ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರಿಂದ ಹೇಳಿಸ್ಕೋಬೇಡಿ, ಕೆಲಸ ಶುರು ಮಾಡಿ’

ಒತ್ತುವರಿ ಸಂಬಂಧದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
Last Updated 29 ನವೆಂಬರ್ 2018, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆರೆ, ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವ ಬಗ್ಗೆ ಜನರಿಂದ ಹೇಳಿಸ್ಕೋಬೇಡಿ, ತೆರವು ಕೆಲಸ ಶುರು ಮಾಡಿ. ನಿಮ್ಮ ಜೊತೆ ನಾನಿದ್ದೇನೆ’ ಎಂದು ಜಿಲ್ಲಾಧಿಕಾರಿ ವಿಜಯಶಂಕರ್ ಅವರು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

‘ಫೋನ್‌–ಇನ್’ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಸಾರ್ವಜನಿಕರು, ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

**

ಅಬಕಾರಿ ಚಾಲಕರ ನೇಮಕಾತಿಗೆ ದುಂಬಾಲು

‘ಬೆಂಗಳೂರು ನಗರ ವ್ಯಾಪ್ತಿಯ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಖಾಲಿ ಇದ್ದ ಚಾಲಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಹುದ್ದೆಯ ಆಕಾಂಕ್ಷಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಬೆಂಗಳೂರಿನ ಸುನೀಲ್‌ಕುಮಾರ್, ‘2012ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಆರು ವರ್ಷವಾದರೂ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ನೀವಾದರೂ ನಮಗೆ ಆದೇಶ ಪ್ರತಿ ಕೊಡಿ’ ಎಂದು ಕೋರಿದರು.

ವಿಜಯಪುರದ ಇಬ್ರಾಹಿಂ ನದಾಫ, ‘ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಸಿಂಧುತ್ವ ಸಹ ಆಗಿದೆ. ನನಗೆ ಅಂಗವಿಕಲ ತಂಗಿ ಇದ್ದು, ವಯೋಮಿತಿಯೂ ಮುಗಿಯುತ್ತ ಬಂದಿದೆ. ದಯವಿಟ್ಟು ನನಗೆ ಕೆಲಸ ಕೊಡಿ’ ಎಂದರು.

ಇಬ್ಬರ ಪ್ರಶ್ನೆಗೂ ಉತ್ತರಿಸಿದಜಿಲ್ಲಾಧಿಕಾರಿ,‘ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶವೊಂದನ್ನು ನೀಡಿದೆ. ಅದರನ್ವಯ ನೇಮಕಾತಿ ನಡೆಸಬೇಕಿದೆ. ಅದರ ಕಡತ ನನ್ನ ಕೈ ಸೇರಿ 24 ಗಂಟೆ ಆಗಿದೆಯಷ್ಟೇ. ಅದನ್ನು ಪರಿಶೀಲನೆ ನಡೆಸಿ, 2–3 ದಿನಗಳಲ್ಲಿ ಪಟ್ಟಿ ಪ್ರಕಟಿಸಲು
ಪ್ರಯತ್ನಿಸುತ್ತೇನೆ’ ಎಂದರು.

**

ಗಣಿ ದೂಳಿಗೆ ರಾಗಿ ಬೆಳೆ ನಾಶ

‘ತಾವರೆಕೆರೆ ಹೋಬಳಿಯಲ್ಲಿ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಊರು, ಜಮೀನು, ಅರಣ್ಯದಲ್ಲೆಲ್ಲ ಬರೀ ದೂಳೇ ಆವರಿಸಿಕೊಂಡಿದೆ. ಜನರ ಆರೋಗ್ಯವೂ ಹದಗೆಡುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಾರಪ್ಪ, ‘ಫೋನ್‌–ಇನ್‌’ನಲ್ಲಿ ಅಳಲು ತೋಡಿಕೊಂಡರು.

‘ವರ್ಷದ ಬೆಳೆ ನಂಬಿ ಬದುಕುವ ರೈತ ನಾನು. ಈ ವರ್ಷ ಮೂರು ಎಕರೆಯಲ್ಲಿ ರಾಗಿ ಬೆಳೆದಿದೆ. ಕಲ್ಲು ಗಣಿಗಾರಿಕೆಯ ದೂಳು, ರಾಗಿ ಬೆಳೆಯನ್ನೇ ನಾಶ ಮಾಡಿದೆ. ಆ ಬಗ್ಗೆ ಗಣಿಗಾರಿಕೆ ಮಾಡುವವರನ್ನು ಪ್ರಶ್ನಿಸಿದರೆ, ಕೊಲೆ ಬೆದರಿಕೆ ಹಾಕುತ್ತಾರೆ’ ಎಂದು ದೂರಿದರು.

‘ನನ್ನಂತೆ 25ಕ್ಕೂ ಹೆಚ್ಚು ರೈತರದ್ದು ಇದೇ ಸಮಸ್ಯೆ. ನಾವು ಯಾರ ಪರವೂ ಇಲ್ಲ. ದುಡಿದು ತಿನ್ನುವ ರೈತರು ನಾವು. ದಯವಿಟ್ಟು ನಮಗೆ ಪರಿಹಾರ ಸೂಚಿಸಿ’ ಎಂದು ಕೋರಿದರು.

ಜಿಲ್ಲಾಧಿಕಾರಿ ವಿಜಯಶಂಕರ್, ‘ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಹಾಗೂ ತಹಶೀಲ್ದಾರ್‌ ಅವರಿಗೆಸೂಚನೆ ನೀಡುತ್ತೇನೆ. ವರದಿ ಪಡೆದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದರು.

**

ಕವಿತಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ,ಎಚ್‌ಎಸ್‌ಆರ್‌ ಲೇಔಟ್‌: ಸೋಮಸುಂದರ ಪಾಳ್ಯ ಹಾಗೂ ಮಂಗಮ್ಮನ ಕೆರೆ ಒತ್ತುವರಿ ಆಗಿದೆ. ಈ ಹಿಂದಿನ ಜಿಲ್ಲಾಧಿಕಾರಿ ವಿ. ಶಂಕರ್ ಕ್ರಮ ಕೈಗೊಂಡಿದ್ದರೂ ಪೂರ್ತಿಯಾಗಿ ಒತ್ತುವರಿ ತೆರವು ಆಗಿಲ್ಲ.

ಜಿಲ್ಲಾಧಿಕಾರಿ: ಒತ್ತುವರಿಯಾಗಿರುವ ಬೆಂಗಳೂರಿನ ಕೆರೆಗಳ ಪಟ್ಟಿ ಮಾಡಲಾಗುತ್ತಿದೆ. ತೆರವು ಬಳಿಕ ಅದೇ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುವುದು.

ಅನಿಲ್‌ಗೌಡ, ದಾಸನಪುರ ಹೋಬಳಿ: ಅವಲಹಳ್ಳಿ ಗ್ರಾಮದಲ್ಲಿರುವ 10 ಎಕರೆ 15 ಗುಂಟೆ ಗೋಮಾಳ ಜಾಗವನ್ನು ಕಬಳಿಸಲು ಯತ್ನ ನಡೆದಿದೆ. ಆ ಸಂಬಂಧ ಗ್ರಾಮಸ್ಥರು, ಮೊನ್ನೆಯಷ್ಟೇ ನಿಮ್ಮ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ: ಆ ಜಾಗಕ್ಕೆ ಕಾಂಪೌಂಡ್ ಹಾಕಿಸಲು ಕ್ರಮ ಕೈಗೊಳ್ಳುತ್ತೇನೆ.

**

ಶೇಖರ್, ದಾಸನಪುರ ಹೋಬಳಿ: ಅವಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದು, ಅದನ್ನು ಸ್ಮಶಾನಕ್ಕೆ ನೀಡಿ.

ಜಿಲ್ಲಾಧಿಕಾರಿ: ಸ್ಮಶಾನಕ್ಕೆ ಜಾಗ ನೀಡುವ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡುತ್ತೇನೆ.

**

ಶೇಖರ್, ಚೀಮಸಂದ್ರ: ಗ್ರಾಮದ ಸರ್ವೇ ನಂಬರ್ 77, 11ರ 270 ಎಕರೆ ಸರ್ಕಾರಿ ಜಾಗ ಇದೆ. ಅದರಲ್ಲಿ 32 ಎಕರೆ ಮಾತ್ರ ಉಳಿದಿದ್ದು, ಬಾಕಿ ಜಾಗ ಒತ್ತುವರಿಯಾಗಿದೆ.

ಜಿಲ್ಲಾಧಿಕಾರಿ: ತಹಶೀಲ್ದಾರ್‌ ಅವರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಪಡೆದು ಕ್ರಮ.

**

ನಂಜೇಗೌಡ, ಬಾಣಸವಾಡಿ: ಸರ್ವೇ ನಂಬರ್ 53ರಲ್ಲಿರುವ ಸ್ಮಶಾನ ಭೂಮಿಯನ್ನು ಬಿಡಿಎ ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿದೆ. ಅದೇ ಜಾಗದಲ್ಲಿ ಕೆಲವರು, ಲೇಔಟ್ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲೆಲ್ಲ ಬೆಸ್ಕಾಂನವರು ವಿದ್ಯುತ್ ಕೊಟ್ಟಿದ್ದಾರೆ. ದಯವಿಟ್ಟು, ವಿದ್ಯುತ್ ಸಂಪರ್ಕ ಕಡಿತ ಮಾಡಿಸಿ ಸರ್ಕಾರಿ ಭೂಮಿ ರಕ್ಷಿಸಿ.

ಜಿಲ್ಲಾಧಿಕಾರಿ: ಒತ್ತುವರಿ ತೆರವು ಬಗ್ಗೆ ತಹಶೀಲ್ದಾರ್‌ ರಾಮಲಕ್ಷ್ಮಣ ಅವರಿಗೆ ಸೂಚನೆ ನೀಡುತ್ತೇನೆ. ಬಿಡಿಎ ಅವರಿಂದ ದಾಖಲೆ ಪಡೆದು ಪರಿಶೀಲನೆ ನಡೆಸಲಾಗುವುದು.

**

ಪುಟ್ಟರಾಜು, ಕೆ.ಆರ್.ಪುರ: ದೊಡ್ಡಬಿದರ ಕಲ್ಲು ಹೋಬಳಿಯಲ್ಲಿ ಕಾಲುವೆ ಹಾಗೂ ಕೆರೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಲೇಔಟ್ ನಿರ್ಮಿಸಲಾಗಿದೆ. ಅಲ್ಲಿಯ ನಿವೇಶನಗಳನ್ನು ಉಪ ನೋಂದಣಾಧಿಕಾರಿಯವರು ನೋಂದಣಿ ಮಾಡಿಕೊಡುತ್ತಿದ್ದಾರೆ.

ಜಿಲ್ಲಾಧಿಕಾರಿ: ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗೆ ಸೂಚನೆ ನೀಡಲಾಗುವುದು. ಅಕ್ರಮವಾಗಿ ಲೇಔಟ್‌ ಮಾಡಿದವರಿಗೆ ನೋಟಿಸ್‌ ಕೊಟ್ಟು ಕ್ರಮ ಕೈಗೊಳ್ಳುತ್ತೇನೆ.

**

ಮುನಿಸ್ವಾಮಿ, ವರ್ತೂರು ಹೋಬಳಿ: ಕೊಡತಿ ಗ್ರಾಮದಲ್ಲಿ ಕೆರೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಲೇಔಟ್ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿ: ಬೆಂಗಳೂರು ಸುತ್ತಮುತ್ತ ಅಭಿವೃದ್ಧಿ ಆಗುತ್ತಿದೆ. ಅದರ ದುರುಪಯೋಗ ಪಡೆದುಕೊಂಡ ಕೆಲವರು, ಈ ರೀತಿ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಅಕ್ರಮ ಲೇಔಟ್‌ಗಳಿವೆ, ಅಲ್ಲೆಲ್ಲ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡುತ್ತೇನೆ.

ಭಾಸ್ಕರ್, ದಾಸನಪುರ ಹೋಬಳಿ: ಲಕ್ಷ್ಮಿಪುರ ಕೆರೆ ಜಾಗವನ್ನು ಭೂ ಮಾಫಿಯಾದರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲಿ ನಿವೇಶನಗಳನ್ನು ಮಾಡಿ, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಬೇರೆಯವರ ನೋಂದಣಿ ಮಾಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ: ನಾನೇ ಖುದ್ದು ಭೇಟಿ ಮಾಡುತ್ತೇನೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಜರುಗಿಸುತ್ತೇನೆ.

**

ವರ್ಷವಾದರೂ ಬಾರದ ಚೀಟಿ

ಮಹಾಲಕ್ಷ್ಮಿ, ದಾಸರಹಳ್ಳಿ: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ವರ್ಷವಾಯಿತು. ಇನ್ನು ಬಂದಿಲ್ಲ.

ಜಿಲ್ಲಾಧಿಕಾರಿ: ಸ್ವೀಕೃತಿ ಸಂಖ್ಯೆ ಸಮೇತ ಕಂದಾಯ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಗಿರೀಜಾ ದೇವಿ ಅವರನ್ನು ಭೇಟಿ ಮಾಡಿ

**

ಅಂಬಿಕಾ, ಚಂದ್ರ ಲೇಔಟ್: ನಮ್ಮ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಗೌರಮ್ಮ ಬಳ್ಳಾರಿ ಎಂಬುವರಿದ್ದು, ಅವರು ವಿಧವೆ. ಮಾಸಾಶನ ಹಾಗೂ ಪಡಿತರ ಚೀಟಿ ಇಲ್ಲ.

ಜಿಲ್ಲಾಧಿಕಾರಿ: ನಮ್ಮ ಅಧಿಕಾರಿಗಳು ಎರಡು ದಿನದಲ್ಲೇ ನಿಮ್ಮ ಪೇಯಿಂಗ್‌ ಗೆಸ್ಟ್‌ಗೆ ಭೇಟಿ ನೀಡಿ ಮಾಸಾಶನ ಹಾಗೂ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT