ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಸಂದ್ರ ಕೆರೆಗೆ ಸೇರುತ್ತಿದೆ ಕೊಳಚೆ

ಕೆರೆಯು ನೈಜ ಸೌಂದರ್ಯವನ್ನು ಕಳೆದುಕೊಂಡು ದುರ್ವಾಸನೆ
Last Updated 29 ಮೇ 2019, 19:59 IST
ಅಕ್ಷರ ಗಾತ್ರ

ಯಲಹಂಕ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ಕೆರೆಯ ಒಡಲಿಗೆ ಸುತ್ತಮುತ್ತಲ ಬಡಾವಣೆಗಳ ಕೊಳಚೆನೀರು ಸೇರುತ್ತಿದೆ. ಕೆರೆಯು ನೈಜ ಸೌಂದರ್ಯವನ್ನು ಕಳೆದುಕೊಂಡು ದುರ್ವಾಸನೆ ಬೀರುತ್ತಿದೆ.

ಅಭಿವೃದ್ಧಿ ಕಾರ್ಯಗಳ ಬಳಿಕ ವರ್ಷದ ಹಿಂದೆ ಕೆರೆ ಸುಂದರವಾಗಿ ಕಂಗೊಳಿಸುತ್ತಿತ್ತು. ಒಂದು ತಿಂಗಳಿನಿಂದ ದೊಡ್ಡಬೊಮ್ಮಸಂದ್ರ, ತಿಂಡ್ಲು, ವಿದ್ಯಾರಣ್ಯಪುರ, ಗಂಗಮ್ಮಗುಡಿ ಬಡಾವಣೆಗಳಿಂದ ಕೊಳಚೆನೀರು ಹರಿದು ಬಂದು ಕೆರೆಗೆ ಸೇರುತ್ತಿದೆ. ಇದರಿಂದ ಕೆರೆಯ ಪರಿಸರದಲ್ಲಿ ದುರ್ಗಂಧ ಹರಡಿದೆ. ಇದರಿಂದ ಇಲ್ಲಿಗೆ ಬರುತ್ತಿದ್ದ ವಾಯುವಿಹಾರಿಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ.

‘ಕೆರೆ ಮಾಲಿನ್ಯದಿಂದ ಹಕ್ಕಿಗಳಿಗೂ ಕುತ್ತು ಬಂದಿದೆ. ಅವು ಬೇರೆಡೆಗೆ ವಲಸೆ ಹೋಗುತ್ತಿವೆ’ ಎಂದು ಪಕ್ಷಿ ಪ್ರಿಯರು ಬೇಸರ ವ್ಯಕ್ತಪಡಿಸಿದರು.

‘ಕೆರೆಯ ಅಂಗಳಕ್ಕೆ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಕೊಳಚೆಯಿಂದ ಸೊಳ್ಳೆಗಳ ಕಾಟವೂ ಹೆಚ್ಚಿದೆ. ದುರ್ವಾಸನೆಯಿಂದ ಗಂಟಲು ಕೆರೆತ, ಕೆಮ್ಮು ಸಹ ಬರುತ್ತಿದೆ’ ಎಂದುದೊಡ್ಡಬೊಮ್ಮಸಂದ್ರ ನಿವಾಸಿ ಮುನಿರೆಡ್ಡಿ ತಿಳಿಸಿದರು.

‘ರಾಜಕಾಲುವೆಗಳು ಕಸದಿಂದ ಕಟ್ಟಿಕೊಂಡಿವೆ ಎಂದು ಕೊಳಚೆ ನೀರನ್ನು ಜಲಮಂಡಳಿ ಕೆರೆಗೆ ಹರಿಸುತ್ತಿದೆ. ಕೊಳಚೆನೀರು ಕೆರೆಗೆ ಸೇರದಂತೆ ಪ್ರತ್ಯೇಕ ಕಾಲುವೆಗಳಲ್ಲಿ ಹರಿದು ಮುಂದಕ್ಕೆ ಹೋಗುವಂತೆ ವ್ಯವಸ್ಥೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಬಿಬಿಎಂಪಿ ಕೆರೆಗಳ ವಿಭಾಗ) ಜಗನ್ನಾಥರಾವ್‌ ತಿಳಿಸಿದರು.

₹ 14 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ

ಬಿಇಎಲ್‌ ಕಾರ್ಖಾನೆಯು ‘ನಮ್ಮ ಬೆಂಗಳೂರು ನಮ್ಮ ಕೊಡುಗೆ’ ಯೋಜನೆಯಡಿ ಕೆರೆಯ ದಡದಲ್ಲಿ ₹ 14 ಕೋಟಿ ವೆಚ್ಚದಲ್ಲಿ ಕೊಳಚೆನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಿಸುತ್ತಿದೆ.

ಎಸ್‌ಟಿಪಿ ಪ್ರತಿದಿನ 1 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ. ‘ಕಾಮಗಾರಿ ಮೂರ್ನಾಲ್ಕು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT