ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿವೇಟೆಡ್‌ ಕಾರಿಡಾರ್‌: ಹೆಚ್ಚು ದಟ್ಟಣೆ?

ಹೆಬ್ಬಾಳ– ಸಿಲ್ಕ್‌ಬೋರ್ಡ್‌ ರಸ್ತೆ ಸ್ಥಿತಿಯೇ ಈ ಯೋಜನೆಗೂ ಆಗಲಿದೆ
Last Updated 18 ಮಾರ್ಚ್ 2019, 19:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಜಾರಿಗೊಳಿಸುತ್ತಿದೆ. ಆದರೆ ಇದು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಬದಲು ಮತ್ತಷ್ಟು ಹೆಚ್ಚಳ ಮಾಡಲಿದೆಯೇ?

‘ಹೌದು’ ಎನ್ನುತ್ತಾರೆ ಸಾರಿಗೆ ತಜ್ಞರು. ನಗರದ ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ– ಸಿಲ್ಕ್‌ಬೋರ್ಡ್‌ ನಡುವೆ ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಿಸಿದ ಬಳಿಕವೂ ಅಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಆಗಿಲ್ಲ. ಇದೇ ಪರಿಸ್ಥಿತಿ ಎಲಿವೇಟೆಡ್‌ ಕಾರಿಡಾರ್‌ಗೂ ಬರಲಿದೆ ಎಂದು ಭವಿಷ್ಯ ನುಡಿಯುತ್ತಾರೆ ಅವರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರದೊಳಗೆ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 2002ರಲ್ಲಿ ಹೊರವರ್ತುಲ ರಸ್ತೆಯನ್ನು (ಒಆರ್‌ಆರ್) ನಿರ್ಮಿಸಿತು. ಆರು ಪಥಗಳ ಮುಖ್ಯ ಮಾರ್ಗ, ತಲಾ 2 ಲೇನ್‌ಗಳ ಸರ್ವಿಸ್‌ ರಸ್ತೆಗಳನ್ನು ಹೊಂದಿರುವ ಈ ರಸ್ತೆಯಲ್ಲೂ ಹೆಬ್ಬಾಳ– ಸಿಲ್ಕ್‌ಬೋರ್ಡ್‌ ನಡುವಿನ ಕೆಲವು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಳ್ಳಲು ಶುರುವಾಯಿತು. ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ, ಅಂಡರ್‌ ಪಾಸ್‌ಗಳನ್ನು ನಿರ್ಮಿಸುವ ಮೂಲಕ ಇದನ್ನು ಸಿಗ್ನಲ್‌–ಫ್ರೀ ಕಾರಿಡಾರ್‌ ಆಗಿ ರೂಪಿಸುವ ಕಾಮಗಾರಿಯನ್ನು ಬಿಡಿಎ ಕೈಗೆತ್ತಿಕೊಂಡಿತು.

‘ದೊಡ್ಡನೆಕ್ಕುಂದಿ ಬಳಿಯ ಮೇಲ್ಸೇತುವೆ ಉದ್ಘಾಟನೆಗೊಂಡ ಬಳಿಕ ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ– ಸಿಲ್ಕ್‌ಬೋರ್ಡ್‌ ನಡುವಿನ ಎಲ್ಲ ಜಂಕ್ಷನ್‌ಗಳೂ ಸಿಗ್ನಲ್‌ಮುಕ್ತಗೊಂಡಿವೆ’ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು. ಆದರೆ, ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಆಗಿದೆಯೇ? ಖಂಡಿತಾ ಇಲ್ಲ.ಇಲ್ಲಿ ಮೆಟ್ರೊ ಮಾರ್ಗ ನಿರ್ಮಿಸುವ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಡೆಸಿದ್ದ ಅಧ್ಯಯನ ವರದಿ ಒಆರ್‌ಆರ್‌ನ ಸಾರಿಗೆ ಸಮಸ್ಯೆಯ ಕರಾಳ ಮುಖವನ್ನು ತೆರೆದಿಡುತ್ತದೆ.

ನಿತ್ಯ ಸರಾಸರಿ 4.5 ಲಕ್ಷ ಕಾರುಗಳು ಈ ಮಾರ್ಗದಲ್ಲಿ ಚಲಿಸುತ್ತವೆ. ಗಂಟೆಗೆ ಸರಾಸರಿ 18,750 ವಾಹನಗಳು ಈ ರಸ್ತೆ ಮೇಲಿರುತ್ತವೆ. ದಟ್ಟಣೆಯ ಅವಧಿಯಲ್ಲಿ ವಾಹನಗಳ ಪ್ರಮಾಣವು ಇದಕ್ಕಿಂತ ಮೂರು ಪಟ್ಟು ಹೆಚ್ಚಾಗುತ್ತದೆ. ಈ ಮಾರ್ಗವನ್ನು ಬಳಸುವ ವಾಹನಗಳ ಸಂಖ್ಯೆ ಮಿತಿ ಮೀರಿದ್ದರಿಂದ ಇಲ್ಲಿನ ಸರಾಸರಿ ವೇಗ ಗಂಟೆಗೆ 10 ಕಿ.ಮೀಗೆ ಇಳಿದಿದೆ. ಇಲ್ಲಿನ ವಾಹನ ದಟ್ಟಣೆಯಿಂದಾಗಿ ವರ್ಷಕ್ಕೆ ₹ 20.71 ಕೋಟಿಗಳಷ್ಟು ಉತ್ಪಾದಕತೆ ನಷ್ಟವಾಗುತ್ತಿದೆ ಎನ್ನುತ್ತದೆ ಬಿಎಂಆರ್‌ಸಿಎಲ್‌ ವರದಿ.

ಮೇಲ್ಸೇತುವೆಗಳು ಹೇಗೆ ವಾಹನ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌, ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮಾ ಸೊಗಸಾಗಿ ವಿವರಿಸುತ್ತಾರೆ.

‘ರಸ್ತೆಗಳನ್ನು ಅಗಲಗೊಳಿಸಿದಾಗ ಅಥವಾ ಹೆಚ್ಚು ಹೆಚ್ಚು ಮೇಲ್ಸೇತುವೆಗಳನ್ನು ನಿರ್ಮಿಸಿದಾಗ ಈ ಮಾರ್ಗದಲ್ಲಿ ಸುಗಮವಾಗಿ ಪ್ರಯಾಣಿಸಬಹುದು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಇದು ಪರೋಕ್ಷವಾಗಿ ಮತ್ತಷ್ಟು ಕಾರು ಖರೀದಿಸಲು ಹಾಗೂ ಕಾರನ್ನು ಹೆಚ್ಚು ಬಳಸಲು ಪ್ರೇರೇಪಿಸುತ್ತದೆ. ಹಾಗಾಗಿ, ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ಗಳಿಂದ ಸಿಗ್ನಲ್‌ರಹಿತ ಸಂಚಾರ ಸಾಧ್ಯವಾದರೂ ಅದರ ಪೂರ್ಣ ಪ್ರಯೋಜನ ಸಾರ್ವಜನಿಕ ವಾಹನಗಳಿಗೆ ದಕ್ಕುವುದಿಲ್ಲ. ಅದರ ಬದಲು, ಖಾಸಗಿ ವಾಹನಗಳೇ ಈ ಮಾರ್ಗವನ್ನು ಆಕ್ರಮಿಸಿಕೊಳ್ಳುವುದರಿಂದ ಕ್ರಮೇಣ ಇವುಗಳೂ ಸಂಚಾರ ದಟ್ಟಣೆಯ ಕೂಪಗಳಾಗುತ್ತವೆ’ ಎನ್ನುತ್ತಾರೆ ವರ್ಮಾ.

‘ನಗರದಲ್ಲಿ ಕಾರು ಮಾಲೀಕತ್ವ ದರ ಈಗಲೂ ಮಿತಿಯ ಒಳಗಡೆಯೇ ಇದೆ. ಅಮೆರಿಕದಂತಹ ರಾಷ್ಟ್ರಗಳಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಸರಾಸರಿ 700ರಿಂದ 800 ಕಾರುಗಳಿದ್ದರೆ, ಬೆಂಗಳೂರಿನಲ್ಲಿ ಈ ಪ್ರಮಾಣ 180ರ ಆಸುಪಾಸಿನಲ್ಲಿದೆ. ಎಲಿವೇಟೆಡ್‌ ಕಾರಿಡಾರ್‌ನಂತಹ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಇಲ್ಲೂ ಕಾರು ಮಾಲೀಕತ್ವ ದರ ಹೆಚ್ಚಳ‌ವಾಗುತ್ತದೆ. ನಗರದ ರಸ್ತೆಗಳ ಸ್ಥಿತಿ ಮತ್ತಷ್ಟು ಕರಾಳವಾಗುತ್ತದೆ. ನಗರದ ಭವಿಷ್ಯ ಈಗಿನದಕ್ಕಿಂತಲೂ ಭಯಾನಕವಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಅವರು.

ರ‍್ಯಾಂಪ್‌– ದಟ್ಟಣೆಯ ಬಿಂದು

ಮೇಲ್ಸೇತುವೆ ಮೇಲೆ ವಾಹನ ದಟ್ಟಣೆ ಉಂಟಾದರೆ ಅದರ ಪರಿಣಾಮ ಇನ್ನೂ ಭೀಕರ. ಎಲಿವೇಟೆಡ್‌ ಕಾರಿಡಾರ್‌ನ ರ‍್ಯಾಂಪ್‌ಗಳ ಬಳಿ ಇನ್ನಷ್ಟು ದಟ್ಟನೆಯ ಬಿಂದುಗಳು ಸೃಷ್ಟಿಯಾಗಲಿವೆ ಎಂದು ಸಾರಿಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

‘ಯಾವುದೇ ಮೇಲ್ಸೇತುವೆಯೂ ವಾಹನ ದಟ್ಟಣೆಯ ಬಿಂದುವನ್ನು ಇನ್ನಷ್ಟು ದೂರಕ್ಕೆ ಸ್ಥಳಾಂತರಿಸಬಲ್ಲುದೇ ಹೊರತು, ಸಮಸ್ಯೆಗೆ ಪರಿಹಾರ ಶಾಶ್ವತ ಒದಗಿಸುವುದಿಲ್ಲ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲು ಮೇಲ್ಸೇತುವೆ ನಿರ್ಮಿಸಿದ್ದರಿಂದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿದಿಲ್ಲವೇ ಎಂದು ಕೆಲವರು ವಾದಿಸುತ್ತಾರೆ. ಈ ಮೇಲ್ಸೇತುವೆ ನಿರ್ಮಿಸಿದ ಬಳಿಕವೂ ಹೆಬ್ಬಾಳದ ಬಳಿ ಹಾಗೂ ಈ ಮಾರ್ಗದ ಟೋಲ್‌ಗೇಟ್‌ ಬಳಿ ಆಗಾಗ ವಾಹನ ದಟ್ಟಣೆ ಉಂಟಾಗುವುದನ್ನು ನಾವು ನೋಡುತ್ತಿಲ್ಲವೇ. ಇದೇ ಪರಿಸ್ಥಿತಿ ಎಲಿವೇಟೆಡ್‌ ಕಾರಿಡಾರ್‌ನ ರ‍್ಯಾಂಪ್‌ಗಳ ಬಳಿಯೂ ಕಾಣಬೇಕಾಗುತ್ತದೆ’ ಎಂದು ಆಶಿಶ್‌ ವರ್ಮಾ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT