ಗರ್ಭಿಣಿ ಸಾವು; ವೈದ್ಯರ ವಿರುದ್ಧ ಆಕ್ರೋಶ

7
ಪೀಣ್ಯ ಇಎಸ್‌ಐ ಆಸ್ಪತ್ರೆ ಬಳಿ ಪ್ರತಿಭಟನೆ: ‘ಕಾರಣ ಗೊತ್ತಿಲ್ಲ’ ಎಂದ ವೈದ್ಯರು

ಗರ್ಭಿಣಿ ಸಾವು; ವೈದ್ಯರ ವಿರುದ್ಧ ಆಕ್ರೋಶ

Published:
Updated:
Prajavani

ಬೆಂಗಳೂರು: ಹೆರಿಗೆ ನೋವಿನಿಂದ ಪೀಣ್ಯ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಅರ್ಪಿತಾ (23) ಎಂಬುವರು ಮಂಗಳವಾರ ರಾತ್ರಿ ಮೃತಪಟ್ಟಿದ್ದು, ‘ವೈದ್ಯರ ಯಡವಟ್ಟಿನಿಂದಲೇ ಈ ಸಾವು ಸಂಭವಿಸಿದೆ’ ಎಂದು ಆರೋಪಿಸಿ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.

ಕುಣಿಗಲ್ ತಾಲ್ಲೂಕಿನ ಅರ್ಪಿತಾ, ಎರಡು ವರ್ಷಗಳ ಹಿಂದೆ ಜಯರಾಂ ಎಂಬುವರನ್ನು ವಿವಾಹವಾಗಿದ್ದರು. ಮದುವೆ ನಂತರ ಲಗ್ಗೆರೆಯಲ್ಲಿ ನೆಲೆಸಿದ್ದ ದಂಪತಿ, ಸಿದ್ಧ ಉಡುಪು ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಗರ್ಭಿಣಿ ಆಗಿದ್ದ ಅರ್ಪಿತಾ, ಇಎಸ್‌ಐ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಫೆ.4ರಂದು ಹೆರಿಗೆ ಮಾಡುವುದಾಗಿ ವೈದ್ಯರು ಹೇಳಿದ್ದರು.

‘ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಮಗಳು ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಆ ಸಮಯದಲ್ಲಿ ಯಾರೂ ವೈದ್ಯರು ಇರಲಿಲ್ಲ. ಹೀಗಾಗಿ, 9 ಗಂಟೆವರೆಗೂ ಆಕೆಗೆ ಚಿಕಿತ್ಸೆಯೇ ಸಿಗಲಿಲ್ಲ’ ಎಂದು ಅರ್ಪಿತಾ ತಾಯಿ ಪಾರ್ವತಮ್ಮ ಆರೋಪಿಸಿದರು.

‘9 ಗಂಟೆಗೆ ಬಂದು ತಪಾಸಣೆ ನಡೆಸಿದ ವೈದ್ಯರು, ಇದೇ ದಿನ ರಾತ್ರಿ ಹೆರಿಗೆ ಮಾಡುವುದಾಗಿ ತಿಳಿಸಿದ್ದರು. ಆದರೆ, ರಾತ್ರಿ 10 ಗಂಟೆಯಾದರೂ ಯಾರೊಬ್ಬರೂ ತಪಾಸಣೆ ಮಾಡಲಿಲ್ಲ. ಆ ನಂತರ ಡಾ.ನಟರಾಜ್ ಎಂಬುವರು ಬಂದು ಮಗಳಿಗೆ ಡ್ರಿಪ್ ಹಾಕಿ ಹೋಗಿದ್ದರು. ಸ್ವಲ್ಪ ಸಮಯದಲ್ಲೇ ಆಕೆ ಮೈ–ಕೈ ನೋವಿನಿಂದ ಒದ್ದಾಡತೊಡಗಿದಳು.’

‘ತಕ್ಷಣ ವೈದ್ಯರ ಬಳಿ ಓಡಿದೆ. ಆದರೆ, ‘ಹೆರಿಗೆ ಸಮಯದಲ್ಲಿ ಇದೆಲ್ಲ ಮಾಮೂಲಿ. ಏನೂ ಆಗಲ್ಲ. ಸುಮ್ಮನೆ ಹೋಗಮ್ಮ’ ಎಂದು ನನ್ನ ಮೇಲೇ ರೇಗಿದರು. ವಾಪಸ್ ವಾರ್ಡ್‌ಗೆ ಬರುವಷ್ಟರಲ್ಲಿ ಮಗಳು ಏದುಸಿರು ಬಿಡುತ್ತಿದ್ದಳು. ಆ ನಂತರ ಬಂದು ಮೂರ್ನಾಲ್ಕು ನಿಮಿಷ ತಪಾಸಣೆ ನಡೆಸಿದ ವೈದ್ಯ, ‘ಏನಾಯಿತೋ ಗೊತ್ತಿಲ್ಲ. ನಿಮ್ಮ ಮಗಳು ಸತ್ತು ಹೋಗಿದ್ದಾರೆ’ ಎಂದು ಹೇಳಿ ಹೊರಟುಬಿಟ್ಟರು. ಊಟ ತರಲು ಹೋಗಿದ್ದ ಅಳಿಯ ಜಯರಾಂಗೆ ಕೂಡಲೇ ಕರೆ ಮಾಡಿದೆ. ಆತ ಬಂದು ವೈದ್ಯರ ಬಳಿ ಮಾತನಾಡಿದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲ’ ಎಂದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅರ್ಪಿತಾ ಅಣ್ಣ ನಾಗರಾಜ್, ‘ರಾತ್ರಿ 11.45ಕ್ಕೆ ನಮಗೆ ವಿಷಯ ಗೊತ್ತಾಯಿತು. ಹುಲಿಯೂರುದುರ್ಗದಿಂದ ಕೂಡಲೇ ಹೊರಟು ಬಂದೆವು. ‘ಯಾವ ಔಷಧಗಳನ್ನು ನೀಡಬೇಕೆಂದು ಕೇಳಲು ಹಿರಿಯ ವೈದ್ಯರಿಗೆ ರಾತ್ರಿಯಿಂದ ಕರೆ ಮಾಡುತ್ತಿದ್ದೆ. ಅವರು ಕರೆ ಸ್ವೀಕರಿಸದಿದ್ದರೆ ನಾನೇನು ಮಾಡಲಿ. ಈ ಸಾವಿನಲ್ಲಿ ನನ್ನ ಪಾತ್ರವಿಲ್ಲ’ ಎಂದು ಡಾ.ನಟರಾಜ್ ಉಡಾಫೆಯಿಂದ ಉತ್ತರಿಸಿದರು. ಅವರ ಯಡವಟ್ಟಿನಿಂದಲೇ ಅನಾಹುತ ಸಂಭವಿಸಿದೆ ಎಂಬುದು ಖಚಿತವಾಯಿತು’ ಎಂದು ಹೇಳಿದರು.

ಮಾಹಿತಿಗೆ ಒತ್ತಾಯ: ‘ಅರ್ಪಿತಾಗೆ ಬೆಳಿಗ್ಗೆಯಿಂದ ಏನೇನೂ ಚಿಕಿತ್ಸೆ ಕೊಟ್ಟಿದ್ದೀರಿ. ಅದರ ವಿವರಗಳನ್ನು ಕೊಡಿ. ನಾವು ಬೇರೆ ವೈದ್ಯರಿಗೆ ಅದನ್ನು ತೋರಿಸಿ ಖಚಿತಪಡಿಸಿಕೊಳ್ಳುತ್ತೇವೆ ಎಂದು ವೈದ್ಯರಿಗೆ ಕೇಳಿದೆವು. ಅದಕ್ಕೆ ಅವರು ಒಪ್ಪಲಿಲ್ಲ. ಹೀಗಾಗಿ, ಆ ಮಾಹಿತಿ ಕೊಡುವವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲವೆಂದು ಧರಣಿ ಕುಳಿತೆವು. ಆಗ ಆರ್‌ಎಂಸಿ ಯಾರ್ಡ್ ‍ಪೊಲೀಸರು ಬಂದು, ‘ಸೂಕ್ತ ತನಿಖೆ ನಡೆಸುತ್ತೇವೆ. ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ’ ಎಂದರು. ಆ ಭರವಸೆ ಬಳಿಕ ಶವವನ್ನು ತೆಗೆದುಕೊಂಡು ಹೋದೆವು’ ಎಂದು ನಾಗರಾಜ್ ವಿವರಿಸಿದರು.

ಪ್ರತಿಕ್ರಿಯೆ ಪಡೆಯಲು ಆಸ್ಪತ್ರೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ‘ಆ ವಿಚಾರವಾಗಿ ನಾವು ಏನೂ ಹೇಳುವುದಿಲ್ಲ’ ಎಂದರು.

ವೈದ್ಯರಿಂದ ವಿವರಣೆ

‘ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ವೈದ್ಯರ ವಿಚಾರಣೆ ನಡೆಸುತ್ತಿದ್ದೇವೆ. ಅರ್ಪಿತಾ ಅವರಿಗೆ ನೀಡಲಾಗಿದ್ದ ಚಿಕಿತ್ಸೆಯ ವಿವರಗಳನ್ನೂ ಪಡೆದಿದ್ದೇವೆ. ನಿರ್ದಿಷ್ಟವಾಗಿ ಯಾವ ಕಾರಣದಿಂದ ಅವರ ಸಾವು ಸಂಭವಿಸಿತು ಎಂಬುದಕ್ಕೆ ವಿವರಣೆ ನೀಡುವಂತೆ ವೈದ್ಯರನ್ನು ಕೇಳಿದ್ದೇವೆ’ ಎಂದು ಆರ್‌ಎಂಸಿ ಯಾರ್ಡ್ ಪೊಲೀಸರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 3

  Sad
 • 0

  Frustrated
 • 6

  Angry

Comments:

0 comments

Write the first review for this !