ಮೀಟರ್ ಹಾಕಲು ಚಾಲಕರಿಗೆ ಮನಸ್ಸಿಲ್ಲ

7
ಆಟೊ ರಿಕ್ಷಾ ಚಾಲಕ ಕೇಳಿದಷ್ಟು ಬಾಡಿಗೆ ನೀಡದೆ ಪ್ರಯಾಣಿಕರಿಗೆ ವಿಧಿಯಿಲ್ಲ

ಮೀಟರ್ ಹಾಕಲು ಚಾಲಕರಿಗೆ ಮನಸ್ಸಿಲ್ಲ

Published:
Updated:
Prajavani

ಹುಬ್ಬಳ್ಳಿ: ಚಿಟಗುಪ್ಪಿ ಆಸ್ಪತ್ರೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಟೊ ರಿಕ್ಷಾ ಬಾಡಿಗೆ ಬರೋಬ್ಬರಿ ₹50! ಮೀಟರ್ ಹಾಕಿ ಎಂದರೆ ಇಲ್ಲ ಎಂಬ ಉತ್ತರ. ಕೊನೆ ಪಕ್ಷ ₹40 ಆದರೂ ನೀಡಿ ಎಂಬ ಬೇಡಿಕೆ. ವಾಸ್ತವವಾಗಿ ಟಿಟಗುಪ್ಪಿ ಆಸ್ಪತ್ರೆಯಿಂದ ರೈಲ್ವೆ ನಿಲ್ದಾಣಕ್ಕೆ ಕನಿಷ್ಠ ದರ ₹28 ಆಗುತ್ತದೆ. ಕೇಳಿದಷ್ಟು ಬಾಡಿಗೆ ನೀಡಬೇಕು, ಇಲ್ಲವೆ ಮೀಟರ್ ಹಾಕುವ ಆಟೊಕ್ಕೆ ಹುಡುಕಾಡಬೇಕು.

ಅವಳಿನಗರದಲ್ಲಿ ಆಟೊ ಮೀಟರ್ ಕಡ್ಡಾಯವಾದರೂ ಅದೇಕೋ ಮೀಟರ್ ಆನ್ ಮಾಡಲು ಚಾಲಕರು ಮನಸ್ಸು ಮಾಡುತ್ತಿಲ್ಲ. ಬಾಡಿಗೆ ಮಾತನಾಡಿಕೊಂಡು ಹೋಗುವ ಪದ್ಧತಿಗೆ ಒಗ್ಗಿಕೊಂಡಂತಿರುವ ಬಹುತೇಕ ಚಾಲಕರಿಗೆ ತಮ್ಮ ಆಟೊದಲ್ಲಿ ಮೀಟರ್ ಇದೆ ಎಂಬ ಅರಿವೇ ಇದ್ದಂತಿಲ್ಲ!

ಮೀಟರ್ ಇರುವವರ ಕಥೆ ಹೀಗಾದರೆ, ಇನ್ನೂ ಮೀಟರ್ ಅಳವಡಿಸದ ಆಟೊಗಳೂ ಭಾರಿ ಸಂಖ್ಯೆಯಲ್ಲಿವೆ. ಇಲ್ಲಿ ಮೀಟರ್ ಪ್ರಶ್ನೆಯೇ ಬರುವುದಿಲ್ಲ. ಅವರು ಕೇಳಿದಷ್ಟು ಕೊಡಬೇಕು, ಇಲ್ಲವೆ ದರ ಸಂಧಾನ ಮಾಡಿಕೊಂಡು ಹೋಗಬೇಕು. ಬೈಲಪ್ಪನವರ ನಗರದಿಂದ ರೈಲ್ವೆ ನಿಲ್ದಾಣಕ್ಕೆ ₹70 ಕೇಳುತ್ತಾರೆ. ಮೀಟರ್ ಹಾಕಿದರೆ ₹50 ಮಾತ್ರ ಪಾವತಿಸಬೇಕಾಗುತ್ತದೆ.

ಪೊಲೀಸರು ಮೀಟರ್ ಇಲ್ಲದ ಆಟೊ ರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೂ ಎಲ್ಲ ಆಟೊ ಚಾಲಕರು ಮೀಟರ್ ಅಳವಡಿಸಿಲ್ಲ. ಮೀಟರ್ ಇದ್ದರೂ ಹಾಕುವುದಿಲ್ಲ ಎಂದರೆ, ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಇಷ್ಟೊಂದು ರಿಸ್ಕ್ ತೆಗೆದುಕೊಳ್ಳಲು ಹೆಚ್ಚಿನವರು ಇಷ್ಟಪಡುವುದಿಲ್ಲ.

‘ಆಟೊಗೆ ಮೀಟರ್ ಕಡ್ಡಾಯ ಮಾಡಿರುವುದು ಬಹಳ ಒಳ್ಳೆಯದು. ಬೆಳಿಗ್ಗೆ ಒಂದು ದರ, ರಾತ್ರಿ ಒಂದು ದರ ಮಧ್ಯರಾತ್ರಿ ಒಂದು ದರವನ್ನು ಕೇಳುತ್ತಾರೆ. ನಮ್ಮ ಬಳಿ ಹೆಚ್ಚು ಲಗೇಜ್ ಇದ್ದರೆ ಒಂದು ದರ, ಇಲ್ಲದಿದ್ದರೆ ಇನ್ನೊಂದು ದರ ಕೇಳುತ್ತಾರೆ. ಕೆಲವೊಮ್ಮೆ ಬಾಡಿಗೆ ಹೆಚ್ಚು ಕೇಳಿದರೂ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ ರಮೇಶ ನವಲಗುಂದ.

ಎಲ್ಲ ಚಾಲಕರು ಮೀಟರ್ ಹಾಕುವುದಿಲ್ಲ ಎಂದೇನಿಲ್ಲ. ಆಟೊ ಹತ್ತಿದೊಡನೆ ಮೀಟರ್ ಹಾಕುವವರೂ ಕೆಲವರಿದ್ದಾರೆ. ಅಂತಹವರಲ್ಲಿ ಅನ್ಸಾರ್ ಬಾಷಾ ಸಹ ಇಬ್ಬರು. ರೈಲ್ವೆ ನಿಲ್ದಾಣಕ್ಕೆ ಹೋಗಬೇಕು ಮೀಟರ್ ಹಾಕ್ತೀರ ಎಂದೊಡನೆ, ಕೂರಿ ಸಾರ್ ಎಂದು ಹೇಳಿದರು. ಮೀಟರ್ ಇಲ್ಲದಿದ್ದರೆ ನಿಮಗೆ ಹೆಚ್ಚು ಲಾಭ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಮೀಟರ್ ಕಡ್ಡಾಯ ಮಾಡಿರುವುದರಿಂದ ಅದನ್ನು ಪಾಲಿಸುತ್ತಿದ್ದೇನೆ. ಯಾರೇ ಆಟೊ ಹತ್ತಿದರೂ ಮೊದಲು ಮೀಟರ್ ಹಾಕುತ್ತೇನೆ. ಎಷ್ಟು ದರ ಆಗುತ್ತೋ ಅಷ್ಟನ್ನು ಮಾತ್ರ ಪಡೆಯುತ್ತೇನೆ’ ಎನ್ನುತ್ತಾರೆ ಅವರು.

‘ಮೀಟರ್ ಕಡ್ಡಾಯ ಮಾಡಿರುವುದು ಸರಿ. ಆದರೆ ಸೀಟ್ ಬಾಡಿಗೆ ಹೊಡೆಯುವ ಮೂಲಕ ನಿಯಮ ಉಲ್ಲಂಘಿಸುವವರ ವಿರುದ್ಧ ಮೊಡಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸಂಗೊಳ್ಳಿ ರಾಯಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !