ಚುನಾವಣಾ ಆಯೋಗದ ವೆಬ್‌ಸೈಟ್‌ ದುರಸ್ತಿ ಎಂದು?

ಶನಿವಾರ, ಮಾರ್ಚ್ 23, 2019
24 °C

ಚುನಾವಣಾ ಆಯೋಗದ ವೆಬ್‌ಸೈಟ್‌ ದುರಸ್ತಿ ಎಂದು?

Published:
Updated:

ಬೆಂಗಳೂರು: ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಬೇಕು ಎಂದು ನೀವೇನಾದರೂ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಹೋದರೆ, ನಿಮಗೆ ನಿರಾಸೆಯೇ ಗತಿ.‌

ಮತದಾರರ ಪಟ್ಟಿಗೆ ಹೆಸರು ನೋಂದಣಿ, ಮತಗಟ್ಟೆ ಹುಡುಕುವುದು, ಹೆಸರು ಪರಿಷ್ಕರಿಸುವುದು...ಹೀಗೆ ಮತಚೀಟಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಕಷ್ಟವನ್ನು ತಪ್ಪಿಸಬೇಕೆಂದೇ ಚುನಾವಣಾ ಆಯೋಗ ವೆಬ್‌ಸೈಟ್‌ ಪ್ರಾರಂಭಿಸಿತು. ಆದರೆ, ಈ ವೆಬ್‌ಸೈಟ್‌ನಿಂದ ಜನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ.

ವೆಬ್‌ಸೈಟ್‌ನಲ್ಲಿ ಯಾವೊಂದು ಆಯ್ಕೆಯೂ ಸರಿಯಾಗಿ ಕೆಲಸ ಮಾಡುವುದಿಲ್ಲ. ‘ಬೇಕಾಬಿಟ್ಟಿಯಾಗಿ ವೆಬ್‌ಸೈಟ್‌ ರೂಪಿಸಿ, ಅದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದ ಮೇಲೆ ವೆಬ್‌ಸೈಟ್‌ನಲ್ಲಿಯೇ ನೋಂದಣಿಯಾಗಬಹುದು ಎಂದು ಆಯೋಗ ಏಕೆ ಪ್ರಚಾರ ಮಾಡಬೇಕು’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲೋಕಸಭೆ ಚುನಾವಣೆಗಳು ಘೋಷಣೆಯಾಗಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಏಪ್ರಿಲ್‌ 18 ಮತ್ತು 23ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿರುವವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್‌ 16 ಕೊನೆಯ ದಿನ. ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಮತದಾರರಿಗೆ ಮಾರ್ಚ್‌ 23 ಕೊನೆಯ ದಿನವಾಗಿದೆ.

ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ Enroll online as voter ಎಂಬಲ್ಲಿ ನೀವು ಕ್ಲಿಕ್‌ ಮಾಡಿದರೆ National voters service portal ತೆರೆದುಕೊಳ್ಳುತ್ತದೆ. ಹೊಸದಾಗಿ ಹೆಸರು ಸೇರ್ಪಡಿಸುವುದು, ಹೆಸರು ಪರಿಷ್ಕರಿಸುವುದು... ಹೀಗೆ ಅಲ್ಲಿರುವ ಯಾವುದನ್ನೇ ಆಯ್ಕೆ ಮಾಡಿದರೂ This site can't be reached ಎಂದು ಬರುತ್ತದೆ.

ಉತ್ತಮ ನಾಗರೀಕ ಸೇವೆಗಳಿಗಾಗಿ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಿ ಎನ್ನುವ ಲಿಂಕ್‌ ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಕಾಣುತ್ತಿರುತ್ತದೆ. ಇದನ್ನು ಕ್ಲಿಕ್‌ ಮಾಡಿ ಮೊಬೈಲ್‌ ಸಂಖ್ಯೆ ಹಾಕಿದರೆ, Message sending failed ಎಂದು ತೋರಿಸುತ್ತದೆ.

‘ವೇಗದ ಜೀವನಶೈಲಿ ಇರುವ ಬೆಂಗಳೂರಿನಂತಹ ನಗರಗಳಲ್ಲಿ ಪಾಲಿಕೆ ಕಚೇರಿಗೆ ಹುಡುಕಿಕೊಂಡು ಹೋಗಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವೆಬ್‌ಸೈಟ್‌ ಕೂಡ ಸರಿಯಿಲ್ಲವೆಂದರೆ ನೋಂದಣಿ ಹೇಗಾಗುತ್ತದೆ? ಲೋಪಗಳೇ ಹೆಚ್ಚಿಟ್ಟುಕೊಂಡು ಮತದಾನದ ಪ್ರಮಾಣ ಹೆಚ್ಚುತ್ತಿಲ್ಲ ಎಂದು ಆಯೋಗ ಗೋಳಾಡುತ್ತಿದ್ದರೆ ಏನು ಪ್ರಯೋಜನ’ ಎಂದು ಸುಮಿತ್‌ ಪ್ರಶ್ನಿಸಿದರು.

‘ಮತದಾನಕ್ಕೆ ಅರ್ಹನಾದಾಗಿನಿಂದಲೂ ಒಂದೇ ಪ್ರದೇಶದಿಂದ ನಾನು ಮತ ಹಾಕುತ್ತಿದ್ದೇನೆ. ಕಳೆದ ವರ್ಷ ಮತದಾರರ ಪಟ್ಟಿಯಲ್ಲಿ ಇದ್ದ ನನ್ನ ಹೆಸರು ಈ ವರ್ಷ ಕಾಣೆಯಾಗಿದೆ. ಅದು ಹೇಗೆ ಎಂದು ನನಗೆ ತಿಳಿಯದು. ಆನ್‌ಲೈನ್‌ನಲ್ಲಿ ದೂರು ನೀಡಿದೆ. ಅದನ್ನು ಸರಿಪಡಿಸಲು 30 ದಿನ ತೆಗೆದುಕೊಳ್ಳುತ್ತದೆ ಎಂದು ಪ್ರತಿಕ್ರಿಯಿ ಬಂದಿದೆ. ಇದು ಕರ್ನಾಟಕ ಚುನಾವಣಾ ಆಯೋಗದ ನಿರ್ಲಕ್ಷ್ಯ. ನನ್ನ ಹೆಸರನ್ನು ಯಾವ ಕಾರಣಕ್ಕೆ ಪಟ್ಟಿಯಿಂದ ತೆಗೆದಿದ್ದೀರಿ ಎನ್ನುವುದನ್ನು ತಿಳಿಸಬೇಕು ಮತ್ತು ತಕ್ಷಣವೇ ಹೆಸರು ಸೇರಿಸಬೇಕು’ ಎಂದು ತೇಜೇಶ್‌ ಎನ್ನುವವರು ಫೇಸ್‌ಬುಕ್‌ನಲ್ಲಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !