ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ ಎಂಬುದು ಭ್ರಮೆ : ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌

ಬೆಂಗಳೂರು ಗ್ರಾಮಾಂತರ ಕ್ಷೇತ್ರ
Last Updated 3 ಮೇ 2019, 15:56 IST
ಅಕ್ಷರ ಗಾತ್ರ

*ಜೆಡಿಎಸ್‌ ಕಾರ್ಯಕರ್ತರ ಬೆಂಬಲ ಹೇಗಿದೆ?

ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ. ಮೈತ್ರಿ ರಾಜಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವೇ ಮಾದರಿ.

* ಡಿ.ಕೆ. ಸಹೋದರರು ಕೇವಲ ನ್ಯಾಯಾಲಯಗಳ ಕೇಸ್‌ಗಳಲ್ಲೇ ಅಲೆದಾಡುತ್ತಿದ್ದಾರೆ. ಜನರ ಅಭಿವೃದ್ಧಿ ಮಾಡುವುದು ಅವರಿಂದ ಆಗದ ಮಾತು ಎಂಬುದು ಪ್ರತಿಪಕ್ಷದ ಅಭ್ಯರ್ಥಿಯ ಆರೋಪ?

ಬಿಜೆಪಿಯವರಿಗೆ ಅಭಿವೃದ್ಧಿ ಎಂಬುದೇ ಗೊತ್ತಿಲ್ಲ. ಅವರಿಗೆ ಏನಿದ್ದರೂ ರಾಮಮಂದಿರ ಮಾತ್ರ ಗೊತ್ತು. ಅಭಿವೃದ್ಧಿ ಏನು ಎಂದು ಕ್ಷೇತ್ರದಲ್ಲಿ ಓಡಾಡಿ ಜನರನ್ನು ಕೇಳಿ ತಿಳಿಯಲಿ. ಇಲ್ಲಿನ ಮತದಾರರು ಇದೇ 18ರಂದು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.

ನಗರ ಪ್ರದೇಶದ ಮತದಾರರಿಗೆ ಮೋದಿ ಮೋಹ ಹೆಚ್ಚು ಎಂದು ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಾರಲ್ಲ?
ಸು: ನಮಗೆ ನಗರದಲ್ಲಿ ಕೂಡ ಉತ್ತಮ ಪ್ರಕ್ರಿಯೆ ದೊರೆತಿದ್ದು, ಅಲ್ಲಿನ ಮತದಾರರು ಮೈತ್ರಿ ಅಭ್ಯರ್ಥಿಯ ಪರವಾಗಿ ಕೈಜೋಡಿಸಲಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಬಿಜೆಪಿಗೂ ನೇರ ಹಣಾಹಣಿ ಇದ್ದು, ಸ್ವಲ್ಪ ವ್ಯತ್ಯಾಸವಾಗಿದೆ. ಆದರೆ ಕಾಂಗ್ರೆಸ್‌ ಪರವಾಗಿ ಕಳೆದ ವಿಧಾನಸಭಾ ಚುನಾವಣೆಗಿಂತ ಈಗ ಉತ್ತಮವಾದ ವಾತಾವರಣ ಇದೆ.

* ಕ್ಷೇತ್ರದಲ್ಲಿ ಮೋದಿ ಅಲೆ ಇದೆಯೇ?

ಮೋದಿ ಅಲೆ ಬಗ್ಗೆ ನನಗೆ ಗೊತ್ತಿಲ್ಲ. ಅದೊಂದು ಭ್ರಮೆ ಅಷ್ಟೇ. ನನ್ನ ಕ್ಷೇತ್ರದಲ್ಲಿ ಅಂತಹ ವಾತಾವರಣ ಇಲ್ಲ.ಬದಲಾಗಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಪರವಾದ ಅಲೆ ಇದೆ. ಜನರು ನನ್ನನ್ನು ಸ್ವೀಕರಿಸಿದ್ದಾರೆ.

* ನಿಮ್ಮ ₹338 ಕೋಟಿ ಆಸ್ತಿ ಘೋಷಣೆ ಬಿಜೆಪಿಗೆ ಅಸ್ತ್ರವಾಗಿದೆ. ಡಿ.ಕೆ. ಸಹೋದರರು ವೈಯಕ್ತಿಕ ಲಾಭ ಗಳಿಕೆಗೆ ರಾಜಕಾರಣದಲ್ಲಿ ಇದ್ದಾರೆ ಎಂಬುದು ಅವರ ಆರೋಪ?

ಬಿಜೆಪಿಯವರಿಗೆ ಕೆಲಸ ಇಲ್ಲ. ಆಸ್ತಿ ಮೌಲ್ಯ ಜಾಸ್ತಿಯಾದ ಕಾರಣ ಒಟ್ಟಾರೆ ಮೊತ್ತ ಜಾಸ್ತಿಯಾಗಿದೆ ಅಷ್ಟೇ. ಚುನಾವಣಾ ಆಯೋಗವು ಆಸ್ತಿಯ ಇಂದಿನ ಮಾರುಕಟ್ಟೆ ಮೌಲ್ಯವನ್ನು ಕೊಡುವಂತೆ ಹೇಳಿದ್ದರಿಂದ ನಿಖರವಾದ ಬೆಲೆ ಕೊಟ್ಟಿದ್ದೇವೆ. ಅದರಲ್ಲಿ ಟೀಕೆ ಮಾಡುವಂತಹದ್ದು ಏನಿಲ್ಲ.

* ಕಳೆದ ಐದು ವರ್ಷಗಳಲ್ಲಿ ಸಂಸದರಾಗಿ ನಿಮ್ಮ ಸಾಧನೆ ಏನು?

ಐದು ವರ್ಷ ಕಾಲ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಿದ್ದೇನೆ. ಅನೇಕ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ನನ್ನ ಪಾಲೂ ಇದೆ. ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಇಲ್ಲಿನ ರಸ್ತೆಗಳು ಅಭಿವೃದ್ಧಿ ಆಗುತ್ತಿದ್ದು, ಬೆಂಗಳೂರು–ಮೈಸೂರು ಹೆದ್ದಾರಿ ಷಟ್ಪಥವಾಗಿ ವಿಸ್ತರಣೆ ಆಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆಯಲ್ಲಿ ರಾಮನಗರ ಜಿಲ್ಲೆ ಮುಂದಿದೆ.

* ಮುಂದಿನ ಐದು ವರ್ಷಗಳ ಗುರಿ ಏನು?

ಸಮಗ್ರ ಕೃಷಿ, ಗುಣಮಟ್ಟದ ಶಿಕ್ಷಣ, ಪ್ರತಿಯೊಬ್ಬರಿಗೂ ಮನೆಬಾಗಿಲಿಗೆ ಆರೋಗ್ಯ ಸೇವೆ–ಹೀಗೆ ಹತ್ತು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವ ಗುರಿ ಹೊಂದಿದ್ದೇನೆ. ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬರುವುದು ನಿಶ್ಚಿತವಾಗಿದ್ದು, ಈ ಎಲ್ಲ ಯೋಜನೆಗಳೂ ಸಾಕಾರಗೊಳ್ಳಲಿವೆ.

* ಮತದಾರರು ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ನಾನೇನು ಎಲ್ಲೋ ಹೊರಗಿನಿಂದ ಬಂದು ಅಭ್ಯರ್ಥಿ ಆದವನಲ್ಲ. ಕಳೆದ ಐದು ವರ್ಷ ಕಾಲ ಕ್ಷೇತ್ರದ ಜನರಲ್ಲಿ ಒಬ್ಬನಾಗಿ ದುಡಿದಿದ್ದೇನೆ. ಜನರ ಕಷ್ಟಗಳಿಗೆ ಆ ಕ್ಷಣದಲ್ಲಿಯೇ ಸ್ಪಂದಿಸುತ್ತೇನೆ. ಕೇಂದ್ರದ ಹತ್ತು ಹಲವು ಯೋಜನೆಗಳು ಸಕಾಲದಲ್ಲಿ ಜನಸಾಮಾನ್ಯರನ್ನು ತಲುಪುವಂತೆ ಶ್ರಮಿಸಿದ್ದೇನೆ. ಹೀಗಾಗಿ ಜನರು ಈ ಬಾರಿಯೂ ಕೈ ಹಿಡಿಯುವ ವಿಶ್ವಾಸ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT