ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ: 10 ದಿನದಲ್ಲಿ ಸಮೀಕ್ಷೆಗೆ ಸೂಚನೆ

Last Updated 20 ಅಕ್ಟೋಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ನೀರು ಕಾಲುವೆ ಒತ್ತುವರಿ ಬಗ್ಗೆ ಮುಂದಿನ 10 ದಿನಗಳಲ್ಲಿ ಪ್ರಾಥಮಿಕವಾಗಿ 50 ಸ್ಥಳಗಳ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು.

ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಇಲಾಖೆಗಳು, ನಿಗಮ ಮತ್ತು ಮಂಡಳಿಗಳ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಈ ಸೂಚನೆನೀಡಿದರು. ಪ್ರಾಥಮಿಕ ಹಂತದ ಸಮೀಕ್ಷೆ ನೋಡಿಕೊಂಡು ಉಳಿದ ಭಾಗಗಳಿಗೂ ಅದನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನುಮುಂದೆ ವಾಣಿಜ್ಯ ಪರವಾನಗಿಯನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದೆ. ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. 2019ರ ಮಾರ್ಚ್‌ನಿಂದ ಪರವಾನಗಿ ನವೀಕರಣವನ್ನು ಐದು ವರ್ಷಗಳಿಗೆ ನಿಗದಿಪಡಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ಸಭೆಯ ಗಮನಕ್ಕೆ ತಂದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಮುಂದಿನ ಹತ್ತು ದಿನಗಳಲ್ಲಿ 20 ರಸ್ತೆಗಳನ್ನು ನಿರ್ಮಿಸಲು ಟೆಂಡರ್‌ಶ್ಯೂರ್‌ ಅಡಿ ಟೆಂಡರ್‌ ಕರೆಯಲು ವಿಜಯಭಾಸ್ಕರ್‌ ಸೂಚನೆ ನೀಡಿದರು.

**

ಸಭೆಯಲ್ಲಿ ಕೈಗೊಂಡ ನಿರ್ಧಾರಗಳು

* ಕೇಂದ್ರದ ನಿರ್ಭಯಾ ನಿಧಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು, ಕ್ಯಾಮೆರಾ ಖರೀದಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು.

* ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಚಾರ್ಜಿಂಗ್‌ ಪಾಯಿಂಟ್‌ ಅಳವಡಿಸಬೇಕು. ಸರ್ಕಾರದ ಬಳಕೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಬೇಕು.

* ಬೆಳ್ಳಂದೂರು ಕೆರೆಯ ಪಕ್ಕದಲ್ಲಿರುವ ಕೊಳೆಗೇರಿ ನಿವಾಸಿಗಳನ್ನು ಮಾರತ್ತಹಳ್ಳಿಯಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ನವೆಂಬರ್‌ 10ರೊಳಗೆ ಸ್ಥಳಾಂತರ ಮಾಡಬೇಕು.

* ಟೆಲಿಕಾಂ ಟವರ್‌ ಕರಡು ನಿಯಮಾವಳಿಗಳನ್ನು ಸಿದ್ಧಪಡಿಲಾಗಿದ್ದು, ವಾರ್ಷಿಕ ಬಾಡಿಗೆ/ ಆಸ್ತಿ ತೆರಿಗೆ ಪಡೆಯಲು ನಿಯಮಾವಳಿಯಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು.

* ಇನ್ನುಮುಂದೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಳ್ಳುವ ಮನೆಗಳನ್ನು ಫಲಾನುಭವಿಗಳಿಗೆ ಹಂಚುವುದಕ್ಕೆ ಮೊದಲೇ ವಿದ್ಯುತ್‌ ಮತ್ತು ನೀರಿನ ಸರಬರಾಜು ವ್ಯವಸ್ಥೆ ಮಾಡಬೇಕು.

* ಕಿರು ನೀರು ಪೂರೈಕೆ ಯೋಜನೆಮತ್ತು ಬೋರ್‌ವೆಲ್‌ಗಳ ಉಸ್ತವಾರಿಜಲಮಂಡಳಿಗೆ ಹಸ್ತಾಂತರ ಮಾಡಬೇಕು.

* ಖಾಸಗಿ ಬಸ್‌ ಮತ್ತು ಟೆಂಪೊ ಟ್ರಾವಲರ್‌ಗಳ ಟೋಯಿಂಗ್‌ ಮಾಡುವ ವಾಹನವನ್ನು ಪಿಪಿಪಿ ಮಾದರಿಯಲ್ಲಿ ಖರೀದಿಸಬೇಕು.

* ಮಡಿವಾಳ ಕೆರೆ ದಂಡೆಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಬೇಕು. ಇದಕ್ಕೆ ಪರಿಹಾರ ನೀಡಲು ನಗರೋತ್ಥಾನ ಅನುದಾನ ಬಳಸಬೇಕು.

* 400 ಕಿ.ಮೀ ಉದ್ದದ ಬೃಹತ್‌ ಕಾಲುವೆಗಳ ವಾರ್ಷಿಕ ನಿರ್ವಹಣೆಗೆ ಕರೆಯುವ ಟೆಂಡರ್‌ನಲ್ಲಿ ಹೂಳು ಮತ್ತು ಇತರೆ ತ್ಯಾಜ್ಯವನ್ನು ಸಾಗಿಸಿ ಪಾಲಿಕೆ ನಿಗದಿ ಮಾಡಿದ ಕ್ವಾರಿ/ ಸ್ಥಳದಲ್ಲೇ ಹಾಕಲು ವಾಟರ್‌ಟೈಟ್‌ ಕಂಟೇನರ್‌ ವಾಹನಗಳನ್ನು ಬಳಸಬೇಕು. ಅದಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು, ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ಟ್ರ್ಯಾಕಿಂಗ್‌ ಮಾಡಿ ಹೂಳು ವಿಲೇವಾರಿ ಮಾಡಿದ ಬಗ್ಗೆ ಲೆಕ್ಕ ಇಟ್ಟು, ಬಿಲ್‌ ಪಾವತಿ ಮಾಡಬೇಕು ಎಂಬ ನಿಯಮ ಸೇರಿಸಬೇಕು.

* ಬೃಹತ್‌ ನೀರು ಕಾಲುವೆ ಒತ್ತುವರಿ ಬಗ್ಗೆ ಮುಂದಿನ 10 ದಿನಗಳಲ್ಲಿ ಪ್ರಾಥಮಿಕವಾಗಿ 50 ಸ್ಥಳಗಳ ಸಮೀಕ್ಷೆ ಪೂರ್ಣಗೊಳಿಸಬೇಕು.

* ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿ ಸುರಿಯುವವರಿಗೆ ದಂಡದ ಮೊತ್ತ ನಿಗದಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT