ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಆಲಿಸದೆಯೇ ಅನುಮತಿ ನೀಡಿದ್ದು ಹೇಗೆ?

ಎಲಿವೇಟೆಡ್‌ ಕಾರಿಡಾರ್‌ಗೆ ಪರಿಸರ ಇಲಾಖೆ ಅನುಮತಿ * ಹಸಿರು ಕಾರ್ಯಕರ್ತರ ಆಕ್ರೋಶ
Last Updated 7 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ (ಇಐಎ) ವರದಿಯನ್ನು ಬಹಿರಂಗಪಡಿಸದೇ ಹಾಗೂ ಜನರ ಅಹವಾಲು ಆಲಿಸದೆಯೇ ಈ ಯೋಜನೆಗೆ ಅನುಮತಿ ನೀಡಿದ್ದು ಹೇಗೆ?

ರಾಜ್ಯಮಟ್ಟದ ಪರಿಸರ ಮೇಲಿನ ಪರಿಣಾಮಗಳ ಅಧ್ಯಯನ ಪ್ರಾಧಿಕಾರದ (ಎಸ್‌ಇಐಎಎ) ಮುಂದೆ ನಗರದ ಪರಿಸರ ಹೋರಾಟಗಾರರು ಇಟ್ಟಿರುವ ಪ್ರಶ್ನೆ ಇದು.

ಈ ಯೋಜನೆಗೆ 2019ರ ಮಾರ್ಚ್‌ 2ರಂದು ಎಸ್‌ಇಐಎಎ ಅನುಮತಿ ನೀಡಿದೆ. ಹರಿಯಾಣದ ಗುರುಗ್ರಾಮದ ‘ಏಕಾಮ್‌ ಏಷ್ಯಾ ಕೋ ಲಿಮಿಟೆಡ್‌’ ಸಂಸ್ಥೆಯು ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ ಎಂದು ಪರಿಸರ ಅನುಮತಿ ಪತ್ರದಲ್ಲಿ ಎಸ್‌ಇಐಎಎ ಉಲ್ಲೇಖಿಸಿದೆ.

ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತರಾತುರಿಯಲ್ಲಿ ಈ ಯೋಜನೆಗೆ ಎಸ್‌ಇಐಎಎ ಅನುಮತಿ ನೀಡಿದೆ ಎಂದು ಹಸಿರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರ ಅಕ್ಟೋಬರ್‌ 12ರಂದು ನಡೆದ ಎಸ್‌ಇಐಎಎ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಲಾಗಿತ್ತು. 16 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದು ಎಂಬ ಅಭಿಪ್ರಾಯ ಆ ಸಭೆಯಲ್ಲಿ ವ್ಯಕ್ತವಾಗಿತ್ತು.

ಆ ಬಳಿಕ ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌, ಸಿಟಿಜನ್ಸ್‌ ಫಾರ್‌ ಬೆಂಗಳೂರು, ಎನ್‌ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌, ಬಸ್ ಪ್ರಯಾಣಿಕರ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು 2019ರ ಜನವರಿ ತಿಂಗಳಲ್ಲಿ ಎಸ್‌ಇಐಎಎ ಸದಸ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಈ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದರು. ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು ಎಂದೂ ಒತ್ತಾಯಿಸಿದ್ದರು.

ಯೋಜನೆ ರೂಪಿಸುವಾಗ ಅನೇಕ ನಿಯಮಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಉಲ್ಲಂಘನೆ ಮಾಡಿದೆ. ಈ ಯೋಜನೆಯು ಕರ್ನಾಟಕ ಪಟ್ಟಣ ಮತ್ತು ಗ್ರಾಮೀಣ ಯೋಜನೆ ಕಾಯ್ದೆಯ ಆಶಯವನ್ನೂ ಪಾಲಿಸಿಲ್ಲ. ಇದಕ್ಕೆ ಅನುಮತಿ ನೀಡಿದರೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳ ಅನೇಕ ಆದೇಶಗಳ ಉಲ್ಲಂಘನೆ ಆಗಲಿದೆ ಎಂಬ ಬಗ್ಗೆಯೂ ಗಮನ ಸೆಳೆದಿದ್ದವು. ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಒತ್ತಾಯಿಸಿ ಪತ್ರ ಚಳವಳಿಯನ್ನೂ ಈ ಸಂಘಟನೆಗಳು ಹಮ್ಮಿಕೊಂಡಿದ್ದವು.

‘ನಮ್ಮ ಆಕ್ಷೇಪ ಲೆಕ್ಕಿಸದೆಯೇ ಈ ಯೋಜನೆಗೆ ಅನುಮತಿ ನೀಡಲಾಗಿದೆ’ ಎಂದು ಪರಿಸರ ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.

‘ಯೋಜನೆ ಬಗ್ಗೆ ಸಂಸ್ಥೆಯ ಪ್ರಸ್ತಾವ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆಗಳ, ಸ್ಥಳೀಯಾಡಳಿತ ಸಂಸ್ಥೆಗಳ ಅಭಿಪ್ರಾಯಪಡೆಯಬೇಕು. ಬಳಿಕ ಈ ಯೋಜನೆಯ ಹಕ್ಕುಬಾಧ್ಯತೆ ಹೊಂದಿರುವ ಸಾರ್ವಜನಿಕರ, ಇದರ ಫಲಾನುಭವಿಗಳ, ಹಾಗೂ ಇದರಿಂದ ತೊಂದರೆಗೆ ಒಳಗಾಗುವವರ ಸಲಹೆ ಹಾಗೂ ಪ್ರತಿಕ್ರಿಯೆಗಳನ್ನು ಪಡೆಯಬೇಕು. ಈ ಪ್ರಕ್ರಿಯೆಗಳನ್ನು ಎಸ್‌ಇಐಎಎ ನಡೆಸಿದೆಯೇ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಕೆ.ವಿ.ರಮೇಶ್‌ ಪ್ರಶ್ನಿಸಿದರು.

‘ಒಂದು ವೇಳೆ ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸಿದ್ದೇ ಆದರೆ, ಅದರ ವರದಿಯನ್ನು ಬಹಿರಂಗಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿಲ್ಲ. ಪರಿಸರದ ಮೇಲಾಗುವ ಪರಿಣಾಮ ಹಾಗೂ ಸಮಾಜಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿಲ್ಲ. ಆದರೂ ನಗರದ ಹೃದಯ ಭಾಗದಲ್ಲಿ ಇಂತಹ ಭಾರಿ ಯೋಜನೆಗೆ ಅನುಮತಿ ನೀಡಿರುವುದು ದುರದೃಷ್ಟಕರ’ ಎಂದು ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಿರ್ಧಾರ ಮರುಪರಿಶೀಲಿಸುವಂತೆ ಕೋರಿ ಸಿ.ಎಂ.ಗೆ ಪತ್ರ

ಈ ನಗರದ ಮೇಲಾಗುವ ದೂರಗಾಮಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದೆ.

‘ಈ ಯೋಜನೆಯಿಂದ ಸರಿಪಡಿಸಲಾಗದ ಅನಾಹತ ಸಂಭವಿಸಲಿದೆ. ಇದು ತಪ್ಪು ತೀರ್ಮಾನ ಮಾತ್ರವಲ್ಲ, ತರಾತುರಿಯಲ್ಲಿ ತಗೆದುಕೊಂಡ ಅವಾಸ್ತವಿಕ ಹಾಗೂ ಅಸಂಬದ್ಧ ತೀರ್ಮಾನ. ಇದು ಈ ನಗರದ ಅಷ್ಟೂ ಜನರ ಬದುಕಿನ ದುಷ್ಪರಿಣಾಮ ಬೀರಲಿದೆ. ಇದರ ಘೋರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎ.ಎನ್‌.ಯಲ್ಲಪ್ಪ ರೆಡ್ಡಿ ಎಚ್ಚರಿಸಿದರು.

‘ಕಾಮಗಾರಿಗೆ ಶುದ್ಧೀಕರಿಸಿದ ತ್ಯಾಜ್ಯನೀರನ್ನೇ ಬಳಸಿ’

ಕಾಮಗಾರಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನೇ ಬಳಸಬೇಕು. ಸಮೀಪದಲ್ಲಿರುವ ಜಲಮಂಡಳಿಯ ಎಸ್‌ಟಿಪಿಗಳಿಂದ ಇದನ್ನು ಪಡೆಯಬೇಕು ಎಂಬ ಷರತ್ತನ್ನು ಎಸ್‌ಇಐಎಎ ವಿಧಿಸಿದೆ.

ಎಲಿವೇಟೆಡ್‌ ಯೋಜನೆಗೆ ಪರಿಸರ ಅನುಮತಿ ನೀಡುವಾಗ ಎಸ್‌ಇಐಎಎ ಕೆಲವು ಷರತ್ತುಗಳನ್ನೂ ವಿಧಿಸಿದೆ.

ಪರಿಸರ ಅನುಮತಿ: ಪ್ರಮುಖ ಷರತ್ತುಗಳು?

* ವಾಯು ಗುಣಮಟ್ಟ ನಿಗಾವಹಿಸಬೇಕು. ಪ್ರಮುಖ ಸ್ಥಳಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಬಹುದು

* ಕಾಮಗಾರಿ ಸಂದರ್ಭದಲ್ಲಿ ಸಂಚಾರ ಟದಟ್ಟಣೆ ಉಂಟಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು

* ನೈಸರ್ಗಿಕ ಕಾಲುವೆಗಳಿಗೆ ಹಾನಿ ಉಂಟುಮಾಡಬಾರದು

* ಕೆರೆ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಬೇಕು.

* ನೀರನ್ನು ಮಿತವಾಗಿ ಬಳಸಬೇಕು

* ನಿರ್ಮಾಣ ಕಾಮಗಾರಿಗೆ ಅಂತರ್ಜಲವನ್ನು ಬಳಸಬಾರದು

* ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮಕೈಗೊಳ್ಳಬೇಕು

* ಎಲ್‌ಇಡಿ ದೀಪಗಳ ಬಳಕೆ ಮಾಡಿ ಇಂಧನ ಉಳಿತಾಯಕ್ಕೆ ಕ್ರಮ ಕೈಗೊಳ್ಳಬೇಕು

* ಒಂಟು ಇಂಧನ ಬಳಕೆಯ ಕನಿಷ್ಠ ಶೇ 1ರಷ್ಟನ್ನು ಸೌರಶಕ್ತಿ ಮತ್ತಿತರ ನವೀಕರಿಸಬಲ್ಲ ಮೂಲಗಳಿಂದ ಪಡೆಯಬೇಕು

* ತೀರಾ ಅನಿವಾರ್ಯ ಅಲ್ಲದಿದ್ದರೆ ಯಾವುದೇ ಮರವನ್ನು ಕಡಿಯುವುದಾಗಲೀ, ಸ್ಥಳಾಂತರ ಮಾಡುವುದಾಗಲೀ ಮಾಡಬಾರದು

* ಪ್ರತಿ 80 ಚ.ಮೀ ಜಾಗಕ್ಕೆ ಒಂದರಂತೆ ಗಿಡಗಳನ್ನು ನೆಟ್ಟು ಬೆಳೆಸಬೇಕು

* ಒಂದು ಮರ ಕಡಿದರೆ 10 ಗಿಡ ಬೆಳೆಸಬೇಕು

* ಕಾರ್ಮಿಕರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು

ಸಂರಕ್ಷಿತ ಅರಣ್ಯದ ಸಮೀಪವೇ ಕಾರಿಡಾರ್‌

ಸಂರಕ್ಷಿತ ಅರಣ್ಯ ಅಂತರ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ 9.1 ಕಿ.ಮೀ
ಜಾರಕಬಂಡೆ ಕಾವಲ್‌ ಮೀಸಲು ಅರಣ್ಯ 2.4 ಕಿ.ಮೀ
ಪುಟ್ಟೇನ ಹಳ್ಳಿ ಬಳಿಯ ಮೀಸಲು ಅರಣ್ಯ 3.82 ಕಿ.ಮೀ

ಕಾರಿಡಾರ್‌ ಹಾದಿಯಲ್ಲಿರುವ ಕೆರೆಗಳು

ಪೂರ್ವ ಪಶ್ಚಿಮ ಕಾರಿಡಾರ್‌–1: ಕೆ.ಆರ್‌.ಪುರ ಕೆರೆ; ನಾಗಪ್ಪ ರೆಡ್ಡಿ ಬಡಾವಣೆಯ ಕೆರೆ; ಬೆನ್ನಿಗಾನಹಳ್ಳಿ ಕೆರೆ; ಸರ್ವಜ್ಞ ನಗರದ ಕೆರೆ; ಹಲಸೂರು ಕೆರೆ;

ಪೂರ್ವಪಶ್ಚಿಮ– ಕಾರಿಡಾರ್‌–2: ವರ್ತೂರು ಕೆರೆ; ತೂಬರಹಳ್ಳಿ ಕೆರೆ; ವೃಷಭಾವತಿ ನಾಲೆ

ಉತ್ತರ ದಕ್ಷಿಣ ಕಾರಿಡಾರ್‌–1; ಸಂಪಂಗಿ ಕೆರೆ

ಸಂಪರ್ಕ ಕಾರಿಡಾರ್‌–1; ಅಗರ ಕೆರೆ

ಸಂಪರ್ಕ ಕಾರಿಡಾರ್‌2; ಹಲಸೂರು ಕೆರೆ

ಸಂಪರ್ಕ ಕಾರಿಡಾರ್‌ 3; ಚೇಳ್ಕೆರ

***

ಉತ್ತರ– ದಕ್ಷಿಣ ಕಾರಿಡಾರ್‌: ಬ್ಯಾಪ್ಟಿಸ್ಟ್‌ ಆಸ್ಪತ್ರೆ–ಸಿಲ್ಕ್ ಬೋರ್ಡ್‌ ಜಂಕ್ಷನ್‌ (ಜಯಮಹಲ್‌ ರಸ್ತೆ, ಕ್ವೀನ್ಸ್‌ ರಸ್ತೆ, ಇಂಡಿಯನ್‌ ಎಕ್ಸ್‌ಪ್ರೆಸ್‌ ಜಂಕ್ಷನ್‌, ಇನ್‌ಫೆಂಟ್ರಿ ರಸ್ತೆ, ಮಿನ್ಸ್ಕ್‌ ಸ್ಕ್ವ್ಯಾರ್, ಕಸ್ತೂರಬಾ ರಸ್ತೆ, ಹಡ್ಸನ್‌ ವೃತ್ತ, ಆಡುಗೋಡಿ ಮುಖ್ಯರಸ್ತೆ

ಪೂರ್ವ ಪಶ್ಚಿಮ ಕಾರಿಡಾರ್‌–1: ಭಟ್ಟರ ಹಳ್ಳಿ– ಗೊರಗುಂಟೆ ಪಾಳ್ಯ (ಹಳೆ ಮದ್ರಾಸ್‌ ರಸ್ತೆ, ದೇವಸಮದ್ರ ಮುಖ್ಯರಸ್ತೆ, ರಾಮಮೂರ್ತಿನಗರ ಮುಖ್ಯ ರಸ್ತೆ, ಕೆ.ಆರ್‌.ಪುರ ಸೇತುವೆ, ಸುರಂಜನದಾಸ್‌ ರಸ್ತೆ, 80 ಅಡಿ ರಸ್ತೆ ಜಂಕ್ಷನ್‌, ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್‌, ಕೆನ್ಸಿಂಗ್ಟನ್‌ ರಸ್ತೆ ಜಂಕ್ಷನ್‌, ಹಲಸೂರು ಕೆರೆ, ಸೇಂಟ್‌ ಜಾನ್ಸ್ ರಸ್ತೆ, ಮಿಲ್ಲರ್ಸ್‌ ರಸ್ತೆ, ಮೇಖ್ರಿ ವೃತ್ತ, ಸಿ.ವಿ.ರಾಮನ್‌ ರಸ್ತೆ, ಯಶವಂತಪುರ ಮೇಲ್ಸೇತುವೆ, ಯಶವಂತಪುರರೈಲು ನಿಲ್ದಾಣ)

ಪೂರ್ವ ಪಶ್ಚಿಮ ಕಾರಿಡಾರ್‌–2: ವರ್ತೂರು ಕೊಡಿ, ನೈಸ್‌ ಲಿಂಕ್‌ ರಸ್ತೆ (ಮೈಸೂರು ರಸ್ತೆ, ಕುಂದಲಹಳ್ಳಿ ಗೇಟ್‌ ಜಂಕ್ಷನ್‌, ಮಾರತಹಳ್ಳಿ ಕೆಳಸೇತುವೆ, ಸುರಂಜನ್‌ದಾಸ್ ರಸ್ತೆ ಜಂಕ್ಷನ್‌, ಹಳೆ ವಿಮಾನನಿಲ್ದಾಣ ರಸ್ತೆ, ವಿಂಡ್‌ ಟನೆಲ್‌ ರಸ್ತೆ ಜಂಕ್ಷನ್‌, ದೊಮ್ಮಲೂರು ಜಕ್ಷನ್‌, ಟ್ರಿನಿಟಿ ಚರ್ಚ್‌ ಜಂಕ್ಷನ್‌, ಡಿಸೋಜ ವೃತ್ತ, ಕೆ.ಎಸ್‌.ತಿಮ್ಮಯ್ಯ ರಸ್ತೆ, ವೆಲ್ಲಾರ ಜಂಕ್ಷನ್‌, ರಿಚ್ಮಂಡ್ ವೃತ್ತ, ಕೆ.ಎಚ್.ರಸ್ತೆ, ಲಾಲ್‌ಬಾಗ್‌ ಮುಖ್ಯರಸ್ತೆ, ಮಿನರ್ವ ರಸ್ತೆ, ಚಾಮರಾಜಪೇಟೆ 5ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, ಆಲುರು ವೆಂಕಟರಾವ್‌ ರಸ್ತೆ, ಸಿರ್ಸಿ ವೃತ್ತ, ಸ್ಯಾಟಲೈಟ್‌ ಬಸ್‌ ನಿಲ್ದಾಣ, ಬಾಪೂಜಿ ನಗರ, ದೀಪಾಂಜಲಿ ನಗರ, ನಾಯಂಡಹಳ್ಳಿ ಜಂಕ್ಷನ್‌, ರಾಜರಾಜೇಶ್ವರಿ ನಗರ ಗೇಟ್‌.

ಸಂಪರ್ಕ ಕಾರಿಡಾರ್‌–1: ಸರ್ಜಾಪುರ ರಸ್ತೆ, ಜಕ್ಕಸಂದ್ರ, ಮಡಿವಾಳ

ಸಂಪರ್ಕ ಕಾರಿಡಾರ್‌–2: ಡಿಸೋಜ ವೃತ್ತ, ರಿಚ್ಮಂಡ್‌ ವೃತ್ತ, ಹಲಸೂರು

ಸಂಪರ್ಕ ಕಾರಿಡಾರ್‌–3: ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಹೊರವರ್ತುಲ ರಸ್ತೆ

***

ನಾವು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಪಾಲಿಸಿದ ಬಳಿಕವೇ ಈ ಯೋಜನೆಗೆ ಅನುಮತಿ ನೀಡಿದ್ದೇವೆ

–ವಿಜಯ್‌ ಕುಮಾರ್‌ ಗೋಗಿ, ಎಸ್‌ಇಐಎಎ ಸದಸ್ಯ ಕಾರ್ಯದರ್ಶಿ

ಎಲಿವೇಟೆಡ್‌ ಕಾರಿಡಾರ್‌ ಬಹುತೇಕ ಈಗಿರುವ ರಸ್ತೆಯಲ್ಲೇ ಹಾದುಹೋಗುತ್ತದೆ. ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಕಡೆಗಳಲ್ಲಿ ನಾವು ಸಾರ್ವಜನಿಕರ ಅಹವಾಲು ಆಲಿಸುತ್ತೇವೆ. ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

–ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT