ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಕೊಡಿಸುವ ಭರವಸೆ ಹುಸಿ: ₹3 ಲಕ್ಷ ಪರಿಹಾರ

ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ
Last Updated 27 ಅಕ್ಟೋಬರ್ 2018, 18:51 IST
ಅಕ್ಷರ ಗಾತ್ರ

ಬೆಂಗಳೂರು: ಬಾಡಿಗೆ ತಾಯ್ತನದಿಂದ ಮಗು ಕೊಡಿಸುವುದಾಗಿ ಭರವಸೆ ನೀಡಿ, ದೂರುದಾರರಿಂದ ₹ 4.75 ಲಕ್ಷ ಪಡೆದು ಮಾತಿಗೆ ತಪ್ಪಿದ ಇಲ್ಲಿನ ಇಂದಿರಾನಗರದ ‘ಡಾ.ರಮಾಸ್‌ ಫರ್ಟಿಲಿಟಿ ಐವಿಎಫ್‌ ಸೆಂಟರ್’ ₹ 3 ಲಕ್ಷ ಪರಿಹಾರ ನೀಡಬೇಕು ಎಂದು ನಾಲ್ಕನೆ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಮೈಸೂರಿನ ಫ್ರಾನ್ಸಿಸ್‌ ಡಿಸೋಜ(ಮೂಲ ಹೆಸರು ಬದಲಾಯಿಸಲಾಗಿದೆ) ಅವರಿಂದ ಕಟ್ಟಿಸಿಕೊಂಡಿರುವ ಹಣವನ್ನು ವಾರ್ಷಿಕ ಶೇ 10ರಷ್ಟು ಬಡ್ಡಿ ಸೇರಿಸಿ ಆರು ವಾರಗಳಲ್ಲಿ ವಾ‍‍‍‍‍ಪಸ್‌ ಕೊಡಬೇಕು. ಅಲ್ಲದೆ, ವ್ಯಾಜ್ಯದ ವೆಚ್ಚವಾಗಿ ₹ 5 ಸಾವಿರ ಪಾವತಿಸಬೇಕು ಎಂದು ಅಧ್ಯಕ್ಷ ಎಸ್‌.ಎಲ್. ಪಾಟೀಲ ಹಾಗೂ ಸದಸ್ಯೆ ರೂಪಾ ಅವರನ್ನು ಒಳಗೊಂಡ ವೇದಿಕೆ ಆದೇಶದಲ್ಲಿ ತಿಳಿಸಿದೆ.

ಪತ್ರಿಕೆಯಲ್ಲಿ ಪ್ರಕಟಿಸಿದ್ದ ಜಾಹಿರಾತು ನೋಡಿ ಡಿಸೋಜ ಫೋನ್‌ನಲ್ಲಿಐವಿಎಫ್‌ ಸೆಂಟರ್‌ ಅನ್ನು ಸಂಪರ್ಕಿಸಿದರು.ಬಾಡಿಗೆ ತಾಯಿಯಿಂದ ಮಗು ಕೊಡಿಸುವುದಾಗಿ ಭರವಸೆ ಕೊಟ್ಟು, ಇದಕ್ಕೆ ಒಟ್ಟು ₹ 7 ಲಕ್ಷ ಖರ್ಚಾಗಲಿದೆ. ಅವಳಿಜವಳಿ ಆದರೆ ಇನ್ನೂ ₹ 1.5 ಲಕ್ಷ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿ, ಆಸ್ಪತ್ರೆಗೆ ಬಂದು ಚರ್ಚಿಸಲು ಹೇಳಿದರು.

ಅದರಂತೆ, ದೂರುದಾರರು 2016ರ ಆಗಸ್ಟ್‌ 19ರಂದು ಐವಿಎಫ್‌ ಸೆಂಟರ್‌ಗೆ ತೆರಳಿದ್ದರು. ಬಾಡಿಗೆ ತಾಯಿಯಿಂದ ಮಗು ಪಡೆಯುವುದು ನೀರು ಕುಡಿದಷ್ಟು ಸುಲಭವಾದರೂ, ಮಗುವಿನ ಲಿಂಗದ ಬಗ್ಗೆ (ಗಂಡು ಅಥವಾ ಹೆಣ್ಣು) ಖಾತರಿ ಕೊಡಲು ಸಾಧ್ಯವಿಲ್ಲ. ಆರೋಗ್ಯಪೂರ್ಣ ಮಗು ಬಗ್ಗೆ ಖಾತರಿ ಕೊಡಬಹುದು ಎಂದು ಅವರಿಗೆ ತಿಳಿಸಲಾಯಿತು.

ಆ ದಿನವೇ ದೂರುದಾರರಿಂದ ಮುಂಗಡವಾಗಿ ₹ 2.25ಲಕ್ಷ ಕಟ್ಟಿಸಿಕೊಳ್ಳಲಾಯಿತು. ಅವರಿಂದ ವೀರ್ಯವನ್ನೂ ಸಂಗ್ರಹಿಸಲಾಯಿತು. ದೂರುದಾರರ ವಯಸ್ಸನ್ನು (ವಯಸ್ಸು 40 ವರ್ಷ) ಪರಿಗಣಿಸಿದರೆ ವೀರ್ಯದ ಮಾದರಿ ಸಾಮರ್ಥ್ಯದಿಂದ ಕೂಡಿರುವುದಾಗಿ ಪ್ರಯೋಗಾಲಯದ ತಂತ್ರಜ್ಞರು ತಿಳಿಸಿದ್ದರು. ಆಸ್ಪತ್ರೆಯವರು ಅವರಿಗೆ ಬಾಡಿಗೆ ತಾಯಿಯನ್ನು ತೋರಿಸಲಿಲ್ಲ.

2017ರ ಏಪ್ರಿಲ್‌ 25ರಂದು ಪುನಃ ದೂರುದಾರರಿಂದ ₹ 2.50 ಲಕ್ಷ ಕಟ್ಟಿಸಿಕೊಳ್ಳಲಾಯಿತು. ಅವರಿಂದ ಅನೇಕ ಸಲ ವೀರ್ಯ ಪಡೆಯಲಾಯಿತು. ಪ್ರತಿ ಸಲವೂ ವೈದ್ಯರು ದೂರುದಾರರಿಗೆ ಒಂದೊಂದು ನೆಪ ಹೇಳಿದರು. ಒಮ್ಮೆ, ಬಾಡಿಗೆ ತಾಯಿಗೆ ಅಪಘಾತವಾಗಿದೆ ಎಂದರು. ಮತ್ತೊಮ್ಮೆ, ಬಾಡಿಗೆ ತಾಯಿ ಸಿಗುತ್ತಿಲ್ಲ ಎಂದು ತಿಳಿಸಿದರು. ಇನ್ನೊಮ್ಮೆ, ಬಾಡಿಗೆ ತಾಯಂದಿರು ಹಣ ಪಡೆದು ಆಸ್ಪತ್ರೆಯಿಂದ ಓಡಿಹೋಗುತ್ತಿದ್ದಾರೆ ಎಂಬ ನೆಪ ಹೇಳಿದರು. ವೀರ್ಯದಲ್ಲಿ ಸ್ವಲ್ಪ ಸಮಸ್ಯೆ ಇರುವುದರಿಂದ ಔಷಧಿ ತೆಗೆದುಕೊಂಡು ಬರುವಂತೆಯೂ ದೂರುದಾರರಿಗೆ ಸಲಹೆ ಕೊಡಲಾಯಿತು.

ಐವಿಎಫ್‌ ಸೆಂಟರ್‌ ವೈದ್ಯರು ಮಾತು ತಪ್ಪುತ್ತಿರುವುದನ್ನು ಮನಗಂಡ ಡಿಸೋಜ, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದರು. ತಮ್ಮ ಆರೋಪವನ್ನು ಪುಷ್ಟೀಕರಿಸುವ ದಾಖಲೆಗಳನ್ನು ಒದಗಿಸಿದರು. ಅರ್ಜಿಯ ವಿಚಾರಣೆ ನಡೆಸಿದ ವೇದಿಕೆ ವಾದ– ಪ್ರತಿವಾದಗಳನ್ನು ಆಲಿಸಿದ ಬಳಿಕ ಬಡ್ಡಿ ಸಮೇತ ಹಣ ಹಿಂತಿರುಗಿಸಬೇಕು ಹಾಗೂ ₹ 3 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT