ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ: ಡಿವಿಎಸ್‌– ಡಿಕೆಶಿ ಜಟಾಪಟಿ

Last Updated 3 ಜೂನ್ 2019, 20:43 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆ ದಾಟು ಯೋಜನೆಯ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ರಾಜ್ಯ ಸರ್ಕಾರ ಇನ್ನೂ ಸಲ್ಲಿಸಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ದೂರಿದ್ದಾರೆ.

‘ಜನವರಿಯಲ್ಲೇ ಕೇಂದ್ರಕ್ಕೆ (18.01.2019) ವರದಿ ಕೊಟ್ಟಿದ್ದೇವೆ. ಸಂಬಂಧಿಸಿದ ಕಡತಗಳು ಕೇಂದ್ರ ಜಲ ಆಯೋಗದ ಬಳಿ ಇದೆ. ಆದರೆ, ಕೇಂದ್ರ ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದರು.

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಪಕ್ಷದ ಕಚೇರಿಗೆ ಭೇಟಿ ನೀಡಿದ ಸದಾನಂದಗೌಡ, ‘ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇನ್ನೂ ಸಮಗ್ರ ಯೋಜನಾ ವರದಿಯನ್ನು ಕಳುಹಿಸಿಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಡಿಪಿಆರ್‌ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ.ತಕ್ಷಣ ಕಳಿಸಿ ಕೊಡಿ ಸಾರ್‌. ನೀವು ಕಳಿಸಿದರೆ ಬೇಗನೆ ಅನುಮೋದನೆ ಕೊಡಿಸಬಹುದು’ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಸಂಜೆಯೇ ತುರ್ತು ಮಾಧ್ಯಮಗೋಷ್ಠಿ ಕರೆದು, ‘ಡಿಪಿಆರ್‌ ಅಲ್ಲದೆ, ಕಾರ್ಯ ಸಾಧ್ಯತಾ ವರದಿಯನ್ನೂ ಸಲ್ಲಿಸಿದ್ದೇವೆ. ₹9000 ಕೋಟಿಗೆ ಡಿಪಿಆರ್‌ ಮಾಡಿದ್ದೇವೆ. ನಮಗೆ ಪ್ರತಿಷ್ಠೆ ಇಲ್ಲ. ಸದಾನಂದಗೌಡರನ್ನು ಭೇಟಿ ಮಾಡಿ ವಾಸ್ತವಾಂಶ ತಿಳಿಸುತ್ತೇವೆ. ಅವರ ಮುಂದಾಳತ್ವದಲ್ಲಿ ಮೇಕೆದಾಟು ಯೋಜನೆ ನಡೆಯಲಿ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನಮಗೆ ಯೋಜನೆ ಕಾರ್ಯಗತ ಆದರೆ ಸಾಕು’ ಎಂದರು.

ಸಬ್‌ ಅರ್ಬನ್‌ ರೈಲಿನ ಬಗ್ಗೆಯೂ ನಿರಾಸಕ್ತಿ: ‘ಬೆಂಗಳೂರಿನ ಸಬ್‌ಅರ್ಬನ್‌ ರೈಲು ಯೋಜನೆಗೆ ಸಂಬಂಧಿಸಿದಂತೆ₹17,500 ಕೋಟಿ ಅನುದಾನ ಕೇಂದ್ರ ಸರ್ಕಾರ ನೀಡಲಿದೆ. ಕಳೆದ 5 ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ರಾಜ್ಯ ಮತ್ತು ಕೇಂದ್ರದ ಪಾಲನ್ನು ತಲಾ ಶೇ 50ರಷ್ಟಕ್ಕೆ ಇಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಮುಂದಕ್ಕೆ ಬರುತ್ತಿಲ್ಲ. ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇನೆ’ ಎಂದು ಸದಾನಂದಗೌಡ ಹೇಳಿದರು.

‘ರಾಜ್ಯಕ್ಕೆ ಯಾವುದೇ ರೀತಿಯ ಅನುದಾನ ಕೊಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿಸಲು ಸದಾ ಸಿದ್ಧನಿದ್ದೇನೆ. ಕೆಲವೊಮ್ಮೆ ಕೊಟ್ಟವನ್ನು ಹಣವನ್ನು ಸರಿಯಾಗಿ ಖರ್ಚು ಮಾಡದೇ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ: ಕರ್ನಾಟಕದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಸಂಬಂಧ ತಜ್ಞರ ಸಮಿತಿ ದಾವಣಗೆರೆಯನ್ನು ಶಿಫಾರಸು ಮಾಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನೀರು, ವಿದ್ಯುತ್‌ ಮತ್ತು ರೈಲು ಸಂಪರ್ಕ ಇರುವುದರಿಂದ ದಾವಣಗೆರೆಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಮಸ್ಯೆ ಆಲಿಸಲು ಪ್ರತ್ಯೇಕ ಕಾರ್ಯಾಲಯ

ರಾಜ್ಯ ಸರ್ಕಾರದ ಮತ್ತು ಜನ ಸಾಮಾನ್ಯರ ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕಾಗಿ ದೆಹಲಿಯಲ್ಲಿ ವಿಶೇಷ ಕಾರ್ಯಾಲಯವೊಂದನ್ನು ಇನ್ನು 15 ದಿನಗಳಲ್ಲಿ ಆರಂಭಿಸುವುದಾಗಿ ಸದಾನಂದಗೌಡ ಹೇಳಿದರು.

ರಾಜ್ಯದ ಜನರ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುವ ಉದ್ದೇಶದಿಂದ ಈ ಕಾರ್ಯಾಲಯ ಆರಂಭಿಸುವುದರ ಜೊತೆಗೆ, ಇದರ ಉಸ್ತುವಾರಿಗೆ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವುದಾಗಿ ಅವರು ತಿಳಿಸಿದರು.

ರಾಜ್ಯದ ನಾಲ್ವರು ಸಚಿವರು ಈ ಸಂಬಂಧ ಮಾತುಕತೆ ನಡೆಸಿ ಪ್ರತ್ಯೇಕ ಕಾರ್ಯಾಲಯ ಆರಂಭಿಸುವುದರ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದಾಗಿ ವಿವರಿಸಿದರು.

‘ನಾವು ನಾಲ್ಕೂ ಜನ ಮಂತ್ರಿಗಳು (ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ ಜೋಷಿ, ಸುರೇಶ ಅಂಗಡಿ) ತಿಂಗಳಿಗೆ ಒಂದು ದಿನ ಈ ಕಾರ್ಯಾಲಯಕ್ಕೆ ಬಂದು ಎರಡು ಗಂಟೆಗಳ ಕಾಲ ಇದ್ದು ಸಮಸ್ಯೆಗಳನ್ನು ಆಲಿಸುತ್ತೇವೆ. ರಾಜ್ಯಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ರಾಜ್ಯ ಮತ್ತು ಕೇಂದ್ರ ಮಧ್ಯೆ ಸಾಮರಸ್ಯದ ಸಂಬಂಧ ಇಟ್ಟುಕೊಳ್ಳಬೇಕು. ಅದಕ್ಕೆ ನಾವು ಬದ್ಧ’ ಎಂದರು.

ಗ್ರಾಮ ವಾಸ್ತವ್ಯ ತಿರುಗುಬಾಣ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಗ್ರಾಮ ವಾಸ್ತವ್ಯ ತಿರುಗು ಬಾಣವಾದ ಕಾರಣ, ಈಗ ಶಾಲಾ ವಾಸ್ತವ್ಯ ಆರಂಭಿಸಿದ್ದಾರೆ. ಶಾಲೆ ಎಂದರೆ, ಗೊತ್ತಿಲ್ಲದನ್ನು ಕಲಿಯುವುದಕ್ಕೆ ಇರುವ ತಾಣ. ಆದ್ದರಿಂದ ಮುಖ್ಯಮಂತ್ರಿಯವರು ತಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳನ್ನು ಕಲಿಯಲು ಹೋಗುತ್ತಿದ್ದಾರೆ ಎಂದು ಸದಾನಂದಗೌಡ ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT