ಸೋಮವಾರ, ಆಗಸ್ಟ್ 26, 2019
28 °C
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಜವಳಿ ಅಭಿವೃದ್ಧಿ ಆಯುಕ್ತರಿಂದ ಮಾಹಿತಿ

ಕೈಮಗ್ಗ ಉತ್ಪನ್ನಕ್ಕೆ ಇ–ಮಾರುಕಟ್ಟೆ ಸೌಲಭ್ಯ

Published:
Updated:
Prajavani

ಬೆಂಗಳೂರು: ಕೈಮಗ್ಗ ಉತ್ಪನ್ನಗಳಿಗೆ ಇ–ಮಾರುಕಟ್ಟೆ ಸೌಲಭ್ಯ ಒದಗಿಸಲು ಖಾಸಗಿ ಕಂಪನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಅಭಿವೃದ್ಧಿ ಆಯುಕ್ತ ಡಾ.ಎಂ.ಆರ್. ರವಿ ತಿಳಿಸಿದರು.

ಇಲಾಖೆ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕೈಮಗ್ಗದ ಉತ್ಪನ್ನಗಳು ಹಳ್ಳಿಯಲ್ಲಿ ತಯಾರಾದರೂ ಅವುಗಳಿಗೆ ಮಾರುಕಟ್ಟೆ ಇರುವುದು ನಗರದಲ್ಲಿ. ಇವುಗಳನ್ನು ಗ್ರಾಹಕರಿಗೆ ತಲುಪಿಸುವ ಹಂತದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಉತ್ಪಾದಕರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದನ್ನು ತಪ್ಪಿಸಿ ಗ್ರಾಹಕರು ಮತ್ತು ಉತ್ಪಾದಕರ ನಡುವೆ ನೇರ ಸಂಪರ್ಕ ಕಲ್ಪಿಸಲು ಇ–ಮಾರುಕಟ್ಟೆ ನೆರವಾಗಲಿದೆ’ ಎಂದು ವಿವರಿಸಿದರು.

‘ಇ– ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೇ, ಅದರ ಬಳಕೆ ಬಗ್ಗೆ ನೇಕಾರರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುತ್ತಿದೆ. ಗರಿಷ್ಠ ಪ್ರಮಾಣದ ಲಾಭಾಂಶ ಉತ್ಪಾದಕರಿಗೇ ದೊರಕುವಂತೆ ಮಾಡುವುದು ನಮ್ಮ ಉದ್ದೇಶ’ ಎಂದರು.

‘ಮೊಳಕಾಲ್ಮುರು ಸೀರೆ, ಇಳಕಲ್ ಸೀರೆ, ಗುಳೇದಗುಡ್ಡ ಖಣ, ಉಡುಪಿ ಸೀರೆಗಳನ್ನು ಈಗಾಗಲೇ ಭೌಗೋಳಿಕ ಸೂಚ್ಯಂಕಗಳ ವ್ಯಾಪ್ತಿಗೆ ತರಲಾಗಿದೆ. ಗಜೇಂದ್ರಗಡದ ಪಟ್ಟೆದ ಅಂಚಿನ ಸೀರೆಗಳಿಗೂ ಈ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ನಡೆದಿದೆ. ಇಂತಹ ಪಾರಂಪರಿಕ ಸೀರೆಗಳ ಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕಿದೆ’ ಎಂದರು.‌

‘ಪಾರಂಪರಿಕ ಕೌಶಲವನ್ನು ಉಳಿಸಿಕೊಂಡೇ ಇವುಗಳ ವಿನ್ಯಾಸವನ್ನು ಉನ್ನತೀಕರಿಸಿಕೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಬಹುದು. ನ್ಯಾನೊ ಮತ್ತು ಪ್ಲಾಸ್ಮೊ ತಂತ್ರಜ್ಞಾನ ಬಳಸಿಕೊಂಡು ಹೊಸ ವಿನ್ಯಾಸ ಸೃಷ್ಟಿಸುವ ಬಗ್ಗೆಯೂ ನೇಕಾರರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ ರಾವ್, ‘ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ನೇಕಾರರ ಕಲ್ಯಾಣಕ್ಕೆ ಪ್ರಯತ್ನಿಸುತ್ತಿವೆ’ ಎಂದರು.

ಸಾಲ ಮನ್ನಾ: 20 ಸಾವಿರ ನೇಕಾರರಿಗೆ ಅನುಕೂಲ

‘ಹೊಸ ಸರ್ಕಾರ ನೇಕಾರರ ಸಾಲಮನ್ನಾಕ್ಕೆ ₹100 ಕೋಟಿ ಮೀಸಲಿಡುವುದಾಗಿ ಹೇಳಿದೆ. ಈ ತೀರ್ಮಾನದಿಂದ ರಾಜ್ಯದ 20 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ’ ಎಂದು ಡಾ.ಎಂ.ಆರ್.ರವಿ ತಿಳಿಸಿದರು.

‘ಈ ಹಿಂದಿನ ಸರ್ಕಾರ, ನೇಕಾರರ ₹53 ಕೋಟಿ ಸಾಲಮನ್ನಾ ಮಾಡಿತ್ತು. ಇದರಲ್ಲಿ ₹23 ಕೋಟಿಯನ್ನು ನೇಕಾರ ಫಲಾನುಭವಿಗಳಿಗೆ ಈಗಾಗಲೇ ತಲುಪಿಸಿದ್ದೇವೆ’ ಎಂದು ತಿಳಿಸಿದರು.

Post Comments (+)