ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಂಡಾಯದ ಕುದಿ

ನೆ.ಲ.ನರೇಂದ್ರಬಾಬುಗೆ ಬಿಜೆಪಿ ಟಿಕೆಟ್‌
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆಯಲ್ಲಿ ನೆ.ಲ.ನರೇಂದ್ರಬಾಬು ಅವರಿಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಖಂಡಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾಗರಾಜು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಹಾಗೂ ಮಂಡಲ ಪ್ರಮುಖರು ಸಹ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೆ.ಗೋಪಾಲಯ್ಯ ವಿರುದ್ಧ 15,370 ಮತಗಳ ಅಂತರದಿಂದ ಸೋತಿದ್ದ ನೆ.ಲ.ನರೇಂದ್ರ ಬಾಬು ಕಾಂಗ್ರೆಸ್‌ ತೊರೆದು ಆರು ತಿಂಗಳ ಹಿಂದೆ ಬಿಜೆಪಿ ಸೇರಿದ್ದರು.

ಕಾಂಗ್ರೆಸ್‌ ಮುಖಂಡರಾಗಿದ್ದ ಪಾಲಿಕೆಯ ಮಾಜಿ ಸದಸ್ಯ ನಾಗರಾಜ್‌ ಕಳೆದ ಚುನಾವಣೆಯಲ್ಲಿ ನರೇಂದ್ರ ಬಾಬು ವಿರುದ್ಧ ಬಹಿರಂಗ ಪ್ರಚಾರ ನಡೆಸಿದ್ದರು. ಈ ಕಾರಣಕ್ಕೆ ಕಾಂಗ್ರೆಸ್‌ನಿಂದ ಉಚ್ಚಾಟನೆಯಾಗಿದ್ದ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲಾಗಿತ್ತು. 2015ರ ಬಿಬಿಎಂಪಿ ಚುನಾವಣೆಯಲ್ಲಿ ನಂದಿನಿ ಲೇಔಟ್‌ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ಅಭ್ಯರ್ಥಿ ಎದುರು ಸೋತಿದ್ದರು. ಒಂದೂವರೆ ವರ್ಷದ ಹಿಂದೆ ನಾಗರಾಜು ಬಿಜೆಪಿಗೆ ಸೇರ್ಪಡೆಯಾಗಿದ್ದರು.

2013ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್‌.ಹರೀಶ್‌ ಈ ಬಾರಿಯೂ ಟಿಕೆಟ್‌ ಪಡೆಯುವ ಉತ್ಸಾಹದಲ್ಲಿದ್ದರು. ಬಿಜೆಪಿಗೆ ಸೇರಿಸಿಕೊಳ್ಳುವಾಗಲೇ ನಾಗರಾಜು ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರು ಆಶ್ವಾಸನೆ ನೀಡಿದ್ದರು. ಹಾಗಾಗಿ ಅವರು ಬೂತ್‌ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಅವರಿಗೆ ಟಿಕೆಟ್‌ ನೀಡಬೇಕು ಎಂಬುದು ಮುಖಂಡರ ಒಕ್ಕೊರಲ ಅಭಿಪ್ರಾಯವಾಗಿತ್ತು. ಮಂಡಲದಿಂದಲೂ ಒಬ್ಬರ ಹೆಸರನ್ನು ಮಾತ್ರ ಕಳುಹಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ನರೇಂದ್ರಬಾಬುಗೆ ಟಿಕೆಟ್‌ ನೀಡಲಾಗಿದೆ ಎಂದು ಅತೃಪ್ತರು ತಿಳಿಸಿದರು.

‘ನಿರ್ಧಾರ ಬದಲಿಸುವಂತೆ ವರಿಷ್ಠರಿಗೆ ಇನ್ನೊಮ್ಮೆ ಮನವಿ ಮಾಡುತ್ತೇನೆ. ಇದಕ್ಕೆ ಒಪ್ಪದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ’ ಎಂದು ನಾಗರಾಜು ಸ್ಪಷ್ಟಪಡಿಸಿದರು.

‘ನರೇಂದ್ರಬಾಬು ಪಾಲಿಕೆ ಚುನಾವಣೆಯಲ್ಲಿ 2,500 ಮತಗಳನ್ನಷ್ಟೇ ಪಡೆದಿದ್ದರು. ಅವರ ಹಿಂದೆ ಒಬ್ಬನೇ ಒಬ್ಬ ಕಾರ್ಯಕರ್ತ ಇಲ್ಲ. ನನಗೆ ಟಿಕೆಟ್‌ ಬೇಡವೇ ಬೇಡ ಎಂದು ಈ ಹಿಂದೆ ಹೇಳಿದ್ದ ಅವರು ಈಗ ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂದು ಹರೀಶ್‌ ಕಿಡಿಕಾರಿದರು.

ಶಿವಾಜಿನಗರದಿಂದ ಕಟ್ಟಾ ಸ್ಪರ್ಧೆ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.

2008ರಲ್ಲಿ ಪುನರ್‌ವಿಂಗಡಣೆ ಬಳಿಕ ಹೆಬ್ಬಾಳ ಕ್ಷೇತ್ರಕ್ಕೆ ವಲಸೆ ಹೋಗಿದ್ದ ಕಟ್ಟಾ ಅಲ್ಲೂ ಗೆಲುವು ಸಾಧಿಸಿದ್ದರು. ಕೆಐಎಡಿಬಿ ಭೂಕಬಳಿಕೆ ಹಗರಣದಲ್ಲಿ ಜೈಲು ಸೇರಿದ್ದರಿಂದ 2013ರಲ್ಲಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿರಲಿಲ್ಲ. ಈ ಪ್ರಕರಣದಲ್ಲಿ ಖುಲಾಸೆ ಆಗಿದ್ದಾರೆ.

1999ರಲ್ಲಿ ಹಾಗೂ 2004ರಲ್ಲಿ ಶಿವಾಜಿನಗರದಿಂದ ಗೆದ್ದಿದ್ದ ಅವರು ಈ ಕ್ಷೇತ್ರದ ಮತದಾರರಿಗೆ ಪರಿಚಿತರು. ಕೊಳೆಗೇರಿ ಮತದಾರರ ಒಲವು ಗಳಿಸುವುದರಲ್ಲಿ ನಿಸ್ಸೀಮರು.

ರವಿಗೆ ‘ಹ್ಯಾಟ್ರಿಕ್‌’ ಅವಕಾಶ: ಬ್ಯಾಟರಾಯನಪುರದಲ್ಲಿ ಶಾಸಕ ಆರ್‌.ಅಶೋಕ ಸಂಬಂಧಿ ಎ. ರವಿ ಅವರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಲಭಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ‌ಅವರು ಕೃಷ್ಣ ಬೈರೇಗೌಡ ವಿರುದ್ಧ ಸೋತಿದ್ದರು.

ಗುರು ಶಿಷ್ಯರ ಕ್ಷೇತ್ರ ಅದಲು ಬದಲು: ಹಿಂದಿನ ಚುನಾವಣೆಯಲ್ಲಿ ವಿಜಯನಗರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ದೊಡ್ಡ ಅಂತರದಿಂದ ಸೋತಿದ್ದ ಈ ಭಾಗದ ಪ್ರಭಾವಿ ನಾಯಕ ವಿ.ಸೋಮಣ್ಣ, ಈ ಸಲ ಗೋವಿಂದರಾಜನಗರ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ. ಎರಡು ಸಲ ಕಾರ್ಪೊರೇಟರ್‌ ಆಗಿದ್ದಲ್ಲದೆ, ಕಳೆದ ಚುನಾವಣೆಯಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಸೋತಿದ್ದ ಎಚ್‌.ರವೀಂದ್ರ ಅವರು ಇನ್ನೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರು ಈ ಸಲ ವಿಜಯನಗರದ ಅಭ್ಯರ್ಥಿ. ಈ ಮೂಲಕ, ‘ಗುರು–ಶಿಷ್ಯರ’ ಕ್ಷೇತ್ರ ಅದಲು ಬದಲು ಆದಂತೆ ಆಗಿದೆ.

ಕೆ.ಆರ್.ಪುರ ಕ್ಷೇತ್ರದಲ್ಲಿ ಎನ್‌.ಎಸ್‌. ನಂದೀಶ್‌ ರೆಡ್ಡಿ ಮತ್ತೆ ಕಮಲ ಪಾಳಯದ ಹುರಿಯಾಳು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೈರತಿ ಎ.ಬಸವರಾಜು ವಿರುದ್ಧ 24,001 ಮತಗಳ ಅಂತರದಿಂದ ಸೋತಿದ್ದರು.‌‌

ಜೆಡಿಎಸ್‌ನಿಂದ ವಲಸೆ ಬಂದ ಮಾಜಿ ಉಪಮೇಯರ್‌ ಕೆ.ವಾಸುದೇವ ಮೂರ್ತಿ ಅವರಿಗೆ ಶಾಂತಿನಗರ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.

*
ಬಕೆಟ್‌ ಹಿಡಿದು ನರೇಂದ್ರಬಾಬು ಟಿಕೆಟ್‌ ಪಡೆದಿದ್ದಾರೆ. ಮಗನಿಗೆ ಹುಡುಗಿ ನೋಡಲು ಹೋದ ಅಪ್ಪನೇ, ಆಕೆಯನ್ನು ಮದುವೆಯಾದ ಪ್ರಸಂಗವನ್ನು ನೆನಪಿಸುವಂತಿದೆ ಅವರ ನಡೆ.
–ನಾಗರಾಜು, ಮಹಾಲಕ್ಷ್ಮಿ ಬಡಾವಣೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT