ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ನಿರ್ವಹಣೆ ಕಾಮಗಾರಿ : ಬಸ್‌, ಲಾರಿಗೆ ನಿಷೇಧ

7

ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ನಿರ್ವಹಣೆ ಕಾಮಗಾರಿ : ಬಸ್‌, ಲಾರಿಗೆ ನಿಷೇಧ

Published:
Updated:

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಮೀಪ ಹೊಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಸೋಮವಾರ (ಜ.14) ರಾತ್ರಿಯಿಂದ ಬಸ್‌ ಮತ್ತು ಇತರ ಭಾರಿವಾಹನಗಳ ಸಂಚಾರ ನಿಷೇಧಿಸಲಾಗಿದೆ.

‘ಮೇಲ್ಸೇತುವೆಯ ದುರಸ್ತಿ ಕಾರ್ಯದ ಪ್ರಯುಕ್ತ ಇಲ್ಲಿ ಒಂದು ತಿಂಗಳ ಕಾಲ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಫ್ಲೈಓವರ್‌ನ ವಿಸ್ತರಿತ ಜೋಡಣೆಯ ಭಾಗಗಳಲ್ಲಿ ನಿಯತಕಾಲಿಕ ನಿರ್ವಹಣೆ ಕಾಮಗಾರಿ ಡಿ. 17ರಿಂದ ಜನವರಿ ಮೊದಲ ವಾರದವರೆಗೆ ಅರ್ಧದಷ್ಟು ಪೂರ್ಣಗೊಂಡಿದೆ. ಜ. 15ರಿಂದ ಫ್ಲೈಓವರ್‌ನ ಬಲಭಾಗದ ವಿಸ್ತರಿತ ಜೋಡಣೆಗಳ ನಿರ್ವಹಣೆ ಆರಂಭಿಸುತ್ತೇವೆ. ಆದ್ದರಿಂದ ಈ ಮಾರ್ಗದ ಮೂಲಕ ಎಲೆಕ್ಟ್ರಾನಿಕ್‌ ಸಿಟಿ, ಸಿಲ್ಕ್‌ ಬೋರ್ಡ್‌ ಕಡೆಗೆ ತೆರಳುವ ಬಸ್‌ ಸಂಚಾರ ನಿರ್ಬಂಧಿಸಲಾಗುವುದು’ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಕಂಪನಿಯ ಮಾರ್ಗ ನಿರ್ವಹಣಾ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾ.ಬಲದೇವ್‌ ಸಿಂಗ್‌ ಹೇಳಿದರು.

‘ಇತ್ತೀಚೆಗೆ ಈ ಫ್ಲೈಓವರ್‌ನ ಜೋಡಣೆಗಳನ್ನು ದುರಸ್ತಿಗೊಳಿಸಲಾಗಿದೆ. ಹೀಗಾಗಿ ಪ್ರಯಾಣಿಕರ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಕೆಲಕಾಲದ ಮಟ್ಟಿಗೆ ಸಂಚಾರ ಮಾರ್ಗವನ್ನು ಬದಲಾಯಿಸುತ್ತಿದ್ದೇವೆ’ ಎಂದರು.

‘ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ನಾವು 35 ದಿನಗಳ ಗಡುವು ನಿಗದಿಪಡಿಸಿದ್ದೆವು. ಆದರೆ, ಅದು 27 ದಿನಗಳ ಒಳಗೆ ಮುಗಿದಿದೆ. ಉಳಿದ ಭಾಗದ ಕಾಮಗಾರಿ ಪೂರ್ಣಗೊಳಿಸಲು ಜನರ ಸಹಕಾರ ಕೋರುತ್ತೇವೆ’ ಎಂದು ಅವರು ಹೇಳಿದರು. 

ಈ ಫ್ಲೈಓವರ್‌ ಮೂಲಕ ಪ್ರತಿದಿನ ಸುಮಾರು 75 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ವಾಹನ ನಿರ್ಬಂಧದಿಂದಾಗಿ ಈ ಪ್ರದೇಶ ಸಾಕಷ್ಟು ಸಂಚಾರ ದಟ್ಟಣೆ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಹನಗಳು ಏಕಮುಖ ಸಂಚಾರ ಮಾರ್ಗದಲ್ಲಿ  ಹಂತಹಂತವಾಗಿ ಸಂಚರಿಸಬೇಕಾಗುತ್ತದೆ. 

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ತಮಿಳುನಾಡು ಸಾರಿಗೆ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ಸೇರಿದಂತೆ  ಸಾವಿರಾರು ಬಸ್‌ಗಳು ಈ ತೊಂದರೆ ಎದುರಿಸಲಿವೆ.

ನಗರದ ವಿವಿಧ ಭಾಗಗಳಿಂದ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಹೋಗುವವರಿಗೆ ಈ ದಟ್ಟಣೆಯಿಂದ ತೊಂದರೆಯಾಗಲಿದೆ. ಆದ್ದರಿಂದ ಸಂಚಾರ ದಟ್ಟಣೆ ಕಡಿಮೆ ಇರುವ ವಾರಾಂತ್ಯದ ದಿನಗಳಲ್ಲಿ ಮಾತ್ರ ಕಾಮಗಾರಿ ನಡೆಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !