್ದ ಭಿತ್ತಿಪತ್ರಗಳ ಸಹಿತ ಮೆರವಣಿಗೆಯಲ್ಲಿ ಸಾಗಿದರು.

ಪ್ರತಿಕ್ರಿಯಿಸಿ (+)