ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೆಕ್ಟರ್‌ ಪತ್ನಿಗೆ ಕಚ್ಚಿದ ‘ಜರ್ಮನ್‌ ಶೆಫರ್ಡ್‌’

ಸಿಆರ್‌ಪಿಎಫ್ ಉಪ ಕಮಾಂಡೆಂಟ್ ವಿರುದ್ಧ ಎಫ್ಐಆರ್
Last Updated 31 ಡಿಸೆಂಬರ್ 2018, 1:51 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಉಪ ಕಮಾಂಡೆಂಟ್ ರಮೇಶ್‌ ಕುಮಾರ್‌ ಅವರ ಸಾಕು ನಾಯಿ, ಇನ್‌ಸ್ಪೆಕ್ಟರ್‌ ಪತ್ನಿ ನೇಹಾ ಜೈನ್ ಎಂಬುವರಿಗೆ ಕಚ್ಚಿರುವ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಡಿ. 16ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಾಳು ನೇಹಾ ಅವರ ಮಗಳುಶಿವಾಂಗಿ ದೂರು ನೀಡಿದ್ದಾರೆ. ಪ್ರಾಣಿಗಳ ಸಂರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ (ಐಪಿಸಿ 289) ಆರೋಪದಡಿ ನಾಯಿ ಮಾಲೀಕ ರಮೇಶ್‌ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ನಾನು ಹಾಗೂ ತಾಯಿ, ಯಲಹಂಕ ಉಪನಗರದಲ್ಲಿರುವಸಿಆರ್‌ಪಿಎಫ್‌ ಕ್ಯಾಂಪಸ್‌ನಲ್ಲಿ ನಡೆದುಕೊಂಡು ಹೊರಟಿದ್ದೆವು. ರಮೇಶ್‌ಕುಮಾರ್ ಅವರು ಸಾಕಿದ್ದ ಜರ್ಮನ್ ಶೆಫರ್ಡ್‌ ತಳಿಯ ನಾಯಿ, ಏಕಾಏಕಿ ತಾಯಿ ಮೇಲೆ ದಾಳಿ ಮಾಡಿತು. ದೇಹದ ಮೇಲೆಲ್ಲ ಕಚ್ಚಿ ಗಾಯಗೊಳಿಸಿತು’ ಎಂದು ಶಿವಾಂಗಿ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು, ‘ನೇಹಾ, ನಗರದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಆರ್‌ಪಿಎಫ್‌ನಲ್ಲಿ ಇನ್‌ಸ್ಪೆಕ್ಟರ್‌ ಆಗಿರುವ ಪತಿ ರಾಜೇಶ್‌ ಜೈನ್‌ ಹಾಗೂ ಮಗಳು ಶಿವಾಂಗಿ ಜೊತೆ ನೆಲೆಸಿದ್ದಾರೆ’ ಎಂದು ಹೇಳಿದರು.

‘ನಾಯಿ ಕಚ್ಚಿದ್ದರಿಂದಾಗಿ ನೇಹಾ ಅವರ ಕಾಲು, ಬೆನ್ನು, ತೊಡೆ ಭಾಗಕ್ಕೆ ತೀವ್ರ ಗಾಯವಾಗಿದೆ. ಆಸ್ಪತ್ರೆಯಲ್ಲಿ ಐದು ದಿನ ಚಿಕಿತ್ಸೆ ಪಡೆದುಕೊಂಡಿರುವ ಅವರು, ಸದ್ಯ ಮನೆಗೆ ಬಂದಿದ್ದಾರೆ. ಅಷ್ಟಾದರೂ ಅವರ ಆರೋಗ್ಯದಲ್ಲಿ ಇಂದಿಗೂ ಚೇತರಿಕೆ ಕಂಡುಬಂದಿಲ್ಲ. ನಿತ್ಯವೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದಾರೆ’ ಎಂದರು.

‘ಸಿಆರ್‌ಪಿಎಫ್‌ ಕ್ಯಾಂಪಸ್‌ನಲ್ಲಿ 2 ಸಾವಿರ ಕುಟುಂಬಗಳು ವಾಸವಿವೆ. ಕ್ಯಾಂಪಸ್‌ನ ಮೈದಾನ ಮತ್ತು ಸುತ್ತಮುತ್ತ ಬೆಳಿಗ್ಗೆ ಹಾಗೂ ಸಂಜೆ ಜರ್ಮನ್ ಶೆಫರ್ಡ್‌ ನಾಯಿ ಓಡಾಡುತ್ತದೆ. ಬೇರೆ ನಾಯಿಗಳನ್ನು ಕಂಡು, ಅವುಗಳ ಮೇಲೆ ದಾಳಿಯನ್ನೂ ಮಾಡುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ಮನುಷ್ಯರಿದ್ದರೂ ಬಿಡುವುದಿಲ್ಲ. ಆ ಬಗ್ಗೆ ಸ್ಥಳೀಯರೇ ಮಾಹಿತಿ ನೀಡಿದ್ದಾರೆ’ ಎಂದರು.

‘ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಲಾಗಿದೆ. ಘಟನೆ ಸಂಬಂಧ ವಿಚಾರಣೆಗೆ ಬರುವಂತೆ ರಮೇಶ್‌ ಕುಮಾರ್ ಅವರಿಗೂ ನೋಟಿಸ್ ಕೊಟ್ಟಿದ್ದೇವೆ. ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಆಸ್ಪತ್ರೆ ಹೊರಟಾಗಲೂ ಅಡ್ಡಿಪಡಿಸಿದರು: ‘ನಾಯಿ ದಾಳಿ ಮಾಡುತ್ತಿದ್ದಂತೆ, ಸಹಾಯಕ್ಕಾಗಿ ಕೂಗಾಡಲಾರಂಭಿಸಿದ್ದೆ. ಮಗಳೇ ನನ್ನ ಸಹಾಯಕ್ಕೆ ಬಂದಳು’ ಎಂದು ಗಾಯಾಳು ನೇಹಾ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಯವಾಗಿದ್ದ ಜಾಗದಿಂದ ರಕ್ತ ಸೋರುತ್ತಿತ್ತು. ನೋವು ಹೆಚ್ಚಾಗಿ ಚೀರಾಡುತ್ತಿದ್ದೆ. ಮಗಳೇ ನನ್ನನ್ನು ಕ್ಯಾಂಪಸ್‌ನಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಳು. ತಪಾಸಣೆ ನಡೆಸಿದ ಅಲ್ಲಿಯ ವೈದ್ಯರು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಆಗ ಕಾರಿನಲ್ಲಿ ಹೊರಟಿದ್ದೆವು. ನಮ್ಮ ಕಾರನ್ನು ಅಡ್ಡಗಟ್ಟಿದ್ದ ರಮೇಶ್‌ಕುಮಾರ್, ಕ್ಯಾಂಪಸ್‌ನಿಂದ ಹೊರಗಡೆ ಹೋಗಲು ಬಿಡುವುದಿಲ್ಲವೆಂದು ಬೆದರಿಸಿದ್ದರು. ಹೇಗೋ ಅಲ್ಲಿಂದ ಪಾರಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಐದು ದಿನ ಚಿಕಿತ್ಸೆ ಪಡೆದುಕೊಂಡು ಬಂದಿದ್ದೇವೆ’ ಎಂದು ನೇಹಾ ಜೈನ್ ಹೇಳಿದರು.

‘ಕ್ಯಾಂಪಸ್‌ನಲ್ಲಿ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನನಗಾದ ಸ್ಥಿತಿ ಬೇರೆ ಯಾರಿಗೂ ಆಗಬಾರದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT