ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದಿನಗೂಲಿ; ಕೆಲಸಕ್ಕೆ ಚಕ್ಕರ್, ಪ್ರಚಾರಕ್ಕೆ ಹಾಜರ್‌!

ಲೋಕಸಭಾ ಚುನಾವಣೆ ಕಾವು * ಜನರನ್ನು ಕರೆತರಲು ಗುತ್ತಿಗೆದಾರರು
Last Updated 22 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದೆಲ್ಲೆಡೆಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, ರಾಜಕೀಯ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪರ ಪ್ರಚಾರವೂ ಚುರುಕುಗೊಂಡಿದೆ. ವರ್ಷಪೂರ್ತಿ ಕಾರ್ಮಿಕರಾಗಿ ದುಡಿಯುವ ಜನ, ದಿನದ ಕೂಲಿಗಾಗಿ ಮೂಲ ಕೆಲಸಕ್ಕೆ ರಜೆ ಹಾಕಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹಾಜರಾಗುತ್ತಿದ್ದಾರೆ.

ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ ಶುರುವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಗುಂಪು ಗುಂಪಾಗಿ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.

ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂಸಂಜೆ 4ರಿಂದ 9 ಗಂಟೆವರೆಗಿನ ಅವಧಿಯಲ್ಲಿ ಪ್ರಚಾರದ ಕಾವು ಜೋರಾಗಿದೆ. ದಿನದ ಕೂಲಿಗಾಗಿ ಮನೆಗೆಲಸ ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗುತ್ತಿದ್ದ ಮಹಿಳೆಯರು ಹಾಗೂ ಪುರುಷರು, ಈಗ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿಯ ಉದ್ಯೋಗಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾರ್ಖಾನೆಯಲ್ಲಿ ದುಡಿದರೆ ಸಿಗುವ ವೇತನಕ್ಕಿಂತ ಶೇ 50ರಿಂದ ಶೇ 100ರಷ್ಟು ಹೆಚ್ಚಿನ ವೇತನ ಪ್ರಚಾರ ಕೆಲಸದಿಂದ ಸಿಗುತ್ತಿದೆ. ಹೀಗಾಗಿ ಉದ್ಯೋಗಿಗಳು, ಪ್ರಚಾರದತ್ತ ವಾಲುತ್ತಿದ್ದಾರೆ. ತಮ್ಮ ಪ್ರದೇಶ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರ ಜೊತೆಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಕೆಲವೆಡೆ ಕಾಲೇಜು ವಿದ್ಯಾರ್ಥಿಗಳನ್ನೂ ಪ್ರಚಾರ ಕೆಲಸಕ್ಕೆ ಸೆಳೆಯಲಾಗುತ್ತಿದೆ.

‘ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಾರ್ಮೆಂಟ್ಸ್‌ ಕಾರ್ಖಾನೆಯ ಉದ್ಯೋಗಿಗಳಿಗೆ ಬೇಡಿಕೆ ಬರುತ್ತಿದೆ.ಮೂಲ ಕೆಲಸಕ್ಕಿಂತ ಜಾಸ್ತಿ ವೇತನ ಸಿಗುತ್ತದೆಂಬ ಆಸೆಯಿಂದಾಗಿ ಕಾರ್ಖಾನೆಯ ಕೆಲಸಕ್ಕೆ ರಜೆ ಹಾಕಿ ಉದ್ಯೋಗಿಗಳು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ’ ಎಂದು ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಕಾರ್ಯದರ್ಶಿ ಕೆ.ಸರೋಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಉದ್ಯೋಗಿಗಳಷ್ಟೇ ಈಗ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರ ಸಂಖ್ಯೆ ಹೆಚ್ಚಳವಾಗಲಿದೆ. ದಿನಪೂರ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡಿ ಆಯಾಸಗೊಳ್ಳುವುದಕ್ಕಿಂತ, ಬೆಳಿಗ್ಗೆ ಹಾಗೂ ಸಂಜೆ ಮಾತ್ರ ಪ್ರಚಾರ ಮಾಡಿ ಮನೆ ಸೇರುವುದು ಒಳ್ಳೆಯದೆಂಬ ಭಾವನೆ ಉದ್ಯೋಗಿಗಳದ್ದು’ ಎಂದು ಅವರು ಹೇಳಿದರು.

‘ಪ್ರಚಾರಕ್ಕೆ ಹೋದವರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ಸಂಜೆ ತಿಂಡಿ, ರಾತ್ರಿ ಊಟ ಸಿಗುತ್ತದೆ. ಮತದಾನದ ದಿನದವರೆಗೂ ಪ್ರಚಾರ ಮಾಡಬೇಕಾಗುತ್ತದೆ. ಪ್ರಚಾರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮಹಿಳಾ ಮತಗಳನ್ನು ಸೆಳೆಯಬಹುದೆಂಬ ಭಾವನೆಅಭ್ಯರ್ಥಿಗಳು ಹಾಗೂ ಮುಖಂಡರದ್ದಾಗಿದೆ. ಹೀಗಾಗಿಯೇ ಗಾರ್ಮೆಂಟ್ಸ್‌ ಕಾರ್ಖಾನೆಯ ಮಹಿಳೆಯರನ್ನು ಪ್ರಚಾರಕ್ಕೆ ಕರೆದೊಯ್ಯುವವರ ಸಂಖ್ಯೆ ಹೆಚ್ಚಿದೆ’ ಎಂದು ತಿಳಿಸಿದರು.

ಗೃಹ ಕಾರ್ಮಿಕರ ಹಕ್ಕುಗಳ ಹೋರಾಟಗಾರ್ತಿ ಪಾರಿಜಾತ, ‘ಪಾತ್ರೆ ಹಾಗೂ ಬಟ್ಟೆ ತೊಳೆಯುವವರು, ಮಕ್ಕಳು ಹಾಗೂ ಹಿರಿಯರನ್ನು ನೋಡಿಕೊಳ್ಳುವವರು, ಮನೆಗಳ ಉದ್ಯಾನ ನಿರ್ವಹಣೆ ಮಾಡುವವರು ಸೇರಿದಂತೆ ಮನೆಗೆಲಸ ಮಾಡುವ ಮಹಿಳೆಯರಲ್ಲಿ ಕೆಲವರು ವೈಯಕ್ತಿಕವಾಗಿ ಪ್ರಚಾರಕ್ಕೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

ಜನರನ್ನು ಕರೆತರಲು ಗುತ್ತಿಗೆದಾರರು: ಪ್ರಚಾರಕ್ಕೆ ಜನರನ್ನು ಕರೆತರುವುದೇ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ಸವಾಲಿನ ಕೆಲಸವಾಗಿದೆ. ಅದೇ ಕಾರಣಕ್ಕೆ ಅವರೆಲ್ಲ ಗುತ್ತಿಗೆದಾರರ ಮೊರೆ ಹೋಗುತ್ತಿದ್ದಾರೆ.

‘ಜನರನ್ನು ಪ್ರಚಾರಕ್ಕೆ ಕರೆತರುವುದಕ್ಕಾಗಿ ನಗರದಲ್ಲಿ 50ಕ್ಕೂ ಹೆಚ್ಚು ಗುತ್ತಿಗೆದಾರರಿದ್ದಾರೆ. ನಿರ್ದಿಷ್ಟ ಮೊತ್ತವನ್ನು ಅವರಿಗೆ ಕೊಟ್ಟು ಎಷ್ಟು ಜನ ಬೇಕು ಎಂದು ಹೇಳಿದರೆ, ನಿಗದಿತ ದಿನ ಹಾಗೂ ಸಮಯಕ್ಕೆ ಜನರನ್ನು ಕರೆತರುತ್ತಾರೆ’ ಎಂದು ಅಭ್ಯರ್ಥಿಯೊಬ್ಬರುಪ್ರಚಾರದ ಹೊಣೆ ಹೊತ್ತಿರುವ ಮುಖಂಡರೊಬ್ಬರು ತಿಳಿಸಿದರು.

‘ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು, ಪ್ರಚಾರ ಮಾಡಲು ಹಾಗೂ ಸಭೆ–ಸಮಾರಂಭ ನಡೆಸಲು ಗುತ್ತಿಗೆದಾರರಿಂದಲೇ ಜನರನ್ನು ಕರೆಸುತ್ತಿದ್ದಾರೆ. ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಬಗೆಯ ಜನರನ್ನು ಗುತ್ತಿಗೆದಾರರೇ ಕರೆತರುತ್ತಾರೆ’ ಎಂದು ಹೇಳಿದರು.

‘ಇಂದು ಈ ಅಭ್ಯರ್ಥಿ, ನಾಳೆ ಬೇರೊಬ್ಬ’

ದಿನಗೂಲಿ ನೌಕರರನ್ನು ಬಳಸಿಕೊಂಡು ಕೆಲ ಅಭ್ಯರ್ಥಿಗಳು ಕೆಂಗೇರಿ, ರಾಜರಾಜೇಶ್ವರಿನಗರ, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಪ್ರಚಾರನಿರತ ಯುವಕರೊಬ್ಬರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ದಿನಕ್ಕೆ ₹400 ಕೊಡುತ್ತಾರೆಂದು ಈ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ನಾಳೆ ಇನ್ನೊಬ್ಬರ ಪರ ಪ್ರಚಾರಕ್ಕೆ ಹೋಗುತ್ತೇನೆ. ಚುನಾವಣೆ ಮುಗಿಯುವವರೆಗೂ ಊಟ, ವೇತನಕ್ಕೆ ಕೊರತೆ ಇಲ್ಲ’ ಎಂದು ತಿಳಿಸಿದರು.

ಮಹಿಳೆಯೊಬ್ಬರು, ‘ಪತಿ ಹಾಗೂ ನಾನು ಒಟ್ಟಿಗೆ ಪ್ರಚಾರಕ್ಕೆ ಬಂದಿದ್ದೇನೆ. ಮನೆ ಮನೆಗೆ ಹೋಗಿ ಕರಪತ್ರ ಹಂಚಿ ಅಭ್ಯರ್ಥಿಗೆ ಮತ ನೀಡಿ ಎಂದು ಕೋರುತ್ತಿದ್ದೇವೆ’ ಎಂದು ಹೇಳಿದರು.

ಪ್ರಚಾರಕ್ಕೆ ನಿಗದಿಪಡಿಸಿರುವ ದಿನಗೂಲಿ

ಮಹಿಳೆಯರಿಗೆ – ₹300ರಿಂದ ₹500

ಪುರುಷರಿಗೆ – ₹400ರಿಂದ ₹700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT