ಎಲಿವೇಟೆಡ್‌ ಕಾರಿಡಾರ್‌: ಜನಾಭಿಪ್ರಾಯ ಪಡೆಯದೇ ತೀರ್ಮಾನವಿಲ್ಲ ಎಂದ ಸಿಎಂ

ಗುರುವಾರ , ಏಪ್ರಿಲ್ 18, 2019
30 °C
ಯೋಜನೆ ವಿರೋಧಿಗಳ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಲೋಚನೆ

ಎಲಿವೇಟೆಡ್‌ ಕಾರಿಡಾರ್‌: ಜನಾಭಿಪ್ರಾಯ ಪಡೆಯದೇ ತೀರ್ಮಾನವಿಲ್ಲ ಎಂದ ಸಿಎಂ

Published:
Updated:
Prajavani

ಬೆಂಗಳೂರು: ‘ಜನಾಭಿಪ್ರಾಯ ಸಂಗ್ರಹಿಸದೆ ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ವಿಚಾರದಲ್ಲಿ ಮುಂದಡಿ ಇಡುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಈ ಯೋಜನೆಯನ್ನು ವಿರೋಧಿಸಿ ವಿವಿಧ ಸಂಫಟನೆಗಳು ಕಬ್ಬನ್‌ ಉದ್ಯಾನದ ಬಳಿ ಶನಿವಾರ ಪ್ರತಿಭಟನೆ ನಡೆಸಿದ್ದವು. ಈ ಸಂಘಟನೆಗಳ ಪ್ರಮುಖರ ಜೊತೆ ಮುಖ್ಯಮಂತ್ರಿ ಮಂಗಳವಾರ ಸಮಾಲೋಚನೆ ನಡೆಸಿದರು.

‘ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಅಭಿವೃದ್ಧಿಪಡಿಸುವುದು ನನ್ನ ಉದ್ದೇಶ. ಮುಂದಿನ ಹಲವಾರು ದಶಕಗಳವರೆಗೆ ನಗರದ ಜನರ ಉಪಯೋಗಕ್ಕೆ ಬರುವಂತಹ ಸುಸ್ಥಿರ ಯೋಜನೆ ಜಾರಿಗೊಳ್ಳಬೇಕು’ ಎಂಬ ಆಶಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.

ಈ ಯೋಜನೆ ಜಾರಿಗೊಳಿಸಿದರೆ ನಗರದಲ್ಲಿ ಖಾಸಗಿ ಕಾರುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಬದಲು ಮತ್ತಷ್ಟು ಹೆಚ್ಚಳವಾಗುವುದನ್ನು ಇದು ಪರೋಕ್ಷವಾಗಿ ಕಾರಣವಾಗಲಿದೆ ಎಂದು ಸಾರಿಗೆ ತಜ್ಞರು ವಿವರಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌, ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮಾ ಅವರು ನಗರದ ಸಂಚಾರ ಸಮಸ್ಯೆ ನೀಗಿಸುವ ಸುಸ್ಥಿರ ಯೋಜನೆ ಕುರಿತು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ಕುರಿತ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳ ಬಗ್ಗೆ ವರ್ಮಾ ವಿವರಿಸಿದರು. ಕಾರಿಡಾರ್‌ಗಿಂತಲೂ ಮಿತವ್ಯಯಕಾರಿ ಹಾಗೂ ಸುಸ್ಥಿರವಾಗಿರುವ ಪರ್ಯಾಯ ಮಾರ್ಗೋಪಾಯಗಳ ಬಗ್ಗೆಯೂ ಸಲಹೆ ನೀಡಿದರು. 

ಈ ಯೋಜನೆ ಸಲುವಾಗಿ 3,821 ಮರಗಳನ್ನು ಕಡಿದರೆ ಆಗುವ ಅನಾಹುತಗಳೇನು, ಈ ಯೋಜನೆಯಿಂದ ನಗರದ ಪರಿಸರ ವ್ಯವಸ್ಥೆ ಮೇಲೆ ಹೇಗೆ ದುಷ್ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ಪರಿಸರ ಕಾರ್ಯಕರ್ತರು ಎಳೆ ಎಳೆಯಾಗಿ ವಿವರಿಸಿದರು.

‘ಎಲಿವೇಟೆಡ್‌ ಕಾರಿಡಾರ್‌ ಜಾರಿಗೊಳಿಸಲೇಬೇಕೆಂಬ ಹಟ ನನಗಿಲ್ಲ. ನಗರದ ಸಾರಿಗೆ ಸಮಸ್ಯೆ ಬಗೆಹರಿಯಬೇಕು ಅಷ್ಟೇ. ಜನರ ಅಭಿಪ್ರಾಯ ಪಡೆಯದೆ ಈ ಯೋಜನೆ ಜಾರಿಗೊಳಿಸುವುದಿಲ್ಲ. ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಪಡೆಯದೆ ಈ ಯೋಜನೆ ಅನುಷ್ಠಾನದ ವಿಚಾರದಲ್ಲಿ ಮುಂದಡಿ ಇಡುವುದಿಲ್ಲ’ ಎಂದು ಸಿ.ಎಂ ಭರವಸೆ ನೀಡಿದರು. 

ಲೋಕಸಭಾ ಚುನಾವಣೆ ಮುಗಿದ ಬಳಿಕ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಮತ್ತೊಮ್ಮೆ ಆಹ್ವಾನಿಸಿ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಕುರಿತು ಸಮಗ್ರವಾಗಿ ಚರ್ಚಿಸುವುದಾಗಿ ತಿಳಿಸಿದರು.

ಎನ್‌ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಲಿಯೊ ಸಲ್ಡಾನ, ರಂಗಕರ್ಮಿ ಪ್ರಕಾಶ ಬೆಳವಾಡಿ, ವಾಸ್ತುಶಾಸ್ತ್ರಜ್ಞ ನರೇಶ್‌ ನರಸಿಂಹನ್, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್‌, ವೈಟ್‌ಫೀಲ್ಡ್‌ ರೈಸಿಂಗ್ ಸಂಘಟನೆಯ ಜಿಬಿ ಜಮಾಲ್,  ಕೊಳೆಗೇರಿ ಜನರ ಹಕ್ಕುಗಳ ಹೋರಾಟಗಾರ ಐಸಾಕ್ ಅಮೃತರಾಜ್ , ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯ ತಾರಾ ಕೃಷ್ಣಸ್ವಾಮಿ ಹಾಗೂ ಶ್ರೀನಿವಾಸ್ ಅಲವಿಲ್ಲಿ ಭಾಗವಹಿಸಿದರು. ಶನಿವಾರ ನಡೆದ ಪ್ರತಿಭಟನೆಯಲ್ಲಿ ವ್ಯಕ್ತವಾದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

***

ನಮ್ಮ ಅಹವಾಲು ಆಲಿಸಿದ ಸಿ.ಎಂ ಸಂಚಾರ ವ್ಯವಸ್ಥೆ ಬಗ್ಗೆ ತಮ್ಮ ಕನಸುಹಂಚಿಕೊಂಡರು. ನಾವೂ ಸುಸ್ಥಿರ ಪರಿಹಾರೋಪಾಯಗಳ ಬಗ್ಗೆ ಸಲಹೆ ನೀಡಿದ್ದೇವೆ

-ಲಿಯೊ ಸಲ್ಡಾನ, ಎನ್‌ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !