ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಬಳಿ ಮಾರಾಮಾರಿ; ಗಾಯ

Last Updated 18 ಏಪ್ರಿಲ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಜಿನಾಪುರ ವಾರ್ಡ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದ್ದು, ಇಬ್ಬರು ಕಾರ್ಯಕರ್ತರು ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಜಿನಾಪುರ ಪ್ಲಾಟ್‌ಫಾರ್ಮ್‌ ರಸ್ತೆಯ ಸರ್ಕಾರಿ ಉರ್ದು ಶಾಲೆ ಮತಗಟ್ಟೆ ಬಳಿ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಗಲಾಟೆ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡು ಎರಡೂ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಪ್ರವೇಶಿಸಿದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿ ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಲು ಅನುವು ಮಾಡಿಕೊಟ್ಟರು.

ಬೈದಿದ್ದಕ್ಕೆ ಜಗಳ: ಮತಗಟ್ಟೆ ಬಳಿ ಟೇಬಲ್ ಹಾಕುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾತಿನ ಚಕಮಕಿ ನಡೆಯುತ್ತಿತ್ತು.

ಈ ವೇಳೆ ಸೈಯದ್ ನಹೀಂ ಎಂಬಾತ, ತನ್ನ ಪಕ್ಷದ ಕಾರ್ಯಕರ್ತನಿಗೇ (ಈತನ ಭಾಮೈದ ಸೈಯದ್ ಇಮ್ರಾನ್ ಬಿಜೆಪಿ ಕಾರ್ಯಕರ್ತ) ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

ಆಗ ಅಲ್ಲೇ ಇದ್ದ ಸೈಯದ್ ಇಮ್ರಾನ್, ‘ನನ್ನ ಭಾವನಿಗೇ ಬೈಯ್ಯುತ್ತೀಯಾ’ ಎಂದು ನಹೀಂ ಮೇಲೆ ತಿರುಗಿಬಿದ್ದಿದ್ದ. ವಾಗ್ವಾದ ಜೋರಾಗಿ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.

ಈ ಹಂತದಲ್ಲಿ ನಹೀಂ ಹಾಗೂ ಇಮ್ರಾನ್ ಕೊರಳಪಟ್ಟಿ ಹಿಡಿದುಕೊಂಡು ಗುದ್ದಾಟಕ್ಕೆ ಬಿದ್ದರು. ನಹೀಂ ಅಲ್ಲೇ ಇದ್ದ ವ್ಹೀಲ್ ಚೇರ್ ತೆಗೆದುಕೊಂಡು ಇಮ್ರಾನ್‌ನ ತಲೆ ಮೇಲೆ ಎತ್ತಿ ಹಾಕಿದರೆ, ಅದಕ್ಕೆ ಪ್ರತಿಯಾಗಿ ಆತನೂ ರಾಡ್‌ನಿಂದ ತಲೆಗೆ ಹೊಡೆದ. ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ತಕ್ಷಣ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಗಲಾಟೆಯ ದೃಶ್ಯವನ್ನು ಕಾರ್ಯಕರ್ತರೊಬ್ಬರು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೂರು–ಪ್ರತಿದೂರು

‘ನಹೀಂ ಹಾಗೂ ಇಮ್ರಾನ್ ಇಬ್ಬರೂ ದೂರು– ಪ್ರತಿದೂರು ಕೊಟ್ಟಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅವರು ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT