ಎಲಿವೇಟೆಡ್‌ ಕಾರಿಡಾರ್‌: 3 ಪ್ಯಾಕೇಜ್‌ಗಳಿಗೆ ಟೆಂಡರ್‌

ಶುಕ್ರವಾರ, ಮಾರ್ಚ್ 22, 2019
28 °C
ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಲೇನ್‌ * ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಬಹುಹಂತದ ಮಾರ್ಗ

ಎಲಿವೇಟೆಡ್‌ ಕಾರಿಡಾರ್‌: 3 ಪ್ಯಾಕೇಜ್‌ಗಳಿಗೆ ಟೆಂಡರ್‌

Published:
Updated:

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಉತ್ತರ –ದಕ್ಷಿಣ ಕಾರಿಡಾರ್‌ನ 3 ಪ್ಯಾಕೇಜ್‌ಗಳಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ಟೆಂಡರ್‌ ಆಹ್ವಾನಿಸಿದೆ. 

ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಲೇನ್‌ ಒದಗಿಸುವ ಪ್ರಸ್ತಾವವೂ ಟೆಂಡರ್‌ನಲ್ಲಿದೆ. ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್‌ ಹಾಗೂ ಕನ್‌ಸ್ಟ್ರಕ್ಷನ್‌ (ಇಪಿಸಿ) ಮಾದರಿಯಲ್ಲಿ ಈ ಕಾರಿಡಾರ್‌ ನಿರ್ಮಿಸಲಾಗುತ್ತಿದೆ. ಈ ಮಾದರಿಯಲ್ಲಿ ಕಾರಿಡಾರ್‌ನ ವಿನ್ಯಾಸ ರೂಪಿಸುವುದರಿಂದ ಹಿಡಿದು, ಸಾಮಗ್ರಿಗಳ ಸಂಗ್ರಹ ಹಾಗೂ ನಿರ್ಮಾಣದ ಎಲ್ಲ ಹೊಣೆಗಾರಿಕೆಯೂ ಗುತ್ತಿಗೆದಾರರದೇ ಆಗಿರುತ್ತದೆ.

ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಗುತ್ತಿಗೆದಾರರಿಗೆ 3 ವರ್ಷ ಕಾಲಾವಕಾಶ ನೀಡಲಾಗಿದೆ. ಈ ಕಾರಿಡಾರ್‌ ಅನ್ನು 10 ವರ್ಷಗಳು ಅವರೇ ನಿರ್ವಹಣೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಮಾ.3ರ ಬಳಿಕ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ 27ರಂದು ನಿಗಮದ ಕಚೇರಿಯಲ್ಲಿ ಪ್ರಿ ಬಿಡ್‌ ಸಭೆ ನಡೆಯಲಿದೆ. ತಾಂತ್ರಿಕ ಬಿಡ್‌ಗಳನ್ನು ಮೇ 6ರಂದು ತೆರೆಯಲಾಗುತ್ತದೆ.

ಈ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ನಗರದ ಅನೇಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಇದರಿಂದ ಪ್ರಯೋಜನಕ್ಕಿಂತ ಹೆಚ್ಚಾಗಿ ಅನನುಕೂಲಗಳೇ ಹೆಚ್ಚು ಎಂದು ನಗರ ಯೋಜನಾ ತಜ್ಞರು ಆತಂಕ ವ್ಯಕ್ತಪಡಿಸಿದ್ದರು.

ಜನಾಭಿಪ್ರಾಯಕ್ಕೆ ಕಿವಿಗೊಡದ ಸರ್ಕಾರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ತರಾತುರಿಯಲ್ಲಿ ಎಲಿವೇಟೆಡ್‌ ಕಾರಿಡಾರ್‌ಗೆ ಟೆಂಡರ್‌ ಕರೆದಿದೆ ಎಂದು ಪರಿಸರ ಹೊರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜನರ ಅಭಿಪ್ರಾಯ ಪಡೆದ ಬಳಿಕ ಈ ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅದ್ಯಾವುದನ್ನೂ ಮಾಡದೆಯೇ ಏಕಾಏಕಿ ಈ ಯೋಜನೆಯ ಮೊದಲ ಹಂತದ ಮೂರು ಪ್ಯಾಕೇಜ್‌ಗಳಿಗೆ ಟೆಂಡರ್‌ ಕರೆದಿದ್ದಾರೆ. ಪರಿಸರಕ್ಕೆ ಮಾರಕವಾದ ಈ ಯೋಜನೆ ವಿರುದ್ಧ ನಾಗರಿಕ ಸಂಘಟನೆಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕಿದೆ’  ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘102 ಕಿ.ಮೀ ಉದ್ದದ ಕಾರಿಡಾರ್‌ ಯೋಜನೆಯ ಎಲ್ಲ ಹಂತಗಳು ಪೂರ್ಣಗೊಳ್ಳಲು ಸುಮಾರು 15 ವರ್ಷಗಳೇ ಬೇಕು. ಸರ್ಕಾರ ಮೊದಲು ನಗರಕ್ಕೆ ಒಂದು ಉತ್ತಮವಾದ ಸಂಚಾರ ಯೋಜನೆ ರೂಪಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ಡಬಲ್ ಡೆಕರ್‌ ರಸ್ತೆ

ಜೆ.ಸಿ.ನಗರದಿಂದ ಶಾಂತಿನಗರದ ಬಸ್‌ನಿಲ್ದಾಣದವರೆಗೆ ಬಹು ಹಂತದ (ಡಬಲ್‌ ಡೆಕರ್‌) ಕಾರಿಡಾರ್‌ ನಿರ್ಮಾಣವಾಗಲಿದೆ. ಇಲ್ಲಿ ಒಟ್ಟು ಎರಡು ಹಂತಗಳಲ್ಲಿ ಕಾರಿಡಾರ್‌ ರಸ್ತೆಗಳು ಇರಲಿವೆ.

ಪ್ಯಾಕೇಜ್–1:

4/6 ಲೇನ್‌ ಕಾರಿಡಾರ್‌: ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಿಂದ ಜಯಮಹಲ್‌ ರಸ್ತೆಯ ಜೆ.ಸಿ.ನಗರದವರೆಗೆ (ಮೇಖ್ರಿ ವೃತ್ತದ ಮೂಲಕ);

ಉದ್ದ: 6.15 ಕಿ.ಮೀ

ಅಂದಾಜು ವೆಚ್ಚ: ₹ 1,348.16 ಕೋಟಿ

ಪ್ಯಾಕೇಜ್‌–2:

2/3/4/6 ಲೇನ್‌ ಬಹುಹಂತದ ಕಾರಿಡಾರ್‌; ಜೆ.ಸಿ.ನಗರದಿಂದ ಶಾಂತಿನಗರ (ಜಯಮಹಲ್‌ ರಸ್ತೆ, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ, ಕ್ವೀನ್ಸ್‌ ರಸ್ತೆ, ಮಿನ್ಸ್ಕ್‌ ಸ್ಕ್ವೇರ್‌, ಕಸ್ತೂರಬಾ ರಸ್ತೆ, ಸಿದ್ಧಲಿಂಗಯ್ಯ ವೃತ್ತ, ವಿಠಲ ಮಲ್ಯ ಆಸ್ಪತ್ರೆ, ರಿಚ್ಮಂಡ್‌ ವೃತ್ತ, ಕೆ.ಎಚ್‌.ರಸ್ತೆ ಮೂಲಕ)

ಉದ್ದ: 8.75 ಕಿ.ಮೀ

ಅಂದಾಜು ವೆಚ್ಚ: ₹ 2,035.83 ಕೋಟಿ

ಪ್ಯಾಕೇಜ್‌ 3:

4 ಲೇನ್‌ ಕಾರಿಡಾರ್‌/ ಶಾಂತಿನಗರ ಬಸ್‌ನಿಲ್ದಾಣದಿಂದ ಸೆಂಟ್ರಲ್‌ ಸಿಲ್ಕ್‌ಬೋರ್ಡ್ ಜಂಕ್ಷನ್‌ (ಬಾಷ್‌, ಎನ್‌ಡಿಆರ್‌ಐ ಮತ್ತು ಎನ್ನ್ಈಎಎನ್‌ಪಿ ಪ್ರಾಂಗಣ, ಆಡುಗೋಡಿ, ಹೊಸೂರು ರಸ್ತೆ ಮೂಲಕ)

ಉದ್ದ: 7.22 ಕಿ.ಮೀ

ಅಂದಾಜು ವೆಚ್ಚ: ₹ 1676.72 ಕೋಟಿ

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !