ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಆಯ್ಕೆ–ಮೈಮರೆಯಬೇಡಿ: ಎ.ಎಸ್. ರವಿ ಎಚ್ಚರಿಕೆ

ಸಿಇಟಿ: ಕೆಇಎ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಸಲಹೆ
Last Updated 25 ಮೇ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ‘ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಸೀಟು ಆಯ್ಕೆಯ ಸಂದರ್ಭದಲ್ಲಿ ಮೈಮರೆತು ಸಣ್ಣ ತಪ್ಪು ಮಾಡಿದರೂ ಅವಕಾಶ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇರುತ್ತದೆ’ ಎಂದುಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ‘ಸಿಇಟಿ ಸೀಟು ಆಯ್ಕೆ ಪ್ರಕ್ರಿಯೆ’ ಬಗ್ಗೆ ಅವರು ಮಾಹಿತಿ ನೀಡಿದರು.

‘ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಲು ಸಿಇಟಿ ನೆರವಾಗಿದೆ. ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆದಲ್ಲಿ ಇಷ್ಟದ ಕೋರ್ಸ್‌ಗೆ ಹಾಗೂ ಕಾಲೇಜಿಗೆ ಪ್ರವೇಶ ಸುಲಭವಾಗುತ್ತದೆ. ಒಳ್ಳೆಯ ರ‍್ಯಾಂಕ್ ಬರದಿದ್ದರೂ ಚಿಂತಿಸಬೇಕಿಲ್ಲ. ಆಯ್ದುಕೊಂಡ ವಿಷಯದಲ್ಲಿ ಸ್ವಂತ ಪರಿಶ್ರಮಪಟ್ಟು ಯಶಸ್ಸು ಸಾಧಿಸಬಹುದು. ಇದೀಗ ಫಲಿತಾಂಶ ಪ್ರಕಟವಾಗಿರುವುದರಿಂದ ಜೂನ್ ಮೊದಲ ವಾರದಿಂದ ದಾಖಲಾತಿ ಪರಿಶೀಲನೆ ಆರಂಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಯುತ್ತದೆ.ಸಿಇಟಿ ಫಲಿತಾಂಶದ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಹಾಜರುಪಡಿಸಬೇಕು. ಜತೆಗೆ ಮೀಸಲಾತಿ ಕೋರಿರುವವರು ಅದಕ್ಕೆ ಸಂಬಂಧಿಸಿದ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ದಾಖಲಾತಿಗಳ ಪರಿಶೀಲನೆಯ ವೇಳೆ ಕಡ್ಡಾಯವಾಗಿ ಹೊಂದಿರಬೇಕು. ಸೂಕ್ತ ದಾಖಲಾತಿ ಹಾಜರುಪಡಿಸದವರನ್ನು ಸಾಮಾನ್ಯ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದರು.

ಪಾಸ್‌ವರ್ಡ್ ಹಾಕುವಾಗ ಜಾಗ್ರತೆ: ‘ಆಪ್ಷನ್ ಎಂಟ್ರಿ ಮಾಡಲು ಪರೀಕ್ಷಾ ಪ್ರಾಧಿಕಾರವು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಪಾಸ್‌ವರ್ಡ್‌ ಕೊಟ್ಟಿರುತ್ತದೆ. ಇದನ್ನು ಅನ್ಯರೊಂದಿಗೆ ಹಂಚಿಕೊಂಡಲ್ಲಿ ದುರ್ಬಳಕೆಯಾಗುವ ಅಪಾಯ ಇದೆ. ಹಾಗಾಗಿ ಪೋಷಕರ ಬಳಿ ಮಾತ್ರ ಹಂಚಿಕೊಳ್ಳುವುದು ಒಳಿತು. ಮೊಬೈಲ್‌ ಮೂಲಕ ಸಹ ಈ ಪಾಸ್‌ವರ್ಡ್‌ ದಾಖಲು ಮಾಡಬಹುದು. ಸೈಬರ್ ಕೆಫೆಗಳಲ್ಲಿ ಆದಷ್ಟು ಜಾಗ್ರತೆಯಿಂದಲಾಗಿನ್ ಆಗಿ, ಪಾಸ್‌ವರ್ಡ್‌ ದಾಖಲಿಸಿ. ಒಂದು ವೇಳೆ ಈ ಪಾಸ್‌ವರ್ಡ್‌ ಬೇರೆಯವರಿಗೆ ಸಿಕ್ಕಲ್ಲಿ ಸೀಟು ಸಿಗದಂತೆ ಮಾಡುವ ಸಾಧ್ಯತೆ ಇದೆ’ ಎಂದು ಕಿವಿಮಾತು ಹೇಳಿದರು.

ಕಾಲೇಜಿನಿಂದ ಖಚಿತಪಡಿಸಿಕೊಳ್ಳಿ: ‘ನಾಲ್ಕು ಹಂತಗಳಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಬಳಿಕವಿದ್ಯಾರ್ಥಿಗಳು ತಾವು ಕೋರಿದ ಕಾಲೇಜು, ಸೀಟು ಸಿಕ್ಕಿದೆಯೊ, ಇಲ್ಲವೊ ಎಂದು ಖಚಿತಪಡಿಸಿಕೊಳ್ಳಬೇಕು. ರ‌್ಯಾಂಕ್, ಮೆರಿಟ್, ಹಾಗೂ ಮೀಸಲಿನಂತೆ ಅದು ಅನ್ಯರ ಪಾಲಾದರೆ ಅಂತಹ ಅಭ್ಯರ್ಥಿಗಳು ಪರ್ಯಾಯ ಆಯ್ಕೆಗಾಗಿ ಮುಂದಿನ ಹಂತದಲ್ಲಿ ಪಾಲ್ಗೊಳ್ಳಬಹುದು.ಸೀಟು ಆಯ್ಕೆ ಮಾಡಿಕೊಂಡು ಕಾಲೇಜು ಸೇರ್ಪಡೆ ಖಾತರಿಯಾದ ಬಳಿಕ ಶುಲ್ಕ ಕಟ್ಟಬೇಕಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿ ಮತ್ತು ಕಾಲೇಜಿನ ಕಡೆಯಿಂದ ಕೆಇಎಗೆ ಖಚಿತಪಡಿಸಬೇಕು. ಒಂದೇ ಶಿಕ್ಷಣ ಸಂಸ್ಥೆ ಎರಡರಿಂದ ಮೂರು ಶಾಖೆಗಳನ್ನು ಹೊಂದಿರುವುದರಿಂದ ಕಾಲೇಜು ಕೋಡ್‌ನಲ್ಲಿ ಕೆಲವು ವೇಳೆ ಗೊಂದಲವಾಗುವ ಸಾಧ್ಯತೆ ಇದೆ. ಹಾಗಾಗಿ ಕಾಲೇಜು ಕೋಡ್‌ ಅನುಸಾರ ಕೇಂದ್ರ ಖಚಿತಪಡಿಸಿಕೊಳ್ಳಬೇಕು’ ಎಂದರು.

‘ಮೀಸಲಾತಿ ಪ್ರಯೋಜನ ಪಡೆಯಿರಿ’

‘ಗ್ರಾಮೀಣ ಪ್ರದೇಶ, ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಹಾಗೂ ಹೈದರಾಬಾದ್‌–ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯವಿದೆ.₹8 ಲಕ್ಷ ಹಾಗೂ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಜರುಪಡಿಸಿ ಮೀಸಲಾತಿ ಸೌಲಭ್ಯ ಪಡೆಯಬಹುದು’ ಎಂದು ತಿಳಿಸಿದರು.

ಒಂದೇ ಸೂರಿನಡಿ ಸಮಗ್ರ ಮಾಹಿತಿ

ಶೈಕ್ಷಣಿಕ ಮೇಳದಲ್ಲಿ 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದೆ. ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಫ್ಯಾಷನ್ ಡಿಸೈನ್, ಪತ್ರಿಕೋದ್ಯಮ, ಕಾನೂನು, ಕೃಷಿ ಸೇರಿದಂತೆ ವಿವಿಧ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾಹಿತಿ ಪಡೆದರು.

‘ಯಾವ ಕೋರ್ಸ್‌ ಹಾಗೂ ಯಾವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬರಲು ಶಿಕ್ಷಣ ಮೇಳ ನೆರವಾಯಿತು’ ಎಂದು ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಕೊನೆಯ ಅವಕಾಶ

ಸಿಇಟಿ ಫಲಿತಾಂಶದಿಂದ ಶೈಕ್ಷಣಿಕ ಮೇಳಕ್ಕೆ ಪ್ರಥಮ ದಿನ ಹಾಜರಾಗಲು ಸಾಧ್ಯವಾಗದವರು ಎರಡನೇ ದಿನವಾದ ಭಾನುವಾರ ಭಾಗವಹಿಸಿ ಉಪಯುಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಬಹುದು. ಬೆಳಿಗ್ಗೆ 11 ಗಂಟೆಯಿಂದ ಮಾರ್ಗದರ್ಶನ ಆರಂಭವಾಗಲಿದೆ. ಜತೆಗೆ ವಿವಿಧ ಕಾಲೇಜುಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ಸಂಜೆ 5.30ರವರೆಗೂ ಮೇಳ ನಡೆಯಲಿದೆ.

ವಿಳಾಸ: ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಗ್ರೌಂಡ್ಸ್‌, ಬೆಂಗಳೂರು

ಹೊಸ ಕೋರ್ಸ್‌ಗಳಿಗೆ ಹುಡುಕಾಟ

ಶೈಕ್ಷಣಿಕ ಮೇಳಗಳಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಕೊರ್ಸ್‌ಗಳ ಬಗ್ಗೆ ವಿಚಾರಿಸುವುದು ಸಾಮಾನ್ಯ. ಆದರೆ, ಈ ಬಾರಿ ಕೋರ್ಸ್‌ಗಳ ಜತೆಗೆ ಯಾವೆಲ್ಲ ಹೊಸ ಕೋರ್ಸ್‌ಗಳು ಲಭ್ಯ? ಯಾವ ಕಾಲೇಜಿನಲ್ಲಿ ಹೊಸ ಕೋರ್ಸ್‌ ಆರಂಭಿಸಲಾಗಿದೆ? ಎಂದು ಕೂಡ ವಿದ್ಯಾರ್ಥಿಗಳು ಹಾಗೂ ಪಾಲಕರು ವಿಚಾರಿಸಿದರು. ಏರೋಸ್ಪೇಸ್ ಎಂಜಿನಿಯರಿಂಗ್, ಟೂರಿಸಂ, ಹೋಟೆಲ್ ಮ್ಯಾನೇಜ್ಮೆಂಟ್‌ ಸೇರಿದಂತರ ವಿವಿಧ ಕೋರ್ಸ್‌ಗಳ ಬಗ್ಗೆ ಕೂಡ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT