ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ್ಯುವರ್ಸ್‌ 11ನೇ ಆವೃತ್ತಿ : ಉನ್ನತ ಶಿಕ್ಷಣಕ್ಕೆ ದಾರಿದೀಪವಾದ ಮೇಳ

ಎಡ್ಯುವರ್ಸ್‌ 11ನೇ ಆವೃತ್ತಿ ಸಂಪನ್ನ l ಜ್ಞಾನದೇಗುಲದೆಡೆಗೆ ವಿದ್ಯಾರ್ಥಿ, ಪೋಷಕರ ದಂಡು
Last Updated 26 ಮೇ 2019, 19:08 IST
ಅಕ್ಷರ ಗಾತ್ರ

ಬೆಂಗಳೂರು: ಶೈಕ್ಷಣಿಕ ಮಾರ್ಗದರ್ಶನ ನೀಡುವ ಸಲುವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿದ್ದ ‘ಎಡ್ಯುವರ್ಸ್‌: ಜ್ಞಾನದೇಗುಲ’ ಮೇಳದಲ್ಲಿ ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾದ ದಿನವೇ ಜಯಮಹಲ್ ಪ್ಯಾಲೇಸ್ ಹೋಟೆಲ್ ಗ್ರೌಂಡ್ಸ್‌ನಲ್ಲಿ ಆರಂಭವಾದ ಈ ಶೈಕ್ಷಣಿಕ ಮೇಳದ 11ನೇ ಆವೃತ್ತಿಯು ಭಾನುವಾರ ಸಂಪನ್ನಗೊಂಡಿತು.

ಸಿಇಟಿಯಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಯಾವ ಕಾಲೇಜು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಸಹಜ. ಅದರಲ್ಲೂ ಕಡಿಮೆ ರ‍್ಯಾಂಕ್‌ ಬಂದವರಿಗಂತೂ ಬಯಸಿದ ಕಾಲೇಜು, ಕೋರ್ಸ್‌ಗೆ ಪ್ರವೇಶ ಸಿಗುತ್ತದೆಯೋ, ಇಲ್ಲವೋ ಎಂಬ ದುಗುಡವೂ ಇರುತ್ತದೆ. ಇಂತಹ ಗೊಂದಲ ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಮೇಳ ನೆರವಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ ಹಾಗೂಕಾಮೆಡ್‌ – ಕೆ ಪರಿಣತ ಡಾ. ಶಾಂತಾರಾಂ ನಾಯಕ್‌ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

ಶೈಕ್ಷಣಿಕ ಮೇಳದ ಪ್ರಥಮ ದಿನವಾದ ಶನಿವಾರ ಸಿಇಟಿ ಹಾಗೂ ಕಾಮೆಡ್–ಕೆ ಕುರಿತ ಉಪನ್ಯಾಸದಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರು ಎರಡನೇ ದಿನ ಬಂದು, ಪ್ರಯೋಜನ ಪಡೆದುಕೊಂಡರು. ಸಭಾಂಗಣ ಭರ್ತಿಯಾಗಿದ್ದರಿಂದ ಕೆಲ ವಿದ್ಯಾರ್ಥಿಗಳು ಹಾಗೂ ಪಾಲಕರು ನಿಂತುಕೊಂಡೇ ಉಪನ್ಯಾಸ ಆಲಿಸಿದರು. ಉಪನ್ಯಾಸ ಮುಗಿದ ಬಳಿಕವೂ ವಿಷಯ ತಜ್ಞರನ್ನು ಭೇಟಿಯಾಗಿ ಗೊಂದಲಗಳನ್ನು ನಿವಾರಿಸಿಕೊಂಡರು. ಸಿಇಟಿ ರ‍್ಯಾಂಕಿಂಗ್ ಆಧಾರದ ಮೇಲೆ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್‌ಗೆ ಪ್ರವೇಶ ಪಡೆದುಕೊಳ್ಳಬಹುದು ಎಂಬ ಬಗ್ಗೆಯೂ ಮಾಹಿತಿ ಪಡೆದರು.

ಸಿಇಟಿ ಮತ್ತು ಕಾಮೆಡ್‌–ಕೆ ಕುರಿತ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡ ಪಾಲಕರು ಹಾಗೂ ವಿದ್ಯಾರ್ಥಿಗಳು ಈ ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಿಇಟಿ ಸೀಟು ಆಯ್ಕೆ ಮಾಡುಕೊಳ್ಳುವಾಗ ಜಾಗ್ರತೆ ವಹಿಸಬೇಕೆಂದು ಎಲ್ಲರೂಹೇಳುತ್ತಾರೆ. ಆದರೆ, ಈ ಬಗ್ಗೆ ನಮಗೆ ಸ್ಪಷ್ಟತೆ ಇರಲಿಲ್ಲ. ಸಿಇಟಿ ಸೀಟು ಹಂಚಿಕೆ ಬಗ್ಗೆ ವಿವರವಾದ ಮಾಹಿತಿ ಸಿಕ್ಕಿದೆ. ಕೋರ್ಸ್‌ ಹಾಗೂ ಕಾಲೇಜು ಆಯ್ಕೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

‘ಪ್ರತಿ ಕಾಲೇಜಿಗೂ ತೆರಳಿ ಅಲ್ಲಿನ ಪ್ರವೇಶ ಶುಲ್ಕ ಹಾಗೂ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯುವುದು ಕಷ್ಟ. ಆದರೆ, ಶೈಕ್ಷಣಿಕ ಮೇಳದಲ್ಲಿ ಒಂದೇ ಸೂರಿನಡಿ ರಾಜ್ಯದ ಪ್ರಮುಖ ಕಾಲೇಜುಗಳ ಮಾಹಿತಿ ಪಡೆದೆವು’ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ತಿಳಿಸಿದರು.

60ಕ್ಕೂ ಅಧಿಕ ಮಳಿಗೆಗಳು

ಕಾಲೇಜು ಹಾಗೂ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ಪಾಲಕರು ಹಾಗೂ ವಿದ್ಯಾರ್ಥಿಗಳು ಮಳಿಗೆಗಳ ಕಡೆ ಮುಖ ಮಾಡಿದರು.

ಸಿಎಂಆರ್ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಏಮ್ಸ್, ಆಚಾರ್ಯ ಪಾಠಶಾಲೆ, ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ, ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ, ಅಲಯನ್ಸ್ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ,ಅಮಿಟಿ ಗ್ಲೋಬಲ್ ಬಿಸಿನೆಸ್ ಸ್ಕೂಲ್ ಸೇರಿದಂತೆ 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿದ್ದವು.

ಶಿಕ್ಷಣ ಸಂಸ್ಥೆಯಲ್ಲಿರುವ ಕೋರ್ಸ್‌ಗಳು, ಮೂಲಸೌಕರ್ಯ, ಗ್ರಂಥಾಲಯ, ಶುಲ್ಕ, ಉಪನ್ಯಾಸಕರು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೂ ಅಷ್ಟೇ ಉತ್ಸಾಹದಿಂದ ತಮ್ಮ ಸಂಸ್ಥೆಯ ಹಿರಿಮೆ ಬಗ್ಗೆ ಹೇಳಿಕೊಂಡರು.

ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಹಾಗೂ ವಿವಿಧ ಹಣಕಾಸು ಸಂಸ್ಥೆಗಳು ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ನೀಡಿದವು.

ಸಿಇಟಿ ಗೊಂದಲ ನಿವಾರಣೆ

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶದ ಬಳಿಕ ಏನೆಲ್ಲ ಪ್ರಕ್ರಿಯೆ ನಡೆಸಲಾಗುತ್ತದೆ ಎಂಬ ಬಗ್ಗೆ ಕೆಇಎ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ ಅವರು ಭಾನುವಾರ ಮಾಹಿತಿ ನೀಡಿದರು.

‘ಸಿಇಟಿ ರ‍್ಯಾಂಕ್ 1ಲಕ್ಷಕ್ಕಿಂತ ಹೆಚ್ಚು ಇದ್ದರೂ, ಎಲ್ಲರಿಗೂ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗಲಿದೆ. ಮಲ್ಲೇಶ್ವರದ ಕೆಇಎ ಕೇಂದ್ರ ಕಚೇರಿ ಹಾಗೂ ರಾಜ್ಯದ ಎಲ್ಲಾ ನೋಡಲ್ ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಮೀಸಲಾತಿಗೆ ಅರ್ಹರಾಗಿರುವವರು ಸಂಬಂಧಿಸಿದ ದಾಖಲಾತಿಯನ್ನು ಹಾಜರುಪಡಿಸಬೇಕು’ ಎಂದರು.

ಕಾಮೆಡ್‌ – ಕೆ ವ್ಯವಸ್ಥೆಯೊಳಗೆ ಕೋರ್ಸ್‌ಗೆ ಸೇರುವ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಕಾಮೆಡ್‌ – ಕೆ ಪರಿಣಿತ ಡಾ. ಶಾಂತಾರಾಂ ವಿವರಿಸಿದರು.

ಒಮ್ಮೆ ಸೀಟು ಖಚಿತಪಡಿಸಿದ ಬಳಿಕ ಬದಲಾವಣೆ ಕಷ್ಟ. ಹೀಗಾಗಿ ಆದಷ್ಟು ಜಾಗರೂಕತೆಯಿಂದ ಸೀಟು ಆಯ್ಕೆ ಮಾಡಬೇಕು. ಮೊದಲ ಸುತ್ತಿನಲ್ಲಿ ಆಯ್ದುಕೊಂಡ ಸೀಟಿನ ಬಗ್ಗೆ ತೃಪ್ತಿ ಇರದಿದ್ದಲ್ಲಿ ಆನ್‌ಲೈನ್‌ ಮೂಲಕವೇ ವಾಪಸ್‌ ಮಾಡಲು ಅವಕಾಶವಿದೆ ಎಂದು ಹೇಳಿದರು.

ಮಳಿಗೆಗಳಲ್ಲಿ ವಿದ್ಯಾರ್ಥಿಗಳ ದಂಡು

ಶೈಕ್ಷಣಿಕ ಸಂಸ್ಥೆಗಳ ಮಳಿಗೆಗಳು ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ತುಂಬಿಕೊಂಡಿತ್ತು. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಆಲಿಸಿದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಸೂಕ್ತ ಉತ್ತರಗಳನ್ನು ನೀಡಿದರು. ಕಾಲೇಜಿನಲ್ಲಿರುವ ಸೌಲಭ್ಯ ಹಾಗೂ ಕೋರ್ಸ್‌ಗಳ ಕರಪತ್ರವನ್ನು ವಿತರಿಸಿದರು.

‘ಮಗಳು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾಳೆ. ಇದೀಗಬಿ.ಎಸ್ಸಿ ಮಾಡಬೇಕೆಂದುಕೊಂಡಿದ್ದಾಳೆ. ಆದರೆ, ವಿಷಯಗಳ ಸಂಯೋಜನೆ ಹಾಗೂ ಕಾಲೇಜಿನ ಆಯ್ಕೆ ಬಗ್ಗೆ ಗೊಂದಲಗಳಿದ್ದವು. ಈ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿದ್ದರಿಂದ ಉತ್ತಮ ಸಲಹೆಗಳು ಸಿಕ್ಕಿದವು’ ಎಂದು ವಿಜಯನಗರದ ಗ್ರೀಷ್ಮಾ ತಿಳಿಸಿದರು.

***

ಸಿಇಟಿ ಸೀಟು ಹಂಚಿಕೆಯಲ್ಲಿ ಮೆರಿಟ್‌ ಒಂದೇ ಮಾನದಂಡ. ಸೀಟು ಹಂಚಿಕೆ ಪ್ರಕ್ರಿಯೆಯೂ ಪಾರದರ್ಶಕವಾಗಿರುತ್ತದೆ. ಮಧ್ಯವರ್ತಿಗಳು ಸೀಟು ಕೊಡಿಸುವುದಾಗಿ ಆಮಿಷ ಒಡ್ಡಿದರೆ ಕೆಇಎಗೆ ದೂರು ನೀಡಿ
–ಎ.ಎಸ್. ರವಿ, ಕೆಇಎ ಸಾರ್ವಜನಿಕ ಸಂಪರ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT