‘ವಿದ್ಯೆ ಹೊಟ್ಟೆಪಾಡಿಗೇ ಸೀಮಿತವಾಗದಿರಲಿ’

7
ಸತ್ಯಸಾಯಿ ಸತ್ವಾನಿಕೇತನಂ ವಸತಿಯುತ ಶಾಲೆ ಉದ್ಘಾಟನೆ

‘ವಿದ್ಯೆ ಹೊಟ್ಟೆಪಾಡಿಗೇ ಸೀಮಿತವಾಗದಿರಲಿ’

Published:
Updated:
Prajavani

ಕಾರವಾರ: ಹೊಟ್ಟೆಪಾಡು ನೋಡಿಕೊಳ್ಳುವುದೊಂದೇ ವಿದ್ಯೆಯ ಉದ್ದೇಶವಾಗಬಾರದು. ಆತ್ಮ ಸಾಕ್ಷಾತ್ಕಾರ ಸಿಗುವಂಥದ್ದು ನಿಜವಾದ ವಿದ್ಯೆ ಎಂದು ಸತ್ಯ ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ ನಾಯ್ಡು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಪ್ರಶಾಂತಿ ಬಲಮಂದಿರ ಟ್ರಸ್ಟ್ ಆರಂಭಿಸಿರುವ ಸತ್ಯಸಾಯಿ ಸತ್ವಾನಿಕೇತನಂ ವಸತಿಯುತ ಶಾಲೆಯ ಮೊದಲ ಹಂತದ ಕಟ್ಟಡ, ಒಳಾಂಗಣ ಕ್ರೀಡಾಂಗಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗುರುಕುಲ ವ್ಯವಸ್ಥೆ ಹಾಗೂ ಆಧುನಿಕ ಶಿಕ್ಷಣಗಳೆರಡೂ ಜೊತೆಯಾಗಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತದೆ. ತ್ಯಾಗದಿಂದ ಮಾಡುವ ಕಾರ್ಯ ಶಾಶ್ವತವಾಗಿರುತ್ತದೆ. ತಂದೆ, ತಾಯಿಯ ಸೇವೆ ನಮ್ಮ ಮೊದಲ ಕರ್ತವ್ಯವಾಗಬೇಕು. ಇಡೀ ಜಗತ್ತನ್ನು ಪ್ರೀತಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿಯ ಸಾಯಿ ಯೂನಿವರ್ಸಿಟಿ ಆಫ್ ಎಕ್ಸಲೆನ್ಸ್‌ನ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ವಿದ್ಯಾರಂಗವು ವ್ಯಾಪಾರೀಕರಣವಾಗಿದ್ದು ದೊಡ್ಡ ದುರಂತ. ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡಲಾಗುವುದು. ಬಡ ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆಯೂ ಇದೆ’ ಎಂದು ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಸಾಯಿ ಸಂಸ್ಥೆಗಳ ಉಚಿತ ಶಾಲೆ, ಆಸ್ಪತ್ರೆಯ ಸೌಲಭ್ಯ ಪಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಶಾಲೆಯಲ್ಲಿ 60 ವಿದ್ಯಾರ್ಥಿಗಳು: ಸತ್ಯ ಸಾಯಿ ಸತ್ವಾನಿಕೇತನಂ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ವಸತಿಯುತ ಶಾಲೆಯ ಆರನೇ ತರಗತಿ ಆರಂಭವಾಗಿದೆ. ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಅವರಲ್ಲಿ 30 ಸ್ಥಳೀಯ ಮಕ್ಕಳಿಗೆ ಮೀಸಲಾಗಿದೆ. ಪ್ರವೇಶ ಪಡೆದ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು. ಪ್ರವೇಶ ಪರೀಕ್ಷೆಯು ಏಪ್ರಿಲ್‌ನಲ್ಲಿ ಕಾರವಾರದಲ್ಲಿ ಹಮ್ಮಿಕೊಳ್ಳಲಾಗುವುದು. ಮಾರ್ಚ್ 15ರವರೆಗೆ ಪ್ರವೇಶಪತ್ರಗಳನ್ನು ನೀಡಲಾಗುವುದು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಿರೀಶ.ಎಚ್.ಎಸ್ ತಿಳಿಸಿದರು.

ಸಾಯಿ ಸಂಸ್ಥೆಯ ವಿದ್ಯಾರ್ಥಿ ವಿನೋದ ಸಾಳುಂಕೆ ಮಾತನಾಡಿದರು. ವಿದ್ಯಾಸಂಸ್ಥೆಗೆ 11 ಎಕರೆ ಜಮೀನು ದಾನ ಮಾಡಿದ ಅನಂತ ರಾಯ್ಕರ್, ಸಿಂಗಪುರದಿಂದ ಬಂದ ಸಾಯಿ ಭಕ್ತರಾದ ಅಂಥೋಣಿ ಥಾಣೆ ಹಾಗೂ ಖರೇನಾ ದಂಪತಿ, ಮುಖಂಡ ಪ್ರಭಾಕರ ರಾಣೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವಿದಾಸ ಬೇಳೂರಕರ್, ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಗಿರೀಶ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !