ಗುರುವಾರ , ನವೆಂಬರ್ 21, 2019
20 °C
ಭೂರಮೆಯ ಅತ್ಯಮೂಲ್ಯ ರತ್ನದಂತಿದೆ

ಎರ್ಮಾಯಿ ಜಲಪಾತದ ವಯ್ಯಾರ ನೋಡಲೊಂದು ಆನಂದ

Published:
Updated:
Prajavani

ಏಳುವರೆ ಹಳ್ಳ ಎಂಬ ಸ್ಥಳ ಎರ್ಮಾಯಿ ಜಲಪಾತದ ಉಗಮ ಸ್ಥಾನ. ಹಿಂದಿನ ಕಾಲದಲ್ಲಿ ಏಳು ಮಂದಿ ಯುವಕರು ಗದ್ದೆ ಉಳುಮೆ ಮಾಡಿ ಉಳುಮೆ ಎತ್ತುಗಳನ್ನು ಈಗ ಜಲಪಾತವಿರುವ ಸ್ಥಳದಲ್ಲಿ ನಿತ್ಯ ತೊಳೆಯುತ್ತಿದ್ದರು ಎಂಬ ಉಲ್ಲೇಖವಿದೆ.

ಒಂದು ದಿನ ಎತ್ತುಗಳು ಇಲ್ಲಿಂದ ಮಾಯಾವಾದವೆಂದು ಇಲ್ಲಿಯ ಹಿರಿಯರು ಕಥೆ ಹೇಳು
ತ್ತಾರೆ. ಇಲ್ಲಿನ ಪ್ರಾದೇಶಿಕ ಭಾಷೆ ತುಳು. ಎತ್ತಿಗೆ ಎರು ಎಂದು ಕರೆಯಲಾಗುತ್ತದೆ. ಕ್ರಮೇಣ ಜನರ ಬಾಯಿ ಮಾತಿನಲ್ಲಿ ‘ಎರು ಮಾಯ’ ಸ್ಥಳವು ಎರ್ಮಾಯಿ ಎಂದು ಬದಲಾಯಿತೆಂದು ಸ್ಥಳದ ಬಗ್ಗೆ ಪುರಾಣ ತಿಳಿಸುತ್ತದೆ. ಈ ಜಲಪಾತ ಹಾಗು ಸುತ್ತಮುತ್ತಲ ಪ್ರದೇಶವೇ ವಿಭಿನ್ನವಾಗಿದೆ.

ಪ್ರಪ್ರಥಮವಾಗಿ ಪಶ್ಚಿಮ ಘಟ್ಟಗಳೇ ನೋಡಲು ಮನೋಹಕ. ದಟ್ಟವಾದ ಅರಣ್ಯಗಳು, ಜುಳು- ಜುಳು ಎಂದು ಕಾಡಿನಲ್ಲಿ ಹರಿವ ತಾಜಾ ನೀರಿನ ಅಸಂಖ್ಯಾತ ಕೆರೆ- ತೊರೆಗಳು ವೈವಿಧ್ಯಮಯ ಜೀವಲೋಕ ಹಾಗೂ ಸಸ್ಯ ಲೋಕದಿಂದ ಕೂಡಿರುವ ಅಮೋಘ ತಾಣ, ಭೂಮಾತೆಯ ಒಡಲಿತ ಅತ್ಯಮೂಲ್ಯ ರತ್ನದಂತಿದೆ.


ಬಂಡೆಗಳ ಮಧ್ಯೆ ಬಳುಕುತ್ತಾ...

ದಟ್ಟ ಕಾನನದ ನಡುವೆ ಬೋರ್ಗರೆಯುತ್ತ ಮೈದುಂಬಿ ಹರಿವ ಜಲಧಾರೆಯನ್ನು ನೋಡುವುದೇ
ಕಣ್ಣಿಗೆ ಹಬ್ಬ. ನೋಡಿದಷ್ಟು ತೀರದ ದಾಹ ಅನುಭವ ಈ ಜಲಪಾತವನ್ನು ನೋಡಿದಾಗ ಅರಿವಿಗೆ ಬರುತ್ತದೆ. ಪ್ರವಾಸಿಗರ ಕಣ್ಮನಗಳಿಗೆ ಸಂತಸ ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟಿವೆ. ಅಂತಹಗಳ ಪೈಕಿ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಕುಕ್ಕಾವು-ಕಾಜುರು, ಮಿತ್ತಬಾಗಿಲು ಗ್ರಾಮದ ದಟ್ಟ ಕಾನನದ ನಡುವೆ ಪ್ರಶಾಂತವಾದ ಸ್ಥಳದಲ್ಲಿದೆ ಈ ಎರ್ಮಾಯಿ ಎಂಬ ಜಲಪಾತ.

ಹಚ್ಚ ಹಸಿರಿನ ಪ್ರಕೃತಿ ಜತೆಗೆ ‘ಹಾಲಿನಂತೆ ಹರಿಯುವ’ 80 ಅಡಿ ಎತ್ತರದ ಕಲ್ಲು ಬಂಡೆಗಳ ಮಧ್ಯದಿಂದ ನಿರಂತರವಾಗಿ ಧುಮುಕುವ ಜಲಪಾತವನ್ನು ನೋಡುವುದೇ ಒಂದು ಹಬ್ಬ. ಎರ್ಮಾಯಿ ಜಲಪಾತ ನೋಡಲು ಎಷ್ಟು ಸುಂದರವಾಗಿ ಇದೆಯೋ ಅಲ್ಲಿಗೆ ತಲುಪುವ ಮಾರ್ಗವೇ ಅಷ್ಟೇ ದುರ್ಗಮವಾಗಿದೆ. ದಟ್ಟ ಕಾನನಗಳ ನಡುವಿನ ಕವಲು ದಾರಿ ಪ್ರವಾಸಿಗರನ್ನು ಇನ್ನಷ್ಟು ಪುಳಕಿತರನ್ನಾಗಿಸುತ್ತದೆ. ದಾರಿ ಮಧ್ಯದಲ್ಲಿ ಇರುವ ಹಳ್ಳ,ತೊರೆ, ಸೇತುವೆಗಳನ್ನು ದಾಟುತ್ತಾ ಸಾಗುವಾಗ ಆಗುವ ಅನುಭವವೇ ವಿಭಿನ್ನ. ಈ ಜಲಪಾತದಿಂದ ಹರಿದು ಬರುವ ನೀರಿನಿಂದ ಅಲ್ಲಲ್ಲಿ ಕಿರು ವಿದ್ಯುತ್ ಉತ್ಪಾದನಾ ಸ್ಥಾವರವನ್ನೂ ಸ್ಥಾಪಿಸಲಾಗಿದೆ. ವರ್ಷಪೂರ್ತಿ ಇಲ್ಲಿನ ಸುತ್ತ- ಮುತ್ತಲಿನ ಮನೆಗಳಿಗೆ ನಿರಂತರವಾಗಿ ವಿದ್ಯುತ್ ದೊರಕುವಂತೆ ಮಾಡಲಾಗಿರುವುದು ಇಲ್ಲಿನ ವಿಶೇಷ.


ಹಾಲ್ನೊರೆಯಂತೆ...

ಕಾಜೂರಿನಿಂದ ಈ ಜಲಪಾತದ ತಪ್ಪಲನ್ನು ತಲುಪುವ ದಾರಿ ಸಂಪೂರ್ಣ ಕಚ್ಚಾ(ಮಣ್ಣಿನ) ರಸ್ತೆ. ಇಲ್ಲಿಗೆ ಸಾಗುವ ದಾರಿಯಮಧ್ಯೆ ಅರ್ಧ ಗಂಟೆ ಕಾಲ ತುಂಬಿ ಹರಿವ ನೀರಿನಲ್ಲಿ ನಡೆದುಕೊಂಡು ಹೋಗುವುದು. ಚಾರಣಿಗಳಿಗೆ ವಿಭಿನ್ನ ಅನುಭವ ನೀಡುತ್ತದೆ. ಪಟ್ಟಣದಿಂದ ದೂರವಿರುವ ಎರ್ಮಾಯಿ ಜಲಪಾತವನ್ನು ನೋಡಲು ಸಾಗುವುದೇ ಮನಸ್ಸಿಗೆಖುಷಿ ಕೊಡುವಂತದ್ದು. ಕಚ್ಚಾ ರಸ್ತೆಯಲ್ಲಿ ಸಾಗಿ, ಜಿಗಣೆಗಳು ಕಚ್ಚದಂತೆ ಎಚ್ಚರಿಗೆ ವಹಿಸಿ ಜಲಪಾತ ಸಮೀಪ ಬಂದಾಗ ಏನೋ ಸಾಹಸ ಮಾಡಿ ಬಂದ ಸಂತೃಪ್ತಿ ನಮ್ಮದಾಗುವುದು.

ಭೋರ್ಗರೆವ ಜಲಪಾತ ಒಂದೆಡೆಯಾದರೆ, ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡು ಹಾಗೂ ಹಚ್ಚ ಹಸರಿನ ತೋಟಗಳು ಇನ್ನೊಂದೆಡೆ, ಈ ಜಲಪಾತವು ಪಟ್ಟಣದಿಂದ ಬಲು ದೂರದಲ್ಲಿ ಇರುವುದರಿಂದ ಜಲಪಾತಕ್ಕೆ ಸಮೀಪದಲ್ಲಿ ಯಾವುದೇ ಹೊಟೇಲ್‌ಗಳಿಲ್ಲ, ಆದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಉಜಿರೆ ಅಥವಾ ಸೋಮಂದಡ್ಕ ಪಟ್ಟಣದಿಂದಲೇ ಊಟ-ತಿಂಡಿ ಕಟ್ಟಿಕೊಂಡು ಬರಬೇಕು.

ಹಾಗೆಯೇ ಕಾಡಿನಲ್ಲಿ ನಿಮ್ಮ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಹಾಕದಿರಿ. ಸುಂದರ ನಾಳೆಗಾಗಿ ಪ್ರಕೃತಿ ಆದಷ್ಟು ಸುರಕ್ಷಿತವಾಗಿ ಸಂರಕ್ಷಿಸಿ. ಬೆಟ್ಟದ ತಪ್ಪಲಲ್ಲಿ ಈ ಜಲಪಾತ ಇರುವುದರಿಂದ ವರ್ಷವಿಡಿ ತುಂಬಿ ಧುಮುಕುತ್ತದೆ. ಮಳೆಗಾಲದಲ್ಲಿ ಕಲ್ಲು-ಬಂಡೆಗಳಲ್ಲಿ ಪಾಚಿ ಇರುವುದರಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯ.


ಪ್ರವಾಸಿಗರ ಸಂಭ್ರಮ

ಹೇಗೆ ತಲುಪಬೇಕು

ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಪಟ್ಟಣದಿಂದ ಚಾರ್ಮಾಡಿ, ಕೊಟ್ಟಿಗೆಹಾರ, ಚಿಕ್ಕಮಗಳೂರು ರಸ್ತೆಯಲ್ಲಿ ಸಾಗುತ್ತಾ ಸೋಮಂದಡ್ಕ ಎಂಬಲ್ಲಿ (ಸ್ಥಳದಲ್ಲಿ) ಎಡಗಡೆ ತಿರುವಿನ ರಸ್ತೆಯಲ್ಲಿ 15-16 ಕಿಲೋ ಮೀಟರ್ ಸಾಗಿದಾಗ ಕುಕ್ಕವೂ-ಕಾಜೂರು ಎಂಬ ಸ್ಥಳದಲ್ಲಿ ಕಾಡು ದಾರಿಯಲ್ಲಿ ಎರಡು ಕಿಲೋ ಮೀಟರ್ ಕ್ರಮಿಸಿದರೆ ಸುಪ್ರಸಿದ್ದ ಎರ್ಮಾಯಿ ಜಲಪಾತದ ತಪ್ಪಲನ್ನು ತಲುಪಬಹುದು.


ಮೈ ಬಳುಕಿನ ಸಿಂಗಾರಿ...

ಪ್ರತಿಕ್ರಿಯಿಸಿ (+)